ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಮಾಣ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಹಾಗೂ ಸಂಬಂಧಿತ ಉಪಕರಣಗಳ ಸಾಗಣೆ ಮಾಡುವ ಎಲ್ಲ ಹಡಗುಗಳಿಗೂ ಶುಲ್ಕ ವಿನಾಯಿತಿ ನೀಡುವಂತೆ ಪ್ರಮುಖ ಬಂದರುಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಂದರು, ಸಾಗಣೆ ಹಾಗೂ ಜಲಮಾರ್ಗ ಸಚಿವಾಲಯವು, ವೈದ್ಯಕೀಯ ದರ್ಜೆಯ ಆಮ್ಲಜನಕ, ಆಮ್ಲಜನಕ ಟ್ಯಾಂಕ್, ಆಮ್ಲಜನಕ ಬಾಟಲಿಗಳ ಸರಕುಗಳ ಸಾಗಣೆಗೆ ಸ್ಥಳಾವಕಾಶ ಒದಗಿಸಲು ನಾವೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಹಾಗೂ ಬಂದರು ದತ್ತಿ(ನಾವೆ ಸಂಬಂಧಿತ ಶುಲ್ಕಗಳು, ಶೇಖರಣಾ ಶುಲ್ಕಗಳು ಇತ್ಯಾದಿ)ಗೆ ವಿನಾಯಿತಿ ನೀಡಬೇಕು ಎಂದು ಹೇಳಿದೆ.
ಬಂದರಿನಲ್ಲಿ ಇಂತಹ ಸರಕುಗಳಿಗೆ ಆದ್ಯತೆಯ ಆಧಾರದಲ್ಲಿ ನಾವೆಗಳಲ್ಲಿ ಸ್ಥಳಾವಕಾಶ ಒದಗಿಸಬೇಕು ಹಾಗೂ ವೈಯಕ್ತಿಕವಾಗಿ ಸರಕು ಸಾಗಣೆಯ ಮೇಲುಸ್ತುವಾರಿ ವಹಿಸಬೇಕು ಎಂದು ಬಂದರು ಮುಖ್ಯಸ್ಥರನ್ನು ಕೋರಲಾಗಿದೆ. ಹಾಗೆಯೇ ಆಮ್ಲಜನಕ ಸಂಬಂಧಿತ ಸರಕುಗಳನ್ನು ಸುಂಕ ಹಾಗೂ ಇತರ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ತ್ವರಿತವಾಗಿ ಬಿಡುಗಡೆ ಮಾಡುವುದು, ದಾಖಲೀಕರಣ ಹಾಗೂ ತ್ವರಿತ ವಿಲೇವಾರಿ ಮಾಡುವುದನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದೂ ಹೇಳಲಾಗಿದೆ.
ಕೋವಿಡ್-19 ಎರಡನೆ ಅಲೆಯಿಂದ ನಾವು ತುರ್ತು ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಪ್ರಮುಖ ಬಂದರುಗಳು ಇಂದಿನಿಂದಲೇ ಸೂಚನೆಯನ್ನು ಅನುಷ್ಠಾನಗೊಳಿಸಲು ಶುರು ಮಾಡಲಿವೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.