ಪ್ರಧಾನಿ ಮೋದಿಯವರ ಬಾಂಗ್ಲಾ ಭೇಟಿ ಹಿಂಸಾಚಾರಕ್ಕೆ ಕಾರಣವಾಗಿದೆ. ಮೋದಿ ಭೇಟಿಯ ವಿರುದ್ಧ ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರತಿಭಟನೆಯ 3ನೇ ದಿನವಾದ ಮೇ 28 ರಂದು ಕೂಡ ಹಿಂಸಾಚಾರ ನಡೆದಿದೆ. ಇಸ್ಲಾಮಿಕ್ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಸಂಘರ್ಷದಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

16.8 ಕೋಟಿ ಮುಸ್ಲಿಂ ಜನಸಂಖ್ಯಾ ಬಾಹುಳ್ಯವಿರುವ ಬಾಂಗ್ಲಾದಲ್ಲಿನ ಪ್ರಮುಖ ಜಿಲ್ಲೆಗಳಲ್ಲಿ ಪೊಲೀಸರು ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ ಪರಿಣಾಮ ಶುಕ್ರವಾರ ಐದು ಮಂದಿ ಮೃತರಾಗಿದ್ದರೆ, ಮರುದಿನ ಆರು ಮಂದಿ ಸಾವನ್ನಪ್ಪಿದ್ದಾರೆ.

ಬಾಂಗ್ಲಾದೇಶವು ತನ್ನ 50ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ್ದು, ಅವರು ತಮ್ಮ ದೇಶದಲ್ಲಿ ಮುಸ್ಲಿಮರ ವಿರುದ್ಧ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತೀವ್ರವಾದಿ ಇಸ್ಲಾಮಿಕ್ ಗುಂಪಾದ ಹೆಫಾಸತ್-ಇ-ಇಸ್ಲಾಂಗೆ ಸೇರಿದ ಪ್ರತಿಭಟನಾಕಾರರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಧಾನಿ ಢಾಕಾಗಿಂತ ಕೊಂಚ ಹೊರವಲಯದಲ್ಲಿರುವ ನಾರಾಯಣ್ ಗಂಜ್ ನಲ್ಲಿ ಜರುಗಿರುವ ನೂತನ ಪ್ರತಿಭಟನೆಯಲ್ಲಿ ಹೆಫಾಸತ್ ಗುಂಪಿನ ಸದಸ್ಯರು, “ಕ್ರಮ, ಕ್ರಮ, ನೇರ ಕ್ರಮ” ಎಂದು ಘೋಷಣೆಗಳನ್ನು ಕೂಗುತ್ತಾ, ಢಾಕಾ ಹಾಗೂ ಬಂದರು ನಗರಿ ಚಿತ್ತಗಾಂಗ್ ಅನ್ನು ಸಂಪರ್ಕಿಸುವ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ.

ನೂರಾರು ಪ್ರತಿಭಟನಾಕಾರರು ಮೋದಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಪೀಠೋಪಕರಣ ಹಾಗೂ ಟೈರ್ ಗಳನ್ನು ಸುಟ್ಟು ಹಾಕಿದರು. ನಂತರ ಪೊಲೀಸರ ಗೋಲಿಬಾರ್ ಕುರಿತು ತನಿಖೆ ನಡೆಸುವಂತೆ ಪ್ರಾಧಿಕಾರಗಳನ್ನು ಒತ್ತಾಯಿಸಿದರು.

ಬಾಂಗ್ಲಾ ದೇಶದ ಅತಿ ದೊಡ್ಡ ದಿನಪತ್ರಿಕೆಯಾದ ‘ಪ್ರೊಥೊಮ್ ಅಲೊ’, ನಾರಾಯಣ್ ಗಂಜ್ ನಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಠ 15 ಮಂದಿ ಗಾಯಾಳುಗಳಾಗಿದ್ದಾರೆ ಎಂದು ವರದಿ ಮಾಡಿದೆ.