‘‘ಹಾಯ್ ಸೇವಂತಿ, ಹೇಗಿದ್ದೀಯಾ? ’’ಸೀಮಾ ಹಾಸ್ಟೆಲಿನ ವರಾಂಡದಲ್ಲಿ ನಿಂತು ತನ್ನ ಕೋಣೆಯ ಬಾಗಿಲಿನಲ್ಲಿ ನಿಂತಿದ್ದ ಸೇವಂತಿಯನ್ನು ಕೇಳಿದ್ದಳು.
‘‘ಹ್ಞಾಂ, ಚೆನ್ನಾಗಿದ್ದೇನೆ. ಏನು ನಿನ್ನೆಯೆಲ್ಲಾ ಕಾಣಲೇ ಇಲ್ಲವಲ್ಲ’’ ಸೇವಂತಿ ಮಾತಿಗೆ ಬಂತೆ ಕೇಳಿದ್ದಳು.
‘‘ಓಹ್, ನೆನ್ನೇನಾ, ನನ್ನ ಫ್ರೆಂಡ್ಸ್ ಎಲ್ಲಾ ಸೇರಿ ಒಂದು ಪಾರ್ಟಿ ಇಟ್ಟುಕೊಂಡಿದ್ದರು. ರಾತ್ರಿಯೆಲ್ಲಾ… ಓಹ್, ಅದೊಂದು ತರಾ ಮೋಜು ಬಿಡು. ಅಂದ್ಹಾಗೆ ಇವತ್ತು ಸಾಟರ್ಡೇ, ಬೆಂಗಳೂರು ತೋರಿಸ್ತೀನಿ ಅಂದಿದ್ದೆ. ನೆನಪಿದೆಂಯಾ’’ ಎಂದಿದ್ದಳು ಸೀಮಾ, ಅವಳ ಮಾತನ್ನು ಕೇಳಿ ಸೇವಂತಿ ಒಂದಿಷ್ಟು ಅಧೀರಳಾಗಿದ್ದಳು. ಹಾಸ್ಟೆಲಿನಲ್ಲಿ ಎಲ್ಲರೂ ಹೇಳುವಂತೆ ಸೀಮಾಳಿಂದ ಒಂದಷ್ಟು ದೂರವೇ ಇರಬೇಕೆಂದು ಬಯಸಿದ್ದಳು. ಆದರೆ ಈಗ ಇಕ್ಕಟ್ಟಿಗೆ ಸಿಕ್ಕಿಕೊಂಡಂತಾಗಿತ್ತು.
‘‘ಬರಬಹುದಿತ್ತು. ಆದರೆ… ಮಧ್ಯಾಹ್ನ ಕ್ಲಾಸಿದೆ’’ ಸೇವಂತಿ ಅವಳಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ್ದಳು. ಆದರೆ ಇಂತಹ ಅಮೆಚೂರ್ ಸುಳ್ಳು ಹೇಳುವವರನ್ನು ಸೀಮಾ ಅದೆಷ್ಟು ಮಂದಿಯನ್ನು ನೋಡಿದ್ದಳೋ ಏನೋ, ಅವಳು ಕೂಡಲೇ ಕೇಳಿದ್ದಳು.
‘‘ಮಧ್ಯಾಹ್ನದ ಕ್ಲಾಸ್, ಯಾರಮ್ಮಾ ಅವನು ಪುಣ್ಯಾತ್ಮ. ಅದೂ ನಮ್ಮ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಮಧ್ಯಾಹ್ನ ಪಾಠ ಹೇಳುವವನೂ, ಇಡೀ ವುಮನ್ಸ್ ಕಾಲೇಜ್ ಮಧ್ಯಾಹ್ನ ಹನ್ನೆರಡಕ್ಕೆ ಕ್ಲೋಸ್ ಅಲ್ವಾ, ಅಂತಾದ್ರಲ್ಲಿ ಅವನ್ಯಾವನು ಲೆಕ್ಚರ್ರೂ, ಹೆಸರೇಳು ಅವನ್ದು’’ ಸೀಮಾ ತೋಳು ಮಡಚುತ್ತಾ ಕೇಳಿದ್ದಳು, ಸೇವಂತಿಗೆ ಈಗ ನಿಜಕ್ಕೂ ಪೀಕಲಾಟವಾಯಿತು.
‘‘ಸೀಮಾ…ಅದೂ…’’ ಸೇವಂತಿ ತಡವರಿಸಿದ್ದಳು. ಅವಳು ಸುಳ್ಳು ಹೇಳುತ್ತಿದ್ದಾಳೆಂದು ಸೀಮಾಳಿಗೆ ಖಂತವಾದ ನಂತರ ಸೇವಂತಿಯತ್ತ ತಿರುಗಿ ಹೇಳಿದ್ದಳು.
‘‘ಓಹೋ, ಇಲ್ಲಿರೋರೆಲ್ಲಾ ನನ್ನ ಬಗ್ಗೆ ನಿನ್ನ ತಲೆಗೆ ಸಾಕಷ್ಟು ಅರೆದು ಕೊರೆದಿದ್ದಾರೆ ಎಂದಾಯ್ತು. ಅದಕ್ಕೆ ನೀನು ನನ್ನೊಂದಿಗೆ ಬರಲು ಹಿಂದೆ ಮುಂದೆ ನೋಡ್ತಿದ್ದೀರಿ. ಓಕೆ… ಹೋಗಲಿ ಇಲ್ಲಿ ನನ್ನ ಬಗ್ಗೆ ಯಾರ್ಯಾರು ಏನೇನು ಹೇಳಿದರು ಅಂತಾನಾದ್ರೂ ಹೇಳು’’ ಎಂದ ಅವಳ ಬದಲಾದ ದನಿಯ ಶೈಲಿಗೆ ಸೇವಂತಿ ಬೆಚ್ಚಿ ಹೇಳಿದ್ದಳು.
‘‘ಇಲ್ಲಾ!… ಇಲ್ಲ ಇಲ್ಲ, ಯಾರೂ ಏನೂ ಹೇಳಲಿಲ್ಲ’’ ತಡಬಡಿಸುತ್ತಾ ಸೇವಂತಿ ಗಡಿಬಿಡಿಯಿಂದಲೇ ಹೇಳಿದ್ದಳು. ಈಗ ನಿಜಕ್ಕೂ ಸೀಮಾ ಇನ್ನಷ್ಟು ಕೆರಳಿ ನಿಂತಿದ್ದಳು. ತನ್ನ ಜೀ ನ್ಸ್ ಪ್ಯಾಂಟಿನಲ್ಲಿರಿಸಿಕೊಂಡಿದ್ದ ಒಂದು ಸಣ್ಣ ಸೈಜಿನ ಡೈರಿಯೊಂದನ್ನು ಹೊರತೆಗೆದು ಅದರಲ್ಲಿ ಏನೇನೋ ಬರೆದು ನಂತರ ಸೇವಂತಿಯತ್ತ ತಿರುಗಿ ಹೇಳಿದ್ದಳು.
‘‘ಓಕೆ, ನನ್ನ ಬಗ್ಗೆ ನಿನಗೆ ಇಲ್ಲಿ ಯಾರ್ಯಾರು ಏನೇನು ಹೇಳಿರಬಹುದೋ ಅವರೆಲ್ಲರ ಹೆಸರನ್ನೂ ಈ ಡೈರಿಯಲ್ಲಿ ಗುರುತು ಹಾಕಿಕೊಂಡಿದ್ದೇನೆ. ಈಗ ನೀನು ನನ್ನ ಜೊತೆ ಹೊರಗೆ ಬರಲಿಲ್ಲಾಂದ್ರೆ, ಇವತ್ತು ರಾತ್ರಿಗೆ ಅವರಿಗೆಲ್ಲಾ ಹಬ್ಬ ಕಾದಿದೆ’’ ಎನ್ನುತ್ತಾ ಸುತ್ತಲೂ ನೋಡಿದ್ದಳು. ಅವಳ ಮಾತಿನ ಶೈಲಿಯಲ್ಲಿ ಕ್ರೂರತೆಯನ್ನು ಗಮನಿಸಿದ ಸೇವಂತಿಗೆ ಕೊಂಚ ಅಳುಕುಂಟಾಗಿತ್ತು. ತನ್ನಿಂದ ಇತರರಿಗೆ ಏನೇನು ತೊಂದರೆಯಾಗುತ್ತದೆಯೋ ಎಂದು ಹೆದರಿದಳು. ತನ್ನ ಈ ಪ್ರಕರಣವನ್ನು ಬಳಸಿಕೊಂಡು ಸೀಮಾ ತನ್ನ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳುವುದು ಖಚಿತವಾಗಿತ್ತು. ಸುಖಾಸುಮ್ಮನೆ ಹಾಸ್ಟೆಲ್ಲಿಗೆ ಬಂದ ಹೊಸದರಲ್ಲಿಯೇ ಈ ರೀತಿಯ ವಿವಾದಗಳಿಗೆ ತಾನೇಕೆ ಕಾರಣವಾಗಬೇಕೆನಿಸಿತ್ತು. ಅವಳು ಸೀಮಾಳತ್ತ ತಿರುಗಿ ಹೇಳಿದ್ದಳು.
‘‘ಆಯ್ತು ಸೀಮಾ ನಾನು ನಿಂಜೊತೆ ಇರ್ತೀನಿ’’
‘‘ದಟ್ಸ್ ದ ಗುಡ್ ಗರ್ಲ್’ ಎನ್ನುತ್ತಾ ನಕ್ಕ ಸೀಮಾ ವಿಜಯದ ನಗೆ ಬೀರಿದ್ದಳು..
ಮುಂದುವರೆಯುತ್ತದೆ..