ಹೀಗೆ… ಏಕನಾಥೇಶ್ವರಿ ದುರ್ಗದಲ್ಲಿ ನೆಲೆನಿಂತ ಮೇಲೆ ಚಿತ್ರಕಲ್ಲುದುರ್ಗ ಉತ್ತರೋತ್ತರ ಅಭಿವೃದ್ಧಿಯ ಫಲ ಕಾಣಲಾರಂಭಿಸಿತು… ಅಕ್ಕಪಕ್ಕದ ಸಣ್ಣಪುಟ್ಟ ಪಾಳೇಗಾರರೆಲ್ಲ ಮತ್ತಿ ತಿಮ್ಮಣ್ಣ ನಾಯಕರ ಶೌರ್ಯಕ್ಕೆ ಯುದ್ಧ ಚಾತುರ್ಯಕ್ಕೆ ಶರಣಾಗಲೇ ಬೇಕಾಯಿತು… ನಾಯಕರ ಎಡಬಲಗಳಂತಿದ್ದ ಜಡವಿ ಮತ್ತು ದಾದಯ್ಯ ನಾಯಕರ ಮುಂಚೂಣಿಯಲ್ಲಿ ಸೋಲುಣ್ಣುವ ಮಾತೇ ಬರಲಿಲ್ಲ… ವರಸೆಯಲ್ಲಿ ಮತ್ತಿ ತಿಮ್ಮಣ್ಣ ನಾಯಕರ ಚಿಕ್ಕಪ್ಪನಾದ ಜಡವಿ ನಾಯಕ ಒಂದೊಳ್ಳೆ ಸಲಹೆ ಕೊಟ್ಟ…

ನೋಡು ತಿಮ್ಮಣ್ಣ… ದಾದಯ್ಯ ನಾಯಕನಿಗೆ ಇನ್ನೂ ಹದಿವಯಸ್ಸು… ಹುಲಿಯಂಥ ಗುಂಡಿಗೆ… ಚಿರತೆಯ ವೇಗ… ಸಿಂಹದ ಗಾಂಭೀರ್ಯ… ಪೈಲ್ವಾನನಂಥ ಮೈಕಟ್ಟು ಎಲ್ಲವೂ ಹದವಾಗಿ ಮೇಳೈಸಿವೆ… ಇದೀಗ ತಾನೇ ನಾವು ಗೆದ್ದು ವಶಪಡಿಸಿಕೊಂಡ ಉಚ್ಚಂಗಿ ದುರ್ಗದವನಾದರೂ ನಿನ್ನ ಮೇಲಿಟ್ಟಿರುವ ಅವನ ನಿಷ್ಠೆ ಎಣಿಸಲಸದಳ… ಎದೆ ಮಟ್ಟಕ್ಕೆ ಬೆಳೆದು ನಿಂತಿರೋ ನಿನ್ನ ಮಗಳು ಹೊನ್ನ ನಾಗತಿ ಯನ್ನ ಅವನಿಗೆ ಕೊಟ್ಟು ಮದುವೆ ಮಾಡಿ ಉಚ್ಚಂಗಿ ದುರ್ಗಕ್ಕೇ ಅವನನ್ನು ಉಸ್ತುವಾರಿಯನ್ನಾಗಿ ನೇಮಿಸಿಬಿಡು… ಅವನ ಕನಸಿನಲ್ಲೂ ನೆನೆಸಿರದ ಈ ಒಂದು ಉಪಕಾರಕ್ಕೆ ಋಣಿಯಾಗಿ ಕೊನೆ ಉಸಿರಿರೋವರೆಗೂ ನಿನ್ನ ತಲೆ ಕಾಯೋದು ಖಂಡಿತಾ…
ಸರಿಯೆಂದು ತೋರಿತು ತಿಮ್ಮಣ್ಣ ನಾಯಕರಿಗೆ… ಸರಿಯಾದ ದಿನ ನೋಡಿ ಮಗಳನ್ನು ಧಾರೆ ಎರೆದು ಕೊಟ್ಟ ನಾಯಕರು ದಾದಯ್ಯನಿಗೆ ಉಚ್ಚಂಗಿ ದುರ್ಗವನ್ನೇ ಬಳುವಳಿಯಾಗಿ ನೀಡಿ ಮದುಮಕ್ಕಳನ್ನು ಹರಸಿ ಕಳಿಸಿಕೊಟ್ಟರು…

ಕಾಲ ಸರಿಯುತ್ತಿತ್ತು… ದುರ್ಗದ ಬಂಡೆಗಲ್ಲುಗಳ ಮೇಲೆ ಸಾಕಷ್ಟು ಮಳೆ ಸುರಿಯಿತು… ಕಾಲನ ಹಗಲು ಮುಗಿಯುತ್ತ ಬಂದು ನಿಧಾನವಾಗಿ ಸಂಜೆಗತ್ತಲಾವರಿಸುತ್ತಿತ್ತು… ಅರಸನ ಮಗಳೆಂಬ ದುರಹಂಕಾರದಿಂದ ಗಂಡನಾದ ದಾದಯ್ಯನನ್ನು ದಿನವೂ ಹೀಗಳೆಯುತ್ತಾ… ಜರಿಯುತ್ತಾ… ಅಪಮಾನಿಸುತ್ತಲೇ ಬಂದ ಹೊನ್ನ ನಾಗತಿಯನ್ನು ಬಹಳ ಕಷ್ಟ ಪಟ್ಟೇ ಸಹಿಸಿಕೊಂಡಿದ್ದ ದಾದಯ್ಯ ನಾಯಕ… ದಿನಗಳೆದಂತೆ ಗಂಡ ಹೆಂಡಿರ ಉಂಡು ಮಲಗಿಯೂ ಮುಗಿಯದೇ ಬೆಂಕಿ ಹತ್ತಿಕೊಂಡು ಅದರ ಕಾವು ಉಚ್ಚಂಗಿ ದುರ್ಗ ದಾಟಿ ಚಿತ್ರದುರ್ಗಕ್ಕೆ ಬಂದು ಮುಟ್ಟಿತು… ದುರಂತವೆಂಥದೋ ನೋಡಿ… ಮಗಳ ಮೇಲಣ ತಿಮ್ಮಣ್ಣ ನಾಯಕರ ವ್ಯಾಮೋಹ ಅವರ ವಿವೇಕವನ್ನೂ ಜ್ಞಾನದ ಕಣ್ಣುಗಳನ್ನೂ ಮುಚ್ಚಿ ಹಾಕಿಬಿಟ್ಟಿತ್ತು… ಆಗಬಾರದಾಗಿದ್ದ ಅನಾಹುತವೊಂದು ಆವತ್ತು ಅವರಿಂದ ಆಗಿ ಹೋಯಿತು…
ಹಬ್ಬಕ್ಕೆಂದು ಧುಮುಗುಡುತ್ತಲೇ ದುರ್ಗಕ್ಕೆ ಬಂದಿದ್ದ ಅಳಿಯನನ್ನು ಕರೆದು ನಿಲ್ಲಿಸಿಕೊಂಡ ನಾಯಕರು… ನೋಡು ದಾದಯ್ಯ… ಉಚ್ಚಂಗಿ ದುರ್ಗಕ್ಕೆ ನೀನು ಮೇಲುಸ್ತುವಾರಿಯಷ್ಟೇ… ಅರಸನಲ್ಲ… ನೆನಪಿರಲಿ… ಮಗಳ ಕಣ್ಣಲ್ಲಿ ನೀರು ಕಂಡರೆ ಹೊಸಕಿ ಬಿಟ್ಟೇವು ನಿನ್ನ… ಅರಸನ ಮಗಳಾದ ಅವಳಿಗೆ ಅಹಂಕಾರವು ಸಹಜಭೂಷಣ… ಅರಿತು ಬೆರೆತು ತಗ್ಗಿ ಬಗ್ಗಿ ಬಾಳೋದನ್ನ ನೀನೇ ರೂಢಿಸಿಕೋ… ತಪ್ಪೇನು… ದೊಡ್ಡ ಸಂಬಂಧ… ಅದೃಷ್ಟ ನಿನ್ನದು… ಅಚಾನಕ್ಕಾಗಿ ಒಲಿದು ಬಂದಿದೆ…
ನಾಯಕರ ಮಾತನ್ನು ಅರ್ಧದಲ್ಲೇ ತಡೆದ ದಾದಯ್ಯ… ನಾಯಕರೇ… ನಾನು ಬಯಸಿ ಬಯಸಿ ನಿಮ್ಮ ಮಗಳನ್ನು ವರಿಸಿದೆನೇನು… ನೀವೇ ಅಪ್ಪ ಮಕ್ಕಳೇ ನನ್ನನ್ನೂ ನನ್ನ ಸಾಹಸವನ್ನೂ ಮೆಚ್ಚಿದಿರಿ… ಕರೆಸಿ ಲಗ್ನಕ್ಕೆ ಒಪ್ಪಿಸಿದಿರಿ… ಧಾರೆ ಎರೆದು ಕೊಟ್ಟಿರಿ… ಇವಳ ದುರಹಂಕಾರಕ್ಕೆ ನಿಮ್ಮ ಧಾಷ್ಟ್ಯಕ್ಕೆ ನನ್ನ ಬದುಕು ಮೂರಾಬಟ್ಟೆಯಾಯಿತಲ್ಲ… ಯಾರು ಹೊಣೆ ಇದಕ್ಕೆ… ಉಚ್ಚಂಗಿಗೂ ಚಿತ್ರಕಲ್ಲಿಗೂ ಮಧ್ಯೆ ಮದಗಜದಂತೆ ಸ್ವತಂತ್ರವಾಗಿ ವಿಹರಿಸಿಕೊಂಡಿದ್ದ ನನ್ನನ್ನು ಈ ಅಹಂಕಾರೀ ಹೆಣ್ಣಿನ ಕೈಗೆ ಕೊಟ್ಟು ನಾಶಪಡಿಸಿಬಿಟ್ಟಿರಿ… ನನ್ನ ಆಂತರ್ಯದ ನೋವಿನ ಕಾವಿನಿಂದ ನಾನು ದಹಿಸಿಹೋಗಿದ್ದೇನೆ… ಇಷ್ಟು ಮಾತ್ರ ತಿಳಿದುಕೊಳ್ಳಿ… ಇಷ್ಟೆಲ್ಲಾ ಅಪಮಾನಿತನಾದರೂ ನಾನು ನಿಮ್ಮ ನಿಷ್ಠ ಸೇನಾಧಿಪತಿ… ನನ್ನ ಸೂಲು ಇರೋವರೆಗೂ ನಿಮ್ಮ ತಲೆ ಕಾಯುತ್ತೇನೆ…
ಕಣ್ಣಂಚಿನಲ್ಲಿ ನೀರು ತುಂಬಿಕೊಂಡ ದಾದಯ್ಯ ಅಲ್ಲಿಂದ ಹೊರಹೋಗುವ ಅದೇ ಸಮಯಕ್ಕೆ ಸರಿಯಾಗಿ… ಅವನು ದುರ್ಗದ ಕೋಟೆಯ ಹೊಸ್ತಿಲಿನ ಮೇಲೆ ತನ್ನ ಎಡಗಾಲಿಟ್ಟು ನಿಂತ…
ಅವನು ಕಾಲಯಮ…
ನಾಯಕರ ಅಂತಿಮ ನಿರ್ಗಮನಕ್ಕೆ ದುರ್ಗ ಮೂಕ ಸಾಕ್ಷಿಯಾಗಲಿತ್ತು…