ನನ್ನನ್ನ ಎಲ್ಲರೂ 2ನೇ ದೇವರಾಜ ಅರಸು ಅಂತಾರೆ. ಆದ್ರೆ ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾರಿನಲ್ಲಿ ಓಡಾಡಿದಾಕ್ಷಣ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬಹಳ ಜನ ನನ್ನನ್ನ ದೇವರಾಜ ಅರಸು ನಂತರ ಸಾಮಾಜಿಕ ಹರಿಕಾರರು ಅಂತಾರೆ, ದೇವರಾಜ ಅರಸು ಅವರಿಗೆ ನನ್ನನ್ನು ಹೋಲಿಸುತ್ತಾರೆ. ಆದರೆ ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ. ಭಾಷಣದ ಮಾತಿಗಿಂತ ಯಾರಲ್ಲಿ ಬದ್ಧತೆ-ಕಾಳಜಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಅವರ ಸಾಮಾಜಿಕ ಕೊಡುಗೆಗಳನ್ನೂ ಅಲ್ಲಗಳೆಯುವಂತಿಲ್ಲ. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ನಾವು ರೂಪಿಸುವ ಕಾರ್ಯಗಳಲ್ಲಿ ಕಾಳಜಿ ಮತ್ತು ಸಾಮಾಜಿಕ ನ್ಯಾಯ ಇರುತ್ತದೆ ಅಷ್ಟೇ ಎಂದಿದ್ದಾರೆ.