” ನಾಳೆಯಿಂದ ಕೆಲಸಕ್ಕೆ ಬೇಡ” .ಹೇಳಿದೆ ಕೆಲಸದಾಕೆ ಆನಂದಿಗೆ
“ಯಾಕ್ ಏನ್ ತಪ್ಪು ಮಾಡಿದ್ದೇನೆ” ಅಕ್ಕ ?? ತಿರುಗಿ ಕೇಳಿದಳು
“ನೀನೇನು ತಪ್ಪು ಮಾಡಿಲ್ಲ” ,.ಆದರೆ ನಾಳೆಯಿಂದ ನೀನು ಬರುವುದು ಬೇಡ .ನಿರ್ಧಾರದ ಧ್ವನಿಯಲ್ಲಿ ಹೇಳಿದೆ
“ಕೆಲಸಕ್ಕೆ ಬರಲಿಲ್ಲ ಎಂದರೆ ಬೈಯುತ್ತಿದ್ದ ನೀವು ಇಂದು ಕೆಲಸಕ್ಕೆ ಬರಬೇಡ ಎನ್ನುತ್ತಿದ್ದೀರಲ್ಲಾ” .?? ಗಲಿಬಿಲಿಯಿಂದ ಕೇಳಿದಳು
“ಕರೋನಾ ಎಂಬ ವೈರಸ್ಸು ಬಂದಿದೆ ಅದು ನಮ್ಮ ದೇಹದೊಳಕ್ಕೆ ಬಂದರೆ ಪ್ರಾಣಕ್ಕೆ ಅಪಾಯವಿದೆ ..ಅಲ್ಲಲ್ಲಿ ಪೊಲೀಸರು ಲಾಠಿ ಹಿಡಿದು ಓಡಾಡುತ್ತಿದ್ದಾರೆ ನೋಡಿಲ್ಲವೇ?? ನೀನು ಮನೆ ಬಿಟ್ಟು ಈಚೆಗೆ ಬಂದರೆ ನಿನ್ನನ್ನು ಹಿಡಿದು ಒಳಕ್ಕೆ ಹಾಕುತ್ತಾರೆ” .ಎಂದು ಹೆದರಿಸಿದೆ

“ಈ ಏರಿಯಾದಲ್ಲಿ ಇಪ್ಪತ್ತು ವರ್ಷದಿಂದ ಇದ್ದೇನೆ . ಪೊಲೀಸ್ ನವರು ನನಗೆ ಗೊತ್ತು .ನನ್ನ ಗಂಡನ ಕಾಫಿ ಅಂಗಡಿಗೆ ಬರುತ್ತಾರೆ” !!
“ಅವರು ನನ್ನನ್ನು ಹಿಡಿದುಕೊಳ್ಳುವುದಿಲ್ಲ ಹೆದರಿಕೊಳಬೇಡಿ”
ಎಂದು ನನಗೆ ಧೈರ್ಯ ಹೇಳಲು ಬಂದಳು .
“ನೋಡು ನಾಳೆಯಿಂದ ಮಿಲಿಟರಿಯವರು ಸಹ ಬರುತ್ತಾರಂತೆ ಅವರೇನು ನಿನಗೆ ಪರಿಚಯವೇ” ಎಂದೇ

“ನನ್ನ ಅಳಿಯ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವುದು” ಎಂದಳು ..
“ಹೌದಾ” !!!ಆಶ್ಚರ್ಯದಿಂದ ಕೇಳಿದೆ
“ಹೌದು ಮಿಲಿಟರಿ ಹೋಟೆಲನಾಗೆ ಕೆಲಸ ಮಾಡುವುದು” !!
ನನಗೆ ಬಂದ ನಗುವನ್ನು ತಡೆಯುತ್ತಾ
” ತುಂಬಾ ಅಪಾಯಕಾರಿ ವೈರಾಣು ಹಾಗೂ ಚೀನಾದಿಂದ ಬಂದಿದೆ” ಎಂದು ನಿಧಾನವಾಗಿ ವಿವರಿಸಲು ಪ್ರಯತ್ನಿಸಿದೆ
“ಅದೇನೊ ಚೈನಾ ಪ್ರಾಡಕ್ಟ್ ಅಂತಾರಲ್ಲ ,ಅದೆನಾಕ್ಕ”?ಎಂದಳು
“ಇದು ಒಂದು ರೀತಿ ಹಾಗೆಯೇ, ಈಗ ನಮ್ಮ ದೇಶದ ತುಂಬಾ ಹರಡುತ್ತಿದೆ .ನಮ್ಮ ರಾಜ್ಯಕ್ಕೂ ಬಂದಿದೆ” ಎಂದೆ
ಅವಳು ವಿಚಿತ್ರವಾಗಿ ನನ್ನನ್ನೇ ನೋಡುತ್ತಿದ್ದಳು ,ನಂತರ
“ಎಲ್ಲೋ ಬಂದರೆ ನಾವು ಯಾಕೆ ಹೆದರಬೇಕು ?? ನಮ್ಮ ಬೆಂಗಳೂರಿಗೆ ಬಂದಿಲ್ಲವಲ್ಲ ಬಿಡಕ್ಕ “ಎಂದಳು
ಬೆಂಗಳೂರೇನು ಅಮೆರಿಕದಲ್ಲಿಯೇ .!!!

ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಇರುವುದು ಎಂದು ಅರ್ಥ ಮಾಡಿಸಲು ವ್ಯರ್ಥ ಪ್ರಯತ್ನ ಪಟ್ಟೆ ನಂತರ ಅವಳಿಗೆ ವಿವರಿಸಿದೆ
“ಬೆಂಗಳೂರಿಗು ಈ ಕಾಯಿಲೆ ಬಂದಿದೆ “
“ಬೆಂಗಳೂರಿಗೆ ಬಂದಿದೆಯ?? ಎಂದು ಕಣ್ಣರಳಿಸಿ ಕೇಳಿದಳು, ನಂತರ ನಿಧಾನವಾಗಿ ಹೋಗಲಿ ಬಿಡಕ್ಕ ,ನಮ್ಮ ವಿಜಯ ನಗರಕ್ಕೇನು ಬಂದಿಲ್ಲವಲ್ಲ” ?ಎಂದಳು ಉದಾಸೀನವಾಗಿ
ಅದೊಂದು ಸಾಂಕ್ರಾಮಿಕ ರೋಗ ಎಲ್ಲರಿಗೂ ಹರಡಲು ತಡವೇನೂ ಆಗುವುದಿಲ್ಲ ಎಂಬುದನ್ನು ಇವಳಿಗೆ ಹೇಗಾದರೂ ಅರ್ಥ ಮಾಡಿಸಲೇ ಬೇಕು ಎಂದು ಪಟ್ಟು ಹಿಡಿದು
“ವಿಜಯನಗರಕ್ಕೆ ಸಹ ಬಂದಿದೆ ಹಾಗೂ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ .ನೀನು ಮನೆ ಬಿಟ್ಟು ಈಚೆ ಬಂದರೆ ನಿನಗೂ ಸಹ ಬರುತ್ತದೆ” ಎಂದು ಹೆದರಿಸಲು ಪ್ರಯತ್ನಿಸಿದೆ
ಅವಳು ಅಷ್ಟೇ ಧೈರ್ಯದಿಂದ ಹೇಳಿದಳು “
“ಅದು ನನಗೇನೂ ಮಾಡುವುದಿಲ್ಲ “!!!
ನಿನಗೆ ಏನೂ ಮಾಡುವುದಿಲ್ಲವಾ??
ಆಶ್ಚರ್ಯ ಬೆರೆತ ಧ್ವನಿಯಲ್ಲಿ ಕೇಳಿದೆ ಹೇಗೆ ಹೇಳುತ್ತೀಯ ??

“ನನಗೆ ಮೈ ಮೇಲೆ ದೇವರು ಬರುತ್ತದೆ !!!ಹಾಗಾಗಿ ಬೇರೆ ಯಾರು ಮೈಮೇಲೆ ಬರುವುದಿಲ್ಲ “.. ಎಂದು ಆತ್ಮವಿಶ್ವಾಸದಿಂದ ಹೇಳಿದಳು
ತಲೆ ಸುತ್ತಿ ಬೀಳುವುದೊಂದೇ ಬಾಕಿ ನನಗೆ !!!!