ಕಳೆದ ನಾಲ್ಕು ದಶಕಗಳಿಂದ ಸರ್ಕಾರಿ ಅಧಿಕಾರಿಯಾಗಿದ್ದು ನಿವೃತ್ತಿಯಾಗಿರುವ ಶ್ರೀಯುತ ಡಾ ಸಿ ಸೋಮಶೇಖರ್ ರವರು ಬಾಲ್ಯದಿಂಲೇ ಮೈಗೂಡಿಸಿಕೊಂಡಿದ್ದ ಕಲೆ ಸಾಹಿತ್ಯ ಸಂಸ್ಕೃತಿಗಳ ಸೇವೆಯನ್ನು ಇಂದು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರೊಬ್ಬ ಆಡಳಿತಾತ್ಮಕ ಅಧಿಕಾರಿಯಾಗಿದ್ದಾಗಲೂ ಸಾಕಷ್ಟು ಸಂಘ-ಸಂಸ್ಥೆಗಳ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಈಗ ಅವರು ಅವರದ್ದೇ ಆದ ಡಾ ಸಿ. ಸೋಮಶೇಖರ್ ಮತ್ತು ಶ್ರೀಮತಿ ಎನ್ ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ, ಎಂಬ ಸಾಂಸ್ಕೃತಿಕ ಸಂಸ್ಥೆಯೊಂದನ್ನು ಕಳೆದ ಐದು ವರ್ಷಗಳಿಂದ ಮನ್ನಡೆಸಿಕೊಂಡು ಬರುತ್ತಿದ್ದಾರೆ.

ಈ ಸಂಸ್ಥೆಯ ವತಿಯಿಂದ ಪ್ರತೀ ವರ್ಷವೂ ಎಲೆ ಮರೆಕಾಯಂತಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ನಾಡಿಗೆ ಪರಿಚಯಿಸಿ ಸನ್ಮಾನಿಸುತ್ತಿದ್ದಾರೆ. ಬಸವ ವೇದಿಕೆಯಲ್ಲಿಯೂ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಯುತ ಸೋಮಶೇಖರ್ ರವರು ಈ ಸಂಸ್ಥೆಯ ಮೂಲಕ ಕಳೆದ 25 ವರ್ಷಗಳಿಂದ ಹತ್ತಾರು ಹಿರಿಯ ಚೇತನಗಳಿಗೆ ಬಸವಶ್ರೀ, ವಚನಸಾಹಿತ್ಯಶ್ರೀ, ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ಅಲ್ಲದೇ ಬಸವಣ್ಣನವರ ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಪಸರಿಸುವ ಕೆಲಸ ಈ ಸಂಸ್ಥೆಯ ಮೂಲಕ ಡಾ ಸಿ ಸೋಮಶೇಖರ್ ರವರು ಅವಿರತವಾಗಿ ನಡೆಸುತ್ತಿರುವುದು ಶ್ಲಾಘನೀಯ. ನಮ್ಮ ಸಂಸ್ಕೃತಿಯ ವಿಕಾಸದಿಂದಲೇ ಮಾನವ ವಿಕಾಸ ಸಾಧ್ಯ ಎಂಬುದೇ ಈ ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ. ಸಾಮಾನ್ಯರಿಗೂ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಅರಿವು ಮಾಡಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕೆಂಬುದು ಸೋಮಶೇಖರ್ ರವರ ಆಶಯ.

ಈ ಬಾರಿ ಈ ಪ್ರತಿಷ್ಠಾನದ ಐದನೇವರ್ಷದ ಸಮಾರಂಭದಲ್ಲಿ ಸಂಸ್ಕೃತಿ-ಸಂಗಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅತ್ಯತ್ಭುತವಾಗಿ ಮೂಡಿ ಬಂದಿತ್ತು. ಈ ಬಾರಿ ವಿವಿಧ ಕ್ಷೇತ್ರಗಳ ಐದು ಸಾಧಕರನ್ನು ಗೌರವಿಸಲಾಯ್ತು. ವಚನ ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಸನ್ಮಾನ್ಯ ಡಾ|| ಓ.ಎಲ್. ನಾಗಭೂಷಣ ಸ್ವಾಮಿಯವರಿಗೆ, ದಾಸಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಸನ್ಮಾನ್ಯ ಡಾ|| ಕಬ್ಬಿನಾಲೆ ವಸಂತ ಭಾರದ್ವಾಜ್ ರವರಿಗೆ, ಜಾನಪದ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಶ್ರೀಮತಿ ಯಲ್ಲವ್ವ ದುರ್ಗಪ್ಪ ರೊಡ್ಡಪ್ಪನವರ ಅವರಿಗೆ, ಸಂಗೀತ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಶ್ರೀ ವೀರೇಶ್ ಕಿತ್ತೂರ ಅವರಿಗೆ, ಹಾಗೂ ನೃತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಶ್ರೀಮತಿ ವೈಜಯಂತಿ ಕಾಶಿರವರಿಗೆ ಕಳೆದ ಸೆಪ್ಟೆಂಬರ್ 15 ರಂದು ಭಾರತೀಯ ವಿದ್ಯಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸುತ್ತೂರು ವೀರ ಸಿಂಹಾಸನ ಮಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅಲ್ಲದೇ ಸನ್ಮಾನ್ಯ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಕೇಂದ್ರ ಸಚಿವರಾದ ಶ್ರೀ ಡಿ. ವಿ ಸದಾನಂದಗೌಡರವರು ಹಾಗೂ ರಾಜ್ಯ ವಸತಿ ಸಚಿವರಾದ ಶ್ರೀ ವಿ ಸೋಮಣ್ಣ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. ನಾಡಿನ ಹೆಸರಾಂತ ಸಾಹಿತಿಗಳೂ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀ ಚಂದ್ರಶೇಖರ ಕಂಬಾರರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಡೀ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು. ಸಂಸ್ಕೃತಿ ಸಂಗಮದಂತಹ ಹಲವಾರು ಕಾರ್ಯಕ್ರಮಗಳು ಡಾ. ಸಿ ಸೋಮಶೇಖರ್ ರವರ ಪ್ರತಿಷ್ಠಾನದವತಿಯಿಂದ ಮೂಡಿ ಬರಲಿ ಎಂಬುದು ನಮ್ಮ ಆಶಯ.