ಒಂದೊಮ್ಮೆ ನಮ್ಮೆಲ್ಲರ ನೆಚ್ಚಿನ ಗುಪ್ತಗಾಮಿ ಭಾವನ ಅಗಿ ಆನಂತರ ಮನೆಗೆ ಬಂದ ಸೊಸೆಯಾಗಿ, ತಮ್ಮ ನಟನೆಯಿಂದ ನಮ್ಮೆಲ್ಲರನ್ನು ರಂಜಿಸಿದಾಕೆ ಸುಷ್ಮಾ ರಾವ್. ಇಂದು ನಿರೂಪಣೆಯ ಮೂಲಕ ಸಾವಿರಾರು ಜನರ ಮನ ಸೆಳೆದಿರುವ ಚಿಕ್ಕಮಗಳೂರಿನ ಕೊಪ್ಪದ ಚೆಂದುಳ್ಳಿ ಚೆಲುವೆಯ ಪರಿಚಯ ಇಲ್ಲದವರಿಲ್ಲ. ಇವರ ಮುದ್ದಾದ ನಿರೂಪಣೆಗೆ ಮನಸೋಲದವರಿಲ್ಲ. ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಮುದ್ದು ಮುಖದ ಚೆಲುವೆ ಹೆಸರು ಸುಷ್ಮಾ ಕೆ ರಾವ್.
ನಿರೂಪಣೆಯ ಜೊತೆಗೆ ನಟನೆಯಲ್ಲೂ ಆಕೆ ಎತ್ತಿದ ಕೈ. ಪ್ರತಿಭೆ ಇದ್ದರೆ ಎಲ್ಲಿಯೂ ಮಿಂಚಬಹುದು ಎಂಬುದಕ್ಕೆ ಸುಷ್ಮಾ ಅವರೇ ಪ್ರಸಕ್ತ ಉದಾಹರಣೆ. ಗುಪ್ತಗಾಮಿನಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಷ್ಮಾ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ.
‘ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಭಾವನಾ ಪಾತ್ರಧಾರಿಯಾಗಿ ಗಮನ ಸೆಳೆದ ಕೊಪ್ಪದ ಕುವರಿ ಸುಷ್ಮಾ ಆ ಧಾರಾವಾಹಿಯ ಮೂಲಕ ಮನೆ ಮಾತಷ್ಟೇ ಅಲ್ಲ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು. ಜೊತೆಗೆ ಗುಪ್ತಗಾಮಿನಿಯ ಪಾತ್ರಕ್ಕೆ ಎಸ್ಸೆಲ್ಲ್ ನವರು ಕೊಡಮಾಡುವ ಬೆಸ್ಟ್ ಟೆಲಿವಿಷನ್ ಅವಾರ್ಡ್ ನ್ನು ಪಡೆದಿದ್ದಾರೆ. ಧಾರಾವಾಹಿ ಮುಗಿದು ಸುಮಾರು ವರುಷಗಳೇ ಕಳೆದರೂ ಇಂದಿಗೂ ಅವರನ್ನು ಜನ ‘ಗುಪ್ತಗಾಮಿನಿ’ ಭಾವನಾ ಎಂದೇ ಗುರುತಿಸುತ್ತಾರೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ದೊಡ್ಡ ಗೌರವ ಬೇಕೆ..?
ಮುಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೊಸೆ ತಂದ ಸೌಭಾಗ್ಯ’ ಧಾರಾವಾಹಿಯಲ್ಲಿ ಅಭಿನಯಿಸಿದ ಸುಷ್ಮಾ ಝೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಮಗಳು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ತದ ನಂತರ ನಟನೆಗೆ ಬ್ರೇಕ್ ಕೊಟ್ಟ ಮುದ್ದು ಮುಖದ ಚೆಲುವೆ ನಂತರ ಹೆಚ್ಚಾಗಿ ಕಾಣಿಸಿಕೊಂಡದ್ದು ನಿರೂಪಕರಾಗಿ! ಸೀರಿಯಲ್ ಸಂತೆ ಯಂತಹ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿರುವ ಸುಷ್ಮಾ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹಾಡು ಹರಟೆ ಕಾರ್ಯಕ್ರಮದ ನಿರೂಪಣೆಯ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿದ್ದಾರೆ.
ಹಾಡು ಹರಟೆ ಕಾರ್ಯಕ್ರಮದಲ್ಲಿ ಸೊಗಸಾದ ಹಾಡುಗಳ ಮೂಲಕ ಗಾಯಕರು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರೆ, ಸುಷ್ಮಾ ಅವರು ತಮ್ಮ ಮುದ್ದಾದ ನಿರೂಪಣೆಯ ಮೂಲಕ ಮತ್ತೊಮ್ಮೆ ಕಿರುತೆರೆಯ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವುದಂತೂ ಸತ್ಯ ! ನಿರೂಪಣೆಯಷ್ಟೇ ಅಲ್ಲದೆ ಭರತನಾಟ್ಯ ಕಲಾವಿದೆಯೂ ಹೌದು. ಖ್ಯಾತ ನೃತ್ಯಗಾರ್ತಿ ವೈಜಯಂತಿಕಾಶಿಯವರ ಹೆಮ್ಮೆಯ ಶಿಷ್ಯರಲ್ಲಿ ಸುಷ್ಮಾರವರೂ ಒಬ್ಬರು. ವೈಜಯಂತಿ ಕಾಶಿಯವರ ಒತ್ತಾಸೆಯಿಂದಲೇ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದವರು ಸುಷ್ಮಾ. ಸುಷ್ಮಾ ಅವರ ಕಲಾ ಪಯಣ ನಿರಂತರವಾಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ.