ನಡೆಯುವ ನೆಲ, ಉಣ್ಣುವ ಅನ್ನ, ಮಠಕ್ಕೆ ಬರುವ ಕಾಣಿಕೆ, ಭಕ್ತಾದಿಗಳು ಎಲ್ಲವೂ ಕನ್ನಡ. ಆದ್ರೆ ಇವರಿಗೆ ಬೇಕಿರುವುದು ಸಂಸ್ಕೃತ ವಿಶ್ವವಿದ್ಯಾಲಯ! ಹೋಗಲಿ ಈ ಮನುಷ್ಯರಿಗಾಗಲಿ ಇವರ ಪರಿವಾರಕ್ಕಾಗಲಿ ಸಂಸ್ಕೃತ ಬರುತ್ತದೆಯೇ? ಬಹುತೇಕ ಇಲ್ಲ! ಇವರ ಜೀವನದಲ್ಲಿ ಸಂಸ್ಕೃತದ ಬಳಕೆಯೇ ಇಲ್ಲ, ಆದ್ರೂ 500 ಕೋಟಿ ಖರ್ಚು ಮಾಡಿ ಸಂಸ್ಕೃತ ವಿವಿ ಕಟ್ಟಿಸಬೇಕು.
ಕನ್ನಡ ಭಾಷೆ, ಇತಿಹಾಸ, ಸಂಸ್ಕೃತಿಗಳ ಅಧ್ಯಯನಕ್ಕೆ ಮೀಸಲಾದ ‘ಕನ್ನಡ ವಿಶ್ವವಿದ್ಯಾಲಯ, ಹಂಪಿ’ ಗೆ ಅಗತ್ಯವಾದ ವಾರ್ಷಿಕ ಅನುದಾನವು ಬಿಡುಗಡೆಯಾಗದೇ ವಿಶ್ವವಿದ್ಯಾಲಯವು ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿತ್ತು. ಪರಿಸ್ಥಿತಿ ಹಾಗೇ ಮುಂದುವರಿದಿದ್ದರೆ ವಿವಿಯ ಕೆಲಸಕಾರ್ಯಗಳು ಸ್ಥಗಿತಗೊಳ್ಳುವ ಸಂಭವವಿತ್ತು. ಅವಾಗ ಜನಸಾಮಾನ್ಯರು, ಕನ್ನಡ ಆಕ್ಟಿವಿಸ್ಟ್ಗಳು ಸೇರಿ ಚಳುವಳಿ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಈಗಲೂ ಎಷ್ಟು ಪ್ರಮಾಣದ ಅನುದಾನ ಬಿಡುಗಡೆ ಮಾಡಿದರೋ ತಿಳಿಯದು. ಅಂತಹ ಹೊತ್ತಿನಲ್ಲಿ ಯಾವೊಬ್ಬ ಸ್ವಾಮಿಯಾದರೂ ಕನ್ನಡ ವಿವಿ ಅನುದಾನಕ್ಕೆ ದನಿ ಎತ್ತಿದರೇ?! ಇಲ್ಲ! ಕನ್ನಡ ಶಾಲೆಗಳ ಉಳಿವು, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಮಾನ್ಯತೆ, ಕನ್ನಡಕ್ಕೆ ಅಧಿಕೃತ ಭಾಷಾ ಮಾನ್ಯತೆ, ಹಿಂದಿ ಹೇರಿಕೆ ಇದಾವುದರಲ್ಲೂ ಸೊಲ್ಲೆತ್ತದ ಸ್ವಾಮಿಗಳು ಅದೂ ಕನ್ನಡ ಲಿಂಗಾಯತ ಮಠಗಳ ಸ್ವಾಮಿಗಳು ‘ಸಂಸ್ಕೃತ ವಿಶ್ವವಿದ್ಯಾಲಯ’ ಕಟ್ಟಲು ಮಂತ್ರಿಗಳ ಬಳಿ ಹಿಂಡಾಗಿ ಹೋಗಿ ಕೂರುವುದು ಪರಮ ಅಸಹ್ಯಕರವಾಗಿಲ್ಲವೇ?! ಬಸವಾದಿ ಪ್ರಮಥರ ವಚನಗಳ ಓದಿ ಮಾತಾಡಿ ಪಡೆದುಕೊಂಡ ಯೋಗ್ಯತೆಗಳಲ್ಲವನೂ ಅಗ್ರಹಾರದ ಯಾವ ವ್ಯಾಪಾರಿಗಳಿಗೆ ಅಡವಿಟ್ಟುಕೊಂಡು ಹೋಗಿದ್ದೀರಿ?! ನಾಚಿಕೆಯಾಗುವುದಿಲ್ಲವೇ?!
ದೆಹಲಿಯ ಒಕ್ಕೂಟ ಸರ್ಕಾರವು ಸಂಸ್ಕೃತ ಭಾಷೆಯ ಪುನರುಜ್ಜೀವನಕ್ಕಾಗಿ ಈಗಾಗಾಲೇ ಸಾವಿರಾರು ಕೋಟಿ ರೂಪಾಯಿಗಳನ್ನು ಗಂಗೆಯಲ್ಲಿ ತೇಲಿಸಿಬಿಟ್ಟಿದೆ ಮತ್ತು ತೇಲಿಸುತ್ತಲೇ ಇದೆ. ಹಾಗಿರುವ ಕನ್ನಡನಾಡಿನ ಸರ್ಕಾರಕ್ಕೆ ಯಾಕೀ ಸಂಸ್ಕೃತದ ಅತಿ ವ್ಯಾಮೋಹ?! ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ ಮುಂತಾದ ನಮ್ಮ ನಾಡಿನ ಭಾಷೆ, ಉಪಭಾಷೆಗಳಿಗೆ ಪ್ರಾಮುಖ್ಯತೆ ಕೊಡುವುದು ಬಿಟ್ಟು ಸಂಸ್ಕೃತ ಹಿಂದೆ ಬೀಳುವ ಕರ್ಮ.
ನಮ್ಮ ನಿಮ್ಮ ಭಾಗದ ಮಠಗಳ ಸ್ವಾಮಿಗಳನ್ನು, ರಾಜಕಾರಣಿಗಳನ್ನು ಈ ಸಂಸ್ಕೃತದ ವ್ಯಾಮೋಹದಿಂದ ಹೊರಗೆ ಬರುವಂತೆ ಕರೆ ನೀಡೋಣ. ಬದಲಾಗುವರೆಗೂ ಬಿಡುವುದು ಬೇಡ. ನಮ್ಮ ಆದ್ಯತೆ ಕನ್ನಡ ಮತ್ತು ಕನ್ನಡನಾಡಿನ ಇತರ ಉಪಭಾಷೆಗಳಿಗೆ ಮಾತ್ರ ಇರಬೇಕು. ಸಂಸ್ಕೃತಕ್ಕಲ್ಲ.