ಬೆಂಗಳೂರು : ನಾನು ಸಿಎಂ ಅಥವಾ ಡಿಸಿಎಂ ಹುದ್ದೆಯ ರೇಸ್‍ನಲ್ಲಿಲ್ಲ. ರೇಸ್ ನಡೆಸಲು ನಮ್ಮ ಬಳಿ ಕುದುರೆಗಳೇ ಇಲ್ಲ. ಇನ್ನು ಎಲ್ಲಿಂದ ರೇಸ್‍ನಲ್ಲಿ ನಿಲ್ಲೋದು ಎಂದು ಸಚಿವ ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಖಾತೆಯೊಂದನ್ನು ಕೊಟ್ಟಿದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿ, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ ರೇವಣ್ಣ ಪಾಪ ಯಡಿಯೂರಪ್ಪನಿಗೆ ವಯಸ್ಸಾಗಿದೆ. ಅರಳು ಮರಳು ಶುರುವಾಗಿದೆ. ಇವರ ಬಗ್ಗೆ ನಾನೇನು ಮಾತಾಡಲಿ. ಮೈತ್ರಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇ. ಜೆಡಿಎಸ್ 7ಕ್ಕೆ ಏಳು ಸ್ಥಾನ ಗೆದ್ದರೂ ಯಾವುದೇ ಅಚ್ಚರಿ ಪಡಬೇಕಿಲ್ಲ. ಬಿಜೆಪಿಗೆ ಲೆಕ್ಕ ಮಾಡೋಕೆ ಬರಲ್ಲ. ಸುಮ್ಮನೆ 20 ಕ್ಷೇತ್ರದಲ್ಲಿ ಗೆಲ್ತೀವಿ ಎನ್ನುತ್ತಾರೆ. ಇವರಿಗೆ ತಲೆ ಕೆಟ್ಟೋಗಿದೆ ಎಂದು ವ್ಯಂಗ್ಯವಾಡಿದರು.
ನನ್ನ ಬಗ್ಗೆ ಮಾತಾಡದೇ ಹೋದರೇ ಬಿಜೆಪಿ ನಾಯಕರಿಗೆ ದಿನ ಕಳೆಯೋದಿಲ್ಲ. ಬಿ.ಎಸ್ ಯಡಿಯೂರಪ್ಪ ತುಂಬಾ ದೊಡ್ಡವರು. ಯಡಿಯೂರಪ್ಪ ಕೇಳಿದ್ದ ಇಂಜಿನಿಯರ್ ವರ್ಗಾವಣೆ ಮಾಡಿಕೊಟ್ಟಿದ್ದೀನಿ. ಕೆ.ಎಸ್ ಈಶ್ವರಪ್ಪ ಹೇಳಿದ ಇಂಜಿನಿಯರ್ ಅವರನ್ನ ಕೂಡ ಶಿವಮೊಗ್ಗಕ್ಕೆ ಹಾಕಿದ್ದೀನಿ. ಬೇಕಿದ್ದರೇ ಇವರನ್ನೆಲ್ಲಾ 24 ಗಂಟೆಯೊಳಗೆ ನಾನು ವರ್ಗಾವಣೆ ಮಾಡಬಹುದಿತ್ತಲ್ಲವೇ. ಅವರನ್ನೇ ಕೇಳಿ ಯಾರಿಗೆ ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಟ್ಟಿದ್ದಾರೆ” ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣನವರು ಬಿಎಸ್ವೈಗೆ ತಿರುಗೇಟು ನೀಡಿದ್ದಾರೆ.