ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು 2021-22 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. 2, 43, 734 ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಿರುವ ಬಿಎಸ್ ವೈ ಈ ಬಾರೀಯ ಬಜೆಟ್ ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಮಣೆ ಹಾಕಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನವಾದ ಇಂದೇ ಬಜೆಟ್ ಮಂಡಿಸಿರುವ ಸಿಎಂ ಯಡಿಯೂರಪ್ಪ, ಹಲವು ಮಹಿಳಾಪರ ಯೋಜನೆಗಳನ್ನು ಘೋಷಿಸುವ ಮೂಲಕ ಮಹಿಳೆಯರ ಗಮನದ ಸೆಳೆದಿದ್ದಾರೆ.
ಈ ಪೈಕಿ ಉದ್ಯೋಗಸ್ಥ ಹಾಗೂ ಗಾರ್ಮೆಂಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರಿಗೆ ಬಿಎಂಟಿಸಿ ಬಸ್ ನಲ್ಲಿ ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ನೀಡಿರುವ ‘ವನಿತಾ ಸಂಗಾತಿ’ ಯೋಜನೆ ಹೊಸ ಯೋಜನೆಯನ್ನು ಘೋಷಿಸಿದ್ದಾರೆ ಇದಕ್ಕಾಗಿ 30 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಜೊತೆಗೆ ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಇ-ಮಾರುಕಟ್ಟೆ ಯೋಜನೆಯನ್ನು ಪರಿಚಯಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿನ ಮಹಿಳೆಯರಿಗೆ ನೆರವಾಗಲು ಹಾಗೂ ಮಕ್ಕಳ ಆರೈಕೆಯ ದೃಷ್ಟಿಯಿಂದ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣಗೊಳಿಸುವ ನಿರ್ಧಾರ ಕೈಗೊಂಡಿರುವ ಸಿಎಂ, ಇದಕ್ಕಾಗಿಯೇ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದಾರೆ. ಇದರಿಂದ ಮಹಿಳೆಯರಿಗೆ ಉದ್ಯೋಗವಕಾಶಗಳು ತೆರೆದುಕೊಳ್ಳಲಿವೆ.
ಇನ್ನು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ನಿರ್ಭಯಾ ಯೋಜನೆಯಡಿ 7500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಬಿಎಸ್ ವೈ ಸರ್ಕಾರ ನಿರ್ಧರಿಸಿದೆ.
ಮಹಿಳಾ ಉದ್ಯಮಿಗಳಿಗೆ ಶೇ 4 ರೂಪಾಯಿ ಬಡ್ಡಿ ದರದಲ್ಲಿ 2 ಕೋಟಿ ರೂಪಾಯಿ ವರೆಗೆ ಸಾಲ ಸೌಲಭ್ಯ ಹಾಗೂ ಗರ್ಭಿಣಿಯರ ಸ್ಕ್ಯಾನಿಂಗ್ ಗಾಗಿ ಚಿಗುರು ಯೋಜನೆ ಸೇರಿದಂತೆ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನೇ ಇಟ್ಟಿರುವ ಸಿಎಂ ಯಡಿಯೂರಪ್ಪ. ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ಒಟ್ಟು 37,188 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.