ಆ ಕುಟುಂಬಸ್ಥರು ತಮ್ಮ ತೃತೀಯ ಪುತ್ರನ ಮದುವೆ ನಿಶ್ಚಯ ಮಾಡಿದ್ರು. ಎರಡು ಮೂರು ತಿಂಗಳಿಂದ ಎಲ್ಲ ತಯಾರಿ ಮಾಡಿಕೊಂಡು ಮಗನ ಮದುವೆ ಮಾಡೋದಕ್ಕೆ ಸಿದ್ಧವಾಗಿದ್ದರು. ಇನ್ನೇನು ಲಗ್ನಪತ್ರಿಕೆ ಪ್ರಿಂಟ್ ಮಾಡೋ ಹೊತ್ನಲ್ಲೇ ಕೊರೊನಾ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಾ ಸಾಗಿತು. ದಿನದಿಂದ ದಿನಕ್ಕೆ ಇದರ ಉಪಟಳ ಹೆಚ್ಚಾಗತೊಡಗಿತು. ಮದುವೆ ಮಾಡುವ ಸಂದರ್ಭದಲ್ಲಿ ಲಾಕ್ ಡೌನ್ ಆದ್ರೆ ಏನ್ಮಾಡೋದು ಅಂತ ವಿಚಾರ ಮಾಡಿದಾಗ ಆ ಕುಟುಂಬ ಕೊರೊನಾಗೆ ಸೆಡ್ಡು ಹೊಡೆದು ಹೀಗೊಂದು ವೇಳೆ ಲಾಕ್ ಡೌನ್ ಆದ್ರೆ ಮನೆ ಮುಂದೆನೇ ಮದುವೆ ಮಾಡೋದಕ್ಕೆ ನಿರ್ಧರಿಸಿದರು.
ಹೌದು.. ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದ ಫಕೀರಪ್ಪ ಶಿರಸಂಗಿ ಕುಟುಂಬಸ್ಥರು ತಮ್ಮ ಮೂರನೆ ಮಗನ ಮದುವೆ ಮಾಡೋದಕ್ಕೆ ನಿಶ್ಚಯಿಸಿದ್ದರು. ಮಧ್ಯಮ ಕುಟುಂಬಸ್ಥರು ಆಗಿದ್ದರಿಂದ ಇದ್ದುದರಲ್ಲಿಯೇ ಅದ್ಧೂರಿಯಾಗಿ ಮಗನ ಮದುವೆ ಮಾಡಬೇಕು ಅಂತ ಎರಡು ತಿಂಗಳ ಹಿಂದೆಯೇ ಗದಗ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಾಲ್ ಬುಕ್ ಮಾಡಿದ್ದರು. ಇನ್ನೇನು ಲಗ್ನ ಪತ್ರಿಕೆಗಳನ್ನ ಪ್ರಿಂಟ್ ಮಾಡಿಸಿ ಬಂಧು ಬಳಗಕ್ಕೆ ಹಂಚಬೇಕು ಎನ್ನುವಷ್ಟರಲ್ಲೇ ಕೊರೊನಾ 2ನೇ ಅಲೆ ಅಪ್ಪಳಿಸಿಬಿಟ್ಟಿತು. ಜನತಾ ಕರ್ಪ್ಯೂ, ನೈಟ್ ಕರ್ಪ್ಯೂ ಅಂತ ಅಘೋಷಿತ ಬಂದ್ ಆಚರಣೆ ಸೇರಿದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡುಬಿಟ್ಟಿತು. ಹೀಗಾಗಿ ಅದ್ಧೂರಿಯ ಮದುವೆಯ ಬಗ್ಗೆ ಸಂಭ್ರಮ ಪಡುತ್ತಿದ್ದ ಕುಟುಂಬಸ್ಥರಿಗೆ ಭರಸಿಡಿಲು ಬಡಿದಂತಾಯ್ತು. ಒಂದು ವೇಳೆ ಲಾಕ್ ಡೌನ್ ಆದರೆ ಏನ್ಮಾಡು ಅಂತ ಯೋಚಿಸಿದಾಗ ಹೇಗಾದರೂ ಆಗಲಿ ಮದುವೆಯನ್ನ ನಿಲ್ಲಿಸುವುದು ಬೇಡ. ಕೊನೆ ಪಕ್ಷ ತಮ್ಮೂರಿನ ಮನೆ ಮುಂದೆಯಾದರೂ ಸರಳ ಮದುವೆ ಮಾಡೋದಕ್ಕೆ ನಿಶ್ಚಿಯಿಸಿಬಿಟ್ಟರು. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಲಾಕ್ ಡೌನ್ ಆದ ಸಂದರ್ಭದಲ್ಲಿ ವರನ ಸ್ವಗೃಹ ಬೆಳ್ಳೇರಿ ಗ್ರಾಮದಲ್ಲಿ ಮದುವೆ ಜರುಗುವುದು ಅಂತ ವಿಶೇಷ ಸೂಚನೆ ನೀಡಿ ಅಚ್ಚು ಮಾಡಿಸಿದರು. ಇದು ಈಗ ಗದಗದಲ್ಲಿ ಭಾರಿ ಶ್ಲಾಘನೆಗೆ ಕಾರಣವಾಗಿದೆ.
ಅದ್ಧೂರಿಯಾಗಿ ಮದುವೆ ಆಗೋದಕ್ಕೆ ಅಡ್ಡಿಯಾಗಿರೋ ಕೊರೊನಾಕ್ಕೆ ಹೆದರಿ ಮದುವೆ ನಿಲ್ಲಿಸೋದು ಬೇಡ ಏನೇ ಆಗಲಿ ಊರ ಮನೆ ಮುಂದಾದರೂ ಮದುವೆ ಮಾಡಿ ಒಂದಾಗಿ ಬಿಡೋಣ ಅಂತ ಭಾವಿ ಪತ್ನಿಗೆ ವರ ಹೇಳಿದ್ದ. ತಡ ಮಾಡದೆ ಆ ಕಡೆ ಓಕೆ ಅಂತ ಹೇಳಿಯೇ ಬಿಟ್ಟಳು ವಧು. ಅಂದಹಾಗೆ ವಧು ಧಾರವಾಡ ಮೂಲದವರು. ರೇಣುಕಾ ಮತ್ತು ಭೀಮಪ್ಪ ಎಂಬುವ ಜೇಷ್ಠ ಸುಪುತ್ರಿ. ವರ ಪ್ರವೀಣ ಮಾತ್ರ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದ ಫಕೀರಪ್ಪ ಶಿರಸಂಗಿ ಮತ್ತು ದೇವಕ್ಕ ಅವರ ತೃತೀಯ ಪುತ್ರ. ಇವರು ರೈತರು ಆಗಿದ್ದು ವರ ಗದಗನಲ್ಲಿ ಮೊಬೈಲ್ ಶಾಫ್ ವ್ಯಾಪಾರಿಯಾಗಿದ್ದಾರೆ. ಆದ್ರೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮದುವೆ ಅದ್ಧೂರಿಯಾಗಿಯೇ ನಡೆದಿದ್ದರೆ ಚೆನ್ನಾಗಿತ್ತು, ಆದ್ರೆ ಕೊರೊನಾ ಮಾತ್ರ ನಿರಾಸೆ ಮೂಡಿಸಿದೆ ಅಂತ ಅಸಮಾಧಾನ ಹೊರಹಾಕಿದರು.