ಒಂದಾನೊಂದು ಕಾಲದಲ್ಲಿ ನಾವಿದ್ದ ಊರುಗಳಿಂದ ಪಕ್ಕದೂರಿಗೆ ಹೋಗಿ ಬರುವುದೂ ಒಂದಿಡೀ ದಿನದ ಕೆಲಸವಾಗಿಬಿಡುತಿತ್ತು. ದೂರದ ಊರಿಗೆ ಪ್ರಯಾಣ ಬೆಳೆಸುವುದೆಂದರೆ ೨-೩ ದಿನಗಳು ಹಿಡಿಯುತಿತ್ತು. ಇನ್ನೂ ವಿದೇಶಕ್ಕೆ ಹೋಗುವುದೆಂದರೆ ಅದು ಕೆಲವರಿಗೆ ಮಾತ್ರ ಸಾಧ್ಯವಾಗುತಿದ್ದ ಸಂಗತಿಯಾಗಿತ್ತು. ಅಡಗಿನಲ್ಲಿ ತಿಂಗಳುಗಳ ಮಾಡಬೇಕಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.ಇಡೀ ಪ್ರಪಂಚವೇ ಜಾಗತಿಕ ಹಳ್ಳಿಯಾಗಿದೆ. ಅವಶ್ಯ ಮಾಹಿತಿ ಸಂಗ್ರಹಣಕ್ಕೆ ಅನುಮಾಡುವ ಜಾಲತಾಣ ಮತ್ತು ಕೈಗೆಟುಕುವ ವಿಮಾನ ಪ್ರಯಾಣ ಎಲ್ಲವೂ ಇದಕ್ಕೆ ಪೂರಕವಾಗಿ ವಿದೇಶ ಪ್ರಯಾಣ, ಅಲ್ಲಿನ ವಿದ್ಯಾಭ್ಯಾಸ ಮತ್ತು ನೌಕರಿ ಎಲ್ಲವೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಪ್ರಪಂಚದ ಅದ್ಯಾವುದೇ ದೇಶಕ್ಕೆ ಹೋದರೂ ಒಬ್ಬ ಭಾರತೀಯನಾದರೂ ಕಣ್ಣಿಗೆ ಬೀಳುವುದು ಸಹಜವಾಗಿದೆ. ಪ್ರಸ್ತುತ ಹೊರ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ/ ಪ್ರವಾಸಿ ಭಾರತೀಯರ ಸಂಖ್ಯೆ 3ಕೋಟಿಗೂ ಹೆಚ್ಚು. ಭಾರತದಲ್ಲಿಈಗ NRI ಒಂದು ಸಾಮಾನ್ಯ ವಿಷಯವಾಗಿದೆ. ನಗರಗಳಿರಲಿ ಹಳ್ಳಿಗಳಲ್ಲೂ ಹೊರ ರಾಷ್ಟ್ರಗಳಲ್ಲಿ ವಾಸವಾಗಿರೊ ಒಬ್ಬರಾದರು ಪರಿಚಯವಿರುತ್ತಾರೆ ಅಥವಾ ಸಂಪರ್ಕದಲ್ಲಿರುತ್ತಾರೆ. ನಮ್ಮಲ್ಲಿ ವಿದೇಶದ ಬಗ್ಗೆ ಒಂದು ವಿಧವಾದ ವ್ಯಾಮೋಹವಿದೆ. ಭಾರತದಲ್ಲೇ ಉನ್ನತ ಬದುಕು ಕಂಡುಕೊಂಡವರಿಗೂ ಒಮ್ಮೆಯಾದರೂ ವಿದೇಶ ಸುತ್ತಿ ಬರುವ ಆಸೆ ಹೊಂದಿರುತ್ತಾರೆ. ಅಲ್ಲಿ ವಿದೇಶಿಯರ ಜೀವನಶೈಲಿಯನ್ನು ಕಂಡು ಬೆರಗಾಗುವರು. ಆದರೆ ಅಲ್ಲಿನ ಸಂಪೂರ್ಣ ಜನಜೀವನದ ಚಿತ್ರಣ ಮಾತ್ರ ನಾಲ್ಕಾರು ದಿನ ಪ್ರವಾಸ ಮಾಡಿದವರ ಅಂದಾಜಿಗೂ ನಿಲುಕದ್ದು. NRI ಜೀವನದ ಸಂಪೂರ್ಣ ಚಿತ್ರಣವನ್ನು ಈ ಲೇಖನದಲ್ಲಿ ಕಟ್ಟಿಕೊಡುವುದು ಕಷ್ಟವಾದರೂ ಅವರ ಜೀವನದ ಒಂದು ಜಲಕ್ಕನ್ನು ನಮ್ಮ ಓದುಗರ ಮುಂದಿರಿಸಬಹುದು. ಬಹಳಷ್ಟು ಜನ ತಿಳಿದಿರುವುದು ಹೊರ ರಾಷ್ಟ್ರಗಳಲ್ಲಿ ನೆಲೆಸುವುದೇ ಅದೃಷ್ಟ, ಅಲ್ಲಿ ನೆಲೆಸಿರುವವರಿಗೆ ಅದೃಷ್ಟದ ಕೀಲಿಕೈ ಸಿಕ್ಕಿದೆಯೆಂದು. ಕೈ ತುಂಬಾ ಹಣ, ದಿನನಿತ್ಯ ಜಂಜಾಟಗಳಿಂದ ಮುಕ್ತವಾದ ಪರಿಸರ ಮತ್ತು ಮನಸೊ ಇಚ್ಛೆ ಸ್ವಾತಂತ್ರ್ಯ, ಅವರ ಜೀವನ ಸಮಸ್ಯೆಗಳೇ ಇಲ್ಲದ ಸುಖದ ಸೋಪಾನ ಎನ್ನುವುದು ಹಲವರ ಅಭಿಪ್ರಾಯ. ಅವರ ದೃಷ್ಟಿಯಂತೆಯೇ ಜಂಜಾಟರಹಿತ ಪರಿಸರವುಂಟು, ಸ್ವಾವಲಂಬನೆಯ ಕಲಿಕೆಯುಂಟು, ಸ್ವಚ್ಛಂದದ ಸುಖವುಂಟು, ಮನ ತಣಿಸುವ ಯಾನಗಳು ಉಂಟು, ಹಲವು ಸಂಸ್ಕೃತಿ, ಜೀವನಶೈಲಿ ಮತ್ತು ಮಾನವ ವ್ಯಕ್ತಿತ್ವಗಳ ಪರಿಚಯದ ಸಾಧ್ಯತೆಗಳೂ ಉಂಟು. ಆದರೆ ಎಲ್ಲವೂ ಅಷ್ಟು ಸರಳ ಸುಲಭವಲ್ಲ.
ಜೀವನದಲ್ಲಿ ಅದೇನನ್ನೋ ಸಾಧಿಸಬೇಕು ಎಂಬ ಬಯಕೆಯೊಂದಿಗೆ ವಿಧ್ಯೆಯನ್ನು ಅರಸುತ್ತ ತನ್ನ ಮನೆ, ಊರು ಎಲ್ಲವನ್ನೂ ತೊರೆಯುವವರು ಜೀವವನ್ನು ಕಂಡು ಕೊಳ್ಳುವ ತವಕದಿಂದ ಗೂಡು ತೊರೆದ ಹಕ್ಕಿಗಳಂತೆ. ಅವರ ಮನಸ್ಸು ಆ ಹಕ್ಕಿಗಳ ಹಾಗೆ ತವಕಿಸುತ್ತ ಮುಂಬರುವ ತೊಂದರೆಗಳ ಸಂಪೂರ್ಣ ಅರಿವಿಲ್ಲದೆ ಒಂದು ಪ್ರತೀಕ್ಷೆಯೊಂದಿಗೆ ತಮಗೆ ಪರಿಚಿತವಾದದ್ದನ್ನೆಲ್ಲವನ್ನೂ ಬಿಟ್ಟು ಉತ್ಸಾಹದಿಂದ ಹೊರಟುಬಿಟ್ಟಿರುತ್ತಾರೆ.
ಆರಂಭದಲ್ಲಿ ಅದೆಂತಹುದೋ ಭಯ, ಹಿಂಜರಿಕೆ. ಅಪರಿಚಿತ ವಾತಾವರಣ, ಜನ, ಭಾಷೆ, ಆಹಾರ, ವಸತಿ, ಶಾಲೆ, ಪಠ್ಯದ ಶೈಲಿ, ಬಂದೆರಗುವ ಸವಾಲುಗಳು.. ಎಲ್ಲವೂ ಹೊಸತು. ಸರ್ವೇ ಸಾಮಾನ್ಯ ವಿಷಯವಾದ ತರಕಾರಿ ಕೊಳ್ಳೊವುದು, ಅಗತ್ಯ ಓಷಧಿಯನ್ನು ಹೊಂಚುವುದು, ಅಷ್ಟೇ ಏಕೆ ಕಸದ ವಿಲೇವಾರಿಯೂ ಕೂಡ ಹೊಸ ರೀತಿ, ಇವೆಲ್ಲವು ಏನೋ ಒಂದು ಸವಾಲಾಗಿಬಿಡುತ್ತದೆ. ಆಗಲೇ ಅರಿವಾಗುವುದು ಜೀವನದಲ್ಲಿನ ಅದೆಷ್ಟೋ ಸಂಗತಿಗಳನ್ನು ನಾವು ತುಂಬಾ ಹಗುರವಾಗಿ ಪರಿಗಣಿಸಿದ್ದೇವೆ ಮತ್ತು ಎಷ್ಟು ಪರಾವಲಂಬಿಯಾಗಿದ್ದೇವೆ ಎಂದು. ಬೆಚ್ಚಗಿನ ಗೂಡು, ತಾಯಿಯ ಮಮತೆಯ ಗುಟುಕು, ತಂದೆಯ ಪ್ರೀತಿಯ ಹಾರೈಕೆ ಎಲ್ಲವೂ ನೆನಪಾಗಿ ಮನಸ್ಸಿಗೆ ಮೋಡ ಕವಿದಂತಾಗಿಬಿಡುತ್ತದೆ. ಆಳ ತಿಳಿಯದೆ ಈಜಿಗಿಳಿದುಬಿಟ್ಟನೇನೋ ಅನ್ನುವ ಗೊಂದಲ ಒಂದೆಡೆಯಾದರೆ ಈಜು ಕಲಿತು ಯಶಸ್ವಿಯಾಗಿ ದಡ ತಲುಪ ಬಲ್ಲೆನೇ ಎಂಬ ಅನುಮಾನ ಇನ್ನೊಂದೆಡೆ. ಈ ವಿಚಾರಗಳೆಲ್ಲ ಮನಸಲ್ಲಿ ಮಂಥನವಾದ ಮೇಲೆ ಒಳಗಿನ ಆತ್ಮಸ್ಥೈರ್ಯ ಜಾಗೃತವಾಗಿ ಅಪಾರವಾದ ಶಕ್ತಿಯನ್ನು ತುಂಬುತ್ತದೆ. ‘ಏನೇ ಬರಲಿ ಎಲ್ಲವನ್ನು ಸಹಿಸಿ ಇಲ್ಲಿಯೇ ಇರುತ್ತೇನೆ, ಇದ್ದು ಜಯಿಸುತ್ತೇನೆ’ ಎಂಬ ಹಠ ಹುಟ್ಟುಕೊಂಡುಬಿಡುತ್ತದೆ.
ದಿನಗಳು ಕಳೆದಂತೆ ಮೈಚಳಿ ಬಿಟ್ಟು ಹೊಸ ಹುರುಪಿನೊಂದಿಗೆ ಎಲ್ಲವನ್ನು ಒಂದೊಂದಾಗಿ ತಿಳಿಯುತ್ತಾ ಸ್ವಚ್ಛಂದದ ಸುಖ ಅನುಭವಿಸಲಾರಂಭಿಸುತ್ತಾರೆ. ಹೊಸ ವಿಚಾರಧಾರೆಗಳನ್ನು ಅರಿಯುತ್ತಾ, ಅದರ ಸತ್ಯಾಸತ್ಯತೆಗಳನ್ನು ಪ್ರಶ್ನಿಸಿ ತನಗೊಪ್ಪುವುವನ್ನು ಅಳವಡಿಸಿಕೊಳ್ಳುತ್ತಾ ಜ್ಞಾನಾರ್ಜನೆಯ ಹಾದಿ ಹಿಡಿದಿರುತ್ತಾರೆ. ಹಾದಿಯಲ್ಲಿ ಒಂದಷ್ಟು ಸ್ನೇಹಿತರು ಜೊತೆಯಾಗುತ್ತಾರೆ. ಎಲ್ಲವೂ ಸ್ಥರವಾಯಿತೆನ್ನುವಷ್ಟರಲ್ಲೇ ‘ವೀಸಾ’ ತಲೆ ಬಿಸಿ ಶುರುವಾಗಿಬಿಡುತ್ತದೆ. ಬಹುತೇಕ ದೇಶಗಳಲ್ಲಿ ನೌಕರಿ ಸಂಪಾದಿಸಲು ಕೊಡುವ ಸಮಯ ೧ ರಿಂದ ೬ ತಿಂಗಳುಗಳು. ವಿದ್ಯಾಭ್ಯಾಸ ಕೊನೆಯಾಗುತ್ತಿದ್ದಂತೆಯೇ ದಿನಗಳ ಗಡುವು ಶುರು. ಗಡುವು ಮುಗಿಯುವದರೊಳಗೆ ಉದ್ಯೋಗ ಗಿಟ್ಟಿಸಬೇಕು, ಇಲ್ಲವಾದರೆ ಗಂಟು ಮೂಟೆ ಕಟ್ಟಿ ಊರಿಗೆ ಹೊರಡಬೇಕು. ಉದ್ಯೋಗದ ಅನಿವಾರ್ಯತೆ ಬದುಕಿಗಷ್ಟೇ ಅಲ್ಲ,ಅಲ್ಲಿನ ಇರುವಿಕೆಗೂ. ಅದಾದಾಗಲೇ ಅರಿವಾಗುವುದು ಸಾಧಿಸುವುದು ಹಾಗಿರಲಿ ನಮ್ಮ ಇರುವಿಕೆಗಾಗಿಯೇ ಹೊರಡಬೇಕೆಂದು. ವಿದ್ಯಾಭ್ಯಾಸದ ಸಾಲದ ಒತ್ತಡ ಒಂದೆಡೆಯಾದರೆ, ಹೆತ್ತವರನ್ನು ನಿರಾಸೆ ಮಾಡಬಾರದೆಂಬ ಕಾಳಜಿ ಮತ್ತು ಜವಾಬ್ದಾರಿ ಇನ್ನೊಂದೆಡೆ. ಆ ಸಂಕಟದ ಬೆಖುದಿ, ಅನುಭವಿಸಿದವರಿಗೆ ಗೊತ್ತು.
‘ಲೈಫ್ ಐಸ್ ಬ್ಯೂಟಿಫುಲ್’
ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಒಂದು ನೌಕರಿ ಸಂಪಾದಿಸಿದ್ದಲ್ಲಿ ಬಹು ಮುಖ್ಯ ಸವಾಲೊಂದನ್ನು ಗೆದ್ದ ಹಾಗೆ. ತಾ ಕಂಡ ಕನಸಿನ ಮೊದಲಮೆಟ್ಟಿಲು ಹತ್ತಿದ ತೃಪ್ತಿ ಮತ್ತು ತಂದೆ ತಾಯಿಗೆ ಹೆಮ್ಮೆ ಪಡಿಸಿದ ಖುಷಿ ಮನಸಿನಲ್ಲಿ ಮನೆಮಾಡಿರುತ್ತದೆ. ಶ್ರಮದ ಸಾರ್ಥಕ ಫಲ ಅನುಭವಿಸುತ್ತಿರುವಾಗಲೆ ಬದುಕಿನ ಮುಂದಿನ ಘಟ್ಟ ಅದಾಗಲೇ ಬಾಗಿಲಲ್ಲಿ ಬಂದು ನಿಂತಿರುತ್ತದೆ. ಮದುವೆ, ಮನೆ ಇತ್ಯಾದಿ. ಒಬ್ಬಂಟಿಯಾದ ಜೀವನಕ್ಕೆ ನಲ್ಮೆಯ ಸಂಗಾತಿಯ ಆಗಮನವಾದಾಗ ಬದುಕು ಒಂದು ರೂಪಪಡೆಯಲಾರಂಭಿಸುತ್ತದೆ. ವೈವಾಹಿಕ ಜೀವನದ ಈ ಮಜಲು ಎಲ್ಲೇ ಇದ್ದರೂ ಬಲು ಸುಂದರ. ಬೆಚ್ಚಗಿನ ಪ್ರೀತಿ, ಕಣ್ಣ ತುಂಬ ಕನಸುಗಳು ‘ಲೈಫ್ ಐಸ್ ಬ್ಯೂಟಿಫುಲ್’ ಅನಿಸಲಾರಂಭಿಸುತ್ತದೆ.
‘ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’
ಆಗೊಮ್ಮೆ ಹೀಗೊಮ್ಮೆ ಮನೆಯ ನೆನಪಾದರೂ ತಂತ್ರಜ್ಞಾನದ ಮಾಂತ್ರಿಕ ಅನ್ವೇಷಣೆಗಳಾದ ಇಂಟರ್ನೆಟ್, ವಾಟ್ಸಪ್ಪ್, ಸ್ಕೈಪ ಕಾಲ್ಗಳು ಮನಸ್ಸನ್ನು ತಣಿಸುತ್ತದೆ. ‘ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’ ಎಂಬಂತೆ ಇರುವಷ್ಟು ಸಮಯವನ್ನು ಸದುಪಯೋಗ ಪಡಿಸಬೇಕು, ಆದಷ್ಟು ಕಲಿಯಬೇಕು, ದುಡಿಯಬೇಕು ಮತ್ತು ಪ್ರಪಂಚ ಸುತ್ತಿನೋಡಿ ಅರಿಯಬೇಕು ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಹಬ್ಬ ಹರಿದಿನಗಳು ಬಂತೆಂದರೆ ಮನಸ್ಸಿನ ಮೂಲೆಯಲ್ಲೊಂದು ಸಣ್ಣ ಅಸಮಾಧಾನ ಮೂಡುತ್ತದೆ. ತನ್ನವರೆಲ್ಲಾ ಹೊಸ ದಿರಿಸು ತೊಟ್ಟು ಪೂಜಾ ಕೈಂಕರ್ಯಗಳಲ್ಲಿ ಮಿಂದು ಹೋಳಿಗೆ ತುಪ್ಪ ಸವಿದು ಸಂಭ್ರಮಿಸುತ್ತಿದ್ದರೆ ಅದ್ಯಾವುದರ ಪರಿವೆ ಇಲ್ಲದವರ ಮಧ್ಯೆ ಸಂಭ್ರಮದ ಸೋಂಕಿಲ್ಲದೆ ಪೇಲವ ದಿನ ಕಳೆಯುವ ಅನಿವಾರ್ಯತೆಯಾದರು ಏನು ಎಂದು ತನ್ನೊಂದಿಗೆ ಜಗಳಶುರುವಿಟ್ಟುಬಿಡುತ್ತದೆ ಅವರ ಮನಸ್ಸು. ಆಗೆಲ್ಲ ಮನಸಿಗೆ ಸಮಾಧಾನ ಕೊಡುವುದು ‘ಇದೆಲ್ಲವೂ ತಾತ್ಕಾಲಿಕ’ ಎಂಬ ಭಾವ. ಸಾಧನೆಯ ಹಾದಿಯಲ್ಲಿ ಈ ಪುಟ್ಟ ಸಂತೋಷಗಳ ಶುಲ್ಕ ಕಟ್ಟುವುದು ಆನಿವಾರ್ಯವೆಂದು ಮತ್ತು ಬದುಕಿನ ಮುಂದಿನ ದಿನಗಳಲ್ಲಿ ಇವೆಲ್ಲಾವೂ ನಮ್ಮ ಪಾಲಿಗೂ ಬರೆತದೆಯೆಂದೂ ಸಂತೈಸುತ್ತದೆ ಅದೇ ಮನಸ್ಸು. ಮನಸಾದ ಕೂಡಲೆ ಹೊರಟು ಬರಲು ಸಾಧ್ಯವಿಲ್ಲ. ಸಮಸ್ಯೆ ಹಣದ್ದಲ್ಲ. ರಜೆಗಳದ್ದು ಮತ್ತು ಕೆಲವೊಮ್ಮೆ ‘ವೀಸಾ’ ‘ಪಾಸ್ಪೋರ್ಟ್’ ಗಳ ಜಂಜಾಟಗಳು. ಸಭೆ ಸಮಾರಂಭಗಳಿಗೆ ಗೈರಾಗುವ ಹತಾಶೆಯನ್ನಾದರೂ ಸಹಿಸಬಹುದು ಆದರೆ ಮನೆಯವರ ಸಾವಿಗೂ ಬರದಂತಹ ಅಸಹಾಯಕ ಪರಿಸ್ಥಿತಿ ತರುವ ನೋವನ್ನು ಭರಿಸಲು ಅಸಾಧ್ಯ. ಯಾವ ಪುರುಷಾರ್ಥಕ್ಕಾಗಿ ತನ್ನವರನ್ನು ತೊರೆದು ಇಲ್ಲಿರಬೇಕು, ಏನು ಸಾಧಿಸಿದರೂ ಎಷ್ಟೇ ಪಶ್ಚಾತಾಪ ಪಟ್ಟರು ಎಂದಾದರೂ ನನ್ನನು ನಾನೇ ಕ್ಸಮಿಸಲಾದೀತೆ ಎಂದು ಮನಸ್ಸು ಜರ್ಜರಿತವಾಗಿಬಿಡುತ್ತದೆ. ಅಂತಹ ಸಂಧರ್ಭಗಳಲ್ಲಿ ಯಾವುದೇ ಮಾತು, ಯಾವುದೇ ತರ್ಕವೂ ಸಂತೈಸುವುದಿಲ್ಲ. ಕಾಲವೊಂದೆ ಪರಿಹಾರ. ಕಸವನ್ನು ಕೊಳೆಸಿ, ಅದರ ಸಾರವನ್ನು ಹೀರಿ ಮತ್ತೆ ಹೊಸ ಚಿಗುರಿನ ನಗೆ ಬೀರುವ ಶಕ್ತಿ ಇರುವುದು ಪ್ರಕೃತಿಗೆ ಮಾತ್ರ! ದುಗುಡದ ಮೋಡ ಸರಿದಮೇಲೆ, ಜೀವನದ ಲಯ ಮತ್ತೆ ಶ್ರುತಿ ಹಿಡಿಯುತ್ತದೆ.
ಬಿಡದ ಜಗದ ಮಾಯೆ!
ಮನೆಯಿಂದ ಹೊರ ಬಂದು ಬದುಕು ಕಟ್ಟಿಕೊಳ್ಳುವುದು ಕಷ್ಟವೇ. ಅದು ಹತ್ತಿರದ ನಗರವಾದರೂ ಅಷ್ಟೇ, ಹೊರ ರಾಜ್ಯ/ಹೊರ ದೇಶವಾದರೂ ಅಷ್ಟೇ. ಆದರೂ ಹತ್ತಿರದಲ್ಲೇ ಇದ್ದವರ ಇಂಥಹದೇ ಕಷ್ಟಕ್ಕೆ ಬಂಧು ಬಾಂಧವರು ಮರುಗುತ್ತಾರೆ. ನೆಲೆಸಿರುವ ನಗರ ಅಥವಾ ರಾಜ್ಯ ಬೇರೆಯಾದರೂ ದೇಶ ಒಂದೆ. ಅಲ್ಲಿನ ಆಚಾರ ವಿಚಾರಗಳೂ ಸ್ವಲ್ಪ ಬೇರೆಯಾದರೂ ಅವರ ಮನಸ್ಥಿತಿಯೊಂದೆ, ಅವರ ಸಮಸ್ಯೆಗಳು, ಸಾಂಸ್ಕೃತಿಕ ನೆಲೆಗಟ್ಟು ಮತ್ತು ಸಾಮಾಜಿಕ ಪರಿಸ್ಥಿತಿಯೊಂದೆ. ಅವರು ನಮ್ಮವರೆ ಎಂಬುದು ಎಂದೂ ಬದಲಾಗದು. ಅದೇ NRI ಗಳೆಂದರೆ ಅಲ್ಲಿ ಆ ಭಾವ ಇರಲ್ಲ. ಅದರಲ್ಲೂ ಓದು ಮುಗಿಸಿ, ಅಲ್ಲೇ ಕೆಲಸಕ್ಕೆ ಸೇರಿ ಒಂದಷ್ಟು ವರ್ಷ ಕಳೆಯಿತೆಂದರೆ ಇವರಿನ್ನು ಮರಳಿ ಬರರು. ತಾಯ್ನಾಡನ್ನು ಬಿಟ್ಟು ಹೋಗುವ ಪ್ರಮೇಯವಾದರೂ ಏನಿತ್ತು, ಸಾಧನೆ ಅಲ್ಲಿ ಮಾತ್ರ ಸಾಧ್ಯವೇ, ಇಲ್ಲಿಯೇ ಇದ್ದು ಹಲವರು ಸಾಧಿಸಿಲ್ಲವೇ? ‘ಮಾಡಿದುಣ್ಣೋ ಮಾರಾಯ’ ಎಂದು ಮೂಗು ಮುರಿಯುವರೇ ಹೆಚ್ಚು. ಇವರಿಗೆ ತಾಯ್ನಾಡಿನ ಮೇಲಿನ ಪ್ರೀತಿ ಕುಂದಿದೆ ಎಂದೆಣಿಸುತ್ತಾರೆ. ಹಣದ ಆಸೆಗಾಗಿ ಎಲ್ಲರನ್ನು ತೊರೆದು ಅಲ್ಲೇ ನೆಲೆಸಿದ್ದಾರೆ ಎನ್ನುವುದನ್ನು ನಿರ್ಧರಿಸಿಯೇಬಿಡುತ್ತಾರೆ. ಹೊರ ಹೋಗಲು ಕಾರಣವೇನು ಎಂದರೆ ಉತ್ತರಿಸುವುದು ಕಷ್ಟ. ವಿದ್ಯಾಭ್ಯಾಸ ಇಲ್ಲಿ ಸಾಧ್ಯವಿಲ್ಲವೇ? ಸಾಧ್ಯವಿರಬಹುದು. ಆದರೆ ಎಲ್ಲರೂ ಒಂದೇ ದಾರಿ ಆರಿಸಬೇಕು ಅಂತೇನಿಲ್ಲವೆಲ್ಲ. ಅವರವರ ಮನಸ್ಥಿತಿ ಮತ್ತು ಪರಿಸ್ಥಿತಿಯ ಅನುಗುಣವಾಗಿ ಅವರಿಗೆ ತೋಚಿದ ದಾರಿಯನ್ನು ಆಯ್ಕೆಮಾಡಿರುತ್ತಾರೆ. ಅಂದ ಮಾತ್ರಕ್ಕೆ ನೀವು ಆರಿಸಿದ ದಾರಿಯಲ್ಲಿ ಇಂತಹ ನೋವುಗಳು ಸಾಮಾನ್ಯ, ಇದು ನಿಮ್ಮ ಸ್ವಯಂಕೃತ ಅಪರಾಧ ಎನ್ನುವ ಬದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಎಲ್ಲಿದ್ದರೂ ನೀವು ನಮ್ಮವರೇ ಎಂಬ ಭಾವ ಕೊಟ್ಟರೆ ಎಷ್ಟೋ ಸಹಾಯಕವಾಗುತ್ತದೆ ಅಲ್ಲವೇ ?
ಒಂದು ಬಾರಿ ಬದುಕು ಶುರುವಾದ ಮೇಲೆ ನೆಲೆ ಬದಲಿಸುವುದು ಅಷ್ಟು ಸುಲಭದ ಮಾತಲ್ಲ. ಎಷ್ಟೋ ಬಾರಿ ವಾಪಾಸಾಗಬೇಕೆಂದನಿಸಿದರೂ ಅದು ಸರಳವಲ್ಲ. ಹಲವು ಸಂಗತಿಗಳು ಮತ್ತು ಜವಾಬ್ದಾರಿಗಳು ನುಣಚಿಕೊಂಡುಬಿಡುತ್ತವೆ. ಅಲ್ಲಿನ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಮೆಚ್ಚಿ ಅಲ್ಲಿಯೇ ಶಾಶ್ವತವಾಗಿ ನೆಲೆಸುವವರು ಕೆಲವರಾದರೆ ಅಲ್ಲಿನ ದೇಶ ಕೊಡುವ ಸವಲತ್ತುಗಳು ಮತ್ತು ಅಲ್ಲಿನ ಜಂಜಾಟರಹಿತ ಜೀವನಕ್ಕೆ ಮಾರು ಹೋಗಿ ತಾಯಿನಾಡ ತೊರೆಯುವರು ಹಲವರು. ಅವರೇ ಸುಖಿಗಳು. ಆದರೆ ಇವರಿಬ್ಬರ ನಡುವೆ ಬೆರಳೆಣಿಕೆಯಷ್ಟು ಜನ ಯಾವಾಗಲೂ ಒಂದು ದ್ವಂದ್ವದಲ್ಲಿರುತ್ತಾರೆ. ಅವರ ಪಾಡು ಪರಶಿವನಿಗೇ ಪ್ರೀತಿ. ತನ್ನ ತಾಯಿನಾಡು ಮತ್ತು ತನ್ನವರಿಗಾಗಿ ಹಂಬಲಿಸುತ್ತಾ, ಅಲ್ಲಿಯವರೊಂದಿಗೆ ಅಲ್ಲಿನ ರೀತಿ ನೀತಿಗಳಿಗೆ ಒಗ್ಗಿ ಕೊಳ್ಳುತ್ತಾ ಯಾವುದನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದೆ ಹಪಹಪಿಸುತ್ತಿರುತ್ತಾರೆ. ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂದಿದ್ದಾರೆ ಹಿರಿಯರು. ಈ ವಾಕ್ಯದ ಅರ್ಥ ಬಲು ಆಳ. ಒಂದು ಸ್ಥಳವನ್ನು ಪ್ರವಾಸಿಯಾಗಿ ಭೇಟಿನೀಡುವುದಕ್ಕೂ, ಅಲ್ಲಿಯೇ ನೆಲೆಸಿ ಅಲ್ಲಿನ ಸಂಸ್ಕೃತಿ ಮತ್ತು ಅದರ ನಾಡಿ ಮಿಡಿತ ಅರಿತು ಅದರಲ್ಲಿನ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಬದುಕು ತಂದ ಅವಕಾಶವನ್ನು ಸದುಪಯೋಗ ಪಡಿಸಿ ಕಲಿಯುವ ಹಂಬಲದಿಂದ, ಕಲಿತು ಬೆಳೆಯುವ ಹಂಬಲದಿಂದ ಕೆಲ ಕಾಲ ಅಲ್ಲಿಯೇ ನೆಲೆಸುತ್ತಾರೆ. ಅವರಿಗೆ ತಾಯಿನಾಡ ಸೆಳೆತ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿರುತ್ತದೆಯೇ ಹೊರತು ಎಂದಿಗೂ ಕ್ಷೀಣಿಸುವುದಿಲ್ಲ. ಅವರಿಗೆ ಅವರ ಭವಿಷ್ಯದ ಎಲ್ಲಾ ಕನಸುಗಳಿಗೂ ರಂಗಸ್ಥಳ ತನ್ನೂರೆ.
ಎಂದಾದರೂ ಬರುವುದು ಒಂದು ದಿನ, ತನ್ನೂರಿಗೆ ತೆರಳಿ ತನ್ನ ಕನಸಿನ ಜೀವನವನ್ನು ನೆಡೆಸುವ ಶುಭದಿನ ಎಂದು ಕಾಯುತ್ತಾ ಜೀವನದ ಸದ್ಯ ಕಲಿಕೆಯ ಪ್ರಕ್ರಿಯೆಯನ್ನು ಆಸ್ವಾಧಿಸುತ್ತಾ ಬದುಕುತ್ತಿರುತ್ತಾರೆ. ಬಿ. ರ್. ಲಕ್ಷ್ಮಣ್ ರಾವ್ ರವರ ‘ಅಮ್ಮ ನಿನ್ನ ಎದೆಯಾಳದಲ್ಲಿ… ‘ ಹಾಡು ಆಧ್ಯಾತ್ಮ ಚಿಂತನೆಯ ಜೀವನ ಮತ್ತು ಮೋಕ್ಷದ ಕುರಿತಾದರೂ ದ್ವಂದ್ವದಲ್ಲಿರುವ ‘ಅ’ ನಿವಾಸಿ ಭಾರತೀಯರ ಮನಸ್ಥಿತಿಗೂ ಸರಿಯಾಗಿ ಒಪ್ಪುತ್ತದೆ ಎಂದನಿಸುತ್ತದೆ.
ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೇ ಬರುವೆನು
ಮತ್ತೇ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ.!
ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು..