ಮತ್ತೊಂದು ವರುಷ…ಮತ್ತೊಂದು ವಸಂತ…ಆ ವಸಂತದೊಡನೆ ಬೆಸೆದ ಮತ್ತೊಂದು ಮಹಿಳಾ ದಿನ!! ಪ್ರತಿವರ್ಷವೂ ಮಾರ್ಚ್ ಎಂಟರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ! ಒಂದು ಶತಮಾನಕ್ಕಿಂತಲೂ ಹಿಂದಿನಿಂದಲೂ ಈ ಮಹಿಳಾ ದಿನಾಚರಣೆ ನಡೆಯುತ್ತಲೇ ಬಂದಿದೆ! ೧೮೧೧ ರಲ್ಲಿ ಮೊಟ್ಟ ಮೊದಲಬಾರಿಗೆ “ಮಹಿಳೆಯರ ದಿನ ” ಆಚರಣೆಗೆ ಬಂದಿತು. ಆದರೆ ವಿಷಾದದ ಸಂಗತಿಯೇನೆಂದರೆ ಅಂದಿನಿಂದ ಇಂದಿನವರೆಗೂ ಮಹಿಳೆಯರ ಅಂತರಂಗದ ತವಕ ತಲ್ಲಣಗಳ ಮಿಡಿತದ ಶ್ರುತಿಯಲ್ಲಿ ಗಮನಾರ್ಹ ಬದಲಾವಣೆಯೇ ಆಗಿಲ್ಲ. ಹೆಣ್ಣಿನ ಉಡುಗೆ ತೊಡುಗೆಯಲ್ಲಿ ಬದಲಾವಣೆಯಾಗಿರಬಹುದು…ಅವಳ ಸ್ಠಿತಿಗತಿಗಳಲ್ಲಿ ಬದಲಾವಣೆಯಾಗಿರಬಹುದು…ಆದರೆ ಆಕೆಯ ಒಳ ತುಡಿತಗಳಲ್ಲಿ, ಬವಣೆಗಳಲ್ಲಿ ಅಂಥ ಸುಧಾರಣೆಯಾಗಿಲ್ಲ!! ಅದು ಪೂರ್ತಿಯಾಗಿ ಬದಲಾದ ದಿನವೇ ಮಹಿಳಾ ದಿನಾಚರಣೆಗೆ ಒಂದು ಸಂಭ್ರಮದ ಮುದ್ರೆಯೊತ್ತಬಹುದು…ನಾವು ಮಹಿಳೆಯರೆಲ್ಲರೂ!!
ಹಾಗೆ ನೋಡಿದರೆ ಪ್ರತಿದಿನವೂ ಮಹಿಳೆಯರ ದಿನವೇ…ಪ್ರತಿ ಕ್ಷಣವೂ ಮಹಿಳೆಯರ ಕ್ಷಣವೇ. ಹೆಣ್ಣಿಲ್ಲದೆ ಈ ಸೃಷ್ಟಿ ಇಹುದೇ ? ಅವಳಿಲ್ಲದೆ ಬದುಕು ಇಹುದೇ? ಆದರೂ ಅವಳು ಹೋರಾಟದ ಪ್ರತಿನಿಧಿ…ಸಾತ್ವಿಕ ಹೋರಾಟವೇ ಅವಳ ಕಾಯಕ ! ಸಂಘರ್ಷಗಳು ಹುಟ್ಟಿರುವುದೇ ಅವಳಿಗಾಗಿ! ಆ ಸಂಘರ್ಷಗಳನ್ನು ಎದುರಿಸುವುದಕ್ಕಾಗಿಯೇ ಅವಳುಹುಟ್ಟಿರುವುದು ! ಈ ಮಾತು ಸುಳ್ಳಾದ ದಿನ, ಅದು ನಿಜ ಅರ್ಥದಲ್ಲಿ ಮಹಿಳಾ ದಿನವಾಗಿರುತ್ತದೆ!
ಆದರೂ…ಏನೇ ಸಮಸ್ಯೆಗಳಿದ್ದರೂ…ಅಂತರಾಷ್ಟ್ರೀಯ ಮಹಿಳಾ ದಿನ ಎಂಬುದನ್ನು ಕೇಳುವುದರಲ್ಲೇ ಒಂದು ಸೊಗಸಿದೆ, ಒಂದು ಪುಳಕವಿದೆ!
ಮಾರ್ಚ್ 8 ರಂದು ವಿಶ್ವದಾದ್ಯಂತ ಒಂದು ರೀತಿಯ ನಾವೀನ್ಯತೆ… ಮಾಧ್ಯಮಗಳಲ್ಲಿ ಮಹಿಳೆಯರ ಚಿತ್ರಣ ಅಥವಾ ಶಿಕ್ಷಣ ಮತ್ತು ವೃತ್ತಿ ಅವಕಾಶಗಳ ಪ್ರಾಮುಖ್ಯತೆಯಂತಹ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಿ ಹಲವಾರು ಸಾಧಕಿಯರು ಗುರುತಿಸಲ್ಪಡುತ್ತಾರೆ.
ಶಾಲೆಗಳು ಮತ್ತು ಇತರ ಶೈಕ್ಷಣಿಕ ಸೆಟ್ಟಿಂಗ್ಗಳಲ್ಲಿನ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ, ಅವರ ಪ್ರಭಾವ ಮತ್ತು ಅವರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ವಿಶೇಷ ಪಾಠಗಳು, ಚರ್ಚೆಗಳು ಅಥವಾ ಪ್ರಸ್ತುತಿಗಳಲ್ಲಿ ಭಾಗವಹಿಸುತ್ತಾರೆ. ಕೆಲವು ಶಾಲೆಗಳಲ್ಲಿ ಶಾಲಾ ಮಕ್ಕಳು ತಮ್ಮ ಮಹಿಳಾ ಶಿಕ್ಷಕಿಯರಿಗೆ ಉಡುಗೊರೆಗಳನ್ನು ತರುತ್ತಾರೆ ಹಾಗೂ ಮಹಿಳೆಯರು ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಂದ ಪ್ರೀತಿ, ಅಭಿಮಾನದ ಉಡುಗೊರೆಗಳನ್ನು ಪಡೆಯುತ್ತಾರೆ. ಅನೇಕ ಕಾರ್ಯಕ್ಷೇತ್ರಗಳು ಅಂತರರಾಷ್ಟ್ರೀಯ ಸುದ್ದಿಪತ್ರಗಳು ಅಥವಾ ಪ್ರಕಟಣೆಗಳ ಮೂಲಕ ಅಥವಾ ದಿನವನ್ನು ಕೇಂದ್ರೀಕರಿಸುವ ಪ್ರಚಾರ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ವಿಶೇಷ ಉಲ್ಲೇಖವನ್ನು ನೀಡುತ್ತವೆ!
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಕೆಲವು ದೇಶಗಳಲ್ಲಿಯಂತೂ ಸಾರ್ವಜನಿಕ ರಜಾದಿನವಾಗಿದೆ. ಅಷ್ಟೊಂದು ಮಹತ್ವ ಈ ದಿನಕ್ಕಿದೆಯಲ್ಲಾ ಎಂಬುದೇ ಸಂತಸದ ವಿಷಯ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಆದಾಗ್ಯೂ, ಯುಎನ್ ಪ್ರಕಾರ, ಜಗತ್ತಿನಲ್ಲಿ ಎಲ್ಲಿಯೂ ಮಹಿಳೆಯರಿಗೆ ಪುರುಷರಂತೆಯೇ ಎಲ್ಲ ಹಕ್ಕುಗಳು ಮತ್ತು ಅವಕಾಶಗಳಿವೆ ಎಂದು ಹೇಳಿಕೊಳ್ಳಲಾಗುವುದಿಲ್ಲ. ವಿಶ್ವದ 1.3 ಬಿಲಿಯನ್ ಸಂಪೂರ್ಣ ಬಡವರಲ್ಲಿ ಹೆಚ್ಚಿನವರು ಮಹಿಳೆಯರು. ಒಂದೇ ಕೆಲಸಕ್ಕಾಗಿ ಪುರುಷರು ಗಳಿಸುವುದಕ್ಕಿಂತ ಸರಾಸರಿ 30 ರಿಂದ 40 ರಷ್ಟು ಕಡಿಮೆ ವೇತನವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಮಹಿಳೆಯರು ಸಹ ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ, ಅತ್ಯಾಚಾರ ಮತ್ತು ಕೌಟುಂಬಿಕ ಹಿಂಸಾಚಾರವು ವಿಶ್ವಾದ್ಯಂತ ಮಹಿಳೆಯರಲ್ಲಿ ಅಂಗವೈಕಲ್ಯ ಮತ್ತು ಸಾವಿಗೆ ಗಮನಾರ್ಹ ಕಾರಣವಾಗಿದೆ ಎಂಬುದೇ ಬಹುದುಃಖದ ಸಂಗತಿ.
ಈ ವರ್ಷ… ೨೦೨೦ ರ ಘೋಷ ವಾಕ್ಯ “An equal world is an enabled world” ಎಂಬುದಾಗಿದೆ. ಹೌದಲ್ಲಾ…ಸಮಾನತೆಯಿದ್ದಾಗಲೇ ಜಗತ್ತು ಶಕ್ತವಾಗುವುದು, ಬದುಕು ಬಲಿಷ್ಠ ವಾಗುವುದು ! ಹಾಗಾಗಲೇ ಬೇಕು! ಎಲ್ಲಿ ನಾರಿಯಿರುತ್ತಾಳೋ ಅಲ್ಲಿ ಸ್ವರ್ಗ ಎಂಬುದಕ್ಕಿಂತ ಎಲ್ಲಿ ನಾರಿ ನೆಮ್ಮದಿಯಾಗಿರುತ್ತಾಳೋ ಅಲ್ಲಿಯೇ ಸ್ವರ್ಗ ಎಂಬಂತಾಗಬೇಕು! ಈ ಜಗದ ಎಲ್ಲಾ ಹೆಣ್ಣುಮಕ್ಕಳೂ ಕ್ಷೇಮವಾಗಿರಬೇಕು…ನಿರ್ಭಯರಾಗಿರಬೇಕು…ನಿರಾತಂಕವಾಗಿರಬೇಕು!!
– ಕಿರಣ್ ಪ್ರಸಾದ್ ರಾಜನಹಳ್ಳಿ