ಇದೆ… ಕಾರಣ ಇದೆ… ಓದಿ…
ಇದೆಲ್ಲ ಶುರುವಾಗಿದ್ದು ೧೬೯೨ ರಿಂದಲೇ… ಮರಾಠಾ ಸರದಾರ ಸಂತಾಜಿ ಘೋರ್ಪಡೆ ಕಲಬುರಗಿಗೆ ಬಂದಿಳಿದು ಅಲ್ಲಿದ್ದ ಮುಘಲರ ಮೇಲೆ ಮುತ್ತಿಗೆ ಹಾಕಿದ… ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಅಗಾಧ ಸೈನಿಕ ದಳಗಳನ್ನು ಹೊಂದಿದ್ದ ಮರಾಠ ಸೇನೆ ಅಲ್ಲಲ್ಲಿ ಹಂಚಿ ಹೋಗಿತ್ತು… ಮುಘಲರ ಹಿಡಿತ ಕರ್ನಾಟಕದಲ್ಲಿ ಎಲ್ಲೆಲ್ಲಿತ್ತೋ… ಅಲ್ಲೆಲ್ಲ ಕರಾರುವಾಕ್ಕಾಗಿ ಮರಾಠಾ ದಾಳಿ ಶುರುವಾಯಿತು…
ಆ ಕಾಲಕ್ಕೆ ಶಿವಾಜಿಯ ಮಗ ರಾಜಾರಾಮ ಜಿಂಜಿಯಲ್ಲಿದ್ದ… ರಣಹದ್ದುಗಳಂತೆ ಹೊಂಚು ಹಾಕುತ್ತಿದ್ದ ಮುಘಲರ ಕಬಂಧ ಬಾಹುಗಳಿಂದ ಅವನನ್ನು ರಕ್ಷಿಸಲು ಸಂತಾಜಿ ಘೋರ್ಪಡೆ ಜಿಂಜಿಗೆ ಹೊರಟು ನಿಂತ… ಕಲಬುರಗಿಯಿಂದ ಜಿಂಜಿಗೆ ಹೋದ ಸಂತಾಜಿ ಘೋರ್ಪಡೆ ಮೂರು ವರ್ಷಗಳ ತರುವಾಯ ಹಿಂದಿರುಗಿದ ಮರಾಠ ಸರದಾರ ಕಲಬುರಗಿಯಿಂದ ಮೊದಲ್ಗೊಂಡು ಎಲ್ಲೆಲ್ಲಿ ಔರಂಗಜೇಬನ ಹಿಡಿತವಿದೆಯೋ ಅಲ್ಲೆಲ್ಲ ಲೂಟಿ ಆರಂಭಿಸಿದ… ನೀವು ಆಶ್ಚರ್ಯ ಪಡಬಹುದೇನೋ… ಕಲಬುರಗಿಯಿಂದ ಆರಂಭಿಸಿ ಮೈಸೂರು ಸಂಸ್ಥಾನದವರೆಗೂ ಮರಾಠರು ಲೂಟಿಗಳನ್ನು ಆರಂಭಿಸಿದರು ಅಂದ್ರೆ ಅವರ ಸೈನಿಕ ಬಲ ಎಷ್ಟಿತ್ತೊ ಊಹಿಸಿ…
ಮುಘಲ್ ಸಾಮ್ರಾಟ ಔರಂಗಜೇಬನಿಗೆ ತಲೆ ಕೆಟ್ಟು ಹೋಯಿತು… ಮರಾಠರನ್ನು ಎದುರಿಸಲು ಸಮರ್ಥರಾದ ಸೇನಾಪತಿಗಳನ್ನು ನಿಯೋಜಿಸಿದ… ಕೊಪ್ಪಳಕ್ಕೆ ಹಿಮ್ಮತ್ ಖಾನ್… ಬಿಜಾಪುರದ ಫಾಸಲೆಗೆ ಯುವರಾಜ ಕಾಮ್ ಭಕ್ಷ್… ಮತ್ತು ಖುದ್ದು ಸಂತಾಜಿ ಘೋರ್ಪಡೆಯನ್ನೆದುರಿಸಲು ಸಿರಾದ ಸುಬೇದಾರ್ ಖಾಸಿಂ ಖಾನ್… ಅವನ ಜೊತೆಗೆ ದಿಲ್ಲಿಯಿಂದ ಸಾಮ್ರಾಟರ ಪರವಾಗಿ ಬಂದ ಖಾನ್ ಜಾದ್ ಖಾನ್… ಬಂದಿದ್ದೇ ಸಿರಾದಲ್ಲಿದ್ದ ಖಾಸಿಂ ಖಾನ್ ನನ್ನು ಸೇರಿಕೊಂಡ…
ತನ್ನ ಇಪ್ಪತ್ತೈದು ಸಾವಿರ ಸೈನಿಕ ಪಡೆಯೊಂದಿಗೆ… ಆ ಕಾಲಕ್ಕೆ ದೇಶದಲ್ಲೇ ಅತ್ಯುತ್ತಮವಾದ ಫಿರಂಗಿ ದಳದೊಂದಿಗೆ ಸಿರಾದಿಂದ ಹೊರಟ ಖಾಸಿಂ ಖಾನ್ ಮತ್ತು ಖಾನ್ ಜಾದ್ ಖಾನ್ ಸಂತಾಜಿ ಘೋರ್ಪಡೆ ಬಂದು ಎರಗೋದಕ್ಕೆ ಮುಂಚಿತವಾಗೇ ತಾವೇ ಅವನ ಮೇಲೆ ಬಿದ್ದು ಬಿಡಬೇಕೆಂದು ಹೊಂಚು ಹಾಕಿ ಸರಸರನೆ ಬಂದು ದೊಡ್ಡೇರಿ ತಲುಪಿಕೊಂಡರು…
ಸಂತಾಜಿ ಘೋರ್ಪಡೆಯ ಸೈನ್ಯ ಇನ್ನೂ ಹನ್ನೆರಡು ಮೈಲು ದೂರದಲ್ಲಿತ್ತು…
ಇವರ ಬರುವಿಕೆಯನ್ನೇ ಕಾಯುತ್ತಿದ್ದ ಚಿತ್ರದುರ್ಗದ ಬೇಹು… ಮಿಂಚಿನ ವೇಗದಲ್ಲಿ ಹಿಂದಿರುಗ ಬಂದು ವರದಿ ಒಪ್ಪಿಸಿತು…
ಏಕನಾಥಿಗೆ ಬೆಳಗಿದ್ದ ಕರ್ಪೂರದಾರತಿ ಧಗಧಗನೆ ಉರಿಯುತ್ತಿತ್ತು… ಅರೆಕ್ಷಣ ಭಕ್ತಿಯಿಂದ ಕೈಮುಗಿದು ನಿಂತಿದ್ದ ಭರಮಣ್ಣ ಧೃಡವಾದ ಹೆಜ್ಜೆಗಳನ್ನಿಡುತ್ತಾ ಹೊರಬಂದು ಕುದುರೆಯೇರಿ ದುರ್ಗದ ದುರ್ಭೆದ್ಯ ಕೋಟೆಯೂ ಅದುರುವಂತೆ ಘರ್ಜಿಸಿದ…
ಹರ ಹರ ಮಹಾದೇವಾ…
ಇಪ್ಪತ್ತು ಸಾವಿರ ಬೇಡರ ಪಡೆಯೊಂದಿಗೆ ಹೊರಟ ಭರಮಣ್ಣ…
ಎಲ್ಲಾ ಸರಿ… ಮೊಘಲರ ಮರಾಠರ ಯುದ್ಧಕ್ಕೆ ಭರಮಣ್ಣ ಮಧ್ಯ ಪ್ರವೇಶಿಸಿದ್ದು ಯಾಕೆ…
ಯಾಕೆಂದ್ರೆ… ಔರಂಗಜೇಬ… ಅಷ್ಟು ಪರಿಪರಿಯಾಗಿ ಹಿಂಸೆ ಕೊಟ್ಟಿದ್ದ… ಯಾವುದೇ ಕಾರಣಕ್ಕೂ ದುರ್ಗದ ಸೈನ್ಯ ಮರಾಠರ ಬೆನ್ನಿಗೆ ನಿಲ್ಲಬಾರದು… ಬದಲಾಗಿ ಮುಘಲರಿಗೆ ಸಹಾಯ ಮಾಡಿ ಮರಾಠರನ್ನು ಗೆಲ್ಲಲ್ಲು ಬೆನ್ನಿಗೆ ನಿಲ್ಲಬೇಕು… ಉಹೂಂ… ಒಪ್ಪಿರಲಿಲ್ಲ ಭರಮಣ್ಣ… ಅಪಾರ ಪ್ರಮಾಣದ ಹಣದ ರೂಪದಲ್ಲಿ ಕಂದಾಯ ದಿಲ್ಲಿಗೆ ಸಲ್ಲಿಕೆಯಾಗುತ್ತಿತ್ತು… ಅಷ್ಟಾದರೂ ಚಂಡೀ ಹಠದ ಔರಂಗಜೇಬನದು ಒಂದೇ ವರಾತ… ನಮ್ಮ ಜೊತೆ ನಿಲ್ಲಬೇಕು… ಸಹಿಸಿ ಸಾಕಾಗಿ ಹೋಗಿತ್ತು ಭರಮಣ್ಣನಿಗೆ… ಇವನ ಕಾಟದಿಂದ ಹೊರಗೆಲ್ಲೂ ಮರಾಠರ ಜೊತೆಯಾಗಿ ಕಾಣಿಸಿಕೊಳ್ಳುವಂತಿರಲಿಲ್ಲ… ಸೂಕ್ತ ಸಮಯಕ್ಕಾಗಿ ಅಪಾರ ತಾಳ್ಮೆಯಿಂದ ತನ್ನ ಬೇಟೆಯನ್ನು ಕಾಯುವ ಹೆಬ್ಬುಲಿಯಂತೆ ಹೊಂಚು ಹಾಕಿ ಕಾದಿದ್ದ ಭರಮಣ್ಣ… ಇವತ್ತು ಆ ಸಮಯ ಬಂದಿತ್ತು…
ಬೇಟೆ ತನ್ನ ಫಾಸಲೆಗೇ ಬಂದು ನಿಂತಿತ್ತು…
ಇದಾವುದರ ಅರಿವಿಲ್ಲದ ಖಾಸಿಂ ಖಾನ್ ದೊಡ್ಡೇರಿಯಲ್ಲೇ ಡೇರೆ ಹಾಕಿ ಮರಾಠರಿಗಾಗಿ ಕಾದು ಕುಳಿತಿದ್ದ… ರಣಬೇಟೆಗಾರ ಭರಮಣ್ಣನ ಬೇಡರ ಪಡೆ ನಿಧಾನವಾಗಿ ಸಂಜೆಗತ್ತಲಾವರಿಸಿ ಹಗಲನ್ನು ನುಂಗುವಂತೆ ಶತ್ರುಪಡೆಯನ್ನು ಸುತ್ತುವರೆದು ನಿಂತಿತು…
ದಿಕ್ಕೆಟ್ಟವನಂತೆ ಓಡೋಡಿ ಬಂದ ಕಲಾಸಿಯವನೊಬ್ಬ ಏದುಸಿರು ಬಿಡುತ್ತಲೇ ಖಾಸಿಂ ಖಾನನಿಗೆ ದುರ್ಗದ ಸೈನ್ಯ ಬಂದಿರೋದನ್ನ ಹೇಳಿದ… ಅವನ ಕನಸಿನಲ್ಲೂ ಎಣಿಸದಿದ್ದ ಖಾಸಿಂ ಖಾನ್ ಓಡು ಹೆಜ್ಜೆ ಹಾಕುತ್ತಲೇ ಹೊರಬಂದು ನೋಡಿದ…
ಅವನ ಕೈಕಾಲುಗಳೆಲ್ಲ ತಣ್ಣಗಾಗಿ ಹೋದುವು…