
ಸುತ್ತಲೂ ಸಮೃದ್ಧ ಹಸಿರಿನಿಂದ ಕಂಗೊಳಿಸುವ ಅರಣ್ಯ. ಸಾಲಾಗಿ ಮಲಗಿದ ಮದ ಗಜಗಳಂತೆ ಕಾಣುವ ಬೆಟ್ಟದ ಸಾಲು. ಬೆಳಗಿನಚುಮು ಚುಮು ಚಳಿಯನ್ನು ಲೆಕ್ಕಿಸದೆ ಆಗಸದಲ್ಲಿ ಸಾಲಾಗಿ ಹಾರುತ್ತಿರುವ ಬೆಳ್ಳಕ್ಕಿಯ ಸಾಲು. ಕದ್ರಿ ಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಿಂದ ಅಲೆ ಅಲೆಯಾಗಿ ತೇಲಿಬರುತ್ತಿರುವ ಘಂಟಾನಿನಾದ, ಆಗಷ್ಟೇ ಇಣುಕಿ ನೋಡುತ್ತಿದ್ದ ಸೂರ್ಯನ ಎಳೆಯ ಕಿರಣಗಳು… ಆ ಕ್ಷಣಕ್ಕೆ ಶಿವಪುರವೆಂಬ ಆ ಹಳ್ಳಿ ಸ್ವರ್ಗ ಸಮಾನವಾಗಿ ಕಾಣುತ್ತಿತ್ತು. ಆ ಪ್ರಕೃತಿಯ ರಮ್ಯ ಅದ್ಭುತ ಅಂದವನ್ನು ಕಾಣಲೆಂದೇ ತಣ್ಣನೆ ಕೊರೆಯುವ ಅಂತಹ ಚಳಿಯಲ್ಲಿ ಮಹಡಿಹತ್ತಿ ಕುಳಿತುಬಿಡುತ್ತಿದ್ದಳು ಸೇವಂತಿ.

ಸೇವಂತಿ… ಶಿವಪುರದ ನರಸಿಂಹರಾಯ ಮತ್ತು ಕಮಲಾದೇವಿಯವರ ಏಕೈಕ ಪುತ್ರಿ. ಸಾಕಷ್ಟು ಕೃಷಿ ಭೂಮಿಯನ್ನು ಹೊಂದಿದ್ದ ಸ್ಥಿತಿವಂತ ರೈತನಾಗಿದ್ದ ನರಸಿಂಹರಾಯತನ್ನ ಏಕಮಾತ್ರ ಪುತ್ರಿಯಾದ ಸೇವಂತಿಯನ್ನು ಅತೀವ ಪ್ರೀತಿಯಿಂದ ಸಾಕಿ ಬೆಳೆಸಿದ್ದರು. ತಂದೆ ತಾಯಿಗಳ ಅಕ್ಕರೆಯ ಆಸರೆಯಲ್ಲಿ ಬೆಳೆದ ಸೇವಂತಿ ಅಪ್ಸರೆಯರ ಅಂದವನ್ನೆಲ್ಲಾ ಎರಕ ಹೊಯ್ದಂತೆ ಬೆಳೆದು ನಿಂತಿದ್ದಳು. ಮುದ್ದಾದ ಮುಖ, ಚಂಚಲವಾದ ಕಣ್ಣುಗಳು, ಅರ್ಜುನನ ಎದೆಯೇರಿ ನಿಂತ ಬಿಲ್ಲಿನಂತೆ ಬಾಗಿದ ಹುಬ್ಬುಗಳು, ನಾಗರದ ನಾಟ್ಯವನ್ನೂ ನಾಚಿಸುವಂತೆ ಬೆಳೆದು ನಿಂತ ಅವಳ ಉದ್ದವಾದ ಜಡೆ, ಮಧುವನ್ನು ಉಕ್ಕಿ ಹರಿಸುವಂತಿದ್ದ ಅವಳ ಜೇನ್ದುಟಿಗಳು ನೀಳವಾದನಾಸಿಕ, ಮುಖದ ಮೇಲೆ ಲಾಸ್ಯವಾಡುತ್ತಿದ್ದ ಮುಂಗುರುಳು, ಯೌವ್ವನವೇ ತುಂಬಿ ನಿಂತಂತೆ ಉಬ್ಬಿ ನಿಂತ ಎದೆ, ಸಣ್ಣದಾದನಡು, ಅವಳ ಎತ್ತರದ ನಿಲುವಿಗೆ ತಕ್ಕಂತ ಮೈಮಾಟ, ಬೇಲೂರಿನ ಶಿಲಾ ಬಾಲಿಕೆಯರನ್ನು ಕಡೆದು ನಿಲ್ಲಿಸಿದ ಶಿಲ್ಪಿಯೇ ನಿಬ್ಬೆರಗಾಗಿ ನಿಲ್ಲುವಂತಹ ಅದ್ಭುತ ರೂಪ ಲಾವಣ್ಯ ರಾಶಿಯಾಗಿದ್ದ ಸೇವಂತಿ, ಅವಳು ರೂಪದಲ್ಲಿ ಗಂಧರ್ವಕನ್ನಿಕೆಯರನ್ನೇ ಮೀರಿಸುವಂತಿದ್ದರೂ ಓದಿನಲ್ಲಿ ಯಾವತ್ತಿಗೂ ಹಿಂದಿರಲಿಲ್ಲ, ಶಿವಪುರಕ್ಕೆ ಹತ್ತಿರದಲ್ಲಿಯೇ ಇದ್ದ ಪಟ್ಟಣದ ಕಾಲೇಜಿನಲ್ಲಿ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿಯನ್ನು ಪಡೆದಿದ್ದಳು ಸೇವಂತಿ.
‘‘ಸೇವಂತೀ… ಎಲ್ಲಿದ್ದೀಯಮ್ಮ’’ ಬೆಳಗಿನ ಚಳಿಯಲ್ಲಿ ನಡುಗುತ್ತಲೇ ಹೊರಗೆ ಬಂದ ಕಮಲಾದೇವಿ ಸೇವಂತಿಯನ್ನು ಕೂಗಿ ಕರೆದಿದ್ದಳು.

‘‘ಅಮ್ಮಾ, ನಾನಿಲ್ಲಿ ಮಹಡಿ ಮೇಲಿದ್ದೇನೆ’’ ಸೇವಂತಿಯ ಕೋಗಿಲೆಯ ಕಂಠ ಕೇಳಿ ಕಮಲಾದೇವಿ ತಲೆ ಎತ್ತಿ ಮಹಡಿಯತ್ತ ನೋಡುತ್ತಾ ಹೇಳಿದ್ದಳು.
‘‘ಅಯ್ಯೋ, ಈ ಚಳೀಲಿ ಅಲ್ಲಿ ಕೂತು ಏನ್ಮಾಡ್ತಿದ್ದೀಯಮ್ಮಾ, ನಾನೆಷ್ಟುಸಾರಿ ಹೇಳಿದರೂ ನೀನು ಕೇಳೋದೇ ಇಲ್ವಲ್ಲಾ, ಕೆಳಗಡೆ ಇಳಿದು ಬಾ’’ ಎಂದ ಕಮಲಾದೇವಿಯ ಮಾತಿಗೆ ನಗುತ್ತಲೇ ಕೆಳಗಿಳಿದು ಓಡೋಡಿ ಬಂದಿದ್ದಳು ಸೇವಂತಿ.
‘‘ಅಲ್ಲಮ್ಮಾ, ನಾನೆಷ್ಟು ಸಾರಿ ಹೇಳಿದ್ದೀನಿ.ಈ ಚಳೀಲಿ ಹೊರಗಡೆ ಬರ‍್ಬೇಡ ಅಂತ, ಆದರೂ ನೀನು ಈ ತಣ್ಣನೆ ಕೊರೆಯೋ ಚಳೀಲಿ ಮಹಡಿ ಹತ್ತಿ ಕುಳಿತು ಬಿಡ್ತೀಯಲ್ಲಾ, ಇಷ್ಟಕ್ಕೂ ಅಂತದ್ದೇನಿದೆ ಅಲ್ಲಿ. ’’ಕಮಲಾದೇವಿ ಮತ್ತೆ ಕೇಳಿದ್ದಳು. ಅವಳ ಮಾತಿಗೆ ಸೇವಂತಿ ನಗುತ್ತಾ ಉತ್ತರಿಸಿದ್ದಳು.
‘‘ಅಮ್ಮಾ, ಈ ಸುಂದರ ಪ್ರಕೃತಿ ಅಂದರೆ ನನಗೆ ತುಂಬಾ ಇಷ್ಟ. ಚಳಿ ಅಂತ ಒಳಗಡೆ ಹೊದಿಕೆ ಹೊದ್ದು ಮಲಗಿದರೆ ಈ ಅಂದವಾದಪ್ರಕೃತಿಯ ಸೊಬಗು, ಆ ಮಂಜು ಮುಸುಕಿದ ಬೆಟ್ಟದ ಅಂದ, ಹಕ್ಕಿಗಳ ಚಿಲಿಪಿಲಿನಾದ, ದೂರದಲ್ಲಿ ಹಾರಿರ‍್ತಿರೋ ಬೆಳ್ಳಕ್ಕಿ ಸಾಲು, ಇವೆಲ್ಲವನ್ನೂ ನೋಡುವ ಸೌಭಾಗ್ಯದಿಂದ ವಂಚಿತರಾಗ ಬೇಕಾಗುತ್ತದೆ. ಈ ರಮಣೀಯ ಪ್ರಕೃತಿಯ ಅಂದವನ್ನು ವರ್ಣಿಸುತ್ತಾ…’’
‘‘ಅಬ್ಬಾ ಸೇವಂತಿ ಇನ್ನು ನಿಲ್ಲಿಸಿ ಬಿಡು, ನೀನು ಚಿಕ್ಕವಳಿದ್ದಾಗಿನಿಂದಲೂ ಈ ಕಥೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಮಾತೆತ್ತಿದರೆ ಪರಿಸರ, ಪ್ರಕೃತಿ ಅಂತಿದ್ದೇನಿದೆಯೋ ಅದರಲ್ಲಿ? ನನಗಂತೂ ಈ ಕಾಡು, ಬೆಟ್ಟ, ಗುಡ್ಡಗಳನ್ನು ನೋಡಿ ನೋಡಿ ಸಾಕಾಗಿ ಹೋಗಿದೆ’’ ತುಸು ಬೇಸರ ಬೆರೆಸಿ ಹೇಳಿದ್ದಳು ಕಮಲಾದೇವಿ. ಅವಳ ಮಾತಿಗೆಸೇವಂತಿ ಮತ್ತೆ ನಕ್ಕು ಹೇಳಿದ್ದಳು.
‘‘ಅದೇ ಅಮ್ಮಾ, ತಿಳಿದವರು ಹೇಳ್ತಾರೆ, ನಾವು ಯಾವುದೇ ದೃಶ್ಯವನ್ನು ನೋಡಿದರೂ ಅದರಲ್ಲಿರುವ ಅಂದವನ್ನು ಸವಿಯಲು ನಮ್ಮಲ್ಲಿ ಅಂತಹ ದೃಷ್ಠಿಯಿರಬೇಕು ಅಂತ.’’
‘‘ಅಂದರೆ ನನಗೆ ಅಂತಹ ದೃಷ್ಠಿಯಿಲ್ಲ ಅಂತ ಪರೋಕ್ಷವಾಗಿ ಹೇಳ್ತಿದ್ದೀಯಾ?’’ ಕಮಲಾದೇವಿ ತುಸು ಮುನಿಸಿನಿಂದಲೇ ಕೇಳಿದ್ದಳು.
‘‘ನಾನೆಲ್ಲಿ ಹಾಗೆ ಹೇಳಿದೆನಮ್ಮಾ, ಆದರೆ ಒಂದು ಮಾತಂತೂ ಸತ್ಯ. ನಾವು ಒಂದು ದೊಡ್ಡ ಬಂಡೆಯನ್ನು ನೋಡಿದಾಗ ಅದು ಕಲ್ಲುಗುಂಡಿನ ತರಹ ಕಾಣುತ್ತದೆ. ಆದರೆ ಅದೇ ದೊಡ್ಡ ಕಲ್ಲು ಬಂಡೆಯನ್ನು ನೋಡಿದಾಗ ಒಬ್ಬ ಶಿಲ್ಪಿಯ ಮನದಲ್ಲಿ ಒಂದು ಸುಂದರವಾದ ವಿಗ್ರಹ ಮೂಡಿಬರುತ್ತದೆ. ಹಾಗಂತ ನಮ್ಮ ಪುಸ್ತಕಗಳಲ್ಲಿ ಬರೆದಿದೆ’’ ಹುಸಿ ನಗೆ ನಗುತ್ತಾ ತಾಯಿಯತ್ತ ಓರೆನೋಟ ಬೀರಿದ್ದಳು ಸೇವಂತಿ. ಅವಳ ಮಾತಿನ ಭಾವಾರ್ಥ ಅರಿವಾದವಳಂತೆ ಕಮಲಾದೇವಿ ಹುಸಿ ಕೋಪ ತೋರುತ್ತಾ ಸೇವಂತಿಯತ್ತ ನೋಡಿದ್ದಳು. ಅವಳು ಏನಾದರೂ ಹೇಳುವ ಮುನ್ನವೇ ಒಳಗಿನಿಂದ ನರಸಿಂಹರಾಯರ ದನಿ ಕೇಳಿ ಬಂದಿತ್ತು.

‘‘ಕಮಲಾ… ಎಲ್ಲಿದ್ದೀಯಾ?’’
‘‘ಹ್ಞುಂ, ನೋಡು, ಅಪ್ಪನಿಂದ ಬುಲಾವ್’’ ಸೇವಂತಿ ಮುಸಿಮುಸಿ ನಗುತ್ತಾ ಹೇಳಿದ್ದಳು.
‘‘ಬಂದೆ, ಇಲ್ಲೇ ಇದ್ದೀನಿ’’ ಕಮಲಾದೇವಿ ಹೇಳುವುದಕ್ಕೂ ನರಸಿಂಹರಾಯರು ಮೈತುಂಬ ಶಲ್ಯ ಹೊದೆದುಕೊಂಡು ಹೊರ ಬರುವುದಕ್ಕೂ ಸರಿ ಹೋಗಿತ್ತು.
‘‘ಇಲ್ಲಿ ಹೊರಗಡೆ ಚಳೀಲಿ ನಿಂತು ತಾಯಿ ಮಗಳಿಬ್ಬರೂ ಏನು ಮಾಡ್ತಿದ್ದೀರಿ. ಕಮಲಾ ನೀನು ಬಾ, ಒಂದಿಷ್ಟು ಬಿಸಿ ಬಿಸಿ ಕಾಫಿ ಮಾಡು’’ ಎಂದಿದ್ದರು.
‘‘ಹೌದಪ್ಪ, ನಾನೂ ಅಮ್ಮಂಗೆ ಅದನ್ನೇ ಹೇಳ್ತಿದ್ದೀನಿ. ಅಪ್ಪ ನಿದ್ದೆಯಿಂದ ಏಳುವ ಹೊತ್ತಿಗೆ ಕಾಫಿಸಿದ್ದ ಮಾಡು ಅಂತ’’ ಸೇವಂತಿ ಕೂಡಲೇ ಹೇಳಿದ್ದಳು. ಕಮಲಾದೇವಿ ಸೇವಂತಿಯತ್ತ ಹುಸಿ ಕೋಪ ತೋರುತ್ತಾ ಅವಳೆಡೆಗೆ ನೋಡಿದ್ದಳು.
‘‘ಹ್ಞುಂ, ಹೋಗಮ್ಮ ಬೇಗ ಕಾಫಿಮಾಡಿ ಅಪ್ಪನಿಗೆ ಕೊಡು. ಹಾಗೇನನಗೂಸ್ವಲ್ಪ’’, ಸೇವಂತಿ ಕಣ್ಣು ಮಿಟುಕಿಸುತ್ತಾ ಹೇಳಿದ್ದಳು.
‘‘ಸೇವಂತಿ, ಈಗ ನಿನ್ನ ಅಪ್ಪನಿಂದಾಗಿ ಪಾರಾದೆ ಇರಲಿ, ಒಳಗಡೆ ಕಾಫಿ ಕುಡೀಲಿಕ್ಕೆ ಬರ‍್ತೀಯಲ್ಲಾ,ಆಗ ಹೇಳ್ತೀನಿ’’ ಎನ್ನುತ್ತಾ ಕಮಲಾದೇವಿ ಒಳನಡೆದಿದ್ದರು.
ಮುಂದುವರೆಯುವುದು….
