ಇಪ್ಪತ್ತು ಸಾವಿರದಷ್ಟಿದ್ದ… ಆರಡಿ ಎತ್ತರದ , ಧೃಢಕಾಯರಾದ , ಕರ್ರನೆ ಮಿರಿಮಿರಿ ಮಿಂಚುತ್ತಿದ್ದ ನಾಗರ ಹೆಡೆಯಂತೆ ಹರಡಿಕೊಂಡಿದ್ದ ವಿಶಾಲವಾದ ಎದೆಯುಳ್ಳ , ಎಂಥವನನ್ನೂ ಸೀಳಿ ಹರಿದು ಹಾಕಬಲ್ಲ ಅಜಾನುಬಾಹುಗಳಾದ , ಹೆಬ್ಬಂಡೆಯಂಥ ಗಟ್ಟಿ ಗುಂಡಿಗೆಯುಳ್ಳ , ಭಯವೆಂದರೇನೆಂಬುದನ್ನರಿಯದ , ಹಸಿದ ತೋಳಗಳಂತಿದ್ದ , ಇವನನ್ನೇ ದುರುಗುಟ್ಟಿ ನೋಡುತ್ತಾ ನಾಯಕನ ಕಣ್ಸನ್ನೆಗಾಗೇ ಕಾಯುತ್ತ ನಿಂತಿದ್ದ…
ಬೇಡರ ಪಡೆ…
ಅರ್ಧಚಂದ್ರಾಕಾರದಲ್ಲಿ ನಿಂತಿದ್ದ ಬೇಡರ ಮಧ್ಯೆ… ನಕ್ಷತ್ರಗಳ ನಡುವೆ ಸೂರ್ಯನಂತೆ ಧಗಧಗನೆ ಉರಿಯುತ್ತಾ , ತಲೆಗೆ ಬಿಗಿಯಾಗಿ ಕಟ್ಟಿದ್ದ ಪೇಟ , ವಿಶಾಲವಾದ ಹಣೆಯ ತುಂಬಾ ರಾರಾಜಿಸುತ್ತಿದ್ದ ವಿಭೂತಿ , ಭ್ರೂಮಧ್ಯದಲ್ಲಿ ಕೆಂಡದಂತೆ ಉರಿಯುತ್ತಿದ್ದ ಕಾಸಿನಗಲದ ಕುಂಕುಮ ಜಾಜ್ವಲ್ಯಮಾನವಾಗಿ ಬೆಳಗುತ್ತಿದ್ದ ಕಣ್ಣುಗಳಿಂದ ಸಿಡಿಯುತ್ತಿದ್ದ ಸೇಡಿನ ಕಿಡಿಗಳು…
ಬಿಚ್ಚುಗತ್ತಿ ಭರಮಣ್ಣ ನಾಯಕ…
ಪೆಚ್ಚನಂತೆ ಅಯೋಮಯನಾಗಿ ನೋಡುತ್ತಾ ನಿಂತಿದ್ದ ಖಾಸಿಂ ಖಾನನನ್ನು ಕೇಳಿದ…
ಸಿದ್ಧವೇನೋ…
ಮರುಕ್ಷಣವೇ ಸುಬೇದಾರ ಕಾಸಿಂ ಖಾನನೊಳಗಿದ್ದ ರಕ್ಕಸ ಎದ್ದು ಕುಳಿತ…
ಹ್ಹ… ನಮಗೆ ಕಪ್ಪ ಕಾಣಿಕೆ ಕೊಟ್ಟುಕೊಂಡು ಬದುಕುತ್ತಿರೋ ನಿಮಗೆ ಇಷ್ಟು ಧೈರ್ಯವೇ…
ಹ್ಹ ಹ್ಹ ಹ್ಹ… ನಕ್ಕ ಭರಮಣ್ಣ ನಾಯಕ… ಸಿಡಿಲು ಬಡಿದಂತಿತ್ತು… ಎಲಾ ಕುನ್ನಿ… ನಾವು ಎಸೆವ ನಾಲ್ಕು ಕಾಸು ಎಂಜಲು ತಿನ್ನುವ ನಿನಗೇ ಇಷ್ಟು ಸೊಕ್ಕಿರಬೇಕಾದರೆ… ರಕ್ತ ಹರಿಸಿ ರುಂಡಗಳ ಮಾಲೆ ಹಾಕಿ ಕೋಟೆ ಕೊತ್ತಲು ಕಟ್ಟಿರೋ ನಮಗೆ ಎಷ್ಟಿರಬೇಡಾ…
ದಿಲ್ಲಿಯ ಬಾದಷಹರಿಗೆ ಈ ವಿಚಾರ ತಿಳಿದರೆ ನಿಮ್ಮ ಗತಿ ಏನಾಗುತ್ತದೋ ಬಲ್ಲಿರೇನು… ಧಮಕಿ ಹಾಕಿದ ಸಿರಾದ ಸುಬೇದಾರ…
ಅಯ್ಯೋ… ಪರದೇಸಿ ನಾಯೇ… ನೀನಿಲ್ಲಿಂದ ಬದುಕುಳಿದು ಹೋದರಲ್ಲವೇನೋ… ರಕ್ತ ಮಾಂಸ ಮಜ್ಜೆಗಳಿಂದಲೇ ಹರಪನಹಳ್ಳಿಯ ಕೋಟೆ ಕಟ್ಟಿರೋ ಇತಿಹಾಸ ನಮ್ಮದು… ನೀನೆಷ್ಟರವನೋ… ಭರಮಣ್ಣನ ಮಾತಿಗೆ ಇದು ತನ್ನ ಬದುಕಿನ ಕೊನೆಯ ಆಟವೆಂದು ಅರಿವಾಗಿ ಹೋಯಿತು ಸುಬೇದಾರನಿಗೆ… ಕ್ಷಣದಲ್ಲೇ ಮಿಂಚಿನಂತೆ ಒಳಕ್ಕೆ ಹೋಗಿ ಶಸ್ತ್ರಸಜ್ಜಿತನಾಗಿ ಹೊರಕ್ಕೆ ಬಂದು ತನ್ನ ಸಹಚರನಾದ ಖಾನ್ ಜಾದ್ ಖಾನ್ ನಿಗೆ ಕೂಗಿ ಹೇಳಿದ… ನೀನು ಆ ಕಡೆಯಿಂದ ಶತ್ರುಗಳನ್ನು ಅಟ್ಟಿಕೊಂಡು ಬಾ… ಇಲ್ಲಿ ನಾನು ಇವನನ್ನು ನೋಡಿಕೊಳ್ಳುತ್ತೇನೆ…
ಸರಿಯೆಂದು ತಲೆಯಾಡಿಸಿ ಒಂದು ತೂಕಡಿಯೊಂದಿಗೆ ಮತ್ತೊಂದು ಬದಿಗೆ ರಭಸದಿಂದ ಹಾರುತ್ತಾ ಹೋದ ಅವನ ಕುದುರೆ ಅಲ್ಲಿನ ದೃಶ್ಯ ಕಂಡು ಮುಗ್ಗರಿಸಿ ಅಲ್ಲಿಯೇ ನಿಂತುಬಿಟ್ಟಿತು…
ಆ ಬದಿಯಲ್ಲಿ… ಆಳೆತ್ತರಕ್ಕೆ ಬೆಳೆದಿದ್ದ ಹುಲಿಯ ಮರಿಯೊಂದು ತನ್ನ ಬೇಟೆಯನ್ನೇ ಕಾಯುತ್ತ ನಿಂತಿತ್ತು…
ಹೆಬ್ಬುಲಿ ಹಿರೇ ಮದಕರಿ ನಾಯಕ…
ಖಾನ್ ಜಾದ್ ಖಾನನ ಮೃತ್ಯು ಎದುರಿಗೇ ನಿಂತಿತ್ತು…
ಮಟಮಟ ಮದ್ಯಾನ್ಹ
ಚಟಚಟನೆ ಕಾಯುವಾ
ಬಿಸಿಲಾಗೆ…
ನೆಗ್ಗೀಲಾ ಮುಳ್ಳಾಗೆ
ಕಂಚೀ ಕಟ್ಯಾಗೇ
ಹಿಂದಕ್ಕೊತೀತು
ಖಾಸಿಂ ಖಾನನ ದಂಡು…