ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಯುತ ದೊಡ್ಡಣ್ಣರವರ ಅಂತರಾಳ
ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಯುತ ದೊಡ್ಡಣ್ಣರವರ ಅಂತರಾಳ
ಪ್ರೀತಿಯ ರೆಬೆಲ್….
ಒಂದು ವರ್ಷ ಆಗೋಯ್ತು ನೀನು ನಮ್ಮನ್ನ ಬಿಟ್ಟು ಹೋಗಿ…! ನಿನ್ನ ಈ ಒಂದು ವರ್ಷದಲ್ಲಿ ತುಂಬಾ ಮಿಸ್ ಮಾಡ್ಕೊಂಡ್ವಿ ನಾವೆಲ್ಲಾ ನೀನಿಲ್ಲದೆ ಎಷ್ಟೆಲ್ಲಾ ವಿದ್ಯಮಾನಗಳು ನಡೆದು ಹೋದ್ವು, ಪ್ರತೀ ಸಾರಿ ಅನ್ನಿಸ್ತಿತ್ತು, ನೀನು ನಮ್ಮ ಜೊತೆ ಇರಬೇಕಿತ್ತು ಅಂತ..! ನೀನು ಅಂದರೆ ನಮಗೆಲ್ಲ ಅದೆಷ್ಟು ಪ್ರೀತಿ ಅಭಿಮಾನ… ನಿನ್ನ ಮಾತು ಶುದ್ದ ಒರಟು ಅನ್ನಿಸಿದರೂ ನಿನ್ನ ಮನಸು ಮಾತ್ರ ಬೆಣ್ಣೆ ಅದು ನಮ್ಮೆಲ್ಲರಿಗೂ ಗೊತ್ತು… ಅಂಬರೀಷಣ್ಣ ಬೈದರೇ ಏನೋ ಖುಷಿ ಅನ್ನೋ ಕೋಟ್ಯಾಂತರ ಅಭಿಮಾನಿಗಳಿದ್ದರು. ನಿಜಕ್ಕೂ ನೀನು ನಾವು ಕಂಡ ದಂತಕತೆ…! ನೀನು ಬೈದರೂ ಜನ ನಿನ್ನ ಪ್ರೀತಿಸ್ತಿದ್ದರೂ, ಅದು ಕೇವಲ ನಮ್ಮ ರೆಬಲ್ ಗೆ ಮಾತ್ರ ಸಿಕ್ಕಿದ ಪುಣ್ಯ…! ಮಂಡ್ಯದ ಜನಕ್ಕೆ ಬೈದು ಬದುಕೋರು ಉಂಟೇ ಅನ್ನೋರು ಇರುವಾಗ ಅದೇ ಮಂಡ್ಯದ ಜನರನ್ನ ಬೈತಾನೆ ಪ್ರೀತಿಸಿ, ಮಂಡ್ಯ ಜನ ಅಂದರೆ ಅಂಬರೀಷ್… ಅಂಬರೀಷ್ ಅಂದರೆ ಮಂಡ್ಯ ಜನ…, ಅನ್ನೋ ಮಟ್ಟಿಗೆ ಆ ಜನರ ಮನಸ್ಸನ್ನ ದೋಚಿಬಿಟ್ಟಿದ್ದೆ ನೀನು, ರಾಜನಾಗಿ ಬದುಕಿ ಚಕ್ರವರ್ತಿಯಾಗಿ ಹೋದ ವ್ಯಕ್ತಿ ನೀನು…! ನಿನ್ನ ಸ್ನೇಹ ನಮಗೆ ದೊರಕಿದ್ದೇ ನಮ್ಮ ಪೂರ್ವಜನ್ಮದ ಪುಣ್ಯ. ನೀನು, ಸುಮಮ್ಮ ನನ್ನ ಸ್ವಂತ ಮನೆಯ ಸದಸ್ಯನಂತೆಯೇ ಕಂಡಿರಿ, ನಿಮ್ಮನೆಯವರಲ್ಲೊಬ್ಬ ನಾನಾಗಿದ್ದೆನೆ.

ನೀನು ಇನ್ನಿಲ್ಲ ಅಂದ ಆಘಾತ ತಡೆದುಕೊಳ್ಳಲಾಗಲಿಲ್ಲ… ಆ ದಿನ ನವೆಂಬರ್ 24 ಬೆಳಗ್ಗೆ 11 ಗಂಟೆಯಿಂದಲೂ ನಿನ್ನೊಟ್ಟಿಗೇ ಇದ್ವಿ ನಾನು ರಾಕ್ ಲೈನ್, ನೀನೇ ಕರೆಸಿಕೊಂಡಿದ್ದೆ ಕಲಾವಿದರ ಸಂಘದ ರಾಜ್ಯೋತ್ಸವದ ಬಗ್ಗೆ ಮಾತಾಡ್ಲಿಕ್ಕೆ, ಆದಿನ ಮಧ್ಯಾಹ್ನ 3:30ಕ್ಕೆ ಒಟ್ಟಿಗೆ ಊಟ ಮಾಡ್ತಿದ್ವಿ, ಆದರೆ ಅದೇ ನಿನ್ನೊಂದಿಗೆ ನಮ್ಮ ಕೊನೆಯ ಊಟವಾಗುತ್ತೆ ಆಂತ ಕನಸಿನಲ್ಲೂ ಊಹಿಸಿರಲಿಲ್ಲ ನಾವು, ಆದರೆ ನಿನ್ನ ಆರೋಗ್ಯ ಕೆಟ್ಟಾಗ ಅಭಿಮಾನಿಗಳ ಅಪ್ಪಣೆ ಪಡೆದು… ಸುಮಮ್ಮ ಸಿಂಗಾಪುರದಲ್ಲಿ ಕಷ್ಟ ಪಟ್ಟು ದೇವರಲ್ಲಿ ಭಿಕ್ಷೆ ಬೇಡಿ, ಉಳಿಸಿಕೊಂಡಿದ್ದಾಗಿತ್ತು… ನಿನ್ನ ಮಂಡ್ಯ ಜನರ ಆರೈಕೆಯಾಗಿತ್ತು. ಮಂಡ್ಯ ಅಂದ್ರೆ ಜೀವ ಬಿಡ್ತಿದ್ದ ನಿನ್ನ ಜೀವಕ್ಕೆ ಮಂಡ್ಯ ಜನರಿಗಾದ ದುರ್ಘಟನೆಯೇ ನಿನ್ನ ಜೀವಕ್ಕೆ ಮುಳುವಾಗಿತ್ತು. ಟಿವಿಯಲ್ಲಿ ಮಂಡ್ಯದ ಕನಕನ ಮರಡಿ ಬಸ್ ದುರಂತ ಕಂಡು ನೀನು ಕುಸಿದಿದ್ದೆ, ಆ ಆಘಾತ ನಿನಗೆ ತಡೆದುಕೊಳ್ಳಲಾಗಿರಲಿಲ್ಲ. ದುರಂತ ನೋಡಿ ನೀನು ಕಲಾವಿದರ ಸಂಘದ ರಾಜ್ಯೋತ್ಸವವನ್ನ ಅನಿರ್ದಿಷ್ಟಾವಧಿಗೆ ಮುಂದೂಡಿಸಿದ್ದೆ ಎಲ್ಲಾ ಏರ್ಪಾಡುಗಳಾಗಿದ್ದರೂ ಆ ಕಾರ್ಯಕ್ರಮ ಮುಂದೂಡಲಾಗಿದ್ದರಿಂದ ನೀನೇ ನನ್ನ ಮತ್ತೆ ರಾಕ್ ಲೈನ್ ವೆಂಕಟೇಶ್ ರನ್ನ ಕಲಾವಿದರ ಸಂಘದ ಕಡೆ ಓಡಿಸಿದ್ದೆ…! ಆದರೆ ನಾವಿಲ್ಲಿ ಬಂದು ಸ್ವಲ್ಪ ಸಮಯ ಆಗಿರಲಿಲ್ಲ ಆಗ ಗಂಟೆ 6:30 ಆಗಲೇ ಸುಮಮ್ಮ ನ ಫೋನ್ ಬಂತು ಅಂಬರೀಷ್ ಕುಸಿದಿದ್ದಾರೆ ವಿಕ್ರಮ್ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ನಲ್ಲಿ ಕರೆದೊಯ್ತಾ ಇದ್ದೇನೆ ಬನ್ನಿ ಎಂದು… ಹೆಚ್ಚಿನದ್ದೇನು ನಾವು ಊಹಿಸಿರಲಿಲ್ಲ ಮದ್ಯಾಹ್ನ ಬಂದ ಸುದ್ದಿಯಿಂದ ಕೊಂಚ ಆಘಾತ ಅಂದುಕೊಂಡೇ ಬಂದೆವು ಆದರೆ ವಿಧಿ ನಿನ್ನನ್ನ ನಮ್ಮೆಲ್ಲರಿಂದ ದೂರ ಮಾಡಿತ್ತು… ಆಘಾತ ಒಂದು ಕಡೆ ಮುಂದೇನು ಅನ್ನೋ ಪ್ರಶ್ನೆ ಇನ್ನೊಂದು ಕಡೆ … ಆಗ ನಮ್ಮೊಂದಿಗೆ ನಿಂತು ನಮ್ಮಂತೆಯೇ ದುಃಖದೊಂದಿಗೇ ನಿನ್ನ ಅಂತಿಮ ಯಾತ್ರೆಯನ್ನು ಹಿಂದೆಂದೂ ಕಂಡು ಕೇಳರಿಯದಂತೆ ನಡೆಸಿಕೊಟ್ಟಿದ್ದು ನಿನ್ನ ಪ್ರೀತಿಯ ಅಭಿಮಾನಿಗಳು ಮತ್ತೆ ನೀನು ಸದಾ ಗೌರವಿಸುತ್ತಿದ್ದ ಪೊಲೀಸ್ ಇಲಾಖೆ. ಎಲ್ಲೇ ಶೂಟಿಂಗ್, ಅಥವಾ ಕಾರ್ಯಕ್ರಮ ಅಂತ ಹೋದರೂ ನಿನ್ನ ಊಟಕ್ಕೂ ಮೊದಲು ನೀನು ಕೇಳ್ತಾ ಇದ್ದಿದ್ದು ಅಲ್ಲಿನ ಪೊಲೀಸರು ಮತ್ತು ಚಾಲಕರ ಊಟ ಆಯ್ತಾ ಅಂತ.. ಆ ನಿನ್ನ ಕಾಳಜಿ ಫಲಿಸಿದ ದಿನ ಅಂದು… ಲಕ್ಷಾಂತರ ಜನ ಸೇರಿದ್ದರೂ ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆಯದಂತೆ ಕಾವಲಾಗಿದ್ದರು ನಮ್ಮ ಆರಕ್ಷಕರು. ನಿನ್ನ ಅಭಿಮಾನಿಗಳೂ ಅಷ್ಟೇ ತಮ್ಮದೇ ಮನೆಯ ಕಾರ್ಯ ಅನ್ನುವಂತೆ ಮುಂದೆ ನಿಂತು ಎಲ್ಲವನ್ನೂ ನಿಭಾಯಿಸಿದರು. ಮನದೊಳಗೆ ದುಃಖ ಸಾಗರವೇ ಇದ್ದರೂ ಮಂಡ್ಯಕ್ಕೆ ಅಂಬರೀಶ್ ಅಣ್ಣನ್ನ ಕರೆತರಲೇ ಬೇಕು ಇಲ್ಲವಾದಲ್ಲಿ ಸುಮ್ಮನೆ ಇರಲ್ಲ ಅಂತ ನಿನ್ನೂರಿನ ಜನ ನಿನ್ನದೇ ಶೈಲಿಯಲ್ಲಿ ಹೇಳಿ ನಿನ್ನ ಅಲ್ಲಿಗೆ ಕರೆಸಿಕೊಂಡಿದ್ದರು. ನೀನು ನಿನ್ನದೇ ಕುಟುಂಬ ಅಂತ ತಿಳಿದಿದ್ದ ಆ ನಿನ್ನ ಇಡೀ ಮಂಡ್ಯ ಜಿಲ್ಲೆಯ ಜನ, ಆ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನಿನಗಾಗಿ ನಿನ್ನ ದರ್ಶನಕ್ಕಾಗಿ ಅನ್ನ ನೀರು ಬಿಟ್ಟು ಕಾದಿದ್ದರು…. ಆ ದುಃಖದಲ್ಲೂ ನೀನು ಗಳಿಸಿದ್ದ ಅಪಾರ ಸಂಪತ್ತನ್ನ ಕಣ್ತುಂಬಿಕೊಂಡೆವು ನಮ್ಮ ಹೃದಯ ತುಂಬಿ ಬಂತು. ಎಲ್ಲೋ ಶರಣರು ಹೇಳಿದ್ದ “ಶರಣರ ಗುಣವನ್ನ ಮರಣದಲ್ಲಿ ಕಾಣು” ಮಾತು ನೆನಪಾಯ್ತು ಅಬ್ಬಾ ಅದೆಷ್ಟು ಜನರಿಗೆ ಸಿಗಲು ಸಾಧ್ಯ ಈ ಅನಿರ್ವಚನೀಯ ಪ್ರೀತಿ ಅಭಿಮಾನ, ನೀನೂ ಕೂಡ ಅವರ ಪ್ರೀತಿ ವಿಶ್ವಾಸ, ಅಭಿಮಾನಗಳಿಗಾಗಿಯೇ ನಟಿಸಿದೆ, ಹೋರಾಡಿದೆ ಕಡೆಗೆ ಕೇಂದ್ರ ಮಂತ್ರಿ ಪದವಿಯನ್ನೂ ಒದ್ದು ಎದ್ದು ಬಂದೆ ಅದು ಕೇವಲ ನಮ್ಮ ರೆಬಲ್ ಅನ್ನಿಸಿಕೊಂಡ, ಆಸೆ ಸ್ವಾರ್ಥ ಇಲ್ಲದ ನಿನ್ನಂತವರಿಗೆ ಮಾತ್ರ ಸಾಧ್ಯ. ನಿನ್ನಂತೆ ಜನರನ್ನ ಗಳಿಸಿ ಕಲಾವಿದ ಅಲ್ಲ ಮನುಷ್ಯ ಇನ್ನೊಬ್ಬ ಹುಟ್ಟಲಾರ… ನೇರಾ ನೇರ ಮನುಷ್ಯ ನೀನು ಯಾರನ್ನೂ ದ್ವೇಷಿಸಿದವನೇ ಅಲ್ಲ, ಅದಕ್ಕೇ ಜನ ನಿನ್ನನ್ನ ಹೃದಯ ತುಂಬಿ ಪ್ರೀತಿಸಿದರು. ನಿನ್ನ ಜನರ ಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸುತ್ತಿದ್ದ ಕಲಿಯುಗ ಕರ್ಣ ನೀನು. ಸ್ನೇಹಿತ ಅಂತ ಅಂದ್ಕೊಂಡರೆ ಹಿಂದೆ ಮುದೆ ಯೋಚಿಸದೆ ಅವರ ಕಷ್ಟಕ್ಕೆ ಹೆಗಲಾಗುತ್ತಿದ್ದವನು ನೀನು. ಅತಿ ಚಿಕ್ಕ ಮಾರುಕಟ್ಟೆಯನ್ನೊಂದಿದ್ದ ನಮ್ಮ ಚಂದನವನದ ಕಲಾವಿದರ ಸಂಘಕ್ಕೆ ಇಡೀ ಭಾರತೀಯ ಚಲನಚಿತ್ರ ಕಲಾವಿದರ್ಯಾರಿಗೂ ಇಲ್ಲದಂತಹ ನೆಲೆ ಕಲ್ಪಿಸಿ ಅದಕ್ಕೆ ಡಾ|| ರಾಜ್ ಕುಮಾರ್ ರವರ ಹೆಸರಿಟ್ಟು ನಿನ್ನ ಕೊಡುಗೆ ನೀಡಿದೆ. ಇನ್ಯಾರಿದ್ದಾರೆ ನಮ್ಮ ಕಲಾವಿದರ ಬಳಗಕ್ಕೆ ಪ್ರತಿಯೊಂದಕ್ಕೂ ಹೆಗಲಾಗುವ ಸರದಾರ…. ನಿನಗೆ ನೀನೇ ಸಾಟಿ….! ನೀನು ಪಂಚಭೂತಗಳಲ್ಲಿ ಲೀನವಾಗಿದ್ದರೂ ನಿನ್ನ ನೆನಪುಗಳು ನಿನ್ನ ಮೂಲ ಹೆಸರಿನಂತೆ ನಮ್ಮೊಳಗೆ ಅಜರಾಮರ…!

ನೀನು ನಮ್ಮೊಳಗೆ ಇದ್ದೀಯಾ ಅನ್ನೋ ಭಾವನೆ ನಮಗೆ ಈಗಲೂ ಸಂಜೆ 7 ಗಂಟೆಗೆ ಯಾವುದಾದರೂ ಫೋನ್ ಬಂದರೂ ನೀನೇ ಫೋನ್ ಮಾಡಿದೆಯೇನೋ ಅನ್ನೋ ಆಶಾಭಾವ ಮೂಡುತ್ತೆ.. ಆದರೆ ನಿರಾಸೆಯಾದಾಗ ಇನ್ನೆಲ್ಲಿ ಅಂಬಿ ಫೋನ್ ಮಾಡಿ ಎಲ್ಲಿದ್ದಿರೋ ಇನ್ನೂ… ಅನ್ನೋ ಮಾತು… ಅನ್ನಿಸುತ್ತೆ. ಆದರೂ ನೀನಿನ್ನೂ ನಮ್ಮೊಂದಿಗೆ ಇರಬೇಕಿತ್ತು. ನೀನು ಪ್ರೀತಿಸಿದ ನಿನ್ನ ಜನ ಸ್ವಾಭಿಮಾನದಿಂದ ಸುಮಮ್ಮನ್ನ ಹಿಮಾಲಯದೆತ್ತರಕ್ಕೆ ಕೊಂಡೊಯ್ದಿದ್ದನ್ನು ನೀನು ನೋಡಬೇಕಿತ್ತು….! ನಿನ್ನ ಅನುಪಸ್ಥಿತಿಯಲ್ಲಿ ನಿನ್ನ, ಆ ಜನರ ಬಾಂಧವ್ಯ ಉದಾಹರಣೆ ಸಮೇತವಾಗಿ ಎಲ್ಲರಿಗೂ ವಿವರಣೆ ಸಿಕ್ಕಿದ ಘಟನೆಗಳು ನಡೆದುಹೋದವು. ನನಗೆ ಗೊತ್ತು, ಎತ್ತರದಲ್ಲಿ ನಿಂತು ಎಲ್ಲರನ್ನೂ, ಎಲ್ಲವನ್ನೂ ನೋಡುತ್ತಿದ್ದೀಯ ನೀನು…! ಬೈಯ್ಯುತ್ತಲೇ ನೀನು ಪ್ರೀತಿಸಿದ ನಿನ್ನ ಮಂಡ್ಯದ ಜನ ಸೆರಗೊಡ್ಡಿ ಬೇಡಿದ ನಿನ್ನ ಮಡದಿಯ ಸೆರಗಿಗೆ ಅವರ ಸ್ವಾಭಿಮಾನದ ಪ್ರೀತಿ ಅಭಿಮಾದ ಉಡಿತುಂಬಿ ಹರಸಿದ್ದಾರೆ. ನಿನ್ನ ಧರ್ಮಪತ್ನಿಯೇನು ಕಮ್ಮಿ ಇಲ್ಲ…. ನೀನು ಪ್ರೀತಿಸಿದ ಆ ಜನರಿಗಾಗಿ, ನಿನ್ನನ್ನು ಪ್ರೀತಿಸಿದ ಆ ಜನರಿಗಾಗಿ ನೀನಿಲ್ಲದ ದುಃಖವನ್ನು ಆಕೆ ತನ್ನೊಳಗೇ ನುಂಗಿಕೊಂಡು ಜನರ ನೋವಿಗೆ ಸ್ಪಂದಿಸಬೇಕು, ನನ್ನ ಗಂಡ ಕಂಡ ಇನ್ನೂ ಉಳಿದಿರುವ ಕನಸುಗಳನ್ನು ನನಸು ಮಾಡಲೇಬೇಕು ಅನ್ನೋ ಆಶಯ ಇಟ್ಟುಕೊಂಡು… ಇದುವರೆಗೆ ದೂರವೇ ಇದ್ದ ರಾಜಕೀಯಕ್ಕೆ ದುಮುಕಿದರು. ನಿನ್ನ ಜನರೂ ಅವರಿಗೆ ಬೆಂಬಲ ನೀಡಿ ಜಯಶಾಲಿಯಾಗಿಸಿದ್ದಾರೆ. ನಿನ್ನಂತೆಯೇ ಗಟ್ಟಿಗಿತ್ತಿ ನನ್ನ ಸಹೋದರಿ. ಭೌತಿಕವಾಗಿ ನೀನಿಂದು ನಮ್ಮೊಂದಿಗಿಲ್ಲದಿದ್ದರೂ ನಿನ್ನ ನೆನಪುಗಳು ನಮ್ಮೊಳಗೆ ಸದಾ ಅಮರ….
ನಿನ್ನ ತಂದೆ ತಾಯಿ, ಮಳವಳ್ಳಿ ಹುಚ್ಚೇಗೌಡರು ಮತ್ತು ಪದ್ಮಮ್ಮನವರು ಎಂದು ನಿನಗೆ ಅಮರ ಎಂದು ನಾಮಕರಣ ಮಾಡಿದರೋ ಅದು ಅನ್ವರ್ಥನಾಮವಾಗಿ ನೀನು ಸದಾ ನಮ್ಮೊಳಗೆ ಅಮರ…. ಅಮರ… ಅಮರ….!
ನಿನ್ನ ಸ್ನೇಹ ಪಡೆದ ನಾನೇ ಪುಣ್ಯವಂತ
ದೊಡ್ಡಣ್ಣ ,
ಹಿರಿಯ ಕಲಾವಿದರು
ಕನ್ನಡ ಚಲನಚಿತ್ರರಂಗ