ಅವನ ಜೊತೆಗಾರರೂ ಏನು ಕಡಿಮೆಯವರಲ್ಲ… ಖಾನ್ ಜಾದ್ ಖಾನ್ , ಮುರಾದ್ ಖಾನ್ ಕಾಮ್ ಭಕ್ಷ್ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಕಲಿವೀರರೇ… ಇಂಥ ಅತಿರಥ ಮಹಾರಥರನ್ನೇ ಮುಂಚೂಣಿ ನಾಯಕರಾಗಿ ಹೊಂದಿದ್ದ ಮುಘಲರ ಪಡೆ ಅಕ್ಷರಶಃ ಯಮಕಿಂಕರರಂತೆ ಬಡಿದಾಡುತ್ತಿತ್ತು… ಆದರೇ…
ಭರಮಣ್ಣ ತಂತ್ರಜ್ಞ… ಯುದ್ಧ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಅವನನ್ನು ಮೀರಿಸಿದವರೇ ಇರಲಿಲ್ಲ… ರಣ ಭೂಮಿಗೆ ಇಳಿಯುವ ಮೊದಲೇ ಶತ್ರುವಿನ ಆಳ ಅಗಲಗಳನ್ನು ಲೆಕ್ಕ ಹಾಕಿದ್ದ… ಅವರ ಶಕ್ತಿ ಸಾಮರ್ಥ್ಯಗಳೇನು ಬಲಹೀನತೆಗಳೇನು ಎಂಬುದನ್ನೆಲ್ಲ ಕೂಲಂಕಷ ಪರಿಶೀಲಿಸಿ ಅರಿತುಕೊಂಡೇ ದಾಳ ಉರುಳಿಸಿದ್ದ…
ಎಲ್ಲರ ಬಲಹೀನತೆಗಳನ್ನೂ ತೂಗಿ ನೋಡುವಾಗ ಅವನಿಗೆ ವಜ್ರಾಯುಧದಂಥ ರಹಸ್ಯವೊಂದು ದಕ್ಕಿಬಿಟ್ಟಿತು… ಅದು… ಖಾಸಿಂ ಖಾನ್ ಒಬ್ಬ ವ್ಯಸನಿ… ಅಫೀಮು ಗಾಂಜಾದ ವ್ಯಸನಿ… ಊಟ ತಿಂಡಿ ನೀರು ನಿದ್ದೆಗಳನ್ನು ಬಿಟ್ಟಾನೂ… ಉಹೂಂ… ಗಾಂಜಾ ಬಿಡೋನಲ್ಲ…
ಗೆಲುವಿನ ನಗೆಯೊಂದು ಭರಮಣ್ಣನ ಮುಖದ ಮೇಲೆ ಹಾದುಹೋಯಿತು… ಈ ಮುಘಲರನ್ನ ಆಡಿಸಿ , ಓಡಾಡಿಸಿ , ಕಾಡಿಸಿ , ಪೀಡಿಸಿ , ಇಂಚಿಂಚೇ ಕತ್ತರಿಸಿ ಕೊಲ್ಲಬೇಕು… ಉಹೂಂ… ಒಂದೇ ದಿನಕ್ಕೆ ಮುಗಿಯುವ ಯುದ್ಧವಲ್ಲ ಇದು… ಮುಗಿಯಲೂ ಬಾರದು… ಹೊತ್ತೇರುತ್ತಿದ್ದಂತೆ ಯುದ್ಧ ಆರಂಭಿಸಿದರೆ ಹೊತ್ತು ಮುಗಿದರೂ ಓಡಾಡಿಸಿಕೊಂಡು ಬಡಿಯುತ್ತಿರಬೇಕು… ಹೊತ್ತು ಮುಳುಗಿ ಕತ್ತಲಾದರೂ ನಿಂತಲ್ಲಿ ನಿಲ್ಲಲೂ ಸಹ ಬಿಡಬಾರದು…
ಭರಮಣ್ಣನ ಮಿದುಳಿನೊಳಗೇ ಓಡುತ್ತಿದ್ದ ಆಲೋಚನೆಗಳನ್ನು ಗ್ರಹಿಸುತ್ತಾ ನಿಂತಿದ್ದ ಹಿರೇ ಮದಕರಿ ನಾಯಕನಿಗೆ ಭರಮಣ್ಣ ಮುಂದಿನ ನಾಲ್ಕು ದಿನಗಳ ಯುದ್ಧೋಪಾಯಗಳನ್ನು ಹೇಳಿಕೊಟ್ಟ…
ಶುರುವಾಯಿತು ಘನಘೋರ ಯುದ್ಧ… ಸಮಬಲರ ಕಾದಾಟ… ಭರಮಣ್ಣನ ಯೋಜನೆ ಅಷ್ಟೂ ಬೇಡರ ಕಿವಿಗೆ ತಲುಪಿತ್ತು… ಕರಾರುವಾಕ್ಕಾಗೇ ಕದನ ಆರಂಭಿಸಿದರು…
ಮೊದಲ ದಿನ… ಹೊತ್ತೇರಿ ದಿನ ಕಳೆದು ದಿನಕರ ಸರಿಯುತ್ತಿದ್ದಂತೆ ಕದನ ವಿರಾಮ… ಎರಡನೇ ದಿನ , ಮೂರನೇ ದಿನವೂ ಇದು ಮುಂದುವರೆಯಿತು…
ನಾಲ್ಕನೇ ದಿನ ಬಂತು… ನಿಧಾನವಾಗೇ ಆರಂಭಿಸಿದ ದುರ್ಗದ ಸೈನಿಕರು ಆಡುತ್ತಾ ಆಡಿಸುತ್ತಾ ಸಂಜೆಯಾಗುವುದನ್ನೇ ಎದುರು ನೋಡುತ್ತಿದ್ದರು… ಕತ್ತಲು ಮುಸುಕುತ್ತಿದ್ದಂತೆ ವಿರಮಿಸಲು ಅಣಿಯಾದ ವೈರಿ ಪಡೆಗೆ ಆಶ್ಚರ್ಯ ಕಾದಿತ್ತು… ಸಂಜೆ ವೇಳೆಗೆ ಬೇಡರ ರಭಸ ಹೆಚ್ಚಿತ್ತು… ತುಂಗೆಯ ನೀರಿನಲ್ಲಿ ಧಿಡೀರನೆ ಪ್ರವಾಹ ಉಕ್ಕಿದಂತೆ ಸಿಕ್ಕಸಿಕ್ಕವರನ್ನು ಕೊಚ್ಚಲು ಶುರುವಿಟ್ಟರು… ಕೂತ ಕುದುರೆಯಿಂದ ಇಳಿಯಲೂ ಬಿಡದೇ ಸತಾಯಿಸಿದರು… ಮಧ್ಯ ರಾತ್ರಿ… ಕೂತಕೂತಲ್ಲೆ ಒಂದು ಗಂಟೆ ನಿದ್ದೆ ತೆಗೆದ ಬೇಡರು ಶತ್ರು ಪಡೆಗೆ ಕಣ್ಣುಜ್ಜಿಕೊಳ್ಳಲೂ ಸಮಯ ಕೊಡದೆ ಕತ್ತರಿಸಿ ಹಾಕುತ್ತಿದ್ದರು…
ಮರುದಿನ ಬೆಳಿಗ್ಗೆ ನಾಲಕ್ಕು ಘಂಟೆ…
ಖಾಸಿಂ ಖಾನನ ಮೈ ತುರಿಸುತ್ತಿತ್ತು… ಕೈಕಾಲುಗಳು ಸಣ್ಣಗೆ ನಡುಗುತ್ತಿದ್ದವು… ಕೈಬೆರಳುಗಳು ಮಡಿಚಿಕೊಂಡು ಒಂದರೊಳಗೊಂದು ಸೇರಿಕೊಂಡು ಬಿಟ್ಟವು… ಕಾಲುಗಳು ಮುದುರಿಕೊಂಡು ಕುದುರೆಯಿಂದ ಧೊಪ್ಪನೆ ಕೆಳಕ್ಕೆ ಬಿದ್ದ ಸುಬೇದಾರ ತೆವಳುತ್ತಲೇ ತನ್ನ ಡೇರೆಯೊಳಕ್ಕೆ ಹೋಗಿ ಹಾಸಿಗೆಯಡಿಗೆ ಕೈ ತೂರಿಸಿ ಸರಕನ್ನು ಹೊರತೆಗೆದು ನೋಡಿದ…
ಎರಡು ಚಿಟಿಕೆ ಗಾಂಜಾ… ಫಕ್ಕನೆ ಎತ್ತಿ ಆಘ್ರಣಿಸಿಕೊಂಡ… ಹೋದ ಜೀವ ಬಂದಂತಾಯಿತು… ಹುಚ್ಚನಂತೆ ಇನ್ನಷ್ಟು ಸರಕಿಗಾಗಿ ಡೇರೆಯೊಳಗೆಲ್ಲ ಹುಡುಕಾಡಿದ… ಎಲ್ಲಿತ್ತು… ಒಂದೇ ದಿನದಲ್ಲಿ ಯುದ್ಧ ತೀರಿಸಿಬಿಡುತ್ತೇನೆಂದು ಅತಿಯಾದ ಆತ್ಮವಿಶ್ವಾಸದೊಂದಿಗೆ ಬಂದಿದ್ದ… ಮಾಲು ಮುಗಿದು ಹೋಗಿತ್ತು… ಯುದ್ಧವಿನ್ನೂ ಉಳಿದಿತ್ತು… ರೋಷಾಗ್ನಿಯಿಂದ ಗಂಟಲು ಹರಿಯುವಂತೆ ಅರಚುತ್ತಾ ಡೇರೆಯ ಹೊರಕ್ಕೆ ಬಂದು ನೋಡಿದ…
ಕಾಮಗೇತಿ ವಂಶದ ಶಿಖರಾಗ್ರ ಮಣಿ… ಕೆಂಪು ಕಲ್ಲಿನಂತೆ ರವರವನೇ ಉರಿಯುತ್ತಾ… ತಾಂಡವ ನೃತ್ಯಕ್ಕೆ ಅಣಿಯಾಗಿ ನಿಂತ ರುದ್ರನಂತೆ… ಭ್ರೂ ಮಧ್ಯದ ಹಣೆಗಣ್ಣನ್ನು ತೆರೆದು ಭೂಲೋಕವನ್ನೇ ಭಸ್ಮ ಮಾಡಬಲ್ಲ ಬೆಂಕಿಯಂತೆ ನಿಂತಿದ್ದ…
ಮುಂದುವರೆಯುತ್ತದೆ……