ಇತ್ತ… ದುರ್ಗದಲ್ಲಿ ನಿಧಾನವಾಗಿ ಆತಂಕದ ಕಾರ್ಮೋಡ ಹೆಪ್ಪುಗಟ್ಟ ತೊಡಗಿತು… ಹೋಗಿ ಒಂದು ವಾರವಾದರೂ ತಿಮ್ಮಣ್ಣ ನಾಯಕರಿಂದ ಯಾವುದೇ ಸುದ್ದಿ ಬಂದಿರಲಿಲ್ಲ… ಪ್ರಧಾನಿಗಳಿಗೇಕೋ ಸುಟ್ಟ ವಾಸನೆ ಬಂತು… ತಡ ಮಾಡಲಿಲ್ಲ… ಸೀದಾ ಹೋಗಿದ್ದೇ ಸಂಪಿಗೆ ಸಿದ್ದೇಶ್ವರನ ಮುಂದೆ ಕೈಜೋಡಿಸಿ ನಿಂತು ಪ್ರಶ್ನೆ ಕೇಳಿದ್ರು….
ಅವರೆಣಿಕೆ ತಪ್ಪಾಗಲಿಲ್ಲ… ಜಗನ್ನಿಯಾಮಕನ ಮುಂದೆ ನಿಂತ ಕೆಲವೇ ಕ್ಷಣಗಳಲ್ಲಿ ಎಡಭಾಗದ ಹೂವು ಟಪ್ಪನೆ ಕೆಳಕ್ಕೆ ಬಿತ್ತು… ಎಲ್ಲೋ ಏನೋ ಎಡವಟ್ಟಾಗಿದೆ… ನಾಯಕರು ಅಪಾಯದಲ್ಲಿದ್ದಾರೆ… ಒಡನೆಯೇ ತುರ್ತು ಸಭೆ ಕರೆದ ಪ್ರಧಾನಿಗಳು ಸುದೀರ್ಘವಾಗಿ ಚರ್ಚಿಸಿ ಬೇಹುಗಾರರನ್ನು ಹಂಪಿಗೆ ಅಟ್ಟಿದರು… ಸುದ್ದಿ ನಿಜವಾಗಿತ್ತು… ತಿಮ್ಮಣ್ಣ ನಾಯಕರೂ ಜಡವಿಯೂ ಹಂಪಿಯಲ್ಲಿಯೇ ಹೆಣವಾಗಿ ಹೋಗಿದ್ದರು…

ಧೃತಿಗೆಡಲಿಲ್ಲ ಪ್ರಧಾನಿಗಳು… ಅತೀ ಹತ್ತಿರದಲ್ಲೇ ಇದ್ದ ಒಂದು ಶುಭ ಮುಹೂರ್ತ ನೋಡಿ ತಿಮ್ಮಣ್ಣ ನಾಯಕರ ಮಗ ಓಬಣ್ಣ ನಾಯಕನಿಗೆ ಪಟ್ಟ ಕಟ್ಟಿದರು… ಒಲ್ಲದ ಮನದಿಂದ ಅಧಿಕಾರ ವಹಿಸಿಕೊಂಡ ಓಬಣ್ಣ ಅಪ್ಪನ ಮುಖ ನೋಡುವವರೆಗೂ ಸಿಂಹಾಸನ ಏರುವುದಿಲ್ಲವೆಂದು ಖಂಡ ತುಂಡವಾಗಿ ನುಡಿದ… ಅವನನ್ನು ಅವನ ದುಃಖದ ಸಮೇತ ಅಲ್ಲೇ ಬಿಟ್ಟ ಪ್ರಧಾನಿಗಳು ಒಂದಿಬ್ಬರು ಸರದಾರರೊಡನೆ ಖುದ್ದು ಹಂಪಿಗೆ ಹೊರಟರು… ಸೂಕ್ತ ಉಪಚಾರಗಳೆಲ್ಲ ಮುಗಿದ ಮೇಲೆ…
ನಮ್ಮ ತಿಮ್ಮಣ್ಣ ನಾಯಕರು ಇಲ್ಲಿಗೆ ಬಂದು ಹತ್ತು ದಿನಗಳಾದವು… ಅವರ ಸುದ್ದಿಯೇ ಇಲ್ಲ… ಅದನ್ನೇ ವಿಚಾರಿಸೋಣವೆಂದು ಬಂದೆವು…
ಯಾರು… ಯಾರೂ ಅಂದ್ರಿ… ಮತ್ತಿ ತಿಮ್ಮಣ್ಣ ನಾಯಕರೇ… ನಮ್ಮಲ್ಲಿಗೆ ಅವರು ಬಂದೇ ಇಲ್ಲವಲ್ಲ… ಕುತಂತ್ರಿ ಸಾಳುವ ನರಸಿಂಗರಾಯನ ಬಾಯಿಂದ ಸುಳ್ಳು ಸುಲಲಿತವಾಗಿ ಹರಿಯುತ್ತಿತ್ತು…

ಹೇ… ಎನ್ ಹೀಗಂತೀರೀ… ಹಂಪಿಗೆ ಹೋಗಿ ಸನ್ಮಾನ ಸ್ವೀಕರಿಸಿ ಬರ್ತೀನಿ ಅಂತ ದುರ್ಗ ಬಿಟ್ಟು ಹೋದೋರು ಹತ್ತು ದಿನ ಆಯ್ತಲ್ಲ… ಪ್ರಧಾನಿಗಳ ದನಿಯಲ್ಲಿ ಅಸಹನೆ…
ಹೌದು… ನಾವೂ ಸಹ ಅವರನ್ನೇ ಇದಿರು ನೋಡುತ್ತಿದ್ದೆವು… ಆದರೇ ಇಲ್ಲಿಗೆ ಬರಲೇ ಇಲ್ವಲ್ಲ… ನರಸಿಂಗರಾಯ ಸುಳ್ಳಿಗೆ ಹುಟ್ಟಿದಂತಿದ್ದ…
ಇವರ ಬಳಿ ಇನ್ನೂ ಮಾತಾಡಿ ಉಪಯೋಗವಿಲ್ಲವೆಂದು ಸ್ಪಷ್ಟವಾಗಿ ಅರಿವಾಗಿ ಹೋಯಿತು ಪ್ರಧಾನಿಗಳಿಗೆ… ಹ್ಹ… ಶೌರ್ಯಕ್ಕೂ ವೀರ್ಯಕ್ಕೂ ಹೆಸರಾದ ವಿಜಯನಗರವೀಗ ದ್ರೋಹಕ್ಕೂ ನಾಚಿಕೆಗೇಡಿತನಕ್ಕೂ ಹೆಸರಾಗಿ ನಿಂತಿದೆಯಲ್ಲ ಎನಿಸಿತು… ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಿರ್ಧರಿಸಿದವರೇ… ಎದ್ದು ಸೀದಾ ಹೊರಬಂದು ಹಂಪಿಯ ಹೆಬ್ಬಾಗಿಲನ್ನು ಕಾಯುತ್ತಿದ್ದ ಸೈನಿಕರ ಗುಂಪಿಗೆ ಬಂಗಾರದ ನಾಣ್ಯಗಳ ಗಂಟೊಂದನ್ನು ಕೊಟ್ಟು ಹೇಳಿದರು…
ಸಂಜೆಯೊಳಗೆ ನನಗೆ ನಮ್ಮ ತಿಮ್ಮಣ್ಣ ನಾಯಕರು ಬೇಕು ಅಷ್ಟೇ…
ಗಂಟನ್ನು ಸವರುತ್ತಾ ಗುಂಪು ತಲೆಯಾಡಿಸಿತು… ಆಗಲಿ…

ಮಧ್ಯರಾತ್ರಿ ಹನ್ನೆರಡರ ಹೊತ್ತಿಗೆ ಪ್ರಧಾನಿಗಳು ಇಳಕೊಂಡಿದ್ದ ಡೇರೆಯೊಳಕ್ಕೆ ಮೆಲ್ಲನೆ ಬಂದ ಗುಂಪು ತಾವು ಹೊತ್ತುಕೊಂಡು ಬಂದಿದ್ದ ಪೆಟ್ಟಿಗೆಯೊಂದನ್ನು ಇಳಿಸಿ ಹೊರಟು ಹೋಯಿತು…
ಲಗುಬಗೆಯಿಂದ ಪೆಟ್ಟಿಗೆಯನ್ನು ತೆರೆದು ನೋಡಿದ ಪ್ರಧಾನಿಗಳ ಮುಖದ ಪಸೆ ಆರಿಹೋಯಿತು…
ಅಲ್ಲಿ ನಿಶ್ಚಲವಾಗಿ ಮಲಗಿತ್ತು ತಿಮ್ಮಣ್ಣ ನಾಯಕರ ದೇಹ… ಅದಾಗಲೇ ಒಣಗಲಾರಂಭಿಸಿದ್ದ ಕಳೆಬರವನ್ನು ಹೆಚ್ಚಿಗೆ ಇಡಲಾರದೆಂಬುದನ್ನು ಅರಿತ ಪ್ರಧಾನಿಗಳು ನುರಿತ ವೇಗಿಗಳನ್ನು ದುರ್ಗಕ್ಕೆ ಕಳಿಸಿ… ಓಬಣ್ಣ ನಾಯಕನನ್ನು ತುಂಗಭದ್ರಾ ತೀರಕ್ಕೆ ಕರೆದುಕೊಂಡು ಬರುವಂತೆ ಅಜ್ಞಾಪಿಸಿ… ತಾವು ನಾಯಕರ ಶವದೊಂದಿಗೆ ನದೀ ತೀರವನ್ನು ಸೇರಿದರು…
ಮರುದಿನ ಸೂರ್ಯಾಸ್ತದ ಹೊತ್ತಿಗೆ… ಚಿತ್ರಕಲ್ಲುದುರ್ಗದ ಪಾಳೆಗಾರರ ವಂಶದ ಸ್ಥಾಪಕ ಮತ್ತಿ ತಿಮ್ಮಣ್ಣ ನಾಯಕರ ದೇಹ ಅಗ್ನಿಯಲ್ಲಿ ಲೀನವಾಗಿ ಹೋಯಿತು… ಭಾರವಾದ ಹೆಜ್ಜೆಗಳೊಂದಿಗೆ ಎಲ್ಲರೂ ದುರ್ಗಕ್ಕೆ ಹಿಂದಿರುಗಿದರು… ಆದರೆ ಅವನೊಬ್ಬ ಅಲ್ಲೇ ಧಗಧಗನೆ ಉರಿಯುತ್ತಿದ್ದ ಚಿತೆಯನ್ನೇ ದೃಷ್ಟಿಸುತ್ತಾ ನಿಂತಿದ್ದ…
ಅಘೋರಾ…

ಎಲ್ಲ ಬೂದಿಯಾಗಿ ಹೋದ ನಂತರ ಮೆಲ್ಲನೆ ಚಿತೆಯೊಳಕ್ಕೆ ಕೈಯಿಟ್ಟು… ನಾಯಕರ ಬೆನ್ನ ಮೂಳೆಯೊಂದನ್ನು ಹೊರತೆಗೆದು… ತನ್ನ ಜೋಳಿಗೆಯಲ್ಲಿಟ್ಟುಕೊಂಡು… ಸರಸರನೆ ಹಂಪಿಯ ಹೆಬ್ಬಾಗಿಲಿನತ್ತ ಬಂದು … ಸಮಯ ಕಾದು ಸೈನಿಕರು ಜೋಂಪು ಬೀಳುವ ಹೊತ್ತಿಗೆ ಆ ಬೆನ್ನ ಮೂಳೆಯನ್ನು ಹೆಬ್ಬಾಗಿಲಿನ ನೆಲಕ್ಕೆ ಬಡಿದು ಹುಗಿದುಬಿಟ್ಟು ಹಿಂದಕ್ಕೆ ತಿರುಗಿ ನೋಡದೇ ದುರ್ಗದ ಕಡೆಗೆ ನಡೆದುಬಿಟ್ಟ…
ಇತ್ತ ಅಂತಃಪುರದಲ್ಲಿ ಮೈಚೆಲ್ಲಿ ಮಲಗಿದ್ದ ನರಸಿಂಗರಾಯನಿಗೆ ಯಾರೋ ತನ್ನ ಕಪಾಲ ಚೆದುರಿ ಹೋಗುವಂತೆ ಚಟೀರನೇ ಬಾರಿಸಿದಂತೆ ಕೆಟ್ಟ ಕನಸು ಬಿದ್ದು ಧಡಕ್ಕನೆ ಎದ್ದು ಕುಳಿತ… ಗಂಟಲೆಲ್ಲ ಒಣಗಿ ಹೋಗಿ ನಾಲಿಗೆ ತಳಕ್ಕೆ ಕಚ್ಚಿಕೊಂಡಿತ್ತು… ಆ ಅಂಧಕಾರದಲ್ಲಿ ನೀರು ಕುಡಿಯಲು ಎದ್ದ ಅವನಿಗೆ ಯಾರೋ ಹೆಂಗಸು ಅರಚಿಕೊಂಡ ಸದ್ದು… ಹೆದರಿ ತೊಳ್ಳೆ ನಡುಗಿಹೋದ ರಾಯ ಅಲ್ಲೇ ಕುಸಿದು ಕುಳಿತ…
ವೈಭವದ ವಿಜಯನಗರ ಹಾಳು ಹಂಪಿಯಾಗಲು ದಿನಗಳಷ್ಟೇ ಬಾಕಿಯಿತ್ತು…
ದುರ್ಗದ ಏಕನಾಥಿಯ ಕಣ್ಣುಗಳು ಕೆಂಡದುಂಡೆಗಳಂತೆ ಧಗಧಗಿಸುತ್ತಿದ್ದವು…
ಅದಾಗಿ ಒಂದು ತಿಂಗಳು ಕಳೆದಿರಬಹುದೇನೋ… ದುರ್ಗದ ಸಂಪಿಗೆ ಸಿದ್ದೇಶ್ವರನ ಗುಡಿಯ ಪ್ರಾಂಗಣದಲ್ಲಿ ಏಳು ಜನ ರಸಾಸಿದ್ಧರು ಧಿಡೀರನೆ ಕಾಣಿಸಿಕೊಂಡರು… ವಿಷಯ ತಿಳಿದ ಒಬ್ಬಣ್ಣ ನಾಯಕ ಲಗುಬಗೆಯಿಂದ ಓಡೋಡಿ ಬಂದು ಅವರ ಕಾಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿದ…
ಏಳೋ ಓಬಣ್ಣ… ದುರ್ಗದ ಉಜ್ವಲ ಭವಿಷ್ಯಕ್ಕಾಗಿ… ನಿನ್ನ ಉತ್ತರೋತ್ತರ ಅಭಿವೃದ್ಧಿಗಾಗಿ ಇನ್ನು ಮೇಲಿನಿಂದ ನಿನ್ನ ಹೆಸರನ್ನು….

ಮದಕರಿ ನಾಯಕ…
ಎಂದು ಘೋಷಿಸುತ್ತಿದ್ದೇವೆ… ಶುಭವಾಗಲಿ…ಹೂಂ… ಹೊರಡು… ಚಿಂತಿಸಬೇಡ… ಅಪ್ಪನ ಸಾವಿಗೆ ಹೆದರಬೇಡ… ದುರ್ಗಕ್ಕೆ ದ್ರೋಹ ಬಗೆದವರೆಂದೂ ಉದ್ಧಾರವಾಗಲಾರರು… ಸಂಪಿಗೆ ಸಿದ್ದೇಶ್ವರನೂ ಏಕನಾಥಿಯೂ ನಿನ್ನನ್ನು ಹರಸಲಿ… ಶಂಭೋ ಮಹಾದೇವ…
ಇದೇನು ಕನಸೋ ಎಂಬಂತೆ ಓಬಣ್ಣ ಕಣ್ತೆರೆದು ನೋಡಿದ… ರಸಾಸಿದ್ಧರು ಅದಾಗಲೇ ಬಹುದೂರಕ್ಕೆ ಸಾಗಿ ಹೋಗಿದ್ದರು… ಗರ್ಭಗುಡಿಯೊಳಗಿನ ನಂದಾದೀಪ ಎಂದಿಗಿಂತ ಜಾಜ್ವಲ್ಯಮಾನವಾಗಿ ಬೆಳಗುತ್ತಿತ್ತು… ಅಸೀಮ ಧೈರ್ಯದಿಂದ ಎದ್ದು ಹೊರಬಂದ ಓಬಣ್ಣನ ಮೈಯ್ಯಲ್ಲೇನೋ ಹೊಸ ಚೈತನ್ಯ ತುಂಬಿ ನಿಂತಿತ್ತು… ರಸಾಸಿದ್ಧರ ಮಾತುಗಳನ್ನು ಕೇಳಿದ್ದ ಪುರೋಹಿತರು ಹೊರಬಂದು ಎತ್ತರದ ದನಿಯಲ್ಲಿ ಘೋಷಿಸಿದರು….
ಮದಕರಿ ನಾಯಕರಿಗೆ ಜಯವಾಗಲಿ….
ಜಯವಾಗಲಿ… ಜಯವಾಗಲಿ… ಬಂಡೆ ಬಂಡೆಗೂ ಬಡಿದು ಪ್ರತಿಧ್ವನಿ ಏಳುತ್ತಿತ್ತು… ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿತ್ತು….
ಚಿತ್ರಕಲ್ಲುದುರ್ಗಕ್ಕೆ ಮದಕರಿ ನಾಯಕರೆಂಬೋ ನಾಯಕರು ದಕ್ಕಿದ್ದು ಹೀಗೆ…