ಒಂದು ಹಗ್ಗ ಸಿಕ್ರೆ ಏನು ಮಾಡಲು ಸಾಧ್ಯ ಅನ್ನುವ ಪ್ರಶ್ನೆ ಕೇಳಿದೆ ಸಿಗೋ ಉತ್ತರ ಸಾವಿರ. ಆದರೆ ಮೈಸೂರಿನ ಮಹಿಳೆಯೊಬ್ಬರಿಗೆ ದಾರ ಸಿಕ್ರೆ, ಈ ಹಗ್ಗದ ಮೂಲಕ ಬೆಟ್ಟ ಹತ್ತಲು ಸಾಧ್ಯವೇ ಎಂದು ಯೋಚಿಸುತ್ತಾರೆ.
ಹೌದು ಹೀಗೆ ಯೋಚನೆ ಮಾಡಬಲ್ಲವರು ರುಕ್ಮಿಣಿ ಚಂದ್ರನ್. ಅರೇ ಹಗ್ಗ ಹಿಡಿದು ಬೆಟ್ಟ ಹತ್ತುವುದೇ, ಜಿರಳೆ ನೋಡಿದರೆ ಭಯ ಪಡುತ್ತಾರೆ ಮಹಿಳೆಯರು, ಅಂದ ಮೇಲೆ ಬೆಟ್ಟ ಹತ್ತುವುದೇ.
ಈಗ ಕಾಲ ಬದಲಾಗಿದೆ. ಪುರುಷನಿಗೆ ಸರಿ ಸಮಾನವಾಗಿ ನಿಲ್ಲುವ ತಾಕತ್ತು ಪಡೆದಿದ್ದಾಳೆ ಮಹಿಳೆ. ಅವಕಾಶ ಕೊಟ್ಟರೆ ಸ್ತ್ರೀ ಏನನ್ನಾದರೂ ಬೇಕಾದರೂ ಸಾಧಿಸಿ ತೋರಿಸಿಬಲ್ಲಳು ಎಂದು ತೋರಿಸಿಕೊಟ್ಟ ಅನೇಕ ಸಾಧಕಿಯರು ನಮ್ಮ ಮುಂದಿದ್ದಾರೆ.
ಆ ಪೈಕಿ ಕಾಣಿಸಿಕೊಳ್ಳುವ ಸಾಧಕಿ ಮೈಸೂರಿನ ರುಕ್ಮಿಣಿ ಚಂದ್ರನ್.
ಹಲವು ವರ್ಷಗಳ ಹಿಂದಿನ ಮಾತು. ರುಕ್ಮಿಣಿ ಮೂರನೇ ತರಗತಿಯಲ್ಲಿದ್ದರು. ಆಗಷ್ಟೇ ಬುಲ್ ಬುಲ್ ಪ್ರಾರಂಭವಾಗಿತ್ತು. ಹೀಗಾಗಿ ಸಾಹಸ ಅನ್ನುವುದನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಬಂದಿದ್ದ ರುಕ್ಮಿಣಿ ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್, ಆರ್ಮಿ ವಿಂಗ್ ನಂತ್ರ ಎನ್.ಸಿ.ಸಿಯಲ್ಲಿ ತೊಡಗಿಸಿಕೊಂಡರು.
ಅಲ್ಲಿಂದ ರೈಫಲ್ ಶೂಟಿಂಗ್,ಟ್ರಕ್ಕಿಂಗ್ ತರಬೇತಿಗಳು ಪ್ರಾರಂಭವಾಯ್ತು. ಈ ವೇಳೆ ರೈಫಲ್ ಶೂಟಿಂಗ್ ನಲ್ಲಿ ಪ್ರಥಮ ಬಹುಮಾನ ಬಂತು.
ಜೀವನದಲ್ಲಿ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನುವ ಹಂಬಲವಿರಲಿಲ್ಲ. ಆದರೆ ಅರಸಿಕೊಂಡು ಬಂದ ಅವಕಾಶಗಳು ಇವರನ್ನು ಸಾಧನೆಯ ಹಾದಿಯಲ್ಲಿ ಕರೆದೊಯ್ಯಿತು.
ಮೈಸೂರಿನ ಮರಿಮಲ್ಲಪ್ಪದಲ್ಲಿ ಪಿಯುಸಿ ಮುಗಿಸಿ ಮಹಾರಾಣಿ ಕಾಲೇಜಿನಲ್ಲಿ ಪದವಿ ಸೇರುವ ಹೊತ್ತಿಗೆ ಏರ್ ವಿಂಗ್ಸ್ ಗ್ಲಿಂಗ್, ಪ್ಯಾರಾ ಸೈಲಿಂಗ್, ಏರೋ ಸ್ಪೋರ್ಟ್ಸ್ ಗಳಲ್ಲಿ ಅವಕಾಶ ಸಿಕ್ತು. ಅದರಲ್ಲೂ ತೊಡಗಿಸಿಕೊಂಡರು.
ಪದವಿ ಮುಗಿದ ಮೇಲೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮನಸ್ಸು ಮಾಡಿದ್ದರೆ ಯಾವುದೇ ಕಂಪನಿಯಲ್ಲಿ ಕೆಲಸ ಸೇರಬಹುದಾಗಿತ್ತು. ಯಾವುದೇ ರಗಳೆ ಬೇಡ ಸಂಸಾರದ ಸಾರ ಸವಿಯೋಣ ಎಂದು ಗೃಹಿಣಿಯಾಗಿರಬಹುದಿತ್ತು.
ಆದರೆ ಪತಿಗೆ ಗ್ಲೈಡಿಂಗ್, ಪ್ಯಾರಾಸೈಲಿಂಗ್ ಬಗ್ಗೆ ಪ್ರೀತಿಯಿತ್ತು. ಮಾತ್ರವಲ್ಲ ಅದನ್ನು ಅವರು ಕಲಿಸುತ್ತಿದ್ದರು. ಹೀಗಾಗಿ ರುಕ್ಮಿಣಿ ಕೂಡಾ ಜನರಲ್ ತಿಮ್ಮಯ್ಯ ನ್ಯಾಶನಲ್ ಅಕಾಡೆಮಿ ಆಫ್ ಅಡ್ವೆಂಚರ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ವರ್ಷಗಳ ನಂತ್ರ ನಾನೇ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ರೆ ಹೇಗೆ ಅನ್ನುವ ಯೋಚನೆ ಬಂತು. ಬಂತು, ಮತ್ತೆ ಮಾಡಲಿಲ್ಲ, 1990ರಲ್ಲಿ ಅಲ್ಮನಾಕ್ ಅಡ್ವೆಂಚರ್ ಕ್ಲಬ್ ಅನ್ನು ಪ್ರಾರಂಭಿಸಿಯೇ ಬಿಟ್ಟರು.
ಅಡ್ವೆಂಚರ್ ನಲ್ಲಿ ಆಸಕ್ತಿ ಹೊಂದಿದವರಿಗೆ ತರಬೇತಿ ಕೊಡುವುದರ ಜೊತೆ ಸಾಹಸ ಕ್ರೀಡೆಗಳಿಗೆ ಬೇಕಾದ ವಸ್ತುಗಳನ್ನ ತಯಾರಿಸುವ ಉದ್ಯಮಕ್ಕೂ ಕೈ ಹಾಕಿದರು.
ಟ್ರಕ್ಕಿಂಗ್ ಬ್ಯಾಗ್, ಸ್ಲೀಪಿಂಗ್ ಬ್ಯಾಗ್, ಲೈಫ್ ಜಾಕೆಟ್, ಶಿಲಾರೋಹಣ ಹಗ್ಗ, ಸೀಟ್ ಹಾರ್ನೆಸ್ ಗಳನ್ನು ತಯಾರಿಸಲಾರಂಭಿಸಲಿದ್ದರು. ಇದೀಗ ಸ್ಕೂಲ್ ಬ್ಯಾಗ್ ತಯಾರಿಕೆ ಉದ್ಯಮವನ್ನು ಕೂಡಾ ನಡೆಸುತ್ತಿದ್ದಾರೆ ರುಕ್ಮಿಣಿ.
ಹಾಗಾದ್ರೆ ರುಕ್ಮಿಣಿಯವರದ್ದು ಹೂವಿನ ಹಾದಿ, ಕೈಯಲ್ಲಿ ಒಳ್ಳೆ ಕಾಸು ಓಡಾಡಿಕೊಂಡಿದೆ ಎಂದು ನೀವು ಅಂದುಕೊಂಡ್ರೆ ತಪ್ಪಾಗುತ್ತದೆ.
ಈ ಸಾಧನೆಯ ಹಾದಿಯಲ್ಲಿ ಅವರು ಎದುರಿಸಿದ ಕಷ್ಟದ ಸರಮಾಲೆಗಳು, ಅದನ್ನು ಎದುರಿಸಿದ ಪರಿ ನಾಡಿನ ಮಹಿಳೆಯರಿಗೆ ಸ್ಫೂರ್ತಿಯೇ ಸರಿ.
ಚಂದ್ರನ್ ಅವರೊಂದಿಗೆ ಮದುವೆಯಾದ ಬಳಿಕ ಮೂರು ಹೆಣ್ಣು ಮಕ್ಕಳ ತಾಯಿಯಾದರು ರುಕಿಣ್ಮಿ, ಆದರೆ ಸಂತಸ ತುಂಬಿ ತುಳುಕುತ್ತಿದ್ದ ಕುಟುಂಬದ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. 2003ರಲ್ಲಿ ಪತಿ ಚಂದ್ರನ್ ಮೈಸೂರು ವಿಮಾನ ನಿಲ್ದಾಣದಲ್ಲಿ ಏರ್ ವಿಂಗ್ ನವರಿಗೆ ತರಬೇತಿ ಕೊಡುವ ಸಂದರ್ಭದಲ್ಲಿ ಗಾಯಗೊಂಡರು. ಪುಟ್ಟ ವಿಮಾನ ಅಪಘಾತಕ್ಕೀಡಾದ ಕಾರಣ ಚಂದ್ರನ್ ಮೆದುಳಿಗೆ ಪೆಟ್ಟು ಬಿತ್ತು.
ಒಂದೆಡೆ ಪತಿಯ ಶುಶ್ರೂಷೆಗೆ ಹಣ ಬೇಕು, ಮತ್ತೊಂದು ಮಕ್ಕಳನ್ನು ಓದಿಸಲಾಗದ ಸಂಕಷ್ಟ ಈ ವೇಳೆ ರುಕ್ಮಿಣಿ ಸಹಾಯಕ್ಕೆ ಬಂದಿದ್ದು ಶ್ರೀಕ್ಷೇತ್ರ ಧರ್ಮಸ್ಥಳದ ರುಡ್ ಸೆಟ್.
ಟೈಲರಿಂಗ್ ಕೆಲಸ ಗೊತ್ತಿದ್ದ ಕಾರಣ ಅದರಲ್ಲೇ ಮುಂದುವರಿಯಲು ನಿರ್ಧರಿಸಿದರು. ಸಾಹಸ ಕ್ರೀಡೆಗಳಿಗೆ ಬೇಕಾದ ವಿವಿಧ ಸಾಧನ ಸಲಕರಣೆಗಳನ್ನು ನಾನ್ಯಾಕೆ ತಯಾರಿಸಬಾರದು ಎಂದು ಒಂದೊಂದೇ ಉತ್ಪನ್ನಗಳನ್ನ ತಯಾರಿಯಲ್ಲಿ ತೊಡಗಿದರು,.
ನಿಧಾನವಾಗಿ ಬೇಡಿಕೆ ಬರಲಾರಂಭಿಸಿತು. ಸಾಹಸ ಕ್ರೀಡಾ ಶಿಬಿರಗಳಿಗೆ ಬರುವವರೇ ಗ್ರಾಹಕರಾದರು.
ಬದುಕಿನಲ್ಲಿ ಸಂಕಷ್ಟಗಳ ಸರಮಾಲೆ ಎದುರಿಸಿದ ರುಕ್ಮಿಣಿ ಬದುಕಿಗೆ ಆವರಿಸಿದ್ದ ಕತ್ತಲೆ ಈಗ ಸರಿದಿದೆ. ನವದೆಹಲಿಯ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ನಿರ್ದೇಶಕಿಯಾಗಿರುವ ಜೊತೆಗೆ ಅಲ್ಮೆನಾಕ್ ಅಜ್ವೆಂಚರ್ ಕ್ಲಬ್ ಇದೀಗ NAF ನ ಕರ್ನಾಟಕ ಚಾಪ್ಟರ್ ನಲ್ಲಿ ಗುರುತಿಸಿಕೊಂಡಿದ್ದಾರೆ.
ಸದಾ ಕಾಲ ಒಂದಲ್ಲ ಒಂದು ಶಿಬಿರ ನಡೆಯುತ್ತಲೇ ಇದೆ. ಹೀಗಾಗಿ ಅವರ ಮುಖದಲ್ಲಿ ನಗುವಿದೆ. ಇದರೊಂದಿಗೆ ಐಟಿ ಬಿಟಿ ಕಂಪನಿಗಳು ಕೂಡಾ ಸಾಹಸ ಕ್ರೀಡೆಯ ತರಬೇತಿ ಸಲುವಾಗಿ ರುಕ್ಮಿಣಿ ಯವರನ್ನೇ ಕರೆಯತ್ತಿದೆ. ಖಾಸಗಿ ಕಂಪನಿಯ ಸಿಬ್ಬಂದಿಗಳ ಕೌಶಲ, ಕಾರ್ಯ ಕ್ಷಮತೆ ಹೆಚ್ಚಿಸೋ ಸಲುವಾಗಿ ಚಾರಣ ಸೇರಿ ಅನೇಕ ಸಾಹಸಮಯ ಕ್ರೀಡೆ ಸಂಘಟಿಸಲು ರುಕ್ಮಿಣಿಯವರನ್ನೇ ಸಂಪರ್ಕಿಸುತ್ತಿದೆ. ಹೀಗಾಗಿ ಕೈ ತುಂಬಾ ಕೆಲಸದಲ್ಲಿ ಬ್ಯುಸಿ ಮೈಸೂರಿನ ರುಕ್ಮಿಣಿ ಚಂದ್ರನ್ ರವರು.
