ಸದಾ ಅಡುಗೆಮನೆಯ ಕಾರ್ಯಗಳಲ್ಲೇ ತಮ್ಮನ್ನು ತಾವು ಮುಳುಗಿಸಿಕೊಂಡ ಮಹಿಳೆ ಅದೇ ಅಡುಗೆ ಮನೆಯ ಕಾರ್ಯವನ್ನೇ ಉದ್ಯಮವಾಗಿಸಿಕೊಂಡ ಕತೆ ಇದು. ಹೌದು ಮನೆಯವರಿಗಾಗಿ ತಯಾರಾಗುತ್ತಿದ್ದದ ಅಡುಗೆಯನ್ನು ಉದ್ಯಮವಾಗಿಸಿದ್ದಾರೆ ಶ್ರೀಮತಿ. ಕವಿತಾ ಲಿಂಗಯ್ಯ ಕಾಡದೇವರಮಠ ರವರು. ಅಡುಗೆ ಮನೆಯನ್ನಾಳುವ ಮಹಿಳೆಯರು ಕೂಡ ಉದ್ಯಮ ಕ್ಷೇತ್ರಲ್ಲಿ ತಮ್ಮ ಚಾಪು ಮೂಡಿಸಬಲ್ಲರು ಎಂಬುದಕ್ಕೆ ಇವರೊಂದು ಉದಾಹರಣೆ. ಇವರು ಬೆಂಗಳೂರಿನ ರಾಜಾಜಿನಗರದ ನವರಂಗ್ ಥಿಯೇಟರ್ ಬಳಿಯ “ನಳಪಾಕ” ಎಂಬ ಹೆಸರಿನ ಶುದ್ಧ ಸಸ್ಯಾಹಾರಿ ಹೋಟೆಲ್ ಅನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಮೂಲತಃ ದಾವಣಗೆರೆಯವರಾದ ಕವಿತಾ ರವರು 14 ವರ್ಷದ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದ ಮನೆಯಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭಿಸಿದ ಈ ಉದ್ಯಮ ಈ ಪರಿಯಾಗಿ ಬೆಳೆಯುತ್ತದೆ ಎಂಬುದನ್ನು ಅವರು ಕನಸು ಮನಸ್ಸಲ್ಲೂ ನೆನೆಸಿರಲಿಲ್ಲ. ಆರಂಭದಲ್ಲಿ ಮನೆಯಲ್ಲಿ 40 ಮಂದಿಗೆ ಉತ್ತರ ಕರ್ನಾಟಕದ ಶೈಲಿಯ ಊಟ ತಯಾರಿಸುತ್ತಿದ್ದರು, ನಂತರ ಕ್ಷೇಮ ಟೆಕ್ನಾಲಜಿ ಯ ಸಿಬ್ಬಂದಿಗೆ ಬಸ್ಸಿನಲ್ಲಿ ಕೊಂಡುಹೋಗಿ ಕೊಡುತ್ತಿದ್ದರು. ಅಂದಿನ ದಿನಗಳಲ್ಲಿ ಕಷ್ಟಪಟ್ಟು ಮಾಡಿದ ಶ್ರಮ ಇಂದು ಫಲ ನೀಡಿದೆ. ಕಳೆದ 12 ವರ್ಷದ ಹಿಂದೆ ರಾಜಾಜಿನಗರದಲ್ಲಿ “ನಳಪಾಕ” ಎಂಬ ಹೆಸರಿನ ದರ್ಶಿನಿ ಯಂತಹ ಸಣ್ಣ ಹೋಟೆಲ್ ತೆರೆದು ವ್ಯಾಪಾರ ಪ್ರಾರಂಭಿಸಿದ ಕವಿತಾ ರವರು ದಿನಗಳು ಉರುಳಿದಂತೆ ತನ್ನ ಉತ್ಪನ್ನಗಳ ಶುಚಿ ರುಚಿಯಿಂದ ಖ್ಯಾತಿ ಪಡೆದರು. ತಿಂಡಿಪ್ರಿಯ ಗ್ರಾಹಕರ ಬೇಡಿಕೆಯಿಂದ 8 ವರ್ಷದ ಹಿಂದೆ ಅಲ್ಲೇ ಹತ್ತಿರ 70 ಸಿಟ್ಟಿಂಗ್ ಕೆಪಾಸಿಟಿಯ ಮತ್ತೊಂದು ದೊಡ್ಡ ಹೋಟೆಲ್ ತೆರೆದರು. ಈಗ ಈ ಎರಡೂ “ನಳಪಾಕ” ಹೆಸರಿನ ಹೋಟೆಲ್ ಗಳು ರಾಜಾಜಿನಗರ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಫೇಮಸ್. ಇಂದು ಇವರ ಉದ್ಯಮದ ರುಚಿಗೆ, ಘಮಲಿಗೆ ಮನ ಸೋಲದವರಿಲ್ಲ.
ಉತ್ತರ ಕರ್ನಾಟಕದಿಂದ ಬಂದು ನೆಲೆಸಿರುವವರಿಗಂತೂ ನಳಪಾಕದ ರುಚಿ ಒಮ್ಮೆ ಹುಟ್ಟೂರುಗಳನ್ನು ನೆನಸಿಬಿಡುತ್ತದೆ. ಕಾರಣ ಇಷ್ಟೇ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದು ಇಲ್ಲಿನ ಆಹಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವೇ. ಇಲ್ಲಿ ಸಿಗುವ ಚಿತ್ರಾನ್ನ ರೈಸ್ ಬಾತ್ ಗಳು ಜೋಳದ ರೊಟ್ಟಿ, ಖಡಕ್ ರೊಟ್ಟಿಯ ರುಚಿ ಕಂಡ ನಾಲಗೆಗೆ ಒಗ್ಗುವುದಿಲ್ಲ. ಹೀಗಾಗಿ ತಮ್ಮ ನೆಚ್ಚಿನ ಜೋಳದ ರೊಟ್ಟಿಯೂಟದ ಸವಿಯನ್ನ ಸವಿಯಲು ಉತ್ತರ ಕರ್ನಾಟಕದ ಮಂದಿ ಸದಾ ಹುಡುಕಾಡುತ್ತಲೇ ಇರುತ್ತಾರೆ. ಆದ್ರೆ ಇಂತಹ ಹುಡುಕಾಟದಲ್ಲಿರುವವರಿಗೆ ತಕ್ಷಣ ನೆನಪಾಗೋದು ಮತ್ತು ಇಡೀ ಬೆಂಗಳೂರಿನಲ್ಲೇ ಉತ್ತರ ಕರ್ನಾಟಕದ ಊಟಕ್ಕೆ ಹೆಸರಾಗಿರೋ ಹೊಟೇಲ್ ನಳಪಾಕ.. ನಳಪಾಕ..
ನಳಪಾಕದಲ್ಲಿ ರೆಗ್ಯುಲರ್ ಅನ್ನ ಸಾಂಬಾರ್ ಗಳ ಜೊತೆಗೆ ಬಿಸಿಬಿಸಿ ತೆಳುವಾದ ಜೋಳದ ರೊಟ್ಟಿ ವಿವಿಧ ಖಾರ ಚಟ್ನಿಗಳು, ಪಾಯಸ ಸೇರಿರುತ್ತವೆ. ಪ್ರತಿ ಗುರುವಾರ ವಿಶೇಷ ಬಿರಂಜಿ ಊಟ, ಪ್ರತಿ ಸೋಮವಾರ ವಿಶೇಷ ಹೋಳಿಗೆ ಊಟಕ್ಕೆ ಫೇಮಸ್ಸಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಜನಪ್ರಿಯ ಮಿರ್ಚಿ ಬಜ್ಜಿ ಮತ್ತೆ ಗಿರ್ಮಿಟ್ ಸಹ ಇಲ್ಲಿ ದೊರೆಯುತ್ತವೆ.
ನಳಪಾಕದಲ್ಲಿ ಊಟವಲ್ಲದೆ ಉಪಹಾರ ಕೂಡಾ ವಿಶೇಷವೇ, ಇಲ್ಲಿನ ಘೀ ರೋಸ್ಟ್ ದೋಸೆ, ದಾವಣಗೆರೆ ಬೆಣ್ಣೆ ದೋಸೆಗೆ ಭಾರಿ ಡಿಮ್ಯಾಂಡ್ ಇದೆ. ಇಲ್ಲಿ ಅಡುಗೆಗೆ ಬಳಸುವ ಕಚ್ಚಾ ಸಾಮಗ್ರಿಗಳೆಲ್ಲವೂ ಉತ್ತರ ಕರ್ನಾಟಕದಿಂದಲೇ ಬರುವುದರಿಂದ ಇಲ್ಲಿನ ಖಾದ್ಯಗಳಲ್ಲಿ ರುಚಿಯೂ ಹೆಚ್ಚಿರುತ್ತದೆ.
ಮಹಿಳೆಯೊಬ್ಬಳು ಈ ಸ್ಪರ್ಧಾ ಜಗತ್ತಿನಲ್ಲಿ ಉದ್ಯಮ ಸ್ಥಾಪಿಸಿ ನೆಲೆಯಾಗುವುದು ನಿಜಕ್ಕೂ ಒಂದು ದೊಡ್ಡ ಹೋರಾಟವೇ ಸರಿ. ಈ ಹಾದಿಯಲ್ಲಿರುವ ಶ್ರೀಮತಿ. ಕವಿತಾ ಅವರಿಗೂ ಹಾಗೂ ಅವರ ಬೆನ್ನೆಲುಬಾಗಿ ನಿಂತಿರುವ ಅವರ ಪತಿ ಹುಬ್ಬಳ್ಳಿ ಮೂಲದ ಶ್ರೀ. ಲಿಂಗಯ್ಯ ಕಾಡದೇವರಮಠ ಅವರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.