ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಅತ್ಯತ್ತಮ ನಟಿ ಪ್ರಶಸ್ತಿ ಸಿಕ್ಕಿದ್ದರೆ ಕನ್ನಡದ ‘ಅಕ್ಷಿʼ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ದೊರಕಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಇಂದು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ ಮಣಿಕರ್ಣಿಕಾ ಹಾಗೂ ಪಂಗಾ ಚಿತ್ರದ ನಟನೆಗಾಗಿ ನಟಿ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದಹಾಗೆ ಕಂಗನಾ ಅವರಿಗೆ ನಾಲ್ಕನೇ ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಂತಾಗಿದೆ.
ಇನ್ನು ಅಸುರನ್ ಚಿತ್ರದ ಮನೋಜ್ಞ ನಟನೆಗಾಗಿ ತಮಿಳಿ ಸ್ಟಾರ್ ನಟ ಧನುಷ್ ಹಾಗೂ ಬೋಂಸ್ಲೆ ಚಿತ್ರದ ನಟನೆಗೆ ಮನೋಜ್ ಬಾಜಪೇಯಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂದಹಾಗೆ ಕನ್ನಡದ 2 ಚಿತ್ರಗಳು ಈ ಬಾರಿ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿವೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಗುರುತಿಸಲಾದ ಭಾಷೆಗಳಲ್ಲಿನ ಚಲನಚಿತ್ರ ವಿಭಾಗದಲ್ಲಿ ‘ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ದೊರಕಿದೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ದೊರಕಿದೆ.

ಇನ್ನು ಬಿಡುಗಡೆಯಾಗಬೇಕಿರುವ ಮಲಯಾಳಂನ ಮರಕ್ಕರ್ ಅರಬಿ ಕಡಲಿಂಟೆ ಸಿಂಹಮ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ನೋಡುಗರ ಮೆಚ್ಚುಗೆ ಗಳಿಸಿದ್ದ ಸೂಪರ್ ಡಿಲಕ್ಸ್ ಚಿತ್ರಗಾಗಿ ತಮಿಳಿನ ಪ್ರತಿಭಾನ್ವಿತ ನಟ ವಿಜಯ್ ಸೇತುಪತಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ.