ಹತ್ತನೆಯ ದಿನ ಅಂದರೆ ದಶಮಿ ಇದು ದಶರಾತ್ರಿಯ ಕೊನೆಯ ದಿವಸ, ಇದನ್ನು ವಿಜಯ ದಶಮಿ ಎಂದು ಕರೆಯುತ್ತಾರೆ. ದುರ್ಗಾ ದೇವಿಯು ತನ್ನ ಶಕ್ತಿ, ವೈಭವ, ಸಾಮರ್ಥ್ಯ, ಮಹಿಮೆಯನ್ನು ತೋರಿದ ದಿವಸ. ತನ್ನ ಎಲ್ಲಾ ಕೈಗಳಲ್ಲೂ ಅಸ್ತ್ರವನ್ನು ಹಿಡಿದು, ಸಿಂಹದ ಮೇಲೆ ಕುಳಿತು ತನ್ನ ವಿಶ್ವರೂಪವನ್ನು ತೋರಿಸುತ್ತಾಳೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ಕಾಪಾಡುತ್ತಾಳೆ ಎಂದು ಹೇಳುವ ದಿನವೇ ವಿಜಯದಶಮಿ.
ಈ ನವರಾತ್ರಿ ಹಬ್ಬದಲ್ಲಿ ದೇವಿಯು, ಮೊದಲು ಮೂರು ದಿನ ಲಕ್ಷ್ಮಿಯಾಗಿಯು, ಮಧ್ಯ ಮೂರು ದಿನ ಸರಸ್ವತಿ ರೂಪದಲ್ಲಿ ಹಾಗು ಕಡೆಯ ಮೂರು ದಿನ ಆದಿಶಕ್ತಿ ದುರ್ಗಾಪರಮೇಶ್ವರಿ ರೂಪದಲ್ಲಿ ಕಾಣಿಸಿ ಕೊಳುತ್ತಾಳೆ. ಹತ್ತನೆಯ ದಿನ ವಿಜಯ ದಶಮಿಯಂದು ಮೂರು ದೇವತೆಗಳು ಒಂದಾಗಿ ಚಾಮುಂಡೇಶ್ವರಿ (ವೈಷ್ಣವಿ) ರೂಪದಲ್ಲಿ ದರ್ಶನ ನೀಡುತ್ತಾಳೆ.
ಈ ದಿವಸ ತಾಯಿಯು ಚಾಮುಂಡೇಶ್ವರಿ ರೂಪ ಧರಿಸಿ. ಮಹಿಷಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡುತ್ತಾಳೆ. ಮೈಸೂರಿನ ವಿಶ್ವ ವಿಖ್ಯಾತ ಜಂಬುಸವಾರಿ ದೇ ದಿನ ನಡೆಯುತ್ತದೆ. ಈ ದಿನ , ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿ ಮೇಲೆ ಪಟ್ಟದ ಆನೆ ಹೊತ್ತು , ಅರಮನೆಯಿಂದ ಬನ್ನಿ ಮಂಟಪದವರೆಗೂ ರಾಜಬೀದಿಯಲ್ಲಿ ಮೆರವಣಿಗೆ ನಡೆಯುತ್ತದೆ. ಅಂದು ಸಾಯಂಕಾಲ ಬನ್ನಿ ಮರಕ್ಕೆ ಪೂಜೆಯನ್ನು ಅರ್ಪಿಸಿ ಪುನಃ ಆನೆಯ ಮೇಲೆ ಹೊರಟು ಅರಮನೆ ತಲಪುವುದು. ಈ ಬನ್ನಿ ಮರದ ಎಲೆಯನ್ನು ಎಲ್ಲರಿಗೂ ಕೊಟ್ಟು ಆಯುಷ್ಯ, ಆರೋಗ್ಯ, ಐಶ್ವರ್ಯ, ಸಂತಾನ, ಕೊಟ್ಟು ಕಾಪಾಡಲಿ ಎಂದು ಒಬ್ಬರಿಗೊಬ್ಬರು ಹರಸುವ ವಾಡಿಕೆ ಕರ್ನಾಟಕದ ಕೆಲ ಪ್ರದೇಶದಲ್ಲಿ ಈಗಲೂ ಚಾಲ್ತಿಯಲ್ಲಿದೆ.