ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಸಿನಿಮಾ ಹಾಗೂ ರಾಜಕೀಯದಲ್ಲಿ ಅವರು ಸಕ್ರಿಯವಾಗಿದ್ದರು.
ಸಿನಿಮಾ ರಂಗದಲ್ಲಿ ಸದ್ದು ಮಾಡಲು ಬಯಸಿದ್ದ ಅವರನ್ನು ಅದೃಷ್ಟ ಕೈ ಹಿಡಿದಿರಲಿಲ್ಲ. ಬಹು ನಿರೀಕ್ಷೆಯ ಜಾಗ್ವಾರ್ ವೇಗ ಪಡೆದುಕೊಂಡಿರಲಿಲ್ಲ. ಇನ್ನು ಸೀತಾರಾಮ ಕಲ್ಯಾಣ ಕೂಡಾ ನಿರೀಕ್ಷೆಯ ಯಶಸ್ಸು ಪಡೆದಿರಲಿಲ್ಲ.
ಈ ನಡುವೆ ಚುನಾವಣೆಗೂ ಸ್ಪರ್ಧಿಸಿದ್ದರಿಂದ ಚಿತ್ರರಂಗದಿಂದ ಅವರು ದೂರ ಸರಿದರು ಅಂದುಕೊಳ್ಳಲಾಗಿತ್ತು. ಇದೀಗ ಬಂದಿರುವ ಮಾಹಿತಿ ಪ್ರಕಾರ ನಿಖಿಲ್ ಪ್ರಯತ್ನದಿಂದ ಹಿಂದೆ ಸರಿದಿಲ್ಲ. ಮತ್ತೆ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇದಕ್ಕೆ ಉತ್ತರ ಅನ್ನುವಂತೆ ಸ್ಯಾಂಡಲ್ವುಡ್ ಯುವರಾಜ ಜನ್ಮದಿನದಂದು ಹೊಸ ಸಿನಿಮಾಗಳ ಘೋಷಣೆ ಮಾಡಿಕೊಂಡಿದ್ದಾರೆ. ಅದು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ನಾಲ್ಕು ಸಿನಿಮಾಗಳ ಘೋಷಣೆಯಾಗಿದೆ.
ಲಹರಿ ಸಂಸ್ಥೆ ನಿಖಿಲ್ ಅವರಿಗಾಗಿ ಸಿನಿಮಾವೊಂದನ್ನು ನಿರ್ಮಿಸಲಿದೆ. ಜನವರಿ 30ರಿಂದ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ. ಇದೊಂದು ಸ್ಪೋರ್ಟ್ಸ್ ಕುರಿತ ಸಿನಿಮಾ ಇರಬಹುದು ಎಂಬ ಸುಳಿವನ್ನು ಫಸ್ಟ್ಲುಕ್ ಕೊಟ್ಟಿದೆ.
ವಿಜಯ್ ಕುಮಾರ್ ಕೊಂಡ ಈ ಚಿತ್ರವನ್ನು ನಿರ್ದೇಶಿಸಲಿದ್ದು,ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಶ್ರೀಶಾ ಕುದುವಳ್ಳಿ ವಹಿಸಿದ್ದಾರೆ. ಶೇಖರ್ ನೃತ್ಯ ನಿರ್ದೇಶನ ಮಾಡಲಿದ್ದು, ಪ್ರವೀಣ್ ಪುಡಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವಿಜಯ್, ಸೂರ್ಯರಂತಹ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿಖಿಲ್ ಜೊತೆ ಸಿನಿಮಾ ಮಾಡಲಿದೆ. ಲೈಕಾ ಸಂಸ್ಥೆಯ 20ನೇ ಸಿನಿಮಾದಲ್ಲಿ ನಿಖಿಲ್ ನಟಿಸೋದು ಪಕ್ಕಾ ಆಗಿದೆ.
ಅಂಬಾರಿ’, ‘ಅದ್ದೂರಿ’, ‘ರಾಟೆ’, ‘ಐರಾವತ’ ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್ ನಿಖಿಲ್ ಅವರಿಗಾಗಿ ಸಿನಿಮಾ ನಿರ್ದೇಶಿಸಲಿದ್ದು, ಎನ್ಕೆ ಎಂಟರ್ಟೇನ್ಮೆಂಟ್ಸ್ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಜೂನ್ನಿಂದ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದ ನಿಖಿಲ್, ಈ ಬಾರಿ ಅವರ ನಿರ್ಮಾಣದ ‘ಧನುಷ್ ಐಪಿಎಸ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ.
ನಿಖಿಲ್ ಇಲ್ಲಿ ಪೊಲೀಸ್ ಅವತಾರ ತಾಳಲಿದ್ದಾರೆ. ಈ ಚಿತ್ರದ ತಾಂತ್ರಿಕ ತಂಡ ಇನ್ನಷ್ಟೇ ಘೋಷಣೆಯಾಗಬೇಕಿದೆ.