ರಾಜ್ಯದ ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಗಳು ಬೆಳಗಿನ ವೇಳೆ ಹಾಗೂ ರಾತ್ರಿ ವೇಳೆಯ ಸಂಚಾರಕ್ಕೆ ಪ್ರತ್ಯೇಕ ಟಿಕೆಟ್ ದರವನ್ನು ನಗದಿ ಮಾಡಲಾಗಿತ್ತು. ಆದರೆ, ರಾತ್ರಿ ಪ್ರಯಾಣಕ್ಕೆ ಇದ್ದ ಪ್ರಯಾಣ ದರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಳಿಕೆ ಮಾಡಿದ್ದಾರೆ.
ರಾತ್ರಿ ಸೇವೆಗಳ ಸಾರಿಗೆಗಳಿಗೆ ಸಾಮಾನ್ಯ ಪ್ರಯಾಣ ದರ ನಿಗದಿ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯ ಮೇರೆಗೆ ಬಿಎಂಟಿಸಿ ಸಂಸ್ಥೆಯು ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಹಿಂದೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಸಾಮಾನ್ಯ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪ್ರಯಾಣಿಕರಿಂದ ಹೆಚ್ಚುವರಿ ಟಿಕೆಟ್ ದರವನ್ನು ಪಡೆಯಲಾಗುತ್ತಿತ್ತು.
ರಾತ್ರಿ ಪ್ರಯಾಣಕ್ಕೆ ಸಾಮಾನ್ಯ ಟಿಕೆಟ್ ದರಕ್ಕಿಂತ ಒಂದೂವರೆ ಪಟ್ಟು ಹಣವನ್ನು ಪ್ರಯಾಣಿಕರಿಂದ ಪಡೆಯುತ್ತಿತ್ತು. ಆದರೆ, ಈಗ ಎಲ್ಲ ಸಮಯದಲ್ಲೂ ಸಾಮಾನ್ಯ ಪ್ರಯಾಣ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ತಡರಾತ್ರಿವರೆಗೂ ಕೆಲಸ ಮಾಡಿ ಮನೆಗೆ ಹೋಗುವ ಹಾಗೂ ಬೇರೆ ಕಾರ್ಯಗಳಿಗೆ ಸಂಚಾರ ಮಾಡುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಇಂದು ರಾತ್ರಿಯಿಂದಲೇ ದರ ಇಳಿಕೆ ಆದೇಶ ಜಾರಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಮಾದರಿಯ ಬಸ್ಸುಗಳಲ್ಲಿ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಬೆಂಗಳೂರು ನಗರದಲ್ಲಿ ತಡರಾತ್ರಿ ಹಾಗೂ ಮುಂಜಾನೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯು ರಾತ್ರಿ ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಸಂಚರಿಸುವ ಸಾರ್ವಜನಿಕ ಪ್ರಯಾಣಿಕರಿಗೆ ಏಕರೂಪದ ಪ್ರಯಾಣ ದರವನ್ನು ವಿಧಿಸುವ ನಿಟ್ಟಿನಲ್ಲಿ, ಸಂಸ್ಥೆಯಿಂದ ಕಾರ್ಯಾಚರಣೆ ಮಾಡುವ ರಾತ್ರಿ ಸೇವೆ ಸಾರಿಗೆಗಳಿಗೆ 2020ರ ಸಾಮಾನ್ಯ ಸ್ಥಾಯಿ ಆದೇಶದಂತೆ, ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ಈ ಆದೇಶವು ದಿನಾಂಕ 06-09-2023 ರಿಂದ ಜಾರಿಗೆ ಬರಲಿದೆ.
ಏಕರೂಪದ ಪ್ರಯಾಣ ದರ
ಎಲ್ಲಾ ಹಿರಿಯ/ ಘಟಕ ವ್ಯವಸ್ಥಾಪಕರುಗಳು ರಾತ್ರಿ ಸೇವೆ ಸಾರಿಗೆಗಳಿಗೆ ದೂರುಗಳಿಗೆ ಅವಕಾಶವಿಲ್ಲದಂತೆ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ಸಮರ್ಪಕವಾಗಿ ಜಾರಿಗೊಳಿಸುವುದು. ಈ ಸುತ್ತೋಲೆಯ ಆದೇಶದ ವಿವರಗಳ ಬಗ್ಗೆ ಮೇಲ್ವಿಚಾರಕ ಸಿಬ್ಬಂದಿಗಳಿಗೆ ಹಾಗೂ ಚಾಲನಾ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡುವುದು. ಪ್ರಯಾಣದರ ವ್ಯವಸ್ಥೆಯು ಜಾರಿಗೆ ಬಂದಿರುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಇ.ಟಿ.ಎಂ ಹಾಗೂ ಮಾರ್ಗ ಪತ್ರಗಳನ್ನು ಪರಿಶೀಲಿಸುವುದು ಮತ್ತು ಸಂಸ್ಥೆಯ ಆದಾಯಕ್ಕೆ ನಷ್ಟವುಂಟು ಮಾಡುವ ಯಾವುದೇ ವಿಧವಾದ ತಪ್ಪುಗಳಿಗೆ ಅವಕಾಶ ಕಲ್ಪಿಸದಂತೆ ಎಚ್ಚರವಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.