ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದ ಪೋಷಕರಿಗೆ ಶಾಕ್ ಎದುರಾಗಿತ್ತು. ಯಾಕಂದ್ರೆ ರಾತ್ರೋ ರಾತ್ರಿ ರಜೆಯ ಕುರಿತು ಬಂದಿದ್ದ ಮೆಸೇಜ್ ನೋಡದೆ ಎಡವಟ್ಟಾಗಿತ್ತು. ಹೀಗೆ ಗೇಟ್ ಹಾಕಿರುವ ಬೆಂಗಳೂರಿನ ಖಾಸಗಿ ಶಾಲೆಗಳ ಬಳಿ ಮಕ್ಕಳ ಪೋಷಕರು ಮತ್ತು ವಿದ್ಯಾರ್ಥಿಗಳು ಪರದಾಡಿದರು.
ಬೆಂಗಳೂರಲ್ಲಿ 6000 ಶಾಲೆಗಳು ಇವೆ ಈ ಪೈಕಿ ಬಹುತೇಕ ಶಾಲೆಗಳ ಬಳಿ ಸ್ವಂತ ವಾಹನದ ವ್ಯವಸ್ಥೆ ಇದ್ದರೂ ಖಾಸಗಿ ವಾಹನಗಳನ್ನೂ ವಿದ್ಯಾರ್ಥಿಗಳ ಪೋಷಕರು ಅವಲಂಬಿಸಿದ್ದಾರೆ. ಈ ಹಿನ್ನೆಲೆ ದೂರದ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಂದ್ ಕಾರಣ ಕಷ್ಟವಾಗಲಿದೆ. ಹೀಗಾಗಿ ಎಲ್ಲವನ್ನು ಅಳೆದು ತೂಗಿ ಲೆಕ್ಕಾಚಾರ ಹಾಕಿದ್ದ ಖಾಸಗಿ ಶಾಲೆ ಆಡಳಿತ ಮಂಡಳಿ ರಾತ್ರಿಯೇ ರಜೆ ಘೋಷಣೆಗೆ ಮುಂದಾಗಿದ್ದವು. ಹೀಗಾಗಿ ಪೋಷಕರ ಮೊಬೈಲ್ಗೆ ರಾತ್ರಿಯೇ ಮೆಸೇಜ್ ಸಹ ಕಳುಹಿಸಿದ್ದರು ಎನ್ನಲಾಗಿದೆ. ಆದರೆ ಮೆಸೇಜ್ ನೋಡದ ಪೋಷಕರು ಇದೀಗ ಶಾಲೆಗಳ ಮುಚ್ಚಿದ ಗೇಟ್ ಬಳಿ ಪರದಾಡಿದರು.
ಒಂದು ಕಡೆ ಶಾಲಾ ಮಕ್ಕಳ ಪರಿಸ್ಥಿತಿ ಹೀಗಿದ್ದರೆ, ಮತ್ತೊಂದು ಕಡೆ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕೂಡ ಓಡಾಡಲು ಪರದಾಡಿದ್ದಾರೆ. ದೂರದ ಜಾಗದಲ್ಲಿನ ಕಾಲೇಜುಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಇಲ್ಲದೆ ಒದ್ದಾಡಿದರು. ಇನ್ನು ಖಾಸಗಿ ವಾಹನಗಳ ಲಭ್ಯತೆಯೇ ಇಲ್ಲದ ಕಾರಣ ಸರ್ಕಾರಿ ಬಸ್ಗಳು ತುಂಬಿ ತುಳುಕುತ್ತಿದ್ದವು. ಹೀಗಾಗಿ ಅನಿವಾರ್ಯ ಸ್ಥಿತಿ ಎದುರಾದರೂ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಿಂದಾಗಿ ಬಹುತೇಕ ಕಾಲೇಜುಗಳು ಕೂಡ ಇಂದು ರಜೆ ಘೋಷಣೆ ಮಾಡಿವೆ.