“ಸೋಲೆಂಬ ಗೆಲುವಿನ ಹಾದಿ”
“ಇವರು ಹೇಮಾ ಎಂದು… ನನ್ನ ಪರಿಚಿತರು. ಇವರ ಬಳಿ ಇರುವ ವಜ್ರಗಳ ಹರಳುಗಳು ಮಾರಾಟಕ್ಕೆ ಬಂದಿವೆ. ತುಂಬಾ ಕಡಿಮೆ ಬೆಲೆಯಂತೆ. ಅದಕ್ಕೇ ನಾನೂ ತೆಗೆದುಕೊಳ್ಳೋಣ ಅಂತಾ ಇದ್ದೀನಿ…ನೀನು ಹೇಗಿದ್ದರೂ ವಜ್ರಗಳ ಪರಿಶೀಲನೆಯಲ್ಲಿ ಅಧ್ಯಯನ ಮಾಡಿದ್ದೀಯ. ಸ್ವಲ್ಪ ಈ ವಜ್ರಗಳನ್ನು ಪರಿಶೀಲಿಸಿ ಹೇಳು….ಚೆನ್ನಾಗಿದ್ದರೆ ತೆಗೆದುಕೊಳ್ತೇನೆ…”, ಗೆಳತಿ ಸುಧಾ ಸಹಾಯ ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. “ಬೆಳಗಿನ ಸಮಯದಲ್ಲಿ ಬಾ…ಸೂರ್ಯನ ಬೆಳಕಿನಲ್ಲಿ ಟೆಸ್ಟ್ ಮಾಡಿ ಹೇಳುತ್ತೇನೆ”, ಎಂದೆ. ಮಾರನೆ ದಿನ ಬೆಳಿಗ್ಗೆ ಹನ್ನೊಂದು ಗಂಟೆಗೆ ಹೇಮಾ ಜತೆ ಪ್ರತ್ಯಕ್ಷಳಾದಳು ಸುಧಾ. ಲೆನ್ಸ್ ಹಿಡಿದು ಒಂದೊAದೇ ಹರಳುಗಳನ್ನು ಪರೀಕ್ಷಿಸತೊಡಗಿದೆ. ಸುಮಾರು ನೂರಕ್ಕೂ ಹೆಚ್ಚು ಇದ್ದ ಹರಳುಗಳಲ್ಲಿ, ಕೇವಲ ಐದು ಹರಳುಗಳು ಮಾತ್ರ ಚೆನ್ನಾಗಿದ್ದವು!! ಬರಿಗಣ್ಣಿನಿಂದ ನೋಡಿದಾಗ ಫಳಫಳನೆ ಹೊಳೆವ ವಜ್ರದ ಹರಳುಗಳು ಮೋಹ ಉಕ್ಕಿಸುವಂತೆ ಕಾಣುತ್ತಿದ್ದರೂ, ಸೂಕ್ಷö್ಮದರ್ಶಕದಿಂದ ಗಮನಿಸಿ ನೋಡಿದಾಗಲೇ ಅದರೊಳಗಿನ ಲೋಪದೋಷಗಳು ಕಂಡಿದ್ದು! ಅದನ್ನು ತಿಳಿಸಿ ಹೇಳಿದಾಗ ಹೇಮಾ ಮುಖ ಸಣ್ಣದಾಯಿತು. “ಅಯ್ಯೋ…, ನಾನು ಮೋಸ ಹೋದೆ…ಇವು ತುಂಬಾ ಒಳ್ಳೆಯ ಕ್ವಾಲಿಟಿ ಹರಳುಗಳೆಂದು ಹೇಳಿ ಬಾಂಬೆಯ ನಮ್ಮ ಪರಿಚಿತರೊಬ್ಬರು ನಮಗೆ ಮಾರಾಟ ಮಾಡಿದರು. ಅವರ ಮೇಲಿನ ನಂಬುಗೆಯಿಂದ ತೆಗೆದುಕೊಂಡುಬಿಟ್ಟೆವು…ಈಗ ನೋಡಿದರೆ ನೀವು ಹೀಗೆ ಹೇಳ್ತಾ ಇದ್ದೀರ….”, ಎಂದು ಗೋಳಾಡಿದರು. ನಾನಾಗ ಅವುಗಳಲ್ಲಿದ್ದ ಕೊರತೆಗಳ ಬಗ್ಗೆ ವಿವರಿಸಿ ಹೇಳಿದೆ. ಹೇಮಾ ನನಗೆ ಕೃತಜ್ಞತೆ ಹೇಳಿ, ತಾನು ಮೋಸ ಹೋದುದರ ಬಗ್ಗೆ ದುಃಖಿಸುತ್ತಾ, ಬಾಂಬೆಯ ಮಿತ್ರರಿಗೆ ಕೂಡಲೇ ಕರೆ ಮಾಡಿ ವಿಷಯ ತಿಳಿಸಿದರು. ಅದಕ್ಕೆ ಅವರು, “ಹೌದಾ….ಆಶ್ಚರ್ಯ ಆಗ್ತಾ ಇದೆ…ನಾವೂ ಜೈಪುರದ ಮಿತ್ರರೊಬ್ಬರ ಬಳಿ ತೆಗೆದುಕೊಂಡಿದ್ದು. ಅವರು ತುಂಬಾ ಒಳ್ಳೆಯವರು. ಹಾಗಾಗಿ ನಂಬಿ ತೆಗೆದುಕೊಂಡೆವು. ನಮಗೆ ದುಡ್ಡಿನ ಅವಷ್ಯಕತೆ ಬಂದುದರಿAದ ನಿಮಗೆ ಮಾರಿದೆವು…ಈಗ ನಾವೇನು ಮಾಡಲು ಸಾಧ್ಯ ?!…ನೋಡೋಣ, ಜೈಪುರದ ಮಿತ್ರರನ್ನು ಕೇಳಿ ನೋಡುತ್ತೇವೆ. ಅವರು ಒಪ್ಪಿದರೆ ವಾಪಸ್ಸು ಕೊಡೋಣ…ಇಲ್ಲವೆಂದರೆ ನಾನೇನೂ ಮಾಡಲು ಸಾಧ್ಯವಿಲ್ಲ…ಕ್ಷಮಿಸಿ”, ಎಂದು ಹೇಳಿ ಮಾತು ಮುಗಿಸಿದರು. ಹೇಮಾ ಚಿಂತಾಕ್ರಾಂತಳಾದಳು. ತನ್ನ ಉಳಿತಾಯದ ಅಷ್ಟೂ ಹಣವನ್ನು ಇದಕ್ಕೆ ಹಾಕಿದ್ದಳು. ಆರ್ಥಿಕವಾಗಿ ಚೆನ್ನಾಗಿಯೇ ಇದ್ದ ಅವರು ವ್ಯಾಪಾರದಲ್ಲಿ ಅಪಾರ ನಷ್ಟ ಅನುಭವಿಸಿದ್ದರಿಂದ, ಹಣದ ಅವಶ್ಯಕತೆ ತೀವ್ರವಾಗಿ ಕಾಡಿದ್ದ ಕಾರಣ, ಮಾರಲು ಮುಂದಾಗಿದ್ದಳು. ತಾನು ಸಿಕ್ಕಿಬಿದ್ದ ಈ ಮೋಸದ ಬಲೆಯಿಂದ ಹೇಗೆ ಪಾರಾಗಲಿ ಎಂಬುದು ಆಕೆಯ ಚಿಂತೆಯಾದರೆ, ಸಧ್ಯ! ತಾನು ಸಿಕ್ಕಿಬೀಳಲಿಲ್ಲ…ಪಾರಾಗಿಬಿಟ್ಟೆ ಎಂಬ ನೆಮ್ಮದಿ ಸುಧಾಗೆ!! ಇಷ್ಟೇ ಆಗಿದ್ದರೆ ಈ ಘಟನೆ ವಿಶೇಷವಾಗುತ್ತಿರಲಿಲ್ಲ! ಆದರೆ ಹೇಮಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಪ್ರಯತ್ನಿಸಿದಳು!! ಅದನ್ನು ತಿಳಿದ ಮೇಲೆ ಈ ವಿಷಯ ಕಾಡತೊಡಗಿತು!!

ಈ ಜಗತ್ತಿನಲ್ಲಿ ಬಹುಶಃ ಮೋಸದಷ್ಟು ಚಲನೆಯಿರುವುದು ಮತ್ತಾವುದೂ ಇಲ್ಲವೇನೋ!!…ಸ್ವಲ್ಪಮಾತ್ರ ಎಚ್ಚರ ತಪ್ಪಿದರೂ ಸಾಕು, ಮೋಸದ ಜಾಲದೊಳಗೆ ಬಂದಿಯಾಗಿಬಿಡುತ್ತೇವೆ. ಉದ್ದೇಶ ಪೂರ್ವಕವಾಗಿ ಮಾಡುವ ಮೋಸದಂತೆ ಅರಿವಿಲ್ಲದೆ ಮಾಡುವ ಮೋಸವೂ ಅಷ್ಟೇ ಪರಿಣಾಮವನ್ನು ಬೀರುತ್ತದೆ! ಒಮ್ಮೊಮ್ಮೆ ನಮಗೆ ಮೋಸ ಮಾಡಿದವರೂ ಮೋಸಗಾರರಾಗಿರುವುದಿಲ್ಲ!! ಅವರಿಗೆ ಅರಿವಿಲ್ಲದಂತೆಯೇ ಇನ್ನೊಬ್ಬರಿಗೆ ಮೋಸ ಮಾಡಿರುತ್ತಾರೆ. ಏಕೆಂದರೆ ಅವರೂ ಸಹ ಅರಿವಿಲ್ಲದೆಯೇ ಯಾರದೋ ಒಂದು ಮೋಸದ ಜಾಲಕ್ಕೆ ಸಿಲುಕಿರುತ್ತಾರೆ. ಹಾಗಾಗಿ ಎಷ್ಟೋಬಾರಿ ಮುಗ್ಧವಾಗಿ ಮೋಸದ ಜಾಲ ಎಳೆ ಎಳೆಯಾಗಿ ಬಲೆಯನ್ನು ಹೆಣೆದುಕೊಳ್ಳುತ್ತಾ ಹೋಗುತ್ತದೆ. ಯಾರೋ ಮಾಡಿದ ತಪ್ಪಿಗೆ ಯಾರೋ ಬೆಲೆ ತೆರುತ್ತಾರೆ. ಇಂತಹ ಮೋಸಕ್ಕೆ ಏನನ್ನಬೇಕು?…ಇದನ್ನು ಮೋಸ ಎಂದು ಹೇಳಬೇಕೋ ಅಥವಾ ದುರಾದೃಷ್ಟ ಎಂದು ಹೇಳಬೇಕೋ ಎನ್ನುವುದೇ ಪ್ರಶ್ನೆಯಾಗಿ ಕಾಡುತ್ತದೆ. ಇದೇ ಮೇಲಿನ ಪ್ರಸಂಗದಲ್ಲಿ ಹೇಮಾ ಮೋಸಗಾತಿಯಲ್ಲ. ಬದಲಿಗೆ ಆಕೆಯೂ ಮೋಸ ಹೋದವಳೇ!! ಆಕೆಯ ಬಾಂಬೆಯ ಪರಿಚಿತರೂ ಮೋಸಗಾರರಲ್ಲ!! ಅವರೂ ಯಾರೋ ಒಬ್ಬರಿಂದ ಮೋಸ ಹೋದವರೇ…!!! ಇದೊಂದು ಸರಪಳಿ ರೀತಿಯ ಮೋಸದ ವರ್ಗಾವಣೆ!! ವಜ್ರ ಅತ್ಯಂತ ಬೆಲೆಬಾಳುವ ವಸ್ತು. ಇದರ ವಿಷಯದಲ್ಲೊಂದೇ ಹೀಗಾಗುತ್ತದೆ ಎಂದು ಹೇಳುತ್ತಿಲ್ಲ….ಅತ್ಯಂತ ಕಡಿಮೆ ಬೆಲೆಯ ವಸ್ತುಗಳ ವಿಷಯದಲ್ಲೂ, ಯಾವುದೇ ಸಂಗತಿಯಲ್ಲೂ ಹೀಗಾಗುತ್ತದೆ. ಹೇಗೋ ಬೇರೆಯವರಿಗೆ ದಾಟಿಸಿಬಿಟ್ಟರೆ ಸಾಕೆಂಬ ಮನೋಭಾವ ಈ ಸಮಾಜದ ಸಹಜ ಗುಣವಾಗಿರುವುದೇ ವಿಪರ್ಯಾಸ!! ಒಬ್ಬರ ಕೈಯನ್ನು ತಲೆಯ ಮೇಲೆ ಇಡಿಸಿಕೊಂಡವರು, ಮತ್ತೊಬ್ಬರ ತಲೆಯ ಮೇಲೆ ಕೈಯಿಡುವುದು!! ಇಂತಹ ಸಂದರ್ಭಗಳಲ್ಲಿ ಯಾರನ್ನು ದೂಷಿಸಬೇಕು? ಯಾರು ಹೊಣೆ ?…ಈ ಪ್ರಶ್ನೆಗಳಿಗೆ ಖಂಡಿತಾ ಉತ್ತರ ಸಿಗುವುದಿಲ್ಲ.

ಕಳೆದುಕೊಳ್ಳುವುದನ್ನು ಸೋಲು ಎಂದೂ, ಪಡೆದುಕೊಳ್ಳುವುದನ್ನು ಗೆಲುವು ಎಂದೂ ತಿಳಿಯುವ ಪ್ರವೃತ್ತಿ ಮಾನವ ಸಹಜ ಗುಣ! ಮನುಕುಲ ನಿರಂತರವಾಗಿ ಜೀವನದಲ್ಲಿ ಆವಿರ್ಭವಿಸುವ ಸೋಲು ಮತ್ತು ಗೆಲುವು ಎಂಬ ಎರಡು ಧ್ರುವಗಳ ನಡುವೆ ಎಡತಾಕುತ್ತಿರುತ್ತದೆ. ಗೆದ್ದಾಗ ಸಂತೋಷವನ್ನು ವ್ಯಕ್ತಪಡಿಸಬೇಕೆಂದೂ, ಸೋತಾಗ ದುಃಖಿತರಾಗಬೇಕೆಂದೂ ನಾವು ಬುದ್ದಿಬಂದಾಗಿನಿAದಲೂ ರೂಢಿಸಿಕೊಂಡುಬಿಟ್ಟಿರುತ್ತೇವೆ. ನಮ್ಮದಲ್ಲದ ತಪ್ಪಿಗೆ ಗುರಿಯಾದಾಗ ಸೋಲಿನ ಜೊತೆ ನಿರಾಶಾ ಭಾವವೂ ಸೇರಿಕೊಂಡು ದುರ್ಬಲರನ್ನಾಗಿಸುತ್ತದೆ. ಆದರೆ ಯಾವ ವ್ಯಕ್ತಿ ತನ್ನ ಒಳಗಿನ ಕಣ್ಣನ್ನು ತೆರದಿರುತ್ತಾನೋ ಆತ ಅಂತರAಗದ ಆನಂದವನ್ನು ಅನುಭವಿಸುವುದರಲ್ಲಿ ಮಗ್ನನಾಗಿದ್ದು, ಹೊರಗಿನ ಸೋಲು-ಗೆಲುವುಗಳಿಂದ ವಿಚಲಿತನಾಗುವುದಿಲ್ಲ. ಮೋಸಕ್ಕೆ ಸಿಲುಕಿ ಸೋತಾಗ ಹೆಚ್ಚು ನೋವಾಗುತ್ತದೆ, ನಿಜ…ಏಕೆಂದರೆ ನಂಬುಗೆ, ವಿಶ್ವಾಸ ಎಂಬ ಪದಗಳು ಅರ್ಥ ಕಳೆದುಕೊಂಡಿರುತ್ತವೆ. ಮನುಷ್ಯತ್ವದ ಮೂಲಭೂತ ಗುಣಗಳನ್ನೇ ಕೊಂದು ಹಾಕಿದ ತಣ್ಣನೆಯ ಕ್ರೌರ್ಯ ಎಂದೆನಿಸುವುದೂ ಸತ್ಯ!! ಆದರೆ ನಿಜವಾದ ಅರ್ಥದಲ್ಲಿ ಗೆಲುವು ಎಂಬುದು ಕೇವಲ ಹೊರಾವರಣದಲ್ಲಿ ದೊರಕುವ ಸಂತೋಷ ಮಾತ್ರ! ಆದರೆ ಸೋಲು ಎಂಬುದು ನಿಜವಾದ ಗೆಲುವು ಆಗಿರುತ್ತದೆ!! ಹೇಗೆಂದರೆ ಸೋಲು ಬಂದಾಗ, ಮಾನವನು ಏಕಾಂತವಾಸಿಯಾಗುತ್ತಾನೆ. ಹಾಗಾಗಿ ಅವನಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಅದು ಅತ್ಯಂತ ಸೂಕ್ತ ಸಮಯ. ಸೋಲು ಹೊಸ ಜೀವನದ ಹಾದಿಗೆ ಹೆಬ್ಬಾಗಿಲು. ಸೋಲು ಅಂತರಾಳದೊಳಗಿಣುಕಿ ಪ್ರಯಾಣ ಮಾಡಲು ಪ್ರೇರೇಪಿಸಿ, ನಮಗೆ ಪಾಠ ಕಲಿಸಿ, ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ….ಆದ್ದರಿಂದ ನಾವು ವಂಚಿತರಾದಾಗ, ಸೋತಾಗ ಧನಾತ್ಮಕವಾಗಿ ತೆಗೆದುಕೊಂಡು ಇನ್ನಷ್ಟು, ಮತ್ತಷ್ಟು ದೃಢವಾಗಿ ನಿಲ್ಲುತ್ತಾ ನಗೆ ಚೆಲ್ಲುವ ಗುಣವನ್ನು ಬೆಳಸಿಕೊಳ್ಳಬೇಕು!!!