ಬೆಳಗಾವಿ: ರಮೇಶ್ ಜಾರಕಿಹೊಳಿ ಕೋವಿಡ್ 19 ದೃಢಪಟ್ಟು ಗೋಕಾಕ್ ತಾಲ್ಲೂಕು ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ಆಸ್ಪತ್ರೆ ವೈದ್ಯರಿಂದ ಮಾಹಿತಿ ಹಾಗೂ ಕೆಲ ದಾಖಲೆಗಳನ್ನು ವಶಕ್ಕೆ ಪಡೆದರು.
ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರರಿಂದ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು, ರಮೇಶ್ ಜಾರಕಿಹೊಳಿ ಯಾವಾಗ ಆಸ್ಪತ್ರೆಗೆ ದಾಖಲಾದರು, ಕೋವಿಡ್-19 ಯಾವಾಗ ದೃಢಪಟ್ಟಿತು, ಸದ್ಯ ಅವರ ಆರೋಗ್ಯದ ಸ್ಥಿತಿ ಹೇಗಿದೆ ಹಾಗೂ ಮತ್ತು ಇನ್ನೆಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕು ಎಂಬ ಬಗ್ಗೆ ಪ್ರಶ್ನಿಸಿ, ಕೆಲ ದಾಖಲೆಗಳನ್ನು ಅವರಿಂದ ಸಂಗ್ರಹಿಸಿದರು.
ಒಂದೂವರೆ ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ರಮೇಶ್ ಜಾರಕಿಹೊಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆದು ನಂತರ ಆಸ್ಪತ್ರೆಯಿಂದ ತೆರಳಿದರು.
ಸೆಕ್ಸ್ ಸಿಡಿ ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಎದುರು ಸಂತ್ರಸ್ತ ಯುವತಿ ಹಾಜರಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಬಂಧನವಾಗಬಹುದು ಎಂಬ ಪುಕಾರು ರಾಜಕೀಯ ವಲಯದಲ್ಲಿ ಹಬ್ಬಿತ್ತು. ಇದರ ಬೆನ್ನಿಗೇ ರಮೇಶ್ ಜಾರಕಿಹೊಳಿ ಕೋವಿಡ್-19 ಸೋಂಕು ತಗುಲಿ, ಆಸ್ಪತ್ರೆಗೆ ದಾಖಲಾಗಿದ್ದರು.