ಆದಿ ಚುಂಚನಗಿರಿ ಚಿನ್ನದಗಿರಿ ಎಂದೇ ಜನಪದರಲ್ಲಿ ಜನಜನಿತವಾದ ಕ್ಷೇತ್ರ. ದಕ್ಷಿಣ ಭಾರತದ ಪ್ರಸಿದ್ದ ಭೈರವ ಕ್ಷೇತ್ರಗಳಲ್ಲಿ ಆದಿಚುಂಚನಗಿರಿಯೂ ಒಂದು. ಕಾಶಿ ಭೈರವ ಕಾಪಾಲ ಭೈರವನಾದರೆ ಚುಂಚನಗಿರಿಯಲ್ಲಿರುವುವದು ವಟು(ಬಾಲಕ)ಭೈರವ. ಭೈರವೈಕ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ತಪೋಭೂಮಿಯಾಗಿದ್ದು, ಕ್ಷೇತ್ರದ ಪ್ರಸಿದ್ದಿ ದೇಶಾದ್ಯಂತ ಪಸರಿಸಿದೆ. ನಾಥ ಸಂಪ್ರದಾಯವನ್ನು ಪಾಲಿಸುವ ಶ್ರೀಕ್ಷೇತ್ರ ಇದಾಗಿದೆ. ಭೈರವನೆಂದರೆ ಕಾಶೀಕ್ಷೇತ್ರ ನೆನಪಾಗುವುದು. ಆದರೆ ದಕ್ಷಿಣದಲ್ಲಿ ಭೈರವನೆಂದರೆ ಚುಂಚನಗಿರಿ ನೆನಪಾಗುತ್ತದೆ.
ಪುರಾತನ ಆಚರಣೆಗಳನ್ನು ಇ<ಂದಿಗೂ ವೈಭವೋಪೇತವಾಗಿ ಆಚರಿಸಿಕೊಂಡು ಬರ;ಲಾಗುತ್ತಿದೆ. ದೇವಾಲಯವೂ ಅಷ್ಟೇ ಇಂದಿಗೂ ಮೂಲ ವಿಗೃಹವೇ ಪೂಜಿಸಲ್ಪಡುತ್ತಿದ್ದರೂ ದೇವಾಲಯದ ವಾಸ್ತು ಶಿಲ್ಪ ಆಧುನಿಕ ಮತ್ತು ಪ್ರಾಚೀನ ಶಿಲ್ಪಶೈಲಿಯಲ್ಲಿಯೇ ಇದೆ. ಕಂಚಿ ದೇವಾಲಯಗಳ ರೀತಿಯೇ ಬೃದಾಕಾರವಾಗಿ ನಿರ್ಮಾಣವಾಗಿದೆ.
ಸ್ಕಾಂದ ಪುರಾಣದ ಪ್ರಕಾರ ಶಿವನ ಅಂಶದಿಂದ ಜನಿಸಿದ ಸಿದ್ದ ಯೋಗಿಯೊಬ್ಬ ಈ ಆದಿಚುಂಚನಗಿರಿಯಲ್ಲಿ ತಪಸ್ಸನ್ನಾಚರಿಸಿದನೆಂದು ತಿಳಿದು ಬರುತ್ತದೆ. ಬಹುಶಃ ಈ ಕಾರಣದಿಂದಲೇ ಇಲ್ಲಿನ ಮಠಕ್ಕೆ ಸಿದ್ಧರ ಮಠ ಎಂಬ ಹೆಸರು ಬಂದಿರಬಹುದು.
ಚುಂಚ ಎಂಬ ರಾಕ್ಷಸನು ಹಿಂದೆ ಈ ಸ್ಥಳದಲ್ಲಿ ವಾಸಮಾಡುತ್ತಿದ್ದನು. ಅವನಿಂದ ಜನರಿಗೆ ಬಹಳ ತೊಂದರೆಯಾಗುತ್ತಿತ್ತು. ಈ ರಾಕ್ಷಸನನ್ನು ಸಂಹಾರ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಗೆ ಶಿವನು ಬಂದು ರಾಕ್ಷಸನನ್ನು ಕೊಂದು ಕೆಲವು ಕಾಲ ಇಲ್ಲಿ ತಪಸ್ಸು ಮಾಡಿದನು. ಶಿವನು ತಪಸ್ಸಿಗೆ ಕುಳಿತಿದ್ದ ಸ್ಥಳವನ್ನು ’ಉರಿಗದ್ದಿಗೆ’ ಎಂದು ಕರೆದು ಇಂದಿಗೂ ಆ ಸ್ಥಳವನ್ನು ಪವಿತ್ರವೆಂದು ಜನರು ಪೂಜಿಸುತ್ತಾರೆ. ಈ ಪ್ರದೇಶದಲ್ಲಿ ಚುಂಚನೆಂಬ ರಾಕ್ಷಸನು ವಾಸಮಾಡುತ್ತಿದ್ದ ಕಾರಣ ಚುಂಚನಗಿರಿ ಎಂಬ ಹೆಸರು ಬಂದಿರುವುದಾಗಿ ಒಂದು ಐತಿಹ್ಯ ಹೇಳುತ್ತದೆ.

ಹದಿನಾಲ್ಕು ನಾಥ ಸಂಪ್ರದಾಯ ಮಠಗಳ ಪೈಕಿ ಆದಿಚುಂಚನಗಿರಿ ಮಠವೂ ಒಂದು. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿದ್ದ ಈ ಮತ ಕರ್ನಾಟಕದಲ್ಲಿಯೂ ಇತ್ತು ಎಂಬುದಕ್ಕೆ ಕೆಲವು ಆಧಾರಗಳಿವೆ. ಆದಿಚುಂಚನಗಿರಿ ಕ್ಷೇತ್ರಕ್ಕೆ ಭೈರ ಕ್ಷೇತ್ರ ಎಂಬ ಮತ್ತೊಂದು ಹೆಸರಿತ್ತು ಶ್ರೀ ಆದಿಚುಂಚನಗಿರಿಯಲ್ಲಿ ಪ್ರಮುಖವಾಗಿ ನೋಡಬಹುದಾದ ಕೆಲವು ಮುಖ್ಯ ಸ್ಥಳಗಳನ್ನು ಇಲ್ಲಿ ಹೆಸರಿರಿ, ಸ್ಥೂಲವಾಗಿ ಪರಿಚಯ ಮಾಡಿಕೊಳ್ಳಬಹುದು.
೧) ಅನ್ನ ದಾನಿ ಅರೆ, ೨) ಕಂಬದ ಮಾರಮ್ಮ ೩) ಶ್ರೀಮಠ ೪) ಬಿಂದು ಸರೋವರ, ನಾಗ ಚಾವಡಿ ೫) ಉರಿಗದ್ದಿಗೆ ೬) ಸಿಂಹಾಸನ ೭) ಶ್ರೀಕಾಲ ಭೈರವ ದೇವಸ್ಥಾನ ೮) ಸಮಾಧೀ ಮಂಟಪಗಳು ೯)ತಪೋಗುಹೆ ೧೦) ಅನ್ನಪೂರ್ಣೆಶ್ವರಿ ೧೧)ಮೇದರ ತಲೆಗಳು ೧೨)ಗಂಗಾಧರೇಶ್ವರ ದೇವಾಲಯ ೧೩) ಗವಿಸಿದ್ಧನ ಗುಡಿ ೧೪)ಆಕಾಶ ಭೈರವನ ನೆಲೆ (ಗಳಿಗೆಗಲ್ಲು) ೧೫) ಕತ್ತಲ ಸೋಮೇಶ್ವರ ೧೬) ಚೇಳೂರು ಕಂಬ ೧೭)ನಾಗರಕಲ್ಲು ೧೮) ಸಪ್ಪೇಸ್ವಾಮಿ ಗುಹೆ ಮುಖ್ಯವಾದವು.
ಅನ್ನದಾನಿ ಅರೆಯ ಮೇಲೆ ಮೊದಲು ಕಂಬದ ಮಾರಮ್ಮನ ದರ್ಶನವನ್ನು ಪಡೆಯಬಹುದು. ಕ್ಷೇತ್ರಪಾಲಕಿಯಾದ ಕಂಬದಮ್ಮ ಪಾರ್ವತಿಯ ಪ್ರತೀಕ. ಮೊಸರು, ಹಣ್ಣಿನ ಅಭಿಷೇಕ ಕಂಬದಮ್ಮನಿಗೆ ನಡೆಯುತ್ತದೆ. ಸುತ್ತಣ ಹಳ್ಳಿಗಳಲ್ಲಿ ಕಂಬದ ಮಾರಮ್ಮನ ಹಬ್ಬವನ್ನು ಇಂದಿಗೂ ಆಚರಿಸುತ್ತಾರೆ. ಕಂಬದ ಮಾರಮ್ಮನ ಸನ್ನಿದಿಯಿಂದ ಸ್ವಲ್ಪ ಮುಂದೆ ಹೋದರೆ ಬಿಂದು ಸರೋವರ, ಇದನ್ನು ಕಲ್ಯಾಣಿ ಎಂದು ಕರೆಯುತ್ತಾರೆ.
ಕಲ್ಯಾಣಿಯಿಂದ ಶ್ರೀಮಠದ ಮಹಾದ್ವಾರದ ಬಳಿಗೆ ಬಂದರೆ ಶ್ರೀ ಕಾಲಭೈರವನ ದೇವಸ್ಥಾನ. ಶ್ರೀ ಕಾಲಭೈರವ ದೇವಾಲಯ ಕಲಾತ್ಮಕವಾದುದಲ್ಲವಾದರೂ ಕರಿಯ ಕಲ್ಲಿನ ಭೈರವ ವಿಗ್ರಹ ಆಕರ್ಷಕವಾಗಿದೆ. ಬಾಗಿಲು ಭೈರವನ ದರ್ಶನವಾದನಂತರ ಶ್ರೀ ಮಠದ ಒಳಗಡೆ ಪ್ರವೇಶಿಸಿದರೆ ನಮ್ಮ ಬಲಕ್ಕೆ ಈ ಕ್ಷೇತ್ರದ ಜ್ವಾಲಾಪೀಠ (ಉರಿಗದ್ದಿಗೆ), ಎಡಭಾಗಕ್ಕೆ ನಾಗಚಾವಡಿಯೂ ಸಿಕ್ಕುತ್ತದೆ. ಚುಂಚನಗಿರಿ ಗುರು ಪರಂಪರೆಯ ಆದಿಗುರು ಶ್ರೀ ಸಿದ್ಧಯೋಗಿ ಪರಮೇಶ್ವರನಿಂದ ನೇರವಾಗಿ ದೀಕ್ಷೆಯನ್ನು ಪಡೆದವನು ಎಂಬ ನಂಬಿಕೆಯಿದೆ.
ಈ ಪೀಠ ಈಶ್ವನಿಂದ ಸ್ಥಾಪಿಸತವಾದ ಆದಿಪೀಠವಾಗಿದೆ ಎಂಬ ನಂಬಿಕೆ ಇದೆ. ಇಲ್ಲಿನ ಉರಿಗದ್ದುಗೆ ಅಥವಾ ಜ್ವಾಲಾಪೀಠದ ಮೇಲೆ ಒಂದೆರಡು ಘಳಿಗೆಗಳು ಮಾತ್ರ ಇಲ್ಲಿನ ಮಠಾಧೀಶರು ಮಹಾಶಿವರಾತ್ರಿ ಮಹಾನವಮಿಯಂತಹ ವಿಶೇಷ ದಿನಗಳಂದು ಪೀಠಾರೋಹಣ ಮಾಡಿ ಭಕ್ತಾದಿಗಳಿಗೆ ದರ್ಶನ ನೀಡುತ್ತಾರೆ.