‘‘ಹಾಯ್ ಸೀಮಾ,ಇತ್ತೀಚೆಗೆ ತುಂಬಾ ಅಪರೂಪ ಆಗಿ ಬಿಟ್ಟಿಯಲ್ಲಾ.’’
ಅಜಯ್ ತನ್ನ ಕೂಲಿಂಗ್ ಮೂಗಿನ ಮೇಲಿಳಿಸಿ ಅದೊಂದು ತೆರನಾಗಿ ನೋಡುತ್ತಾ ಕೇಳಿದ್ದ. ಅವನಮಾತಿಗೆ ಸೀಮಾ ಕಣ್ಣು ಮಿಟುಕಿಸುತ್ತಾ ಹೇಳಿದ್ದಳು.
‘‘ಅಪರೂಪ ಅಂತೇನಿಲ್ಲ, ಹೀಗೇ… ಒಂದಷ್ಟು ಬ್ಯುಸಿ’’
‘‘ಬ್ಯೂಸೀನಾ… ಓಕೆ, ಈಗಲೂ ಎಂಗೇಜಾ ಅಥವಾ ಫ್ರೀ ನಾ.’’
‘‘ನೋ ನೋ, ಈಗ ಅಂತಹ ಎಂಗೇಜ್ಮೆಂಟ್ಸ್ ಏನೂ ಇಲ್ಲ, ಇವತ್ತೆಲ್ಲ ಆಲ್ಮೋಸ್ಟ್ಫ್ರೀ .’’
‘‘ಹಾಗಿದ್ರೆ ಕಾರು ರೆಡಿ ಇದೆ, ನಮ್ಮ ಸ್ನೇಹಿತರೆಲ್ಲಾ ಸೇರಿ ಅರೇಂಜ್ ಮಾಡಿರೋ ಪಾರ್ಟಿ ಇದೆ, ನಿನಗೆ ಇಷ್ಟವಾಗೋದಾದ್ರೆ ಬಂದು ನಮ್ಮೊಂದಿಗೆ ಜಾಯಿನ್ ಆಗಬಹುದು, ಏನಂತೀಂಯಾ? ’’ಅಜಯ್ ತನ್ನ ಕಣ್ಣುಗಳನ್ನು ಸೀಮಾಳ ತುಂಬಿದ ಎದೆಯ ಮೇಲೇನೆಟ್ಟು ಕೇಳಿದ್ದ. ಸೀಮಾ ಅದರತ್ತ ಅಷ್ಟು ಗಮನ ಕೊಡದೆ ಆತುರದಿಂದ ಹೇಳಿದ್ದಳು.
‘‘ಅನ್ನೋದೇನು, ನಿಮ್ಮ ಸ್ನೇಹಿತರೆಲ್ಲಾ ಸೇರಿ ಪಾರ್ಟಿ ಅಂತ ಶುರು ಮಾಡಿದರೆ ಅದರ ಮಜಾನೇ ಬೇರೆ ನಡಿ ನಡಿ, ಅಂದ್ಹಾಗೆ ಕಾರು ಎಲ್ಲಿದೆ’’ ಎಂದಾಗ ಅಜಯ್ ನ ಕಣ್ಣುಗಳಲ್ಲಿ ವಿಚಿತ್ರ ಸಂತೋಷ ಮಿನುಗಿತ್ತು. ಅವನು ತಡಮಾಡದೆ ಹೇಳಿದ್ದ.
‘‘ಓಕೆ ಕಮಾನ್, ಕಾರನ್ನು ಆ ಕಡೆ ಪಾರ್ಕ್ಮಾಡಿದ್ದೇನೆ’’ ಎನ್ನುತ್ತಾ ಕಾರಿನ ಕೀ ತಿರುಗಿಸುತ್ತಾ ಅತ್ತ ಕಡೆಗೆ ನಡೆದಿದ್ದ. ಸೀಮಾ ಅವನನ್ನು ಹಿಂಬಾಲಿಸಿದ್ದಳು. ಅಜಂಯ್ ರಸ್ತೆಯನ್ನು ದಾಟಿ ಕಾರು ನಿಲ್ಲಿಸಿದ್ದೆಡೆಗೆ ತಲುಪಿದ್ದ. ಕಾರಿನಲ್ಲಿ ಅದಾಗಲೇ ಬೀನಾ ಕುಳಿತಿದ್ದಳು. ಅಜಯ್ ನ ಜೊತೆಗೆ ಸೀಮಾ ಕೂಡಾ ಬಂದದ್ದನ್ನು ಕಂಡು ಅವಳಿಗೆ ಕಸಿವಿಸಿಯಾಗಿತ್ತು. ಅವಳು ಕೋಪದಿಂದ ಮುಖ ತಿರುಗಿಸಿದ್ದಳು. ಸೀಮಾಳಿಗೂ ಅವಳನ್ನು ಕಂಡರೆ ಉರಿದು ಹೋಗುತ್ತಿತ್ತು. ಅದೊಂದು ದಿನ ಅಜಯನೇ ನೀಡಿದ್ದ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಸೀಮಾ ಮತ್ತು ಬೀನಾ ಯಾವುದೋ ಕ್ಷುಲ್ಲಕ ವಿಷಯಕ್ಕೆ ಜಗಳಕ್ಕೆ ಬಿದ್ದು ಬಿಟ್ಟಿದ್ದರು. ಕೊನೆಗೆ ಅದು ಯಾವ ಹಂತ ತಲುಪಿತ್ತೆಂದರೆ ಸೀಮಾ ಮತ್ತು ಬೀನಾ ಇಬ್ಬರೂ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡು ನೆಲದ ಮೇಲೆ ಬಿದ್ದು ಒಬ್ಬರ ಮೇಲೊಬ್ಬರು ಹೊರಳಾಡಿದ್ದರು. ಇಷ್ಟಾದರೂ ಅಲ್ಲಿ ನೆರೆದಿದ್ದ ಯಾರೊಬ್ಬರೂ ಇವರ ಜಗಳವನ್ನು ಬಿಡಿಸಲು ಮುಂದಾಗಿರಲಿಲ್ಲ. ಜೀನ್ಸ್ ತೊಟ್ಟ ತರುಣಿಯರಿಬ್ಬರ ಕದನ ಅವರೆಲ್ಲರಿಗೂ ಮನರಂಜನೆ ಒದಗಿಸುತ್ತಿತ್ತೆಂದು ಕಾಣುತ್ತದೆ. ಹೊಡೆದಾಡಿ, ಬಡಿದಾಡಿ, ಒಬ್ಬರ ಮೇಲೋಬ್ಬರು ಉರುಳಾಡಿ ಸುಸ್ತಾದ ಸೀಮಾ ಮತ್ತು ಬೀನಾ ಇಬ್ಬರೂ ಕೊನೆಗೆ ಬೈದಾಡಿ, ಶಪಿಸುತ್ತಾ ದೂರಾಗಿದ್ದರು. ಅಂದಿನಿಂದ ಸೀಮಾ ಮತ್ತು ಬೀನಾ ಇಬ್ಬರಿಗೂ ಒಬ್ಬರನ್ನೊಬ್ಬರಿಗೆ ಕಂಡರೆ ಆಗುತ್ತಿರಲಿಲ್ಲ.

ಅಜಯ್ ನ ಜೊತೆಗೆ ಸೀಮಾ ಬಂದದ್ದನ್ನು ಕಂಡು ಕಾರಿನಲ್ಲಿದ್ದ ಬೀನಾ ತಾನು ಕೋಪದಿಂದಲೇ ಕೇಳಿದ್ದಳು.
‘‘ಅಜಯ್, ನಾನಿಲ್ಲಿರೋದು ಗೊತ್ತಿದ್ದು ಇವಳನ್ಯಾಕೆ ಕರೆ ತಂದೆ, ಸರಿ, ನೀನು ಇವಳನ್ನೇ ಕರ್ಕೊಂಡು ಹೋಗು’’ ಎನ್ನುತ್ತಾ ಕಾರಿನಿಂದಿಳಿಯಲು ಮುಂದಾಗಿದ್ದಳು. ‘‘ಏಯ್ ಬೀನಾ, ನೀನು ಸುಮ್ಮನೆ ಕೂತ್ಕೋ, ಸೀಮಾ ಅಕಸ್ಮಾತ್ ಆಗಿ ಸಿಕ್ಕಿದಳು. ನಿಮ್ಮಿಬ್ಬರಿಗೂ ರಾಜಿ ಮಾಡಿಸಬೇಕು ಅಂತ ನಾನೇ ಕರ್ಕೊಂಡು ಬಂದೆ’’ ಎಂದಿದ್ದ ಅಜಯ್.
‘‘ಹ್ಞುಂ. ಇವಳ ಜೊತೆಗೆ ಎಂತ ರಾಜಿ, ಇವಳಿರೋದು ಗೊತ್ತಿದ್ದರೆ ನಾನು ನಿನ್ಜೊತೆ ಇರ್ತಾನೇ ಇರ್ಲಿಲ್ಲ’’ ಸೀಮಾ ಕೂಡಾ ಸಿಡುಕಿದ್ದಳು.
‘‘ಏಯ್ ನಿನ್ನ ಜೊತೆ ರಾಜಿಮಾಡ್ಕೋಬೇಕು ಅಂತ ಇಲ್ಯಾರೂ ಕಾದು ಕುಳಿತಿಲ್ಲ ಕಣೇ’’ ಬೀನಾ ತುಸು ಜೋರಿನಿಂದಲೇ ಹೇಳಿದ್ದಳು. ಅಲ್ಲಿ ಮತ್ತೆ ಅವರಿಬ್ಬರಿಗೂ ಜಟಾಪಟಿಯಾಗುವ ಲಕ್ಷಣಗಳು ಕಂಡು ಬಂದಾಗ ಎಚ್ಚೆತ್ತ ಅಜಯ್ ಅವರಿಬ್ಬರನ್ನು ಸುಮ್ಮನಿರಿಸಿ ಕಾರಿನಲ್ಲಿ ಕುಳಿರಿಸಿ ಕೊಂಡು ಹೊರಟಿದ್ದ.
ಮುಖತಿರುಗಿಸಿಕೊಂಡು ಸ್ಫೋಟಗೊಳ್ಳಲು ಸಿದ್ಧರಾಗಿ ಕುಳಿತಿದ್ದ ಸೀಮಾ ಮತ್ತು ಬೀನಾರನ್ನು ಹೊತ್ತ ಅಜಯನ ಕಾರು ಸಿಟಿ ದಾಟಿ ಹೈವೇಯಲ್ಲಿ ಓಡತೊಡಗಿತ್ತು. ಸುಮಾರು ಮುಕ್ಕಾಲು ಗಂಟೆಯ ಪ್ರಯಾಣದ ನಂತರ ಕಾಣಿಸಿತ್ತು ಕಲ್ಲಿನ ಬೋರ್ಡು… ಪಂಚವಿಲಾಸ್ ಎಸ್ಟೇಟ್!
ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತಿದ್ದ ಪಂಚವಿಲಾಸ್ ಎಸ್ಟೇಟ್ ಅನ್ನು ಅಜಯನ ತಂದೆ ‘‘ರಾಡ್ರಿಗ್ಸ್ರ್ಹೋನ’’ ಕೊಂಡು ಅಭಿವೃದ್ಧಿಪಡಿಸಿದ್ದರು. ಈಗ ಅದು ಅಜಯ್ ತನ್ನ ಸ್ನೇಹಿತರಿಗೆ ಆಗಾಗ ತನ್ನ ಸ್ನೇಹಿತರಿಗಾಗಿ ಪಾರ್ಟಿ ನೀಡುವ ಸ್ಥಳವಾಗಿ ಮಾರ್ಪಟ್ಟಿತ್ತು.
ಅಜಯನ ಕಾರು ನಿಧಾನವಾಗಿ ಎಸ್ಟೇಟ್ ನತ್ತ ತಿರುಗಿ ಮೈಯಿನ್ ಗೇಟ್ ದಾಟಿ ಒಳ ಪ್ರವೇಶಿಸಿತ್ತು. ಅಜಯನ ಸ್ನೇಹಿತರ ದಂಡು ಅದಾಗಲೇ ಒಳಗೆ ಜಮಾಯಿಸಿತ್ತು. ಸುಮಾರು ಮೂವತ್ತು ನಲವತ್ತರಷ್ಟಿದ್ದ ಪಡ್ಡೆ ಹುಡುಗ ಹುಡುಗಿಯರ ದಂಡು ಅಜಯನ ಕಾರನ್ನು ಕಂಡ ತಕ್ಷಣ ‘‘ಹೋ’’ ಎಂದು ಅರಚಿತ್ತು. ಅಜಯನ ಕಾರಿನಿಂದ ಸೀಮಾ ಮತ್ತು ಬೀನಾ ಇಳಿದಿದ್ದನ್ನು ಕಂಡು ಅಚ್ಚರಿ ಆಗಿತ್ತು.
ಅಜಂಯ್ ತಾನು ಕಾರಿನಿಂದಿಳಿದು ಸೀಮಾ ಮತ್ತು ಬೀನಾರೊಂದಿಗೆ ತನ್ನ ಸ್ನೇಹಿತರ ಗುಂಪನ್ನು ಸೇರಿಕೊಂಡಿದ್ದ. ಅವನು ಬರುವುದನ್ನೇ ಕಾಯುತ್ತಿದ್ದ ಸ್ನೇಹಿತರೆಲ್ಲರೂ ಅಲ್ಲಿದ್ದ ಐಷಾರಾಮಿ ಎಸ್ಟೇಟ್ ಹೌಸಿನಲ್ಲಿ ಪಾರ್ಟಿ ಶುರು ಹಚ್ಚಿಬಿಟ್ಟಿದ್ದರು. ಬಿಂಯರ್ ಬಾಟಲ್ಸ್, ಹಾಟ್ಲಿಕ್ರ್ಸ್, ದುಬಾರಿ ಸಿಗರೇಟುಗಳು ಅದರ ಜೊತೆಗೆ ಅಫೀಮು, ಗಾಂಜಾ, ಚರಸ್… ಎಲ್ಲವೂ ಅಜಯನ ಖರ್ಚಿನಲ್ಲಿ, ಯಾರಿಗೆ ಏನು ಬೇಕೋ, ಎಷ್ಟು ಬೇಕೋ ಅಷ್ಟನ್ನೂ ಯಾವುದೇ ನಿರ್ಬಂಧವಿಲ್ಲದೆ ಪಡೆಯ ಬಹುದಾಗಿತ್ತು.
ಮೊದಲೇ ಅರೆ ಬೆತ್ತಲೆ ಉಡುಪುಗಳಲ್ಲಿದ್ದ ತರುಣ ತರುಣಿಯರು ಅಜಂಯ್ ನೀಡಿದ ಸಮೃದ್ಧ ಪಾರ್ಟಿಯ ರುಚಿ ಸವಿಯ ತೊಡಗಿದಂತೆ ಹುಚ್ಚೆದ್ದು ಕುಣಿಯತೊಡಗಿದ್ದರು. ಇನ್ನಷ್ಟು ಬೆತ್ತಲಾಗುತ್ತಿದ್ದರು, ಕೆಲವರಂತೂ ಅಲ್ಲಿನ ಅಬ್ಬರದ ವಿದೇಶಿ ಪಾಪ್ ಸಂಗೀತಕ್ಕೆ ಕಾಲ, ಜ್ಞಾನ, ಮಾನಗಳ ಪರಿವೆಯಿಲ್ಲದೆ ಯದ್ವಾ-ತದ್ವಾ ಕುಣಿದಾಡುತ್ತಿದ್ದರು. ಆಗಲೇ ಮೈಕ್ ಹಿಡಿದ ಅಜಯ್ ಎಲ್ಲರ ನಡುವೆ ಪ್ರತ್ಯಕ್ಷನಾಗಿದ್ದ!

ಕೂಡಲೇ ಅಬ್ಬರದ ಪಾಪ್ ಮ್ಯೂಸಿಕ್ ನಿಂತಿತ್ತು. ಒಂದು ಕ್ಷಣ ನಿಶ್ಯಬ್ಧ ಎಲ್ಲವನ್ನೂ ಆವರಿಸಿಕೊಂಡಂತೆ ಭಾಸವಾಗಿತ್ತು. ಎಲ್ಲರೂ ಅರೆ ಮತ್ತಿನಲ್ಲಿಯೇ ಅಜಂಯ್ ನತ್ತ ನೋಡಿದರು, ಅಜಯ್ ಮೈಕ್ ಹಿಡಿದು ಅನೌನ್ಸ್ ಮಾಡಿದ್ದ.
‘‘ಡಿಯರ್ ಫ್ರೆಂಡ್ಸ್, ನಿಮಗೆಲ್ಲಾ ಈ ರೀತಿ ಆಗಾಗ ಪಾರ್ಟಿ ನೀಡುವುದು ನನಗೆ ತುಂಬಾ ಸಂತೋಷದ ವಿಚಾರ, ಸ್ನೇಹಿತರೆಲ್ಲಾ, ಹೀಗೆ ಒಟ್ಟಾಗಿ ಸೇರಿ ಎಂಜಾಯ್ ಮಾಡಿದರೆ ಎಂಜಾಯ್ ಮೆಂಟ್ ಅನ್ನುವ ಪದಕ್ಕೊಂದು ಅರ್ಥ ಬರುತ್ತದೆ, ಈ ಬಾರಿ ನಾನು ಕೊಡ್ತಿರೋ ಈ ಪಾರ್ಟಿಯಲ್ಲಿ ಒಂದು ವಿಶೇಷ ಕೂಡಾ ಇದೆ…’’ ಎಂದು ತುಸು ನಿಲ್ಲಿಸಿದ್ದ ಅಜಯ್.
‘‘ಏನದು?’’ ಕೆಲವರು ಕುತೂಹಲದಿಂದ ಕಿರುಚುತ್ತಿದ್ದರು. ಅಜಯ್ ಮುಂದುವರೆಸಿದ್ದ.
‘‘ಹಿಂದಿನ ಸಾರಿ ನಾನು ನೀಡಿದ ಪಾರ್ಟಿಯಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಸೀಮಾ ಮತ್ತು ಬೀನಾ ಇಬ್ಬರೂ ಜಗಳ ಮಾಡಿಕೊಂಡು ಮಾರಾಮಾರಿ ನಡೆಸಿಬಿಟ್ಟರು. ಈಗ ಈ ಪಾರ್ಟಿಯಲ್ಲಿ ಅವರಿಬ್ಬರನ್ನೂ ಒಂದುಗೂಡಿಸಬೇಕು. ಅವರನ್ನು ಹಾಗೆಂಯೇ ದ್ವೇಷದ ಬೆಂಕಿಂಯಲ್ಲಿ ಬೇಯಲು ಬಿಡಬಾರದು ಏನಂತೀರಿ?’’
‘‘ಹೌದು, ಹೌದು’’
‘‘ಹೌದು, ಸೀಮಾ ಮತ್ತು ಬೀನಾ ಇಬ್ಬರೂ ತಮ್ಮ ನಡುವಿನ ಕಹಿ ಅನುಭವವನ್ನು ಮರೆತು ಈ ದಿನ ಈ ಪಾರ್ಟಿಯಲ್ಲಿ ಅವರಿಬ್ಬರೇ ಪಾಪ್ ಸಂಗೀತಕ್ಕೆ ತಕ್ಕ ಹಾಗೆ ಕುಣಿಯಬೇಕು, ಸೀಮಾ ಅಂಡ್ ಬೀನಾ, ಪ್ಲೀಸ್ ಕಮಾನ್ ಅಜಯ್ ಹೇಳಿದ್ದ. ಅದಾಗಲೇ ಎರಡೆರಡು ಪೆಗ್ ಏರಿಸಿ, ಅಫೀಮು ಬೆರೆಸಿದ ಸಿಗರೇಟುಗಳನ್ನು ಕೈಯಲ್ಲಿಡಿದಿದ್ದ ಸೀಮಾ ಮತ್ತು ಬೀನಾ, ಅಜಯ್ ಮಾತುಗಳನ್ನು ಕೇಳಿ ಒಂದಷ್ಟು ತೂರಾಡುತ್ತಲೇ ಎದ್ದು ಬಂದಿದ್ದರು. ಅವರಿಬ್ಬರೂ ಬಂದಕೂಡಲೇ ಕಿವಿಗಡಚುವಂತೆ ರಾಕ್ ಮ್ಯೂಸಿಕ್ ಅಬ್ಬರಿಸಿತ್ತು. ಅದೇನನ್ನಿಸಿತೋ ಏನೋ ಸೀಮಾ ಮತ್ತು ಬೀನಾ ಇಬ್ಬರೂ ಆ ಸಂಗೀತದ ಅಬ್ಬರಕ್ಕೆ ತಕ್ಕಹಾಗೆ ಹೆಜ್ಜೆ ಹಾಕಿ ಕುಣಿಯತೊಡಗಿದ್ದರು. ಸುತ್ತ ನಿಂತಿದ್ದ ಉಳಿದವರು ಸ್ವಲ್ಪ ಹೊತ್ತು ಕೇಕೆ ಹಾಕಿ ಅವರನ್ನು ಪ್ರೋತ್ಸಾಹಿಸಿ, ನಂತರ ತಾವೂ ಅವರೊಂದಿಗೆ ಸೇರಿಕೊಂಡಿದ್ದರು.
ಬಹಳ ಹೊತ್ತು ನಡೆದ ರಾಕ್ ಸಂಗೀತದ ಕುಣಿತನಿಂತಾಗ ಕತ್ತಲಾವರಿಸಿ ಅದಾಗಲೇ ಬಹುಹೊತ್ತಾಗಿತ್ತು. ಮದ್ಯ ಅಫೀಮು ಗಾಂಜಾ ಸಿಗರೇಟಿನ ಪರಿಣಾಮ ಎಲ್ಲೆಲ್ಲೂ ಕಾಣುತ್ತಿತ್ತು. ಎಲ್ಲ ಪಡ್ಡೆ ಹುಡುಗರೂ ಹುಡುಗಿಯರೂ ಅಸ್ತವ್ಯಸ್ತವಾಗಿ ಬಿದ್ದುಕೊಂಡಿದ್ದರು. ಅಲ್ಲೊಬ್ಬ ಪ್ರಿಯಕರ ತನ್ನ ಪ್ರಿಯತಮೆಯ ಕಾಲನ್ನೇ ತುಟಿಯೆಂದು ಭಾವಿಸಿ ಲೊಚಲೊಚನೆ ಮುತ್ತಿಡುತ್ತಿದ್ದ. ಮತ್ತೊಂದು ಮೂಲೆಯಲ್ಲಿ ಸುಂದರ ತರುಣಿಯೊಬ್ಬಳು ಮತ್ತೊಬ್ಬ ತರುಣಿಯನ್ನು ತನ್ನ ಪ್ರಿಯಕರನೆಂದೇ ಭಾವಿಸಿ ಬಿಗಿದಪ್ಪಿ ಚುಂಬಿಸುತ್ತಿದ್ದಳು. ಯಾವುದೋ ಮೂಲೆಯಲ್ಲಿ ಒಂಟಿ ಕಣ್ಣು ತೆರೆದು ಕುಳಿತಿದ್ದ ರಹಸ್ಯ ಕ್ಯಾಮೆರಾ ಈ ಎಲ್ಲಾ ದೃಶ್ಯಗಳನ್ನು ಚಕಚಕನೆ ಕ್ಲಿಕ್ಕಿಸುತ್ತಿತ್ತು!

ಮುಂದುವರೆಯುವುದು….
– ಮ ನಾ ಕೃಷ್ಣಮೂರ್ತಿ ಗೌರಿಬಿದನೂರು