ಅಲ್ಲಿ ಅರಳಿ ನಿಂತಿತ್ತು… ಒಂದು ಕೆರೆ… ಸಾಕಷ್ಟು ವಿಶಾಲವಾಗಿತ್ತು… ಹೆಚ್ಚು ಕಮ್ಮಿ ಕೋಟೆಯ ಆವರಣದ ಮಧ್ಯದಲ್ಲೇ ಇದ್ದ ಕೆರೆ ಗುಲ್ಬರ್ಗಾದ ಜೀವನಾಡಿ… ಇದೇ ಕಾರಣಕ್ಕೆ ಸುಲ್ತಾನ ನಿಷ್ಚಿಂತೆಯಿಂದ ಸಾಕಷ್ಟು ಆಹಾರ ಪದಾರ್ಥಗಳನ್ನು ಒಟ್ಟು ಮಾಡಿಕೊಂಡು ಕೋಟೆಯ ಬಾಗಿಲುಗಳನ್ನು ಮುಚ್ಚಿ ಕುಳಿತಿದ್ದ…
ಒಹೋ ಕೆರೆಯೇ… ಹ್ಮ್ಮ್… ಇರಲಿ… ಇಗೋ ಇಲ್ಲಿ ಕಾಣುತ್ತಿರುವ ಮರಗಳನ್ನು ಕಡಿದು ತಂದು ಒಂದು ಭಾಗದ ಕಂದಕವನ್ನು ಮುಚ್ಚಿ ಹಾಕಿ… ಕೋಟೆ ಹತ್ತೋಣ… ಜಡವಿ ತನ್ನ ಸೈನಿಕರಿಗೆ ಆಜ್ಞಾಪಿಸಿದ… ಎರಡು ದಿನ ಕಳೆಯಿತು… ದುರ್ಗದ ಸೈನಿಕರು ಸಲೀಸಾಗಿ ಓಡಾಡುವ ಹಾಗೆ ಮರಗಳನ್ನು ಕಡಿದು ತಂದು ಹಾಕಿ ತಯಾರು ಮಾಡಿದರು…
ಕಂದಕಗಳನ್ನು ಹಾಗೂ ಹೀಗೂ ದಾಟಿಕೊಂಡು ಕೋಟೆ ಹತ್ತಲು ಹೋದ ಅವರಿಗೆ ಮೇಲಿನಿಂದ ಧೊಪದೊಪನೇ ಕೆಂಡದುಂಡೆಗಳು ಬಿದ್ದವು… ಮೈ ಕೈ ಸುಟ್ಟುಕೊಂಡು ವಿಕಾರವಾಗಿ ಅರಚುತ್ತಾ ಕೆಳಕ್ಕೆ ಬಿದ್ದ ಸೈನಿಕರ ಮೇಲೆ ಕಾದ ಎಣ್ಣೆಯ ಅಭಿಷೇಕ… ಸುಟ್ಟು ಕರಕಲಾಗಿ ಹೋದರು ಬಡಪಾಯಿಗಳು…
ಅವುಡುಗಚ್ಚಿದರು ತಿಮ್ಮಣ್ಣ ನಾಯಕರು… ಅದನ್ನು ನಿಲ್ಲಿಸು ಜಡವಿ… ಅನ್ಯಾಯವಾಗಿ ನಮ್ಮ ಹುಡುಗರು ಪ್ರಾಣ ಕಳಕೊಳ್ಳೋದು ಬ್ಯಾಡ… ಸುಲ್ತಾನನಿಗೆ ಎಲ್ಲಿ ಹೊಡೀಬೇಕು ಅನ್ನೋದು ನನಗೆ ಗೊತ್ತು… ಒಂದ್ ನಾಲಕ್ ಜನ ಆಚಾರಿಗಳನ್ನ ಕರೆಸಿ…
ಬಂದು ನಿಂತ ಮರಗೆಲಸದ ಆಚಾರಿಗಳಿಗೆ ತಮಗೇನು ಬೇಕು ಅನ್ನೋದನ್ನ ಸ್ಪುಟವಾಗಿ ಹೇಳಿದರು… ಮತ್ತೂ ಒಂದೆರಡು ದಿನ ಕಳೆಯಿತು… ಇಪ್ಪತ್ತು ಅಡಿ ಉದ್ದದ ಬೃಹತ್ ಸೌಟಿನಂಥ ಕವಣೆಯಂಥ ಸಾಧನವೊಂದು ತಯಾರಾಗಿ ನಿಂತಿತು… ಬಹಳ ತೃಪ್ತಿಯಿಂದ ಅದರ ಮೈ ಸವರಿದ ನಾಯಕರು ಅಲ್ಲೇ ಹೇರಳವಾಗಿ ಬಿದ್ದಿದ್ದ ಮಾಧ್ಯಮ ಗಾತ್ರದ ಬಂಡೆಗಲ್ಲೊಂದನ್ನು ತರಿಸಿ ಅದಕ್ಕೆ ಕಟ್ಟಿಸಿದರು…

ಮುನ್ನೂರು ಜನ ಸೈನಿಕರು ಆದರ ಕುತ್ತಿಗೆಗೆ ಹಗ್ಗ ಕಟ್ಟಿ ಬಲುಕಷ್ಟದಿಂದ ಹಿಂದಕ್ಕೆ ಎಳೆದು ಕಟ್ಟಿ ನಿಲ್ಲಿಸಿದರು… ತಿಮ್ಮಣ್ಣ ನಾಯಕರು ಅದರ ಬಿಗುವನ್ನೊಮ್ಮೆ ಪರೀಕ್ಷಿಸಿ…
ಹರ ಹರ ಮಹಾದೇವ್…
ಬಂಡೆಯಂಥ ಕವಣೆ ಕಲ್ಲು ಶತ್ರು ಸೈನಿಕರು ನೋಡನೋಡುತ್ತಿದ್ದಂತೆ ಕೋಟೆಯನ್ನೂ ದಾಟಿಕೊಂಡು ರೊಯ್ಯನೆ ಹಾರಿ ಊರ ಧೊಪ್ಪೆಂದು ಬಿತ್ತು… ಬೆಚ್ಚಿಬಿದ್ದ ಸುಲ್ತಾನ ಏನಾಯಿತೆಂದು ನೋಡುವಷ್ಟರಲ್ಲಿ ಇನ್ನೊಂದು ಮತ್ತೊಂದು ವಿಷ ಸವರಿದ ಸೊಪ್ಪು ಸದೆಯ ಉಂಡೆ… ಬೆಂಕಿಯುಂಡೆಗಳು ಒಂದರ ಹಿಂದೊಂದು ಹಾರಿ ಹಾರಿ ಬಂದು ಧ್ವಂಸಗೊಳಿಸತೊಡಗಿದವು… ಇಳಿಸಂಜೆಯಾಗುವಷ್ಟರಲ್ಲಿ ಅರ್ಧ ಊರು ಝರ್ಜರಿತವಾಗಿ ಹೋಗಿತ್ತು…
ಒಳಗೆ ದಿಕ್ಕೆಟ್ಟ ಸುಲ್ತಾನ… ಹೊರಗೆ ಹಸನ್ಮುಖೀ ತಿಮ್ಮಣ್ಣ ನಾಯಕರು…
ಸದ್ದಿಲ್ಲದೇ ಬಿಳಿ ಬಾವುಟ ಹಿಡಿದು ಬಂದ ಸುಲ್ತಾನ ಸಂಧಿ ಮಾಡಿಕೊಂಡು ಬಿಟ್ಟ… ಒಬ್ಬೇ ಒಬ್ಬ ಸೈನಿಕನನ್ನೂ ಬಲಿ ಕೊಡದೆ ಯುದ್ಧ ಗೆದ್ದ ನಾಯಕರು ತಮ್ಮ ಅಷ್ಟೂ ಪಡೆಯೊಂದಿಗೆ ದುರ್ಗಕ್ಕೆ ಹಿಂದಿರುಗಿದರು…
ದುರ್ಗದ ಬಾಗಿಲಲ್ಲೇ ವೀರೋಚಿತ ಸ್ವಾಗತ… ಸಂಪಿಗೆ ಸಿದ್ದೇಶ್ವರ… ಏಕನಾಥೇಶ್ವರಿ ಸೇರಿದಂತೆ ಎಲ್ಲ ಗುಡಿ ಗುಂಡಾರಗಳಲ್ಲೂ ವಿಶೇಷ ಪೂಜೆ… ಊರಿಗೆಲ್ಲ ಹಬ್ಬ… ಸಂಸಾರದ ಜಂಜಡಗಳಲ್ಲಿ… ಮಗಳು ಅಳಿಯನ ಎಂದಿಗೂ ಮುಗಿಯದ ಜಗಳದ ಕಾವಿಗೆ ಬೆಂದುಹೋಗಿದ್ದ ನಾಯಕರ ಮನಸ್ಸಿಗೆ ಬಹಳ ಕಾಲದ ನಂತರ ಒಂದು ಸಾಂತ್ವನ ದೊರೆತಿತ್ತು… ಆದರೆ ಬಹಳ ಕಾಲ ಆ ನೆಮ್ಮದಿ ಉಳಿಯೋದಿಲ್ಲ ಅನ್ನೋದು ಅವರಿಗಾದರೂ ಹ್ಯಾಗೆ ಗೊತ್ತಾಗಬೇಕು…
ಯುದ್ಧ ಗೆದ್ದ ಸುದ್ದಿ ಕೇಳಿ ಉಗುಳು ನುಂಗಿದ ಸಾಳುವ ನರಸಿಂಗರಾಯ… ಮುಖವಿಲ್ಲದ ಮುಖ ಹೊತ್ತುಕೊಂಡು ಹೋಗಿ ರಂಗರಾಯನ ಮುಂದೆ ನಿಂತ…
ಏನೂ… ನಾಯಕ ಸೋತು ಹೋದನೇ…
ಇಲ್ಲ… ಗೆದ್ದು ಬಂದಿದ್ದಾನೆ…
ಮತ್ತೇ… ನಿನ್ ಮುಖಾ ಯಾಕೋ ಒದೆಸಿಕೊಂಡು ಬಂದ ಹಾಗಿದೆ…
ಅಂಥಾ ಬಹುಮನಿ ಸುಲ್ತಾನನನ್ನೇ ನೀರು ಕುಡಿದಷ್ಟು ಸುಲಭವಾಗಿ ಗೆದ್ದ ನಾಯಕ ನಾಳೆ ದಿನ ನಿಮ್ಮನ್ನೂ ಅಟಕಾಯಿಸಿಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ಏನು…
ಹಾಗೇನು… ರಂಗರಾಯನ ಮುಖದಲ್ಲೂ ಕಳವಳ ಕಾಣಿಸಿತು…
ಅಲ್ವೇ ಮತ್ತೇ… ಯೋಚಿಸಿ ನೋಡಿ… ಈಗ ತಿಮ್ಮಣ್ಣ ನಾಯಕನಿಗೆ ನಿಮ್ಮ ದೌರ್ಬಲ್ಯ ಗೊತ್ತಾಗಿ ಹೋಗಿದೆ… ನಾಳೆ ದಂಡೆತ್ತಿ ಬಂದು ಹಂಪೆಯನ್ನೂ ವಶಪಡಿಸಿಕೊಂಡು ನಿಮ್ಮನ್ನೂ ನನ್ನನ್ನೂ ಕೈಲಾಸಕ್ಕೆ ಕಲಿಸೋದಂತೂ ನಿಶ್ಚಿತ… ರಂಗರಾಯನ ಮನಕ್ಕೆ ವಿಷ ಹಾಕಿದ ನರಸಿಂಗರಾಯ…

ಏನು ಮಾಡೋಣ ಅಂತೀಯಾ…
ಕೂತಲ್ಲಿಂದ ಎದ್ದು ಬಳಿಗೆ ಸಾರಿದ ನರಸಿಂಗರಾಯ ರಂಗರಾಯನ ಕಿವಿಯಲ್ಲೇನೋ ಪಿಸುಗುಟ್ಟಿದ…
ಬೇರೆ ದಾರಿ ಇಲ್ಲ… ರಂಗರಾಯನ ಮನ ಹೇಳಿತು…
ಅದಾಗಿ ಹದಿನೈದು ದಿನಕ್ಕೆ ಹಂಪಿಯಿಂದ ಕರೆ ಬಂತು… ಅಕ್ಷರಶ ಆಕಾಶದಲ್ಲೇ ತೇಲುತ್ತಿದ್ದ ತಿಮ್ಮಣ್ಣ ನಾಯಕರು ಜಡವಿಯನ್ನು ಕರೆದು…
ನೋಡು ಜಡವೀ … ಅರಸರಿಂದ ಕರೆ ಬಂದಿದೆ… ಅದ್ದೂರಿ ಸನ್ಮಾನ ನಮಗಾಗಿ ಕಾದಿದೆ… ನಡೆ ಹೋಗಿದ್ದು ಬರೋಣ…
ನಾಯಕರೇ ಈ ಬಾರಿ ದಾದಯ್ಯನನ್ನೂ ಕರೆದೊಯ್ಯೋಣ… ಎಷ್ಟೇ ಮನಸ್ತಾಪಗಳಿದ್ದರೂ ಅವನು ಸ್ವಾಮಿ ನಿಷ್ಠ… ತಮ್ಮ ಕಾವಲಿಗೆ ಅವನೇ ಸರಿ… ಪ್ರಾಣ ಕೊಟ್ಟಾದರೂ ತಮ್ಮನ್ನು ರಕ್ಷಿಸ ಬಲ್ಲ ಛಾತಿ ಅವನಿಗಿದೆ…
ಥೂ… ಈ ಜನ್ಮಕ್ಕೆ ಅವನ ಮುಖ ನೋಡೋದು ಬ್ಯಾಡ ಜಡವೀ… ನಾವಿಬ್ಬರೇ ಹೋಗೋಣ… ಮಿತಿಮೀರಿದ ಆತ್ಮವಿಶ್ವಾಸದಿಂದ ಹೇಳಿದರು ತಿಮ್ಮಣ್ಣ ನಾಯಕರು…
ಎಲ್ಲ ಸಿದ್ದವಾಯಿತು… ದುರ್ಗದಿಂದ ಹೊರಬಿದ್ದ ಜಡವಿಯೂ ತಿಮ್ಮಣ್ಣ ನಾಯಕರೂ ಒಂದೆರಡು ಮೈಲು ದೂರ ಹೋಗಿರಬಹುದೇನೋ… ಗಕ್ಕನೆ ಕುದುರೆ ನಿಲ್ಲಿಸಿದ ಜಡವಿ…
ಏನಾಯ್ತೋ…
ನಾಯಕರೇ… ಒಂದು ಪ್ರಮಾದವಾಗಿ ಹೋಗಿದೆ…
ಏನು…
ಹೊರಡೋ ಸಂಭ್ರಮದಲ್ಲಿ ಏಕನಾಥೇಶ್ವರಿಯ ದರ್ಶನಾಶೀರ್ವಾದವನ್ನೇ ಪಡೆಯಲಿಲ್ಲ ತಾವು…
ನಾಯಕರ ಬುದ್ಧಿ ಮಂಕಾಗಿತ್ತು… ಬಿಡೋ… ಪರವಾಗಿಲ್ಲ… ಬಂದ ಮೇಲೆ ಪಡಕೊಂಡರಾಯ್ತು… ನಡೀ ಈಗ ಹೊರಡು…
ಇನ್ನು ಈ ಜನುಮದಲ್ಲೇ ದುರ್ಗಕ್ಕಿನ್ನು ತಾವು ವಾಪಸ್ಸು ಬರುವುದಿಲ್ಲ ಅನ್ನೋದು ನಾಯಕರಿಗೆ ತಿಳಿಯಲಿಲ್ಲ… ಏಕೆಂದರೆ ಕಾಲಯಮ ಅರ್ಧ ಮೈಲು ಹಿಂದೆ ಅವರನ್ನು ಇನ್ನೊಂದು ಕುದುರೆಯಲ್ಲಿ ಹಿಂಬಾಲಿಸುತ್ತಿದ್ದ…