ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ. ಕಾವೇರಿ ನೀರು ಹಂಚಿಕೆ ವಿಷಯ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಆರಂಭದಿಂದಲೇ ತಪ್ಪು ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಕೇಂದ್ರ ಸಚಿವ ಜೋಶಿ ರಾಜೀನಾಮೆ ನೀಡಬೇಕೆಂಬ ಸಚಿವ ಎಚ್. ಸಿ. ಮಹದೇವಪ್ಪ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದೇವಪ್ಪ ಅವರು ಹಿಂದೊಂದು ಮುಂದೊಂದು ಮಾತನಾಡುತ್ತಾರೆ. ನಾವೇನು ಸಹಕಾರ ಕೊಟ್ಟಿದ್ದೇವೆ ಅನ್ನುವುದನ್ನ ಡಿಸಿಎಂ ಡಿಕೆಶಿ ಅವರಿಗೆ ಕೇಳಲಿ. ತಮ್ಮ ಘಟಬಂಧನ್ ಉಳಿಸಿಕೊಳ್ಳುವುದಕ್ಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ. ಆ ಸರ್ಕಾರ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳ್ಳೆಯ ನಂಟಿದೆ. ಐಎನ್ ಡಿಐಎ ಒಕ್ಕೂಟಕ್ಕಾಗಿ ಪರಸ್ಪರರು ಆಲಂಗಿಸಿಕೊಂಡಿದ್ದರು. ಅವರಿಬ್ಬರೂ ಪರಸ್ಪರ ಕುಳಿತು ಕಾವೇರಿ ಸಮಸ್ಯೆ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ ಅದನ್ನು ಇಬ್ಬರು ಮಾಡುತ್ತಿಲ್ಲ. ಸನಾತನ ಧರ್ಮದ ವಿಚಾರದಲ್ಲಿ ಅಸಭ್ಯವಾಗಿ ಮಾತನಾಡಿದಾಗಲು ಕಾಂಗ್ರೆಸ್ ಅದನ್ನು ಖಂಡಿಸುವ ಪ್ರಯತ್ನ ಮಾಡಲಿಲ್ಲ. ಎಲ್ಲ ರೀತಿಯ ಸಹಕಾರವನ್ನು ನಾವು ಕೊಡಲು ಬದ್ಧ ಎಂದರು.
ಕಾವೇರಿ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಸರ್ವ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದರೆ ರಾಜ್ಯ ಸರ್ಕಾರ ಆರಂಭದಿಂದಲೂ ಎಡವುತ್ತ ಬಂದಿದೆ. ಆದಷ್ಟು ಬೇಗ ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು ಎಂದರು.