ಬೆಂಗಳೂರು: ಕೊರೋನ ಸೋಂಕಿತೆ ಬೆಡ್ ಹಾಗೂ ಚಿಕಿತ್ಸೆ ಸಿಗದೆ ಮೃತಪಟ್ಟು ಎಂಟು ಗಂಟೆಯ ಬಳಿಕ ಬೆಡ್ ಇದೆ, ಐದು ನಿಮಿಷಕ್ಕೆ ಬಂದು ತಲುಪಿ ಎಂದು ಆಸ್ಪತ್ರೆಯಿಂದ ಕರೆ ಬಂದಿದೆ.
ಸರಕಾರ ಮತ್ತು ಬಿಬಿಎಂಪಿ ಬೆಂಗಳೂರಿನಲ್ಲಿ ಬೆಡ್, ಆಕ್ಸಿಜನ್, ಚಿಕಿತ್ಸೆಗೆ ಯಾವುದೇ ಸಮಸ್ಯೆಯಿಲ್ಲ, ಎಲ್ಲವೂ ಇದೆ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಮತ್ತೊಂದೆಡೆ ನಾವು ಅಂತ್ಯ ಸಂಸ್ಕಾರಕ್ಕೆ ಚಿತಾಗಾರಗಳನ್ನು ವ್ಯವಸ್ಥೆಗೊಳಿಸುತ್ತಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಸೋಂಕಿತರು ಆಂಬುಲೆನ್ಸ್, ಬೆಡ್, ಚಿಕಿತ್ಸೆ, ಆಕ್ಸಿಜನ್ ಸಿಗದೆ ಸಾಯುತ್ತಿರುವುದು, ಚಿತಾಗಾರಗಳಲ್ಲಿ ಕ್ಯೂ ಮುಂದುವರಿದಿದೆ.
ಸೋಂಕಿತರು ಸಹಾಯಕ್ಕಾಗಿ ಸಂಬಂಧಿಸಿದ ಸಹಾಯವಾಣಿಗಳಿಗೆ ಕರೆ ಮಾಡಿದರೆ ಉತ್ತರಿಸುವವರಿಲ್ಲ, ಸೋಂಕಿತರಿಗೆ ಹೇಗೆ ಚಿಕಿತ್ಸೆ ಲಭ್ಯವಿಲ್ಲದೆ ಸಾಯುತ್ತಿದ್ದಾರೋ ಅದೇ ರೀತಿ ಕೊರೋನ ಸೋಂಕಿತರಲ್ಲದ ರೋಗಿಗಳಿಗೂ ಚಿಕಿತ್ಸೆ ದೊರೆಯದೆ ಸಾಯುತ್ತಿದ್ದಾರೆ.
ಕಮ್ಮನ ಹಳ್ಳಿಯ ರೆಜಿನಾ ಎಂಬವರಿಗೆ ಮಂಗಳವಾರ ಕೊರೋನ ದೃಢಪಟ್ಟಿತ್ತು. ಲಕ್ಷಣಗಳಿದ್ದರೂ, ಯಾವುದೇ ತೀವ್ರ ತರದ ಸಮಸ್ಯೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮರು ದಿನ ರೆಜಿನಾ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಇದರಿಂದ ಆತಂಕಗೊಂಡ ಕುಟುಂಬ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದೆ. ಆಸ್ಪತ್ರೆಗೆಳಿಗೆ ಕರೆ ಮಾಡಿ ವಿಚಾರಿಸಿದೆ. ಸರಕಾರದ ಹೆಲ್ಪ್ ಸೆಂಟರ್ ಗೂ ಕರೆ ಮಾಡಿದ್ದಾರೆ. ಆದರೆ ಬೆಡ್, ಆಕ್ಸಿಜನ್. ಅಂಬ್ಯುಲೆನ್ಸ್ ಸಿಗಲೇ ಇಲ್ಲ.
ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸೋಂಕಿತೆ ರೆಜಿನಾ ಮೃತಪಟ್ಟಿದ್ದಾರೆ. ಮೃತಪಟ್ಟ ಎಂಟು ಗಂಟೆಗಳ ಬಳಿಕ ಕುಟುಂಬಸ್ಥರಿಗೆ ಆಸ್ಪತ್ರೆಯಿಂದ ಕರೆ ಬಂದಿದೆ. ಬೆಡ್ ಇದೆ ಐದು ನಿಮಿಷಗಳಲ್ಲಿ ಆಸ್ಪತ್ರೆಗೆ ಬಂದು ತಲುಪಿ ಎಂದು ಹೇಳಿದ್ದಾರೆ.