ರಾತ್ರಿ ಒಂಬತ್ತು ಗಂಟೆ!
ನಗರದ ಪ್ರತಿಷ್ಠಿತ ಬಡಾವಣೆಯಲ್ಲಿದ್ದ ಹೈ ಸೊಸೈಟಿ ಪಬ್ ಹೊರನೋಟಕ್ಕೆ ಮಾಮೂಲಿನಂತೆ ಒಂದೆರಡು ನಿಯಾನ್ ಬಲ್ಬುಗಳನ್ನು ಮಿಣುಕಿಸುತ್ತಾ ಗರತಿ ಗೌರಮ್ಮನ ಹಾಗೆ ತಲೆಯ ತುಂಬಾ ಸೆರಗು ಹೊದೆದುಕೊಂಡಂತಿತ್ತು. ಆದರೆ ಅದರ ಬಾಗಿಲು ದಾಟಿ ಒಳಗೆ ನಡೆದರೆ ಅಲ್ಲಿನ ನೋಟ ಬೆರಗು ಹುಟ್ಟಿಸುತ್ತಿತ್ತು. ಬಳುಕುವ ಲಲನೆಯರ ಮಾದಕ ನೃತ್ಯ, ಮತ್ತೇರಿಸುವಂತೆ ಕಾಣುವ ಅವರ ಕೆಣಕು ಕಣ್ಣೋಟ, ಉಡುಪುಗಳಿಗೆ ಬರಬಂದಂತೆ ತೆಳುವಾಗಿ, ಅತಿ ಚಿಕ್ಕದಾಗಿ ತೊಟ್ಟ ಮಿನಿ ಮಿನಿ ಡ್ರೆಸ್ಗಳಲ್ಲಿ ತಮ್ಮ ಇಡೀ ದೇಹದ ಸೊಬಗನ್ನು ಪ್ರದರ್ಶನಕ್ಕಿಟ್ಟಂತೆ ಕಾಣುವ ಬೆಡಗಿಯರು, ಆಗ ತಾನೆ ಮಂಜಿನಲ್ಲಿ ಮಿಂದೆದ್ದು ಬಂದಂತಹ ಅವರ ದೇಹಗಳ ಸೊಬಗು, ಸಿಗರೇಟುಗಳಲ್ಲಿ ಅಫೀಮು, ಗಾಂಜಾ ತುಂಬಿಸಿಕೊಂಡು, ಮತ್ತೇರಿಸಿಕೊಳ್ಳುತ್ತಿರುವ ಯುವ ಸಮೂಹ, ಕುಡಿತ, ಕುಣಿತ, ಕೇಕೆ ಹರ್ಷ, ಇಡೀ ಹೈ ಸೊಸೈಟಿ ಪಬ್ ಒಳಭಾಗದಲ್ಲಿ ಅಳವಡಿಸಲಾಗಿದ್ದ ಅಸಂಖ್ಯ ಸೌಂಡ್ ಪ್ರೂಪ್ ಯಂತ್ರಗಳಿಂದಾಗಿ ಅಲ್ಲಿ ನಡೆಂಯುತ್ತಿದ್ದ ಗದ್ದಲ ಕಿಂಚಿತ್ತೂ ಹೊರ ಪ್ರಪಂಚಕ್ಕೆ ಕೇಳುತ್ತಿರಲಿಲ್ಲ, ಅಷ್ಟೇ ಅಲ್ಲ, ಅದನ್ನು ನಡೆಸುವ ಪಬ್ನ ಮಾಲೀಕನಿಂದ ಹಿಡಿದು ಅಲ್ಲಿಗೆ ಬರುತ್ತಿದ್ದ ಗ್ರಾಹಕರವರೆಗೆ ಎಲ್ಲರೂ ಪ್ರತಿಷ್ಟಿತ ಕುಟುಂಬದವರಾದ್ದರಿಂದ ಅಲ್ಲಿಗೆ ಯಾವ ಪೊಲೀಸರೂ ಸುಳಿಯುತ್ತಿರಲಿಲ್ಲ.

ಹೈ ಸೊಸೈಟಿ ಪಬ್ನ ಮೂಲೆಯಲ್ಲಿ ಏಕಾಂತ ಪ್ರಿಂಯರಿಗೆಂದೇ ಮೀಸಲಿರಿಸಿದ್ದ ನಾಲ್ಕು ಮರದ ಕ್ಯಾಬಿನ್ಗಳ ಪೈಕಿ ಒಂದರಲ್ಲಿ ಅವಳು ಕುಳಿತಿದ್ದಳು. ಕ್ಷಣ ಕ್ಷಣ ಅವಳಲ್ಲಿ ಅಸಹನೆ ಹೆಚ್ಚುತ್ತಿತ್ತು. ಗಳಿಗೆಗೊಮ್ಮೆ ಗಡಿಯಾರದತ್ತ ಕಣ್ಣಾಯಿಸುತ್ತಿದ್ದ ಅವಳು ಒಂಬತ್ತು ಗಂಟೆಯಾಗುತ್ತಿದ್ದಂತೆ ಎದ್ದು ಹೊರಟು ನಿಂತಿದ್ದಳು. ಆದರೆ ಅಷ್ಟರಲ್ಲಿ ಶರವೇಗದಿಂದ ಬಂದ ಕಾರು ಪಬ್ನ ಪಾರ್ಕಿಂಗ್ನಲ್ಲಿ ಗಕ್ಕನೆ ಬ್ರೇಕ್ ಹಾಕಿ ನಿಂತಿತ್ತು. ಅಜಯ್ ಲಗುಬಗೆಯಿಂದ ಇಳಿದು ಆ ಹೈ ಸೊಸೈಟಿ ಪಬ್ನೊಳಕ್ಕೆ ನುಗ್ಗಿದ್ದ. ಅವನು ಬಂದುದನ್ನು ಕಂಡ ಆ ತರುಣಿ ತುಸು ತಡೆದಿದ್ದಳು.
ಅಜಯ್ ಅಲ್ಲಿಗೆ ಬಂದ ಕೂಡಲೇ ಅಲ್ಲಿದ್ದ ಅಸಂಖ್ಯ ಯುವಕ ಯುವತಿಯರನ್ನು ಕಂಡು ತುಸು ಗೊಂದಲಕ್ಕೆ ಒಳಗಾಗಿದ್ದ. ಇವರಲ್ಲಿ ತನಗೆ ಪೋನ್ ಮಾಡಿದ್ದ ಆ ರಹಸ್ಯ ಸ್ಫೋಟ ಪತ್ರಿಕೆಯ ತರುಣಿಯನ್ನು ಪತ್ತೆ ಹಚ್ಚುವುದು ಹೇಗೆ ಎಂದುಕೊಳ್ಳುತ್ತಲೇ ತನ್ನ ಮೊಬೈಲನ್ನು ತೆಗೆದು ಅದರಲ್ಲಿ ಸೇವ್ ಆಗಿದ್ದ ಆ ತರುಣಿಯ ಮೊಬೈಲಿಗೆ ಕರೆಮಾಡಿದ್ದ. ಅಷ್ಟರಲ್ಲಿ ಆ ತರುಣಿಯೇ ಇವನ ಮೊಬೈಲಿಗೆ ಕರೆಮಾಡಿದ್ದಳು.
‘‘ಮಿ.ಅಜಯ್, ಅಂತೂ ಬಂದುಬಿಟ್ಟಿರಿ, ಹಾಗೇ ಮುಂದೆ ಬಂದು ಸ್ಪೆಷಲ್ ಕ್ಯಾಬಿನ್ಗಳಲ್ಲಿ ಮೂರನೆಯದರಲ್ಲಿ ನಾನಿದ್ದೇನೆ. ಪ್ಲೀಸ್ ಕಮ್’’
ಅದೇ ಮಾದಕ ದನಿ! ಅಜಯ್ ಸ್ಪೆಷಲ್ ಕ್ಯಾಬಿನ್ನಗಳತ್ತ ನುಗ್ಗಿದ್ದ. ಆತುರದಿಂದಲೇ ಮೂರನೆಯ ಕ್ಯಾಬಿನ್ನಿನ ಬಾಗಿಲನ್ನು ತಳ್ಳಿಕೊಂಡು ಒಳನಡೆದಿದ್ದ. ಆಗ ಕಂಡಿದ್ದಳು ಮಾಯಾ… ಮಾಯಾ ಚೌಧರಿ!
ಅವಳನ್ನು ಕಂಡಕೂಡಲೇ ಅಜಯ್ ನಿಬ್ಬೆರಗಾಗಿದ್ದ. ಸೌಂದರ್ಯದಲ್ಲಿ ನಿಶಾಳಿಗಿಂತ ಮಾಯಾ ಯಾವುದರಲ್ಲಿಯೂ ಕಡಿಮೆಯಿರಲಿಲ್ಲ. ಅವಳನ್ನೇ ಎವೆಯಿಕ್ಕದೆ ನೋಡುತ್ತಾ ನಿಂತ ಅಜಯ್ ನನ್ನು ಚಿಟಿಕೆ ಹೊಡೆದು ವಾಸ್ತವಕ್ಕೆ ಕರೆತಂದ ಮಾಯಾ ಅವನತ್ತ ಕೈ ಚಾಚುತ್ತಾ ಹೇಳಿದ್ದಳು.
‘‘ಹಲೋ ಅಜಯ್, ಐ ಯಾಂ ಮಾಯಾ… ಮಾಯಾ ಚೌಧರಿ, ರಹಸ್ಯ ಸ್ಫೋಟ ಪತ್ರಿಕೆಯ ಚೀಫ್ ಎಡಿಟರ್’’ ಎಂದ ಅವಳ ಚಾಚಿದ ಕೈಯನ್ನು ಅಪ್ರಯತ್ನ ಪೂರ್ವಕವಾಗಿ ಹಿಡಿದು ಕುಲುಕಿದ್ದ. ಅವಳ ಸುಕೋಮಲ ಹಸ್ತದ ಸ್ಪರ್ಶ ಅವಶ್ಯಕತೆಗಿಂತಲೂ ಒಂದೆರಡು ಸೆಕೆಂಡ್ ಹೆಚ್ಚಾಗೆ ಹಿಡಿದುಕೊಳ್ಳಲು ಪ್ರೇರೇಪಿಸಿತ್ತು.
‘‘ನಾವು ಕುಳಿತು ಮಾತನಾಡಬಹುದಲ್ವಾ’’ ಎಂದ ಮಾಯಾ ಅವನ ಕೈಯಿಂದ ತನ್ನ ಕೈಯನ್ನು ಪ್ರಯತ್ನ ಪೂರ್ವಕವಾಗಿಯೇ ಬಿಡಿಸಿಕೊಳ್ಳುತ್ತಾ ಹೇಳಿದ್ದಳು. ಆಗ ಮತ್ತೆ ವಾಸ್ತವಕ್ಕೆ ಬಂದ ಅಜಯ್ ತಡವರಿಸುತ್ತಾ ಹೇಳಿದ್ದ.
‘‘ಓಹೋ… ಪ್ಲೀಸ್’’ ಎನ್ನುತ್ತಾ ಅವಳು ತೋರಿದ ಕುರ್ಚಿಯಲ್ಲಿ ಕುಳಿತಿದ್ದ.
‘‘ಅಪ್ಸರೆಯಂತಹ ಸೌಂದರ್ಯವತಿ ನಿಶಾಳ ಸಾಂಗತ್ಯವನ್ನು ಸವಿಯಲು ಅಡ್ಡಿಪಡಿಸಿದ್ದಕ್ಕಾಗಿ ನನ್ನ ಮೇಲೆ ತುಂಬಾ ಕೋಪವಿರಬಹುದಲ್ವೆ’’ ಮಾಯಾ ತನ್ನ ಅದೇ ಮಾದಕ ದನಿಯಲ್ಲಿ ಕೇಳಿದ್ದಳು. ಅವಳ ಮಾತಿಗೆ ಮಾಯಾಳ ಇಡೀ ಶರೀರವನ್ನು ಸ್ಕ್ಯಾನ್ ಮಾಡುವ ದೃಷ್ಟಿಯಲ್ಲಿ ದಿಟ್ಟಿಸುತ್ತಾ ಹೇಳಿದ್ದ ಅಜಯ್.
‘‘ಹ್ಞೂಂ… ಇದುವರೆಗೂ ಕಾರಿನಲ್ಲಿ ವಾಪಸ್ಸು ಬರ್ತಿರೋವಾಗ ಹಾಗನ್ನಿಸಿದ್ದುಂಟು. ಆದರೆ ಈಗ ನಿಮ್ಮನ್ನು ನೋಡಿದ ಕೂಡಲೇ…’’
‘‘ಹ್ಞೂಂ… ಕೂಡಲೇ… ನಿಶಾಳ ಸೌಂದರ್ಯ ಸಪ್ಪೆ ಅನ್ನಿಸ್ತಾ ಇದೆಯಾ?’’ ಅವಳು ಕಣ್ಣಲ್ಲಿ ಮಾದಕತೆ ತುಂಬಿ ಕೇಳಿದಾಗ ಅಜಯ್ ಕೂಡಲೇ ಪ್ರತಿಕ್ರಿಯಿಸಿದ್ದ.
‘‘ಎಗ್ಜಾಕ್ಟ್ಲೀ ಕರೆಕ್ಟ್’’
‘‘ಷಟಪ್!?’’ ಮಾಯಾಳ ನೋಟ ಮತ್ತು ಧ್ವನಿ ಏಕಕಾಲದಲ್ಲಿ ಬದಲಾಗಿದ್ದವು. ಅದನ್ನು ಕಂಡ ಅಜಯ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದ. ಅವಳ ದನಿ ಕ್ಷಣ ಮಾತ್ರದಲ್ಲಿ ಮತ್ತೆ ಮೊದಲಿನ ಮಾದಕತೆಗೆ ಮರಳಿತ್ತು.
‘‘ಮಿ.ಅಜಯ್, ಈಗ ನಾವು ವಿಷಯಕ್ಕೆ ಬರೋಣ. ಆದರೆ ಅದಕ್ಕೆ ಮುಂಚೆ ಲೈಟಾಗಿ ಬಿಯರ್… ವಿಸ್ಕಿ…’’
‘‘ನೋ, ನನಗೇನೂ ಬೇಡ’’ ಅಜಯ್ ಅವಳನ್ನು ಅರ್ಥಮಾಡಿಕೊಳ್ಳಲಾಗದೆ ಗೊಂದಲದಲ್ಲಿ ಬಿದ್ದಿದ್ದ. ಆದರೆ ಮಾಯಾ ಸುಮ್ಮನಿರುವ ಹೆಣ್ಣಲ್ಲವೆಂದು ಅವನಿಗೆ ಗೊತ್ತಿರಲಿಲ್ಲ. ಅವಳು ಮತ್ತೆ ಅಜಯ್ ನನ್ನು ಮಾರ್ದವತೆಯಿಂದ ಕೇಳಿದ್ದಳು. ‘‘ಮತ್ತೇನು ತಗೊಳ್ತೀಯ ಅಜಯ್, ಅಫೀಮು, ಗಾಂಜಾ… ಹೆರಾಯಿನ್? ಅಜಯ್ ಬೆಚ್ಚಿ ಮತ್ತೆ ಅವಳತ್ತ ನೋಡಿದ್ದ. ಆದರೆ ಮಾಯಾಳ ಮುಖಭಾವದಲ್ಲಿ ಏನೇನೂ ಬದಲಾವಣೆಯಾಗಿರಲಿಲ್ಲ. ಅವಳು ಮುಂದುವರೆಸಿ ಹೇಳಿದ್ದಳು.
‘‘ಮಿ.ಅಜಯ್, ಸುಮ್ಮನೆ ಹಠಮಾಡಬೇಡಿ, ಈಗ ವಿಸ್ಕಿಗೆ ಆರ್ಡರ್ ಮಾಡೋಣ’’ ಎನ್ನುತ್ತಾ ಅವನ ಉತ್ತರಕ್ಕೂ ಕಾಯದೆ ಒಂದು ಪುಲ್ ಬಾಟಲ್ ವಿಸ್ಕಿಗೆ ಆರ್ಡರ್ ಮಾಡಿದ್ದಳು. ಎರಡೇ ನಿಮಿಷಗಳಲ್ಲಿ ಒಂದು ಫುಲ್ ಬಾಟಲ್ ವಿಸ್ಕಿಯ ಜೊತೆಗೆ ಸೋಡಾ, ಒಂದಷ್ಟು ಕರಿದ ಗೋಡಂಬಿ ಎಲ್ಲವೂ ಬಂದಿಳಿದಿದ್ದವು. ಮಾಯಾ ತಾನೇ ಮುಂದಾಗಿ ಎರಡು ಗ್ಲಾಸುಗಳಿಗೆ ವಿಸ್ಕಿ ಸೋಡಾ ಬೆರೆಸಿ, ನಿರುಮ್ಮಳವಾಗಿ ಒಳಗಿಳಿಸಿದ್ದಳು. ನೋಡನೋಡುತ್ತಿದ್ದಂತೆಯೇ ಒಂದರ ಹಿಂದೆ ಒಂದರಂತೆ ನಾಲ್ಕು ಪೆಗ್ಗುಗಳು ಒಳಗಿಳಿದ ನಂತರ ಮಾಯಾ ಮಾತನಾಡಿದ್ದಳು.
‘‘ಮಿ.ಅಜಯ್, ಈಗ ವಿಷಯಕ್ಕೆ ಬರೋಣ. ನಾನು ನಿನಗೇ ಗೊತ್ತಿರೋ ಹಾಗೆ ‘ರಹಸ್ಯಸ್ಫೋಟ’ ಪತ್ರಿಕೆಯ ಸಂಪಾದಕಿ. ಈಗ ನಿನ್ನ ಮುಂದೆ ಒಂದು ರಹಸ್ಯವನ್ನು ಸ್ಫೋಟಿಸುತ್ತೇನೆ. ಅದನ್ನು ನಮ್ಮ ಪತ್ರಿಕೆಯಲ್ಲಿ ಸ್ಫೋಟಿಸುವುದೋ ಬೇಡವೋ ಎಂಬುದನ್ನು ನಮ್ಮ ಮುಂದಿನ ಮಾತುಕತೆಯ ಮೇಲೆ ನಿರ್ಧಾರ ಮಾಡೋಣ’’ ಎಂದು ತೀರಾ ಸಹಜ ದನಿಯಲ್ಲಿ ಹೇಳಿದ ಮಾಯಾಳ ದನಿಯಲ್ಲಿ ಒಂದಿಷ್ಟು ತೊದಲು ಮಾತುಗಳಿರಲಿಲ್ಲ, ಅಜಯ್ ಅವಳತ್ತ ಬೆರಗು ತುಂಬಿದ ಕಣ್ಣುಗಳಿಂದ ನೋಡುತ್ತಿರುವಂತೆಯೇ ಮಾಯಾ ತನ್ನ ವ್ಯಾನಿಟಿ ಬ್ಯಾಗಿನೋಳಗಿನಿಂದ ಒಂದಿಷ್ಟು ಫೋಟೋಗಳು ಮತ್ತೆ ರಹಸ್ಯವಾಗಿ ಚಿತ್ರೀಕರಿಸಿದ್ದ ಮೈಕ್ರೋ ವಿಡಿಯೋಗಳನ್ನು ತೆಗೆದು ಅವನ ಮುಂದಿರಿಸಿದ್ದಳು. ಅಜಯ್ ಅವುಗಳನ್ನು ತೆಗೆದು ಗಾಬರಿಯಿಂದ ನೋಡತೊಡಗಿದ್ದ. ಆ ಪೋಟೋಗಳಲ್ಲಿ ಅಜಯ್ ಮತ್ತವನ ಸ್ನೇಹಿತರು ಪಂಚವಿಲಾಸ್ ಎಸ್ಟೇಟಿನಲ್ಲಿ ನಡೆಸಿದ ಕಾಮಕೇಳಿಯ ನಗ್ನ ಚಿತ್ರಗಳಿದ್ದವು. ಅಷ್ಟೇ ಅಲ್ಲ, ಅಜಯ್ ನ ತಂದೆ ಕೂಡಾ ಹಲವು ತರುಣಿಯರೊಂದಿಗೆ ಕಾಮಕೇಳಿ ನಡೆಸಿದ ಪೋಟೋಗಳು ಕೂಡಾ ಅಲ್ಲಿದ್ದವು. ಅವುಗಳನ್ನು ನೋಡಿದ ಅಜಯನ ಹಣೆಯಲ್ಲಿ ಬೆವರಹನಿಗಳು ಮೂಡಿದ್ದವು. ‘‘ಅಷ್ಟೇ ಅಲ್ಲ ಅಜಯ್, ಈಗ ನೋಡು’’ ಎಂದ ಮಾಯಾ ರಹಸ್ಯ ಫಿಲ್ಮ ಅನ್ನು ತನ್ನ ಅತ್ಯಾಧುನಿಕ ಕ್ಯಾಮೆರಾದಲ್ಲಿ ಅಳವಡಿಸಿ ಅವನ ಮುಂದಿರಿಸಿದ್ದಳು. ಕೂಡಲೇ ಕ್ಯಾಮೆರಾದಲ್ಲಿ ವಿಡಿಯೋ ಬರಲಾರಂಭಿಸಿತ್ತು. ಪಂಚವಿಲಾಸ್ ಎಸ್ಟೇಟಿನಲ್ಲಿ ಅಜಯ್ ನಡೆಸಿದ ಕಾಮಕೇಳಿಯ ವಿಸ್ತೃತ ರೆಕಾರ್ಡ್. ಅಷ್ಟೇ ಅಲ್ಲ ಅಜಯನ ತಂದೆ ನಡೆಸಿದ ಕಾಮಪುರಾಣವೂ ವಿಡಿಯೋದಲ್ಲಿ ದಾಖಲಾಗಿತ್ತು. ಅದೆಲ್ಲವನ್ನೂ ನೋಡಿದ ಅಜಯ್ ಭೂಮಿಗಿಳಿದು ಹೋಗಿದ್ದ.
‘‘ತುಂಬಾ ಚೆನ್ನಾಗಿದೆ ಅಲ್ವಾ ಅಜಯ್’’ ಮತ್ತೊಂದು ಪೆಗ್ ಏರಿಸಿ ಅವನತ್ತ ನೋಡುತ್ತಾ ಕೇಳಿದ್ದಳು ಮಾಯಾ. ಅಷ್ಟರಲ್ಲಿ ಅದೇನೋ ಹೊಳೆದವನಂತೆ ಅಜಯ್ ಅಲ್ಲಿದ್ದ ಪೋಟೋಗಳನ್ನು ಮತ್ತು ಕ್ಯಾಮೆರಾವನ್ನು ಲಗುಬಗೆಯಿಂದ ಬಾಚಿಕೊಂಡು ತನ್ನ ಕೋಟಿನ ಜೇಬಿನಲ್ಲಿರಿಸಿಕೊಂಡಿದ್ದ. ಅದನ್ನು ಕಂಡ ಮಾಯಾ ಜೋರಾಗಿ ಕಿಲಕಿಲನೆ ನಕ್ಕುಬಿಟ್ಟಿದ್ದಳು.
‘‘ಇದನ್ನೆಲ್ಲಾ ತಗೊಂಡು ಹೋಗ್ತೀಯಾ ಅಜಯ್, ತಗೊಂಡ್ಹೋಗು, ಬೇಸರವಾದಾಗ ನೀನು ಮತ್ತು ನಿನ್ನ ದಿ ಗ್ರೇಟ್ ಫಾದರ್ ಇಬ್ಬರೂ ಹಾಯಾಗಿ ನಿಮ್ಮ ನಿಮ್ಮ ಸಾಹಸಗಳನ್ನು ನೋಡಿಕೊಂಡು ಸಂತೋಷಪಡಬಹುದು, ಹೇ ಫೂಲ್, ನಿನ್ಹತ್ರ ಇರೋ ಈ ಫಿಲ್ಮ್ ರೋಲ್ಗಳೆಲ್ಲಾ ಈಗಾಗಲೇ ನೂರು ನೂರು ಕಾಪಿಗಳು ಪ್ರಿಂಟಾಗಿವೆ. ಇವನ್ನು ತಗೊಂಡ್ಹೋಗಿ ಏನ್ಮಾಡ್ತೀಯಾ?’’ ಅವಳ ದನಿ ತುಸು ಕಠಿಣವಾಗಿತ್ತು. ಈಗ ನಿಜಕ್ಕೂ ಅಜಯ್ ನಿಸ್ತೇಜವಾಗಿದ್ದ. ಒಳ ಸೇರಿಸಿದ್ದ ಎರಡೇ ಎರಡು ಪೆಗ್ಗಿನ ನಿಶೆ ಯಾವಾಗಲೋ ಇಳಿದು ಹೋಗಿತ್ತು. ಅವನು ನಿಧಾನವಾಗಿ ಕೇಳಿದ್ದ.
‘‘ಮಾಯಾ, ನಿನಗೇನು ಬೇಕು.’’
‘‘ಐವತ್ತು ಲಕ್ಷ!?’’ ಮಾಯಾ ತಣ್ಣಗೆ ನುಡಿದರೂ ಅಜಯನ ಬೆನ್ನಹುರಿ ಛಳಕ್ ಎಂದಿತ್ತು.
‘‘ವ್ಹಾಟ್!?’’ ಅಪ್ರಯತ್ನ ಪೂರ್ವಕವಾಗಿ ಅವನ ಬಾಯಿಯಿಂದ ಮಾತು ಹೊರಟಿತ್ತು.
‘‘ಅರೆ! ಅದೇನು ಹಾಗೆ ಬೆಚ್ಚಿ ಬೀಳ್ತೀಯ, ನಿಮ್ಮ ಆಸ್ತಿ ಹಾಗೂ ಇಮೇಜ್ ಎರಡೂ ಒಟ್ಟಿಗೆ ಸೇರಿಸಿದರೆ ಸಾವಿರ ಕೋಟಿ ಮೀರುವ ನಿಮ್ಮ ಸಂಪತ್ತಿನ ಮುಂದೆ ಈ ಐವತ್ತು ಲಕ್ಷ ಏನೂ ದೊಡ್ಡದಲ್ಲ, ನೀನು ನಿಮ್ಮ ತಂದೆ ಇಬ್ಬರೂ ಕೂತು ಲೆಕ್ಕಾಚಾರ ಹಾಕಿ ನಾಳೆ ಸಂಜೆ ಎಂಟು ಗಂಟೆ ಒಳಗೆ ತಿಳಿಸಿ. ಇಲ್ಲದಿದ್ದರೆ ನಾಡಿದ್ದು ಬೆಳಗಿನ ರಹಸ್ಯ ಸ್ಫೋಟ ಪತ್ರಿಕೆಯಲ್ಲಿ ನಿಮ್ಮ ಸಾಹಸ ಪ್ರದರ್ಶನದ ದೃಶ್ಯಾವಳಿಗಳು ರಾರಾಜಿಸಿಬಿಡುತ್ತವೆ’’ ಎಂದ ಮಾಯಾ ಮತ್ತೊಂದು ಪೆಗ್ ಏರಿಸಿ ಅಲ್ಲಿಂದ ಹೊರಡಲನುವಾದಳು. ಅದೇ ಹೊತ್ತಿಗೆ ತನ್ನ ಕೋಟಿನ ಒಳಭಾಗದಿಂದ ಅಜಯ್ ಸಣ್ಣದೊಂದು ಪಿಸ್ತೂಲ್ಅನ್ನು ಸರಕ್ಕನೆ ಹೊರಗೆಳೆದು ಮಾಯಾಳತ್ತ ಗುರಿಯಿಟ್ಟಿದ್ದ.
ಮಾಯಾ ಮತ್ತೊಮ್ಮೆ ಕಿಲಕಿಲನೆ ನಕ್ಕುಬಿಟ್ಟಿದ್ದಳು!
ಅದೇ ವೇಳೆಗೆ ಆ ಸ್ಪೆಷಲ್ ರೂಮಿನ ಕಿಟಕಿಯ ಪರದೆಗಳ ಹಿಂದಿನಿಂದ ಹತ್ತು ಜನ ದಾಂಡಿಗರು ಅಜಯ್ ನತ್ತ ಗುರಿಯಿರಿಸಿ ಪಿಸ್ತೂಲುಗಳನ್ನಿಡಿದು ಹೊರ ಬಂದಿದ್ದರು. ಮಾಯಾ ಅಜಯನತ್ತ ಒಮ್ಮೆ ಕ್ರೂರವಾದ ದೃಷ್ಟಿಯನ್ನು ಬೀರಿ ಹೇಳಿದ್ದಳು.
‘‘ಮಿ.ಅಜಯ್, ಇಂತಹ ಸಿಲ್ಲಿ ಎನಿಸುವಂತಹ ಟ್ರಿಕ್ಸ್ ಬಿಟ್ಟು ಆಗುವ ಕೆಲಸಗಳತ್ತ ಗಮನ ಹರಿಸು, ನಿನಗೆ ಕೇವಲ ಇಪ್ಪನ್ನಾಲ್ಕು ಗಂಟೆ ಮಾತ್ರವೇ ಸಮಯವಿದೆ. ಅಷ್ಟರಲ್ಲಿ ನಿನ್ನ ತಂದೆಯನ್ನೊಪ್ಪಿಸಿ ಐವತ್ತು ಲಕ್ಷ ಹಾಟ್ ಕ್ಯಾಶ್ ರೆಡಿಮಾಡಬೇಕು. ತುಂಬಾ ಕೆಲಸಗಳಿವೆ ನೀನು ಹೊರಡು ಬೇಗ’’ ಎನ್ನುತ್ತಾ ಅಲ್ಲಿಂದ ತಾನೂ ಹೊರಟಿದ್ದಳು. ಅವಳನ್ನು ಹಿಂಬಾಲಿಸಿಕೊಂಡು ಹತ್ತು ಮಂದಿ ಹೊರ ನಡೆದಿದ್ದರು. ಅಜಯ್ ತಲೆ ಸುತ್ತು ಬಂದವನಂತೆ ಸುಸ್ತಾಗಿ ಕುಸಿದು ಕುಳಿತಿದ್ದ. ಅದೇ ಹೊತ್ತಿಗೆ ವ್ಹೆಟರ್ ಬಿಲ್ ತಂದಿಟ್ಟಿದ್ದ !

ಮುಂದುವರೆಯುತ್ತದೆ..