ಸಿ. ಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಇಂದಿನ ವಿಚಾರಣೆ ಮುಕ್ತಾಯಗೊಂಡಿದೆ. ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ಸೆಲ್ ಯುವತಿಯ ವಿಚಾರಣೆ ನಡೆದಿದ್ದು, ಬಳಿಕ ಪೊಲೀಸರು ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
ಪ್ರಕರಣದಲ್ಲಿ ಜೈವಿಕ ಸಾಕ್ಷಿ ಸಿಗೋದು ಕಷ್ಟಸಾಧ್ಯ ಎನ್ನಲಾಗ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಘಟನೆ ನಡೆದಿರೋದಾಗಿ ಯುವತಿ ಎಸ್ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ನಾಳೆ ಎಸ್ಐಟಿ ಅಧಿಕಾರಿಗಳ ತಂಡ ಕೃತ್ಯ ನಡೆದ ಸ್ಥಳದ ಪಂಚನಾಮೆ ಮಾಡುವ ಸಾಧ್ಯತೆ ಇದೆ. ಪಂಚನಾಮೆಯಲ್ಲಿ ಯಾವುದೇ ಜೈವಿಕ ಸಾಕ್ಷ್ಯಗಳು ಸಿಗುವುದು ಸಾಧ್ಯವಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಟೆಕ್ನಿಕಲ್ ಎವಿಡೆನ್ಸ್ ಗಳಷ್ಟೇ ಈ ಪ್ರಕರಣಕ್ಕೆ ಆಧಾರವಾಗಿದೆ. ಕಾಲ್ ರೆಕಾರ್ಡ್, ಕೃತ್ಯದ ಕೆಲ ವೀಡಿಯೋ ತುಣುಕುಗಳು ಇವಷ್ಟೇ ಕೇಸ್ ನ ಪ್ರಮುಖ ಅಂಶಗಳಾಗಲಿವೆ. ಈ ಪ್ರಕರಣದಲ್ಲಿ ಜೈವಿಕ ಸಾಕ್ಷ್ಯಗಳ ಬದಲು ಟೆಕ್ನಿಕಲ್ ಸಾಕ್ಷ್ಯಗಳೇ ಹೆಚ್ಚಾಗಿ ಪರಿಗಣನೆಗೆ ಬರುವ ಸಾಧ್ಯತೆ ಇದೆ.
ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ತನಿಖಾಧಿಕಾರಿ ಕವಿತಾ ಯುವತಿಯ ವಿಚಾರಣೆ ನಡೆಸಿದರು. 161ನೇ ಸ್ಟೇಟ್ಮೆಂಟ್ ಅನ್ನು ಮುಂದುವರೆಸಿ ಯುವತಿಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಅಪರಾಧ ನಡೆದ ಸ್ಥಳಗಳ ವಿವರವನ್ನು ಪಡೆಯಲಾಗಿದೆ. ನಾಳೆ ಯುವತಿಯ ಸಮ್ಮುಖದಲ್ಲಿ ಅಪರಾಧ ನಡೆದ ಸ್ಥಳದ ಮಹಜರು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.