ವಿವಿಧ ವಲಯಗಳ ಒತ್ತಾಯಕ್ಕೆ ಮಣಿದಿರುವ ದೆಹಲಿ ಸರ್ಕಾರ, ಮದ್ಯ ಸೇವನೆಯ ಕನಿಷ್ಠ ವಯೋಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಿರುವುದಾಗಿ ಪ್ರಕಟಿಸಿ
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ, ಇನ್ನು ಮುಂದೆ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ ಹಾಗೂ ಮದ್ಯ ಮಾರಾಟ ಮಾಡುವುದು ಸರ್ಕಾರದ ಕೆಲಸವಲ್ಲ. ಹೀಗಾಗಿ ನಮ್ಮ ಸರ್ಕಾರ ಇನ್ನುಮುಂದೆ ಯಾವುದೇ ಮದ್ಯದಂಗಡಿಗಳನ್ನು ನಡೆಸುವುದಿಲ್ಲ ಎಂದೂ ತಿಳಿಸಿದ್ದಾರೆ.
ಆದರೆ, ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್, ಮದ್ಯ ಸೇವನೆಯ ಕನಿಷ್ಠ ವಯೋಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಿರುವುದರಿಂದ ಹಾಗೂ ಎಲ್ಲ ಮದ್ಯದಂಗಡಿಗಳನ್ನು ಖಾಸಗೀಕರಣಗೊಳಿಸುವುದರಿಂದ ದೆಹಲಿಯು ನಶೆಯ ರಾಜಧಾನಿಯಾಗಿ ಬದಲಾಗಲಿದೆ ಎಂದು ಹೇಳಿದೆ.
ಮನೀಷ್ ಸಿಸೋಡಿಯಾ ಈ ವಿಷಯವನ್ನು ಪ್ರಕಟಿಸಿದ ಮರುಕ್ಷಣವೇ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ಪ್ರಕಟಿಸಲಾಗಿರುವ ಅಬಕಾರಿ ಸುಧಾರಣೆಗಳು ದೆಹಲಿಯಲ್ಲಿನ ಮದ್ಯ ಮಾಫಿಯಾಗೆ ದೊಡ್ಡ ಹೊಡೆತ ನೀಡಲಿದೆ ಎಂದಿದ್ದಾರೆ. ಮದ್ಯ ಮಾಫಿಯಾ ಈ ಸುಧಾರಣೆಗಳಿಗೆ ತಡೆ ಒಡ್ಡಲು ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡಲಿವೆ. ಆದರೆ, ಆಪ್ ಸರ್ಕಾರವು ಶಿಕ್ಷಣ, ನೀರು, ವಿದ್ಯುತ್, ಆರೋಗ್ಯ ಮುಂತಾದ ವಲಯಗಳಲ್ಲಿದ್ದ ಮಾಫಿಯಾಗಳಿಗೆ ಕೊನೆ ಹಾಡಿದ್ದು, ಈ ವಲಯದಲ್ಲೂ ಅದೇ ಬಗೆಯ ಸುಧಾರಣೆ ತರಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಸಚಿವರ ಗುಂಪಿನ ಶಿಫಾರಸಿನ ಮೇರೆಗೆ ನೂತನ ಅಬಕಾರಿ ನೀತಿಗಳಿಗೆ ದೆಹಲಿ ಸಚಿವ ಸಂಪುಟವು ಅನುಮೋದನೆ ನೀಡಿದೆ.