ಮಾಸ್ಕು , ಸ್ಯಾನಿಟೈಸರ್ರು ತಂದಿಟ್ಟಿದ್ದೀನಿ… ಆಫೀಸಿಗೆ ಹೋಗ್ತಾ ಮಾಸ್ಕ್ ಹಾಕ್ಕೊಂಡ್ ಸ್ಯಾನಿಟೈಸರ್ ಕೈಗೆ ಹಚ್ಚಿ ಉಜ್ಜಿಕೊಂಡು ಹೋಗೋದು ಮರೀಬೇಡ… ಅವಳು ಹೇಳಿದ್ಲು…
ಪಾತ್ರೆ ತೊಳೆಯುತ್ತಿದ್ದ ಅವಳ ಗಂಡ ಸೋಮ ಆಶ್ಚರ್ಯದಿಂದ ತಿರುಗಿ ನೋಡಿದ… ಏನೋ ಹೇಳಬೇಕೆಂದುಕೊಂಡಿದ್ದ ಮಾತು ಗಂಟಲಲ್ಲೇ ಉಳಿದು ಹೋಯಿತು… ಸಿಂಕಿನ ತುಂಬಾ ತುಂಬಿದ್ದ ಪಾತ್ರೆಗಳನ್ನೆಲ್ಲ ತೊಳೆದು ಅಡುಗೆಕಟ್ಟೆಯನ್ನೆಲ್ಲ ಒರೆಸಿ ಶುಚಿಗೊಳಿಸಿ… ಚಕಚಕನೆ ಮನೆ ಗುಡಿಸಿ ಒರೆಸಿ ಸ್ನಾನಕ್ಕೆ ಓಡಿದ…
ಎರಡೇ ನಿಮಷಕ್ಕೆ ಸ್ನಾನ ಮುಗಿಸಿ ಹೊರಬಂದು… ದೇವರುಗಳ ಮೇಲಿದ್ದ ಹಳೆಯ ಹೂಗಳನ್ನೆಲ್ಲ ತೆಗೆದು ಹಾಕಿ… ಫ್ರಿಜ್ಜಿನಿಂದ ಹೊಸ ಹೂ ತಂದು ದೇವರಿಗೇರಿಸಿ… ಬತ್ತಿ ಎಳೆದು ದೀಪ ಹಚ್ಚಿ… ಕಣ್ಣು ಮುಚ್ಚಿ ಕ್ಷಣಕಾಲ ನಿಂತು… ಗಂಧದ ಕಡ್ಡಿಗೆ ಬೆಂಕಿ ಸೋಕಿಸಿ ಘಮ್ಮೆನ್ನುವ ಕಡ್ಡಿಗಳನ್ನು ದೇವರ ಮೂತಿಗೆ ಹಿಡಿದು… ಎರಡು ಬಾಳೆಹಣ್ಣು ತುದಿ ಮುರಿದು ಅವನ ಮುಂದಿಟ್ಟು… ಕೈಮುಗಿದು… ಆಗಲೇ ಎಂಟೂವರೇ… ದೇವರೇ…

ರೂಮಿಗೆ ಓಡಿ ಬೀರುವಿನಿಂದ ಕೈಗೆ ಸಿಕ್ಕ ಬಟ್ಟೆಗಳನ್ನು ಎಳೆದುಕೊಂಡು ಟವಲ್ ಬಿಚ್ಚಿ ಬಿಸಾಕಿ ಪ್ಯಾಂಟ್ ಏರಿಸಿ ಶರ್ಟ್ ಒಳಕ್ಕೆ ಸಿಕ್ಕಿಸಿಕೊಂಡು ಬೆಲ್ಟು ಹಾಕುವ ಹೊತ್ತಿಗೆ ರೂಮಿಗೆ ಬಂದ ಅವಳು…
ನೋಡ್ರೀ ಇದು ತಿಂಡಿ , ಇದು ಲಂಚು , ಎರಡೂ ಬೇರೆ ಬೇರೆ ಬಾಕ್ಸ್ ಗೆ ಹಾಕಿದೀನಿ… ಇದು ಬಿಸಿ ನೀರು , ಸ್ವಲ್ಪ ಅರಿಶಿನ ಹಾಕಿದೀನಿ… ಇದು ಟೀ ಪ್ಲಾಸ್ಕು , ಜಿಂಜರ್ ಲೆಮನ್ ಟೀ … ಇದೆಲ್ಲಾನೂ… ನೋಡ್ರೀ ಇಲ್ಲೀ… ಈ ಬ್ಯಾಗ್ ಗೆ ಹಾಕಿಟ್ಟಿದೀನಿ… ತೊಗೊಂಡ್ ಹೋಗೀ… ಇದನ್ನೇ… ಕೇಳಿಸ್ಕೊಳಿ… ಇದನ್ನೇ ತಿನ್ನಬೇಕು… ಇದನ್ನೇ ಕುಡೀಬೇಕು… ಆ ಚಂಗುಲುಗಳ ಜೊತೆ… ಅದೇ ನಿಮ್ ಕೊಲೀಗ್ಸು … ಅವುಗಳ ಜೊತೆ ಅರರ್ಧ ಘಂಟೆಗೂ ಕಾಫಿ ಸಿಗರೇಟು ಅಂತ ಹೋಗಕ್ಕೂಡದು… ಸಂಜೆವರೆಗೂ ಎಷ್ಟು ಕಾಫಿ ಕುಡೀತೀರೋ ಅಷ್ಟನ್ನೂ ಆ ಪ್ಲಾಸ್ಕಿನ್ನಲ್ಲಿ ಹಾಕಿದೀನಿ… ಗಂಟಲಿಗೆ ಸುರಕೊಳ್ಳಿ… ಅರ್ಥ ಆಯ್ತಾ…

ಇದು ಕೈಗವುಸು… ಹಾಕ್ಕೊಳಿ… ಮಾಕ್ಸು ಮುಖದ ಮೇಲೇ ಇರಬೇಕು ಗೊತ್ತಾಯ್ತಲ್ಲ… ಏನೇ ಕಾರಣಕ್ಕೂ ತೆಗೀಬೇಡಿ… ಆ ಚಪ್ಪಲಿ ಬಿಸಾಡಿಬಿಟ್ಟೆ… ಇರೋ ಷೂ ಹಾಕ್ಕೊಂಡ್ ಹೋಗಿ… ಇನ್ಮೇಲೆ ಷೂ ನೇ… ಅಫೀಸಿಗೆ ಬರೋ ಲೇಡೀಸ್ ಹತ್ರ ಜೊಲ್ಲು ಸುರುಸ್ಕೊಂಡ್ ಮಾತಾಡ್ಬೇಡಿ… ಮಾಸ್ಕು ಒದ್ದೆಯಾಗುತ್ತೆ…
ಅರ್ಥ ಆಯ್ತೆನ್ರೀ… ನಿಮ್ಮನ್ನ ಕಟ್ಕೊಂಡ್ ಏಗಿದ್ದೇ ಬಂತು… ಅದೇನು ಅಂತ ಹೆತ್ತಳೋ ನಿಮ್ಮಮ್ಮ… ರವಷ್ಟು ಬುದ್ದೀನೂ ಕಲಿಸಲಿಲ್ಲ… ನನ್ನ ಕರ್ಮ…

ಸೋಮ… ಒಂದೇ ಒಂದು ಮಾತಾಡದೆ ಇವೆಲ್ಲವನ್ನೂ ಬಿಟ್ಟ ಬಾಯಿ ಬಿಟ್ಟಂತೆ ಕಣ್ಣುಗಳನ್ನು ಅಗಲಿಸಿ ನೋಡುತ್ತಲೇ ಇದ್ದ… ಏನಿವತ್ತು ಇವಳು… ಇಷ್ಟು ವರ್ಷಗಳಲ್ಲಿ ಯಾವತ್ತೂ ಇಲ್ಲದ ಜತನ ಜೋಪಾನ… ಅದೂ ನನ್ನ ಮೇಲೆ… ಹದಿನೈದು ದಿನಕ್ಕೊಮ್ಮೆ ಎರಡೇ ಪೆಗ್ಗು ಕುಡಿದು ಬಂದರೂ ಸಿಂಹಿಣಿಯಂತೆ ಘರ್ಜಿಸಿ ಒಳಕ್ಕೇ ಬಿಟ್ಟುಕೊಳ್ಳದವಳು… ಇವತ್ತು… ಇಷ್ಟೊಂದು ನನ್ನ ಮೇಲೆ ಅಕ್ಕರೆಗೆ ಕಾರಣವೇನು…
ಈ ಎಲ್ಲಾ ಸರ್ಕಸ್ಸನ್ನು ತನ್ನ ರೂಮಿನಿಂದಲೇ ನೋಡುತ್ತಿದ್ದ ಎದೆಯೆತ್ತರ ಬೆಳೆದ ಮಗ ನಗುತ್ತಾ ಹೊರಬಂದ…
ಏನೋ ಇದು…
ಕರೋನ… ಡ್ಯಾಡ್… ಕರೋನ…
ಒಹೋ… ಅದೋ ವಿಷಯ… ನನಗೆ ಕರೋನ ವೈರಸ್ಸು ತಗುಲದೇ ಇರಲಿ ಅಂತ ನಿಮ್ಮಮ್ಮ ಇಷ್ಟು ಸೇವೆ ಮಾಡ್ತಾ ಇದಾಳೇನೋ… ಸೋಮನ ಹೃದಯ ತುಂಬಿ ಬಂದಿತ್ತು…

ಅಯ್ಯೋ ಅಲ್ಲಾ ಡ್ಯಾಡ್… ಅಷ್ಟೊಂದ್ ಸೀನೆಲ್ಲ ಏನಿಲ್ಲ… ಇಷ್ಟಕ್ಕೇ ಎಮೋಷನಲ್ ಆಗ್ಬೇಡಿ… ನಿಮಗೆ ಕರೋನ ಬಂದು… ನೀವು ಅದನ್ನ ಮನೆಗೆ ತಂದು ನಮಗೆಲ್ಲ ಅಂಟಿಸಿಬಿಟ್ಟೀರಾ ಅಂತ ಪ್ರಿಕಾಶನ್ನು ಅಷ್ಟೇ… ವಿಕಟಾಟ್ಟಹಾಸ ಮಾಡಿದ ಮಗ…
ನೋಡ್ರೀ… ಒಂದ್ ಮಾತು ತಿಳ್ಕೊಳ್ಳಿ… ಇಷ್ಟೆಲ್ಲಾ ಮಾಡಿದೀನಿ… ಎಲ್ಲ ಆದಮೇಲೂ… ಒಂದ್ ಸಣ್ಣ ಕೆಮ್ಮು ಬಂದ್ರೂ ನಿಮಗೆ ವಿಕ್ಟೊರಿಯಾ ವಾಸ ಗ್ಯಾರಂಟಿ ತಿಳ್ಕೊಳ್ಳಿ… ಒಳಗಿನಿಂದಲೇ ಗುಟುರು ಹಾಕಿದಳು…
ಜೋಲು ಮೊರೆ ಹೊತ್ತ ಸೋಮ…. ಬರಲೇನೋ ಮಗನೇ …
ಸೀ ಯು ಡ್ಯಾಡ್… ಹ್ಯಾಪಿ ಫಾದರ್ಸ್ ಡೇ…

ಅದು ಬೇರೆ ಕೇಡು ಆ ಮೂತಿಗೆ… ಒಳಗಿನಿಂದ ಅವಳು ಗೊಣಗಿದ್ದು ಕೇಳಿತು…
ಯಾವ್ ಹ್ಯಾಪಿ ನೋ… ಯಾವ್ ಫಾದರ್ರೋ… ಅಯೋಮಯನಾದ ಸೋಮ ಸ್ಕೂಟರ್ ಸ್ಟಾರ್ಟ್ ಮಾಡಿದ…