ಇತ್ತ… ತಿಮ್ಮಣ್ಣ ನಾಯಕರ ಸುಖಸಂಸಾರವೆಂಬ ಅಡಿಪಾಯದ ಒಂದೊಂದೇ ಕಲ್ಲುಗಳು ಕುಸಿಯುತ್ತಿದ್ದರೆ… ಅತ್ತ ವಿಜಯನಗರದ ಅರಸರ ಸ್ಥಿತಿ ಇದಕ್ಕಿಂತ ಹೀನಾಯವಾಗಿತ್ತು… ಪಾಲನೆ ಮಾಡುತ್ತಿದ್ದ ರಂಗರಾಯನ ದೌರ್ಬಲ್ಯವನ್ನು ಕಂಡುಕೊಂಡ ಬಹುಮನಿ ಸುಲ್ತಾನರು ಮೇಲಿಂದ ಮೇಲೆ ದಂಡೆತ್ತಿ ಬಂದು ಹಂಪಿಯನ್ನು ನುಂಗಿ ಹಾಕಲು ಹೊಂಚು ಹಾಕುತ್ತಿದ್ದರು… ಕಿಚಾಯಿಸುತ್ತಿದ್ದರು… ತಿವಿಯುತ್ತಿದ್ದರು… ರಂಗರಾಯನನ್ನು ಅಪಮಾನಿಸುತ್ತಿದ್ದರು… ರೋಸಿ ಹೋಗಿದ್ದ ರಂಗರಾಯ ಕೊನೆಗೊಮ್ಮೆ ತನ್ನ ಸೇನಾಪತಿಗೆ ಹೇಳಿ ಕಳಿಸಿದ…
ಅವನು ಮತ್ಯಾರೂ ಅಲ್ಲ… ಸಾಳುವ ನರಸಿಂಗರಾಯ…
ಏನೋ ಹೇಳಿಕಳಿಸಿದಿರಲ್ಲ…
ಈ ಬಹುಮನಿಗಳ ಉಪಟಳ ಮಿತಿಮೀರಿದೆ… ನಾವು ತಿರುಗಿ ಬೀಳಲೇ ಬೇಕು…
ನಾವು ಅಂದ್ರೆ…
ಅಂದ್ರೆ ನಾವೇ… ಇನ್ಯಾರು… ನಾವೇ ಸೈನ್ಯ ತಕ್ಕೊಂಡ್ ಸೀದಾ ಗುಲಬರ್ಗಾಕ್ಕೆ ಹೋಗಿ ಅವರನ್ನು ಮಟ್ಟ ಹಾಕಿ ಬರಬೇಕು…
ಹೋಗೋರು ಯಾರು…
ಇನ್ಯಾರು… ನೀನೇ… ಸೇನಾಪತಿ ನೀನೇ ತಾನೇ…

ಹೌದು… ಆದ್ರೆ ನಾನ್ ಹೋಗಲ್ಲ…
ಹೋಗೋದಿಲ್ಲ ಅಂದ್ರೆ ಹೋಗೋದಿಲ್ಲ ಅಷ್ಟೇ…
ನಿನ್ ಹೆಸರು ಬದಲಾಯಿಸಿಕೊ…
ಸಾಳುವ ನರಸಿಂಗರಾಯ ಅಲ್ಲ… ಸೋಲುವ ನರಸಿಂಗರಾಯ ಅಂತ… ಥೂ… ನಿನ್ನ ಜನ್ಮಕ್ಕೆ…
ಇಷ್ಟಕ್ಕೆ ಯಾಕೆ ಬೇಸರಿಸಿಕೊಳ್ಳುತ್ತೀರೀ… ನಿಮಗೆ ಈಗ ಏನು… ಗುಲ್ಬರ್ಗದ ಮೇಲೆ ದಂಡೆತ್ತಿ ಹೋಗಬೇಕು ಅಲ್ಲವೇ…
ಹೌದು…
ಒಬ್ಬ ಇದಾನೆ… ಲಡಾಯಿ ಅಂದ್ರೆ ಮಧ್ಯರಾತ್ರೀಲೂ ಎದ್ದು ಬರೋ ಭೂಪ…
ಯಾರದು …
ದುರ್ಗದ ಹುಲಿ ಮತ್ತಿ ತಿಮ್ಮಣ್ಣ ನಾಯಕ…
ಅಹ್… ಹೌದೇನು…
ಅಲ್ಲದೇ ಏನು… ನನ್ನ ಪಟ್ಟದ ಕುದುರೆಯನ್ನೇ ಅಪಹರಿಸಿದವನಲ್ಲವೇ ಅವನು… ತನ್ನ ಸುತ್ತಲ ಪಾಳೆಪಟ್ಟುಗಳನ್ನು ಬಡಿದು ಬಾಯಿಗೆ ಹಾಕಿಕೊಂಡಿದ್ದಾನೆ… ಯುದ್ಧಗಳೆಂದರೆ ಹಿಮ್ಮೆಟ್ಟುವ ಜಾಯಮಾನವೇ ಅಲ್ಲ ಅವನದು… ಹಾಗಾಗಿ ಅವನನ್ನೇ ಬಹುಮಾನಿಗಳ ವಿರುದ್ಧ ಎತ್ತಿ ಕಟ್ಟಿ ಗುಲ್ಬರ್ಗಾಕ್ಕೆ ಕಳಿಸೋಣ… ನಾವು ಹಂಪಿಯಲ್ಲಿ ಕುಳಿತೇ ಯುದ್ಧ ಗೆಲ್ಲಬಹುದು…

ಅಕಸ್ಮಾತ್ ಅವನು ಸೋತ ಅಂತಿಟ್ಟುಕೋ… ಆಗ…
ಬಹುಮನಿಗಳ ವಿರುದ್ಧ ಸೋಲೋದು ಅಂದ್ರೆ ಸಾವು ಅಂತಲ್ಲವೇ ಲೆಕ್ಕ… ಅವನು ಸೋತರೂ ಗೆದ್ದರೂ ನಮಗೇ ಉಪಯೋಗ…
ಹ್ಯಾಗಯ್ಯಾ…
ಗೆದ್ದರೆ… ಬಹುಮನಿಗಳ ಕಾಟದಿಂದ ಮುಕ್ತಿ… ಸೋತರೆ ತಿಮ್ಮಣ್ಣನ ಸಾವು… ಆಗ ನಾವು ಸಿರಿ ಸಂಪತ್ತಿನಿಂದ ಮೆರೆಯುತ್ತಿರುವ ಚಿತ್ರದುರ್ಗ ಮತ್ತು ಸುತ್ತಲ ಪಾಳೆಪಟ್ಟುಗಳನ್ನು ನುಂಗಬಹುದು… ಆ ಹಣದಿಂದ ಮತ್ತಷ್ಟು ಪಾಳೇಗಾರರನ್ನು ಎತ್ತಿ ಕಟ್ಟಿ ಬಹುಮನಿಗಳ ಮೇಲೆ ಬೀಳಬಹುದು… ಹ್ಯಾಗೆ…
ನೀನು ಸಾಳುವ ನರಸಿಂಗರಾಯ ಅಲ್ಲ… ನಸುಗುನ್ನಿ ನರಸಿಂಗರಾಯ… ಹಂಪಿಯ ಸರದಾರರಿಬ್ಬರೂ ದೊಡ್ಡದನಿಯಲ್ಲಿ ನಕ್ಕರು…
ಅದೇ ಸಮಯಕ್ಕೆ ದುರ್ಗದ ಸಂಪಿಗೆ ಸಿದ್ದೇಶ್ವರನಿಗೆ ಮಂಗಳಾರತಿ ಮಾಡುತ್ತಿದ್ದ ಪುರೋಹಿತರ ಕೈ ಸಣ್ಣಗೆ ಕಂಪಿಸಿ ಎಡಗಣ್ಣು ಪಟಪಟನೆ ಬಡಿದುಕೊಂಡು ಸುಮ್ಮನಾಯಿತು… ಛೇ… ಅಪಶಕುನವೇ ಎಂದುಕೊಂಡರು…
ಅದಾಗಿ ಮೂರನೇ ದಿನಕ್ಕೆ ಹಂಪಿಯಿಂದ ಕರೆ ಬಂತು…
ರಂಗರಾಯ ಅತ್ಯಂತ ವಿನಯವನ್ನು ನಟಿಸುತ್ತಾ ಹೇಳಿದ…
ನಾಯಕರೇ… ಸಂಕಷ್ಟದ ಸ್ಥಿತಿಯೊಂದು ಈಗ ಎದುರಾಗಿದೆ… ಸುಲ್ತಾನರ ಕಾಟವನ್ನು ತಡೆಯಲಾರದೆ ಬಳಲಿ ಬೆಂಡಾಗಿ ಹೋಗಿದ್ದೇವೆ… ಎದುರಿಸಲು ಸಮರ್ಥರ ಇಲ್ಲದಿರುವಿಕೆಯಿಂದ ಕಂಗಾಲಾಗಿ ಹೋಗಿದ್ದೇವೆ… ಈಗ ನಿಮ್ಮ ಸಹಾಯ ಬೇಕಾಗಿದೆ… ಅಕ್ಷರಶ ಹುಲಿಯಂತೆ ಕಾದುವ ನಿಮ್ಮ ಶೌರ್ಯದ ಮುಂದೆ ಸುಲ್ತಾನ ಸೋಲುವುದು ಖಚಿತ…
ಒಂದಿನಿತೂ ಹಿಂದೆ ಮುಂದೆ ಯೋಚಿಸದೇ ತಿಮ್ಮಣ್ಣ ನಾಯಕರು ರಣವೀಳ್ಯವನ್ನು ಸ್ವೀಕರಿಸಿ ಬಂದಷ್ಟೇ ವೇಗದಲ್ಲಿ ದುರ್ಗಕ್ಕೆ ಹಿಂದಿರುಗಿ ಬಂದು ಸೈನ್ಯ ಜಮಾವಣೆ ಮಾಡಿಕೊಂಡು ಗುಲ್ಬರ್ಗದ ಹೊರವಲಯದಲ್ಲಿ ಬೀಡು ಬಿಟ್ಟರು…
ದಿವಿನಾದ ಕೋಟೆ… ರಕ್ಕಸ ಗಾತ್ರದ ಕಲ್ಲುಗಳಿಂದ ಕಟ್ಟಿದ ಗೋಡೆಯ ಸುತ್ತಲೂ ಮೊಸಳೆಗಳೇ ತುಂಬಿಕೊಂಡಿದ್ದ ನೀರಿನ ಕಾಲುವೆ… ನಾಯಕರ ಬರುವನ್ನು ಗೂಢಚಾರರ ಮೂಲಕ ಅರಿತಿದ್ದ ಸುಲ್ತಾನ ದಿಡ್ಡೀ ಬಾಗಿಲು ಜಡಿದು ಒಳಗೆ ಆರಾಮಾಗಿ ಕೂತಿದ್ದ…
ಒಂದು ಸುಧೀರ್ಘ ಹೊರಸುತ್ತು ಕೋಟೆಯ ಸುತ್ತ ಬಂದ ನಾಯಕರು ಒಮ್ಮೆ ಕೂಲಂಕಷ ಪರಿಶೀಲಿಸಿದರು… ಸಣ್ಣ ಬಾಗಿಲಿನಿಂದ ಒಳಹೊಕ್ಕು ಬರುತ್ತಿದ್ದವರನ್ನು ಗಮನಿಸಿದರು… ಕೋಟೆ ಗೋಡೆಯ ಮೇಲೆ ನಿಂತಿದ್ದ ಕಾವಲಿನವರನ್ನು ನೋಡಿ ಹಿಂದಿರುಗಿ ತಮ್ಮ ಬಿಡಾರಕ್ಕೆ ಬಂದು ಕುಳಿತು…
ಜಡವೀ… ಮಾರುವೇಷದವರನ್ನು ಒಳಕ್ಕೆ ನುಗ್ಗಿಸಿ ಈ ಗುಲ್ಬರ್ಗಾದ ದೌರ್ಬಲ್ಯವೇನೆಂಬುದನ್ನು ಅರಿತು ಬಾ…
ಅಂತೆಯೇ… ಕಡವೆ ಮಾಂಸ ಮಾರುವವರ ವೇಷದಲ್ಲಿ ಒಳಹೊಕ್ಕ ಇಬ್ಬರು ದುರ್ಗದ ಸೈನಿಕರ ಕಣ್ಣಿಗೆ ಎದ್ದು ಕಾಣುವಂತೆ ಹರವಿಕೊಂಡು ನಿಂತಿತ್ತು ಅದು…
ಏನದು….