ಇಸ್ರೋ ಮುಂದಿನ ವರ್ಷ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಗಗನ ಯಾತ್ರೆಗೆ ನಡೆಯುತ್ತಿರುವ ಸಿದ್ಧತೆಗಳು ಒಂದೊಂದಾಗಿ ಪ್ರಗತಿ ಕಾಣುತ್ತಿವೆ.
ಇದೇ ಅಕ್ಟೋಬರ್ 21 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಮೊದಲ ಹಂತದ ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎನ್ನುವ ಸುದ್ದಿ ಹರಡಿದೆ. ಗಗನ ನೌಕೆಯ ಮಾದರಿಯನ್ನು ನಭಕ್ಕೆ ಉಡಾವಣೆಗೊಳಿಸಿ ಅದು ಯಶಸ್ವಿಯಾಗಿ ಬಂಗಾಳಕೊಲ್ಲಿಯಲ್ಲಿ ಇಳಿಯುವಂತೆ ಮಾಡುವ ಪ್ರಯತ್ನಗಳನ್ನು ನಡೆಸಲಾಗುತ್ತದೆ
ಬಾಹ್ಯಾಕಾಶ ಹೊರವಲಯದ ಪರಿಮಿತಿಗೆ ಗಗನ ನೌಕೆಯ ಮಾದರಿಯನ್ನು ಕಳುಹಿಸಲಾಗುತ್ತದೆ. ಅನಂತರ ಅದನ್ನು ಸುರಕ್ಷಿತವಾಗಿ ಬಂಗಾಳಕೊಲ್ಲಿಗೆ ಇಳಿಸಲಾಗುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮಾದರಿ ನೌಕೆಯಲ್ಲಿ ಕ್ರ್ಯೂ ಎಸ್ಕೇಪ್ ಸಿಸ್ಟಮನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ನಡೆಸಲು ಉದ್ದೇಶಿಸಲಾಗಿರುವ ಟಿವಿ-ಡಿ1 ಪರೀಕ್ಷಾರ್ಥ ಗಗನನೌಕೆಯ ಮಾದರಿಯಲ್ಲಿ ಇರುವ ಪೇ ಲೋಡ್‌ನಲ್ಲಿ ಗಗನಯಾನದಲ್ಲಿ ತೆರಳುವವರು, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರ್ಪಡೆ ಮಾಡಲಾಗಿದೆ. ಗಗನನೌಕೆಯ ಮಾದರಿ ಬಂಗಾಳಕೊಲ್ಲಿಯಿಂದ 17 ಕಿ.ಮೀ. ಎತ್ತರದಲ್ಲಿರುವಾಗಲೇ ಅದರಲ್ಲಿ ಇರುವ ಸಿಬ್ಬಂದಿ ಸುರಕ್ಷಿತವಾಗಿ ಇಳಿಯುವಂತೆ ಮಾಡಲಾಗುತ್ತದೆ. ಅದು ಯಶಸ್ವಿಯಾದರೆ ಮಾನವ ಸಹಿತ ಯಾತ್ರೆಯ ಒಂದು ಹಂತ ಯಶಸ್ವಿಯಾದಂತಾಗುತ್ತದೆ ಎಂದು ಇಸ್ರೋ ತಿಳಿಸಿದೆ.