ಪ್ರಪ್ರಥಮವಾಗಿ ಮಹಿಳೆಯರ ಸಮಾನತೆ ಹಾಗೂ ಹಕ್ಕುಗಳ ಬಗೆಗಿನ ಚಿಂತನೆ ವಿಪುಲವಾಗಿ ನಡೆದದು ಕರ್ನಾಟಕದಲ್ಲಿ ಎಂಬುದು ಹೆಮ್ಮೆಯ ವಿಷಯ. ಎಲ್ಲಿ ? ಹೇಗೆ ? ಎಂದು ಅವಲೋಕಿಸದರೆ ಮತ್ತೆ ಕಣ್ಮುಂದೆ ಬರುವುದು 12ನೆಯ ಶತಮಾನದ ಶರಣ ಕ್ರಾಂತಿ. ಇದು ಬರಿಯ ಚಿಂತನೆ ಮಾತ್ರವಲ್ಲದೆ ಸಾಕ್ಷಾತ್ ಕಾರ್ಯರೂಪದಲ್ಲಿದ್ದು ಸಮಾಜದ ಭಾಗವಾಗಿದ್ದು ನಮಗೆ 21ನೆಯ ಶತಮಾನದಲ್ಲೂ ನಂಬಲ ಸಾಧ್ಯ. ಈ ಶರಣ ಕ್ರಾಂತಿಯ ಮುಂದಾಳುಗಳು ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ. ಅಕ್ಕಮಹಾದೇವಿಯನ್ನು ಕನ್ನಡದ ಪ್ರಥಮ ಮಹಿಳಾ ಕವಯತ್ರಿ ಎಂದೂ ಗುರುತಿಸಬಹುದು.
ಸಾಹಿತ್ಯ ಅಂದಿನ ಸಮಾಜದ ಕನ್ನಡಿ ಎಂಬ ಮಾತಿನಂತೆ ಹೊಸ ಸಾಹಿತ್ಯ ಪ್ರಕಾರ “ವಚನ” ಶುರುವಾದದ್ದು 12ನೆಯ ಶತಮಾನದಲ್ಲಿ. ವಚನ ಸಾಹಿತ್ಯವು ಶರಣ ಚಿಂತನೆಗಳ ಮುಖವಾಣಿಯಂತಿದ್ದಿತು ಎಂದರೆ ತಪ್ಪಾಗಲಾರದು. ವಚನದ ಮೂಲ ಉದ್ದೇಶ್ಯ ಸಾಹಿತ್ಯ ಸೃಷ್ಟಿಯಲ್ಲ, ಅವು ಶರಣರ ಅನುಭಾವದ ನುಡಿಗಳು. ಹೀಗೆ ಅಂದಿನ ಕಲ್ಯಾಣ ರಾಜ್ಯದಲ್ಲಿ ವಚನಗಳ ಮೂಲಕ ಶತಮಾನಗಳ ಮೌಢ್ಯವನ್ನು ತೊರೆದು – ವೈಚಾರಿಕತೆ, ವೈಜ್ಞಾನಿಕ ಚಿಂತನೆಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದವರು 12ನೆಯ ಶತಮಾನದ ಬಸವಾದಿ ಶರಣರು.
ಸಮ ಸಮಾಜದ ನಿರ್ಮಾಣದಲ್ಲಿ ಮಹಿಳಾ ಸಮಾನತೆ, ಮಹಿಳಾ ಸಶಕ್ತೀಕರಣ ಮುಖ್ಯವಾದುವು ಎಂದು ಮನಗೊಂಡ ಶರಣರು ಮಹಿಳೆಯರ ಪ್ರಜ್ಞಾ ಪ್ರವಾಹಕ್ಕೆ ಮುಂದಾದರು. ಸಮಾಜದ ಕಟ್ಟು ಕಟ್ಟಳೆಗಳ ನಡುವೆಯೇ 12ನೆಯ ಶತಮಾನದ ಮಹಿಳಾಮಣಿಗಳು ಕೇವಲ ಗಂಡ, ಮನೆ ಮಕ್ಕಳ ಚಾಕರಿಗೆ ಮೀಸಲೆಂದು ಪರಿಗಣಿಸಿದ್ದ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡು ಸಾಮಾಜಿಕ ಕ್ರಾಂತಿಯಲ್ಲಿ ತೊಡಗಿಕೊಂಡದ್ದು ಎಂಥವರನ್ನೂ ರೋಮಾಂಚನಗೊಳಿಸದೆ ಇರದು. ಎಲ್ಲರಿಗೂ ತಿಳಿದಿರುವಂತೆ ಶರಣ / ವಚನ ಕ್ರಾಂತಿಯ ಮೂಲಪುರುಷ ಬಸವಣ್ಣ. ಮಹಿಳಾ ಸಮಾನತೆಯ ಕ್ರಾಂತಿಯ ಕಿಡಿ ಶುರುವಾಗುವುದು ಬಸವಣ್ಣ ತನ್ನ ಅಕ್ಕ ನಾಗಲಾಂಬಿಕೆಗೆ ಉಪನಯನ ಶಾಸ್ತ್ರ ಸಲ್ಲ ಎಂಬ ಅಂದಿನ ಸಮಾಜದ ಕಟ್ಟಳೆಯನ್ನು ದಿಕ್ಕರಿಸಿದುದರಿಂದಲೇ. ಹೀಗೆ ಶುರುವಾದ ಮಹಿಳಾ ಹಕ್ಕುಗಳ ಹೋರಾಟ ಮಹತ್ಕ್ರಾಂತಿಯಾಗಿ 12ನೆಯ ಶತಮಾನದಲ್ಲಿ ಹಲವಾರು ಶರಣೆಯರನ್ನು ಸೃಷ್ಟಿಮಾಡಿತು.
ಜಾತಿ ರಹಿತ ಶರಣ ಸಂಸ್ಕೃತಿ ಕಟ್ಟುವಲ್ಲಿ ಸಫಲವಾದರೂ ಇದರ ಅಸ್ತಿತ್ವ ಉಳಿದುದು 2 ದಶಕಗಳು ಮಾತ್ರ ಎಂಬುದು ಬಹಳ ನೋವಿನ ವಿಷಯ. 12ನೆಯ ಶತಮಾನದಲ್ಲಿ ಪಾಲ್ಗೊಂಡ ಮಹಿಳೆಯರು ಎಲ್ಲ ವರ್ಗಗಳಿಂದ ಬಂದವರು ಎಂಬುದು ವಿಶೇಷ. 12ನೆಯ ಶತಮಾನದ ಶರಣೆಯರು ತಮ್ಮ ಸ್ವಂತ ಸಂಸಾರ ನಿಭಾಯಿಸುವುದರೊಂದಿಗೆ ಸಮಾಜದ ಮೌಢ್ಯವನ್ನು ನಿರಾಕರಿಸಿ, ಸಮಾಜದಲ್ಲಿ ಸಕ್ರಿಯವಾಗಿ ಭಾಗಿಯಾಗಿ, ಸಮಾಜವನ್ನು ತಿದ್ದುತ್ತಾ ತೀಡುತ್ತಾ ನವ ಸಮಾಜದ ಕಲ್ಪನೆ ಸಾಕಾರಗೊಳ್ಳುವಲ್ಲಿ ಭಾಗಿಯಾದರು. ತಮ್ಮ ಅನುಭವ ಹಾಗೂ ಅನುಭಾವವನ್ನು ವಚನಗಳ ಮೂಲಕ ಪ್ರಹರಿಸಿದ್ದರು. ಅಷ್ಟೇ ಅಲ್ಲದೆ ಅಂದಿನ ಪ್ರಜಾ ಸಂಸತ್ ಎಂದೇ ಗುರುತಿಸಿಬಹುದಾದ ಅನುಭವ ಮಂಟಪದಲ್ಲೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕಾಣ್ಕೆ ಇಟ್ಟರು.
ನಾವು ಇಂದು ಮೀಸಲಾತಿಯಿಂದ ಮಹಿಳಾ ಸಶಕ್ತೀಕರಣಕ್ಕೆ ಮುಂದಾಗುತ್ತಿದ್ದರೆ, 12ನೆಯ ಶತಮಾನದಲ್ಲಿ ಶರಣರು ಸ್ತ್ರೀ-ಪುರುಷ ಸಮಾನರೆಂದು ಸಾರಿದರು. ಈ ಮೂಲ ಧ್ಯೇಯವನ್ನು ನಡೆ-ನುಡಿಯಾಗಿಸಿದ್ದ ಅಲ್ಲಮನನ್ನು ಪ್ರಶ್ನಿಸುವ ಮುಕ್ತಾಯಕ್ಕ, ಅಲ್ಲಮನ ಪರೀಕ್ಷೆಯ ಪ್ರಶ್ನೆಗಳಿಗೆ ಸರಿ ಉತ್ತರಿಸಿ ಅಲ್ಲಮನಿಂದಲೇ ಪ್ರಶಂಸೆಗೊಳಗಾದ ಅಕ್ಕಮಹಾದೇವಿ, ಬಸವಣ್ಣನ ತಿದ್ದುವ ವಿಚಾರ ಪತ್ನಿ ನೀಲಮ್ಮ ಹಾಗೂ ಅಕ್ಕ ನಾಗಲಾಂಬಿಕೆ, ಗಂಡ ಮಾರಯ್ಯನ ಕಾಯಕ ಪ್ರಜ್ಞೆಯನ್ನು ಪ್ರಶ್ನಿಸುವ ಹಾಗೂ ಅವನ ಆಸೆಯ ಮನಸ್ಸನ್ನು ಪ್ರಶ್ನಿಸುವ ಆಯ್ದಕ್ಕಿ ಲಕ್ಕಮ್ಮ , ಕಸಗುಡಿಸುವಾಗ ಹೊನ್ನು ಸಿಕ್ಕರೂ ಅದು ಶ್ರಮ ಗಳಿಕೆಯಲ್ಲವೆಂದು ತಿರಸ್ಕರಿಸಿ ಕಸದಂತೆ ಪರಿಗಣಿಸುವ ಸತ್ಯಕ್ಕ ಹೀಗೆ ಹತ್ತು ಹಲವು ಧೀಮಂತ ಮಹಿಳಾ ಮಣಿಗಳು ಸಕ್ರಿಯವಾಗಿದ್ದುದು 12ನೆಯ ಶತಮಾನದ ಕಲ್ಯಾಣ ರಾಜ್ಯದಲ್ಲಿ.
12ನೆಯ ಶತಮಾನದ ಶರಣೆಯರ ಧೋರಣೆ ಹಾಗೂ ಮನಃಸ್ಥಿತಿಯನ್ನು ತಿಳಿಯಲು ಕೆಲವು ವಚನಗಳು:
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ.
ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು
ಬಂದೆನ್ನ ನೆರೆದ ನೋಡವ್ವಾ.
ಆತನ ನಪ್ಪಿಕೊಂಡು ತಳವೆಳಗಾದೆನು.
ಚೆನ್ನ ಮಲ್ಲಿಕಾರ್ಜುನನ ಕಂಡು
ಕಣ್ಣ ಮುಚ್ಚಿ ತೆರೆದು ತಳವೆಳಗಾದೆನು.
– ಅಕ್ಕ ಮಹಾದೇವಿ, ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 11
ಆಸೆಯೆಂಬುದು, ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ ?
ಈಸಕ್ಕಿಯಾಸೆನಿಮಗೇಕೆ ? ಈಶ್ವರನೊಪ್ಪ.
ಮಾರಯ್ಯ ಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ.
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದಹಾಹೆ; ಬಲ್ಲವರ ನೀತಿಯಲ್ಲ.
ಏತರ ಹಣ್ಣಾದಡೂ ಮಧುರವೆ ಕಾರಣ,
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ
ಶಂಭುಜಕ್ಕೇಶ್ವರಾ.
– ಸತ್ಯಕ್ಕ, ಸಮಗ್ರವಚನಸಂಪುಟ: 5 ವಚನದಸಂಖ್ಯೆ: 1228
ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು.
ನಾನೆಂತು ಬದುಕುವೆನಣ್ಣಾ ?
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.
ಎನ್ನ ಕಣ್ಣಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣಾ, ನಿನ್ನ ಯೋಗ !
– ಮುಕ್ತಾಯಕ್ಕ, ಸಮಗ್ರವಚನಸಂಪುಟ: 5 ವಚನದಸಂಖ್ಯೆ: 1099
ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ,
ತನ್ನಾಚಾರಕ್ಕೆ ಹೊರಗಾದವರ ಅಣ್ಣತಮ್ಮನೆಂದು
ತಾಯಿ ತಂದೆ ಎಂದು, ಹೊನ್ನು ಮಣ್ಣು ಹೆಣ್ಣಿನವರೆಂದು
ಅಂಗೀಕರಿಸಿದಡೆ, ಅವರಂಗಣವ ಕೂಡಿದಡೆ,
ಅವರೊಂದಾಗಿನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರನೊಳಗಿಟ್ಟು ಕೊಳ್ಳ
– ಅಕ್ಕಮ್ಮ, ಸಮಗ್ರವಚನಸಂಪುಟ: 5 ವಚನದಸಂಖ್ಯೆ: 492
ಅಂಗದ ಸಂಗಿಗನಲ್ಲನಮ್ಮ ಬಸವಯ್ಯನು.
ಪ್ರಾಣದ ಭ್ರಮೆಯವನಲ್ಲನಮ್ಮ ಬಸವಯ್ಯನು.
ಉಭಯದ ಹಂಗಹರಿದು ಉಪಮಾತೀತನಾದ ನಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಕೂಡಿ
ನಿರಾಳ ಪ್ರಸನ್ನಮರ್ತಿಯಾದನಮ್ಮ ಬಸವಯ್ಯನು.
– ನೀಲಮ್ಮ, ಸಮಗ್ರವಚನಸಂಪುಟ: 5 ವಚನದಸಂಖ್ಯೆ: 802
ನೀರು ನೆಲನಿಲ್ಲದೆ ಇರಬಹುದೆ ?
ಬೀಜ ನೆಲೆಯಿಲ್ಲದೆ ಹುಟ್ಟಬಹುದೆ ?
ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ ?
ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ ?
ಇಂತೀ ಕ್ರೀ ಜ್ಞಾನ ಸಂಬಂಧ ಸ್ಥಲಭಾವ.
ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕರ್ಜುನನಲ್ಲಿ
ಉಭಯಸ್ಥಲಭೇದ.
– ಮೋಳಿಗೆ ಮಹಾದೇವಿ, ಸಮಗ್ರವಚನಸಂಪುಟ: 5 ವಚನದಸಂಖ್ಯೆ: 117
ಹೀಗೆ 35 ವಚನಗಾರ್ತಿಯರನ್ನೊಳಗೊಂಡು ಒಟ್ಟು45 ಶರಣೆಯರು 12ನೇಯ ಶತಮಾನದಲ್ಲಿ, ತಮ್ಮ ಶಕ್ತಿ ಅಸ್ತಿತ್ವವನ್ನು ಕಂಡುಕೊಂಡು ನಿರ್ಭಯವಾಗಿ ನಿರ್ಭೀಡೆಯಿಂದ ವಚನಗಳ ಮೂಲಕ ತಮ್ಮ ಭಕ್ತಿ, ಸಮತ್ವ, ಸಮಾನತೆ, ದಯೆ, ಅನುಭವ, ಅನುಭಾವ, ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆ, ಸಾಮಾಜಿಕ ಚಿಂತನೆ, ಪ್ರಕೃತಿ ವರ್ಣನೆಗಳ ಬಗೆಗೆ ತಮ್ಮ ನಿಲುವನ್ನು ಒಪ್ಪವಾಗಿ ಪ್ರಕಟಿಸಿದರು. ಹಲವಾರು ಶರಣೆಯರು ತಮ್ಮನ್ನು ಶರಣ ಸಂಸ್ಕೃತಿಯ ಮೂಲ ಬೇರಾದ ಕಾಯಕ ತತ್ವದೊಂದಿಗೆ ಗುರುತಿಸಿಕೊಂಡಿದ್ದು ಮುಖ್ಯವಾಗಿ ಗಮನಿಸಬಹುದು. ಅಂದಿನ ಕಾಲದ ಮುಖ್ಯ ಶರಣೆಯರು ಕದಿರೆ ರೆಮ್ಮವ್ವೆ, ಕನ್ನಡಿ ಕಾಯಕದ ರೇಮಮ್ಮ, ಸೂಳೆ ಸಂಕಮ್ಮ, ದುಗ್ಗಳೆ, ಗೊಗ್ಗವ್ವೆ, ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಕಾಲಕಣ್ಣಿಯ ಕಾಮಮ್ಮ, ಮೋಳಿಗೆ ಮಹಾದೇವಿ, ನೀಲಮ್ಮ, ಅಮುಗೆ ರಾಯಮ್ಮ, ಅಕ್ಕಮ್ಮ, ಬೊಂತಾದೇವಿ ಮುಂತಾದವರು.
ಅಮ್ಮ, ಅಕ್ಕ, ತಂಗಿ, ಅಜ್ಜಿ, ಮಡದಿ, ಮಗಳು, ಸೊಸೆ, ಸಕಲ ಸ್ತ್ರೀಯರಿಗೂ ಶರಣು!
– ರುದ್ರ ಮೂರ್ತಿ ಪ್ರಭು ( ಮುಂಬಯಿ)