ಸಿಡಬ್ಲ್ಯುಎಂಎ ಮತ್ತು ಸಿಡಬ್ಲ್ಯುಆರ್ಸಿ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ತಮಿಳುನಾಡಿಗೆ ಮತ್ತಷ್ಟು ನೀರು ಬಿಡುಗಡೆ ಮಾಡಿದ್ದೇ ಆದರೆ, ರಾಜ್ಯದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಲಿದೆ ಎಂದು ಕಾವೇರಿ ನೀರಾವರಿ ನಿಗಮ ಲಿಮಿಟೆಡ್ (ಸಿಎನ್ಎನ್ಎಲ್) ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟ್ ಆದೇಶ ಬಂದಿದ್ದು, ಇನ್ನೂ ತಮಿಳುನಾಡಿಗೆ ನೀರು ಬಿಡುವ ಕುರಿತು ಉನ್ನತ ಅಧಿಕಾರಿಗಳಿಂದ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
”ತಮಿಳುನಾಡಿಗೆ ನೀರು ಬಿಡದಿದ್ದರೆ ಕಾವೇರಿ ಜಲಾನಯನ ಪ್ರದೇಶ, ಬೆಂಗಳೂರಿಗೆ ಕುಡಿಯುವ ನೀರು ಒದಗಿಸಬಹುದು. ಕಳೆದ 10 ದಿನಗಳಲ್ಲಿ ಎರಡು ಅಂತರದಲ್ಲಿ 10,000 ಕ್ಯೂಸೆಕ್ ಮತ್ತು 5,000 ಕ್ಯೂಸೆಕ್ ಬಿಡುಗಡೆ ಮಾಡಿದ್ದೇವೆ. ಆದರೆ, ಇದೀಗ ಮತ್ತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ್ದೇ ಆದರೆ, ಕುಡಿಯುವ ನೀರಿಗೆ ಬಿಕ್ಕಟ್ಟು ಎದುರಾಗಲಿದೆ ಎಂದು ಸಿಎನ್ಎನ್ಎಲ್’ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಎನ್ಎನ್ಎಲ್ ಪ್ರಕಾರ, ಕೆಆರ್ಎಸ್ ಅಣೆಕಟ್ಟಿನಲ್ಲಿ ಗುರುವಾರ ಮಧ್ಯಾಹ್ನ ಗರಿಷ್ಠ ಮಟ್ಟ 124.80 ಅಡಿ ನೀರಿನ ಪೈಕಿ ಕೇವಲ 97 ಅಡಿ ಇದೆ. 49.452 ಟಿಎಂಸಿ ನೀರಿನ ಪೈಕಿ 20.548 ಟಿಎಂಸಿಯಷ್ಟು ಮಾತ್ರ ನೀರಿದೆ ಎಂದು ತಿಳಿದುಬಂದಿದೆ.
ವಿಸಿ ಕಾಲುವೆ (1,502 ಕ್ಯೂಸೆಕ್), ಆರ್ಬಿಎಲ್ಎಲ್ (50), ಎಲ್ಬಿಎಲ್ಎಲ್ (58), ಡಿ ದೇವರಾಜ್ ಅರಸ್ ಕಾಲುವೆ (400) ಮತ್ತು ಎಂಸಿಸಿ ಜಲಾನಯನ (50 ಕ್ಯೂಸೆಕ್) ಸೇರಿ 5,336 ಕ್ಯೂಸೆಕ್ಸ್ ಒಳಹರಿವು, 2,674 ಕ್ಯೂಸೆಕ್ಸ್ ಹೊರ ಹರಿವಿನಷ್ಟು ನೀರಿದೆ.
ಅದೇ ರೀತಿ ಕಬಿನಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ 2,284 ಅಡಿ ಪೈಕಿ 2275.61 ಅಡಿಗಳಷ್ಟು ಮಾತ್ರ ನೀರಿದೆ. ಗರಿಷ್ಠ ಸಾಮರ್ಥ್ಯದ 19.52 ಟಿಎಂಸಿ ಅಡಿ ಪೈಕಿ ಪ್ರಸ್ತುತ 14.60 ಟಿಎಂಸಿ ಅಡಿ ನೀರು ಸಂಗ್ರಹಣೆಯಿದೆ. ಒಳಹರಿವು 2,457 ಕ್ಯೂಸೆಕ್ ಇದೆ, ನಾಲೆಗಳಿಗೆ 90 ಕ್ಯೂಸೆಕ್ ಸೇರಿದಂತೆ ಹೊರಹರಿವು 4,390 ಕ್ಯೂಸೆಕ್ ಇದೆ ಎಂದು ತಿಳಿದುಬಂದಿದೆ.
ಪ್ರಸ್ತುತದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಕೆಆರ್ಎಸ್ ಅಣೆಕಟ್ಟೆಯಲ್ಲಿ 10 ಅಡಿ ನೀರು ಕಡಿಮೆಯಾಗಲಿದೆ. “ಒಂದು ಟಿಎಂಸಿ ಅಡಿ ನೀರು ಸುಮಾರು 11,000 ಕ್ಯೂಸೆಕ್ಗಳಷ್ಟಿದೆ, ಅಂದರೆ, ರಾಜ್ಯವು 75,000 ಕ್ಯೂಸೆಕ್ ಅಥವಾ ಸುಮಾರು 2.25 ಟಿಎಂಸಿ ಅಡಿ ಬಿಡುಗಡೆ ಮಾಡಬೇಕು. ಬಿಡುಗಡೆಯ ನಂತರ ಅಣೆಕಟ್ಟಿನ ನೀರಿನ ಮಟ್ಟ 87 ಅಡಿಗೆ ಇಳಿಯಲಿದೆ. 68 ಅಡಿಗಿಂತ ಕಡಿಮೆ ಇರುವ ನೀರನ್ನು ಕುಡಿಯಲು ಬಳಸಲಾಗುವುದಿಲ್ಲ, ಏಕೆಂದರೆ ಅದರಲ್ಲಿ ಹುಳು ಇರುತ್ತದೆ. 74 ಅಡಿಗಿಂತ ಕಡಿಮೆ ಇರುವ ನೀರನ್ನು ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗಿದ್ದು, ಕೇವಲ 4.401 ಟಿಎಂಸಿ ಅಡಿ ನೀರನ್ನು ಯಾವುದೇ ಉದ್ದೇಶಕ್ಕೂ ಬಳಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಮುಂದಿನ ವಾರ ತುಂತುರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಈ ವೇಳೆ ಉತ್ತಮ ಮಳೆಗಾಗಿ ಪ್ರಾರ್ಥನೆ ಸಲ್ಲಿಸಬೇಕಿದೆ ಎಂದು ಅಧಿಕಾರಿಗುಳು ತಿಳಿಸಿದ್ದಾರೆ.