ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಪರಿಸರ ಸೂಕ್ಷ ವಲಯದಲ್ಲಿ ನಟ ಗಣೇಶ್ ಕಟ್ಟಡ ನಿರ್ಮಾಣ ಮುಂದುವರೆಸಲು ಕೋರ್ಟ್ ಅನುಮತಿ ನೀಡಿದೆ. ಆದರೆ ಈ ಅನುಮತಿ ಅರ್ಜಿ ವಿಚಾರಣೆ ನಂತರ ಬರುವ ಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶ ನೀಡಿದೆ.
ನಟ ಗಣೇಶ್ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಪರಿಸರ ಸೂಕ್ಷ ವಲಯಕ್ಕೆ ಒಳಪಡುವ ಜಕ್ಕಹಳ್ಳಿ ಗ್ರಾಮದಲ್ಲಿ 1 ಎಕರೆ 24 ಗುಂಟೆ ಜಾಗ ಖರೀದಿಸಿದ್ದರು. ಅದು ಸೂಕ್ಷ್ಮ ಪರಿಸರ ವಲಯ ಆಗಿರುವುದರಿಂದ ಬೃಹತ್ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎನ್ನಲಾಗಿತ್ತು. ಆದರೆ ಆ ಜಮೀನಿನಲ್ಲಿ ಜೆಸಿಬಿ ತಂದು ಸಮತಟ್ಟು ಮಾಡಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಷರತ್ತು ಉಲ್ಲಂಘಿಸಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂದು ನೋಟಿಸ್ ನೀಡಿತ್ತು.
ಆಗಸ್ಟ್ 14ರಂದು ನಟ ಗಣೇಶ್ ಅವರಿಗೆ ನೋಟಿಸ್ ಜಾರಿಯಾಗಿತ್ತು. ಆದರೆ ಈ ನೋಟಿಸ್ ಪ್ರಶ್ನಿಸಿ ಗಣೇಶ್ ಹೈಕೋರ್ಟ್ ಕದ ತಟ್ಟಿದ್ದರು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿ ನಟ ಗಣೇಶ್ ಅವರ ಪರ ವಕೀಲರು ವಾದ ಮಾಡಿದ ಹಿನ್ನೆಲೆ ಜೊತೆಗೆ ನಿರ್ಮಾಣ ಮಾಡುತ್ತಿರುವ ಕಟ್ಟಡ ವಾಸಕ್ಕೆ ಮಾತ್ರವಾಗಿದ್ದು ಯಾವುದೇ ವಾಣಿಜ್ಯ ಬಳಕೆಗಲ್ಲ ಹಾಗೂ ಅಂತಿಮ ಆದೇಶ ಅರ್ಜಿದಾರರ ವಿರುದ್ಧ ಬಂದರೆ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ವಕೀಲರ ವಾದ ಆಲಿಸಿದ ಬಳಿಕ ಕಾಮಗಾರಿಯನ್ನು ಮುಂದುವರೆಸಲು ನ್ಯಾ.ಕೃಷ್ಣ ದೀಕ್ಷಿತ್ ಅನುಮತಿ ಕೊಟ್ಟಿದ್ದಾರೆ. ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಜಾಗದಲ್ಲಿ ನಟ ಗಣೇಶ್ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಬೃಹತ್ ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದ ಆರೋಪ ಕೇಳಿಬಂದಿತ್ತು. ಇದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಮನೆ ನಿರ್ಮಾಣ ಕಾಮಗಾರಿ ನಿಲ್ಲಿಸಿ ಪರಿಸರ ಸೂಕ್ಷ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಕಟ್ಟಡ ನೀಲಿನಕ್ಷೆ ಹಾಜರು ಪಡಿಸಬೇಕೆಂದು ಅರಣ್ಯ ಇಲಾಖೆ ನೋಟಿಸ್ ಕೊಟ್ಟಿತ್ತು. ಇದೀಗ ನಟ ಗಣೇಶ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು ಪ್ರಕರಣ ಸಂಬಂಧ ಮುಂದಿನ ವಿಚಾರಣೆ ಸೆ.12ಕ್ಕೆ ಮುಂದೂಡಿಕೆಯಾಗಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 18ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಸೆಪ್ಟೆಂಬರ್ 15ಕ್ಕೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್‌ಗೆ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ಸಾಥ್ ಕೊಡುತ್ತಿದ್ದಾರೆ.
‘ಕೃಷ್ಣಂ ಪ್ರಣಯ ಸಖಿ’ ಎನ್ನುವ ಮತ್ತೊಂದು ಚಿತ್ರದಲ್ಲಿ ಗಣೇಶ್ ಬಣ್ಣ ಹಚ್ಚಿದ್ದಾರೆ. ‘ದಂಡುಪಾಳ್ಯ’ ಸಿನಿಮಾ ಕೊಟ್ಟಿದ್ದ ಶ್ರೀನಿವಾಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲೂ ಗಣಿಗೆ ಇಬ್ಬರು ನಾಯಕಿಯರು. ಈಗಾಗಲೇ ಮಲಯಾಳಂ ನಟಿ ಮಾಳವಿಕಾ ನಾಯರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಬ್ಬ ನಾಯಕಿಯ ಹುಡುಕಾಟ ನಡೆಯುತ್ತಿದೆ. ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಎಂದು ನಿರ್ದೇಶಕರು ಹೇಳಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ ತಾರಾಗಣದಲ್ಲಿದ್ದಾರೆ.