ಬೆಂಗಳೂರು: ನಿನ್ನೆ (ಆ.31) ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, ನಗರದ ಹಲವು ಏರಿಯಾ ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು.
ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ದಿಢೀರ್ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡವು. ಹೆಬ್ಬಾಳದಲ್ಲಿ ತಗ್ಗು ಪ್ರದೇಶದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಲ್ಲೇಶ್ವರಂ 6ನೇ ಕ್ರಾಸ್ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಮಳೆ ಮತ್ತು ಚರಂಡಿ ನೀರು ನುಗ್ಗಿತು. ನಿನ್ನೆ ರಾತ್ರಿ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಲಾಗಿತ್ತು. ಎಲ್ಲ ಭಕ್ತರು ದೇವಾಲಯದೊಳಗೆ ಸಿಲುಕಿಕೊಂಡ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಲದೆ, ದೇವಸ್ಥಾನಕ್ಕೆ ನುಗ್ಗಿದ ನೀರನ್ನು ಭಕ್ತಾದಿಗಳು ಆಚೆ ಹಾಕಿದರು.
ಭಾರೀ ಮಳೆಯಾದ ಸಂದರ್ಭದಲ್ಲಿ ಹೆಬ್ಬಾಳದ ಫ್ಲೈಓವರ್ ಕೆಳಗೆ ಎದೆಯತ್ತರದಷ್ಟು ಮಳೆ ನೀರು ನಿಂತಿತ್ತು. ಇದರಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಮಳೆ ನೀರು ಹೋಗುವ ಜಾಗ ಕಸದಿಂದ ಬ್ಲಾಕ್ ಆಗಿತ್ತು. ಇದರಿಂದ ಮಳೆ ನೀರು ನಿಂತಿರುವುದನ್ನು ಅರಿತ ಪೊಲೀಸ್ ಸಿಬ್ಬಂದಿ, ತಕ್ಷಣ ಕಬ್ಬಿಣ ರಾಡ್ ತೆಗೆದುಕೊಂಡು ಹೋಗಿ ಮಳೆ ನೀರು ಹೋಗುವಂತೆ ಮಾಡಿದರು.
ಭಾರೀ ಮಳೆ ಹಿನ್ನೆಲೆಯಲ್ಲಿ ಶಿವಾನಂದ ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ ಖಾಸಗಿ ಬಸ್ ಒಂದು ಸಿಲುಕಿತು. ಅಂಡರ್ಪಾಸ್ನಲ್ಲಿ ಮಳೆ ನೀರು ನಿಂತ ಕಾರಣ, ಅದರಲ್ಲಿ ಸಿಲುಕಿದ ಬಸ್ ಕೆಟ್ಟು ನಿಂತಿತು. ಸದಾಶಿವನಗರ BDA ಕಾಂಪ್ಲೆಕ್ಸ್ ಬಳಿ ಮರವೊಂದು ಧರೆಗುರುಳಿದೆ.
ಮಳೆ ಮುನ್ಸೂಚನೆ
ಸೆಪ್ಟೆಂಬರ್ 2 ರಿಂದ 7 ರವೆರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಗುಟ್ಟಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 9.1 ಸೆಂ.ಮೀ. ಮಳೆ ದಾಖಲಾಗಿದೆ. ಉಳಿದಂತೆ ರಾಜಮಹಲ್ನಲ್ಲಿ 4 ಸೆಂ.ಮೀ., ವಿದ್ಯಾರಣ್ಯಪುರ 8.5, ಕೊಡಿಗೆಹಳ್ಳಿ 6.5, ಅಟ್ಟೂರು ಹಾಗೂ ವಿಶ್ವನಾಥ ನಾಗೇನಹಳ್ಳಿಯಲ್ಲಿ ತಲಾ 5.8, ಸೆಂ.ಮೀ. ಮಳೆಯಾಗಿದೆ. ಚೌಡೇಶ್ವರಿ ವಾರ್ಡ್ 4.7, ಎಚ್ಎಎಲ್ ವಿಮಾನ ನಿಲ್ದಾಣ 4.2, ಸಂಪಂಗಿರಾಮನಗರ 4.0, ನಾಗಪುರ ಹಾಗೂ ನಂದಿನಿ ಲೇಔಟ್ನಲ್ಲಿ ತಲಾ 3.5, ಮಾರತಹಳ್ಳಿ 3.3, ಗಾಳಿ ಆಂಜನೇಯ ದೇವಸ್ಥಾನ 2.5, ವರ್ತೂರು 2.3 ಹಾಗೂ ಬೆಳ್ಳಂದೂರಿನಲ್ಲಿ 2.1 ಸೆಂ.ಮೀ. ಮಳೆಯಾಗಿದೆ.