ನಾಲ್ಕು
“ಪುಣ್ಯಾತ್ತಗಿತ್ತಿ! ಮುತ್ತೈದೆ ಸಾವು ಪಡೆದವ್ಳೆ. ಆ ಮಗೀ ಗತಿ ಏನು?” ಎಂದು ಮಾತಾಡಿಕೊಂಡರು.
ನಾಲ್ಕುದಿನಗಳು ಕಳೆದವು. ಎಲ್ಲವೂ ನಿಧಾನವಾಗಿ ಯಥಾಸ್ಥಿತಿಗೆ ಬರುತ್ತಿರುವುದೇನೋ ಎನ್ನಿಸಹತ್ತಿತು.
ವೈಕುಂಠಮೂರ್ತಿಯೊಂದಿಗೆ ಮಾತಾಡುತ್ತಾ ಕುಳಿತಿದ್ದ ಗಜಾನನ. ಶಂಕರಶಾಸ್ತ್ರಿಗಳಿನ್ನೂ ಗತಿಸಿದ ಗಿರಿಜಾಳ ನೆನಪಲ್ಲಿಯೇ ಇದ್ದರು.
“ಅದೇನು ಗಜಾನನ? ಹೇಳಿಕಳಿಸಿದ ಹಾಗೆ ಬಂದೆ?” ಎಂದು ಕೇಳಿದ ವೈಕುಂಠಮೂರ್ತಿ.
“ತಡಮಾಡಿಬಿಟ್ಟೆ ಮೂರ್ತೀ! ಇನ್ನೆರಡು ದಿನ ಮೊದಲು ಬಂದಿದ್ದರೆ ನನ್ನ ಗಿರಿಜಕ್ಕ ಉಳಿದುಕೊಳ್ಳುತ್ತಿದ್ದಳೇನೋ.. ಛೇ! ಈ ದೇಶ ಯಾವತ್ತು ಉದ್ಧಾರ ಆಗುತ್ತೋ” ಎಂದ ಬೇಸರದಿಂದ.
“ಯಾರಾದರೂ ಬಂದು ಈ ದೇಶಾನ ಉದ್ಧಾರ ಮಾಡಬೇಕು. ಆ ನಾರಾಯಣನೇ ಇನ್ನೊಂದು ಅವತಾರ ಎತ್ತಬೇಕು” ಎಂದ ವೈಕುಂಠಮೂರ್ತಿ.
“ಈಗಾಗ್ಲೇ ಅಂತಹ ಮಹಾತ್ಮ ಹುಟ್ಟಿ ಆಗಿದೆ ಮೂರ್ತೀ!” ಎಂದ ಗಜಾನನ ಆನಂದ ತುಂಬಿದ ಸ್ವರದಲ್ಲಿ. “ನನಗೆ ವೈಯಕ್ತಿಕವಾಗಿ ಆದ ನಷ್ಟದ ದುಃಖ ಇದೆ. ಆದರೆ ನಾನೆಲ್ಲಿಗೆ ಹೋಗ್ತಿದ್ದೀನಿ ಗೊತ್ತಾ?” ಕೇಳಿದ.
ವೈಕುಂಠಮೂರ್ತಿ ಹುಬ್ಬೇರಿಸಿದ. “ಸಬರಮತಿಗೆ!” ಎಂದ ಗಜಾನನ ಮುಂದುವರಿಸಿದ “ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ದಬ್ಬಾಳಿಕೆಯಿಂದ ತತ್ತರಿಸಿದ್ದ ಭಾರತೀಯರಿಗೆ ಹೋರಾಡುವ ಶಕ್ತಿ ನೀಡಿ ಎರಡು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದಾರೆ. ಇಂಗ್ಲೆಂಡ್ನಲ್ಲಿ ಬಾರ್-ಅಟ್-ಲಾ ಮುಗಿಸಿ ಬಂದಿದ್ದಾರೆ!” ಎಂದ.
“ಯಾರದು?” ಎಂದು ಕೇಳಿದ ವೈಕುಂಠಮೂರ್ತಿ ಆಸಕ್ತಿಯಿಂದ.
“ಮೋಹನದಾಸ ಕರಮ ಚಂದ ಗಾಂಧೀ. ನೀವು ರೇಡಿಯೋ ಕೇಳೋದಿಲ್ವಾ? ಇಲ್ಲಿಗೆ ಚಳವಳಿಯ ಗಾಳಿ ಬೀಸಿಯೇ ಇಲ್ಲವೇ?” ಎಂದ ಗಜಾನನ.
ವೈಕುಂಠಮೂರ್ತಿ ನಸುನಕ್ಕು “ನಮಗಿಲ್ಲಿ ದುಡಿಮೆ ಒಂದೇ ಗೊತ್ತು ಗಜಾನನಾ” ಎಂದ.
ಅವನ ಮಾತು ಸತ್ಯವಾಗಿತ್ತು. ದೇಶದ ಆಗುಹೋಗುಗಳ ಪರಿಣಾಮ ಓಂಕಾರಪುರದ ಮೇಲೆ ಆಗಿರಲಿಲ್ಲ.
ನಗರದಲ್ಲಿಯೂ ಬ್ರಿಟಿಷರ ಪ್ರಭಾವ ಹೆಚ್ಚು ಇರಲಿಲ್ಲ. ಅಲ್ಲಿಯ ಸ್ಥಳೀಯ ಅಧಿಕಾರಿಗಳು ಹತ್ತಿರದ ಜಿಲ್ಲಾಕೇಂದ್ರಕ್ಕೆ ಹೋಗಿ ಬ್ರಿಟಿಷರಿಗೆ ವರದಿ ಒಪ್ಪಿಸುತ್ತಿದ್ದರು.
“ಬ್ರಿಟಿಷರಿಗೆ ಮುಗ್ಧಹಳ್ಳಿಯ ಜನ ಸ್ವಾತಂತ್ರ್ಯದ ಬಗ್ಗೆ ಚಿಂತೆ ಮಾಡುವುದೂ ಬೇಡವೆನ್ನಿರಬೇಕು. ಎಲ್ಲಾ ಕಡೆ ಮೆತ್ತಗೆ ಸ್ವಾತಂತ್ರ್ಯದ ಕಿಚ್ಚು ಭುಗಿಲೇಳುತ್ತಿದೆ” ಎಂದ ಗಜಾನನ.
ಗಿರಿಜಾಳ ಸಂಸ್ಕಾರವಾದ ನಂತರ ಗಜಾನನ, ಅವನ ತಲೆಯಲ್ಲಿ ತುಂಬಾ ದಿನಗಳಿಂದ ಮಥಿಸುತ್ತಿದ್ದ ಆಲೋಚನೆಯನ್ನು ಭಾವನ ಮುಂದಿಟ್ಟ.
“ಭಾವಾ!” ಎಂದ.
ಪತ್ನಿಯ ಸಾವಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ ಶಂಕರಶಾಸ್ತ್ರಿಗಳು. ಏನೆಂಬಂತೆ ನೋಡಿದರು. ವೈಕುಂಠಮೂರ್ತಿಯೂ ಅಲ್ಲಿದ್ದ.
“ನಾನು, ನೀವು ಒಪ್ಪೋದಾದ್ರೆ, ಶಂಭೂನ ನನ್ನ ಜೊತೆ ಕರಕೊಂಡು ಹೋಗ್ತೀನಿ” ಎಂದು ಗಜಾನನ.
ಶಾಸ್ತ್ರಿಗಳು ಉತ್ತರಿಸಲಿಲ್ಲ. ಗಜಾನನನೇ “ಭಾವಾ! ನೀವು ಇನ್ನೂ ಚೇತರಿಸಿಕೋಬೇಕು. ಆಮೇಲೆ ಶಂಭುವಿಗೆ ಇಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲಗಳು ಕಡಿಮೆ. ನಾನು ಅಕ್ಕನಿಗೆ ಹೋದಸಲವೇ ಹೇಳಿದ್ದೆ ಶಂಭುವಿನ ಜವಾಬ್ದಾರಿ ನನ್ನದೂಂತ” ಎಂದ.
ವೈಕುಂಠಮೂರ್ತಿ “ಅಲ್ಲ ಗಜಾನನ! ನೀನು ಒಂಟಿಯಾಗಿರೋವರೆಗೂ ಪರವಾಗಿಲ್ಲ. ನಿನಗೀಗ ಇಪ್ಪತ್ತಾರರ ಹತ್ತಿರ ಅಲ್ವಾ? ನಾಳೆ ನೀನು ಮದುವೆ ಆದೆ ಅಂದುಕೋ. ಆ ಹೆಣ್ಣು ನಮ್ಮ ಶಂಭೂನ ಸರಿಯಾಗಿ ನೋಡಿಕೊಳ್ತಾಳೆ ಅಂತ ಹೇಗೆ ಅಂದ್ಕೊಳ್ಳೋದು?” ಎಂದ.
ಶಾಸ್ತ್ರಿಗಳ ಮನದಲ್ಲಿಯೂ ಆ ಚಿಂತೆ ಹೊಗೆಯಾಡಿತ್ತು. ಗಜಾನನ ನಕ್ಕ. ಆದರೆ ಆ ನಗೆಯಲ್ಲಿ ಜೀವವಿರಲಿಲ್ಲ. “ಇಲ್ಲ ಮೂರ್ತೀ! ನಾನು ಮದುವೆ ಆಗೋಲ್ಲ. ಈ ಜೀವ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪಣ ತೊಟ್ಟಿದೆ. ನಾನು ಆಜನ್ಮ ಬ್ರಹ್ಮಚಾರಿಯಾಗಲು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಹಾಗೇ ನಾಲ್ಕೈದು ಜನ ನನ್ನ ಜೊತೆ ಇದ್ದಾರೆ. ನಳಪಾಕ ಮಾಡಿಕೊಳ್ತೇವೆ. ಶಂಭುವಿಗೆ ತೊಂದರೆ ಆಗೋಲ್ಲ” ಎಂದ.
“ಮತ್ತೆ ನನ್ನ ತಂಗಿ?” ಎಂದು ಕೇಳಿದ ಶಂಭು. ಅವನಿಗೆ ಗಜೂಮಾಮನೊಂದಿಗೆ ಹೋಗುವುದರಲ್ಲಿ ಆಸ್ಥೆ ಇತ್ತು.
ವೈಕುಂಠಮೂರ್ತಿ ಶಾಸ್ತ್ರಿಗಳತ್ತ ತಿರುಗಿ “ನೀವು ಒಪ್ಪೋದಾದ್ರೆ ನಾನೇ ಮಗೂನ ನೋಡಿಕೊಳ್ತೀನಿ. ನನ್ನ ಮಗಳಿಗೂ ಜೊತೆ ಆಗುತ್ತೆ. ಮೈಥಿಲಿಗೂ ಅದೇ ಆಸೆ” ಎಂದ.
“ಏನು ಬೇಕಾದ್ರೂ ಮಾಡಿಕೊಳ್ಳಿ. ನಾನು ಇನ್ನು ಮೇಲೆ ಯಾವ ಲೌಕಿಕಕ್ಕೂ ತಲೆಹಾಕೋಲ್ಲ. ನನ್ನ ಗಿರಿಜಾ ಜೊತೆ ನನ್ನ ಆತ್ಮ ಹೊರಟುಹೋಗಿದೆ. ಜೀವ ಇರೋವರೆಗೂ ಆ ಓಂಕಾರೇಶ್ವರನ ಕೈಂಕರ್ಯದಲ್ಲಿ ಕಾಲ ಕಳೀತೀನಿ” ಎಂದು ಎದ್ದು ನಿಂತು, “ಇವತ್ತಿಗೆ ಸೂತಕ ಕಳೆದಿದೆ. ನಾನು ಪುಣ್ಯಾಹ ಮಾಡಿ ಪೂಜೆಗೆ ಅಣಿ ಮಾಡಿಕೊಳ್ತೀನಿ” ಎಂದು ಹೇಳಿ ಅಲ್ಲಿಂದ ಹೊರಟುಹೋದರು.
ಗಜಾನನ, ವೈಕುಂಠಮೂರ್ತಿ ಪರಸ್ಪರ ಮುಖ ನೋಡಿಕೊಂಡು ನಿಟ್ಟುಸಿರಿಟ್ಟರು. ಆತ್ಮೀಯರ ಸಾವಿನ ಗಾಯ ಮಾಗಲು ಕಾಲವೊಂದೇ ಮದ್ದು ಎಂದುಕೊಂಡರು.
“ಗಜೂಮಾಮ! ತಂಗಿಪಾಪನಿಗೆ ಏನು ಹೆಸರು?” ಎಂದ ಅವನ ಕೆನ್ನೆ ಸವರಿ ಅಲುಗಾಡಿಸುತ್ತಾ.
“ಅರೆರೆ! ಹೌದಲ್ಲಾ! ಏನು ಹೆಸರಿಡೋಣ?” ಎಂದ ಗಜಾನನ ಮೇಲೇಳುತ್ತಾ.
ಮೈಥಿಲಿ ಗಜಾನನನಿಗೆ “ನನ್ನ ಮಗಳಿಗೂ ಒಂದು ಹೆಸರು ಕೊಡು ಗಜಾನನಾ! ಸ್ವಲ್ಪ ಹೊಸದಾಗಿರಲಿ” ಎಂದಳು.
ಮಕ್ಕಳೆರಡೂ ಹಾಲು ಕುಡಿದು ಸಂತೃಪ್ತಿಯಿಂದ ಮಲಗಿದ್ದವು. ತನ್ನ ಗಿರಿಜಕ್ಕನ ಮಗಳು ಎಷ್ಟು ಚೆನ್ನಾಗಿ ನಗುತ್ತಿದ್ದಾಳೆ! ಎಂದುಕೊಂಡ ಗಜಾನನನಿಗೆ ಹಠಾತ್ತನೆ ಗೀತೆಯೊಂದರ ನೆನಪಾಯಿತು.
ದೇಶಸೇವೆಗೆ ಸ್ಫೂರ್ತಿ ನೀಡುವ ಆ ಗೀತೆಯನ್ನು ಹಾಡಿದ
“ವಂದೇ ಮಾತರಂ| ಸುಜಲಾಂ| ಸುಫಲಾಂ| ಮಲಯಜ ಶೀತಲಾಂ|
ಸಸ್ಯಶ್ಯಾಮಲಾಂ| ಮಾತರಂ| ವಂದೇ ಮಾತರಂ||
ಶುಭ್ರ ಜ್ಯೋತ್ಸ್ನಾ ಪುಲಕಿತಯಾಮಿನೀಂ| ಫುಲ್ಲಕುಸುಮಿತ ಧ್ರುಮದಲ ಶೋಭಿನೀಂ|
ಸುಹಾಸಿನೀಂ| ಸುಮಧುರ ಭಾಷಿಣೀಂ| ಸುಖದಾಂ ವರದಾಂ ಮಾತರಂ|
ವಂದೇ ಮಾತರಂ| ವಂದೇ ಮಾತರಂ||”
ಮೈಥಿಲಿಯ ಮಗು ಗಜಾನನನ ಗಂಭೀರಸ್ವರಕ್ಕೆ ಎದ್ದು ಕೊಂಯ್ ಎಂದಿತು. ಗಿರಿಜಾಳ ಮಗುವಿನ ಮೊಗದಲ್ಲಿ ಅದೇ ನಗೆ.
“ನನ್ನ ರೂಂಮೇಟುಗಳಲ್ಲಿ ಬೆಂಗಾಲಿ ಒಬ್ಬನಿದ್ದಾನೆ. ಪ್ರಫುಲ್ಲಚಂದ್ರ ಚಟರ್ಜಿ ಅಂತ. ಅವರ ಭಾಷೆಯ ಆನಂದಮಠ ಕಾದಂಬರಿಯಲ್ಲಿ ಈ ಕವನವಿದೆಯಂತೆ. ದೇಶಪ್ರೇಮವನ್ನು ಬಡಿದೆಬ್ಬಿಸೋ ಈ ಕಾದಂಬರಿ ಬರೆದೋರು ಬಂಕಿಂಚಂದ್ರ ಚಟ್ಟೋಪಾಧ್ಯಾಯ. ಈಗ ಹೆಸರು ಇಡೋಣ್ವಾ?” ಎಂದ ಶಂಭುವಿನತ್ತ ತಿರುಗಿ.
ಪುಟ್ಟ ಶಂಭುವಿನ ಉತ್ಸಾಹ ಗಗನಕ್ಕೇರಿತ್ತು.”ಆ ಪುಸ್ತಕ ನಾನು ಓದಬಹುದಾ?” ಎಂದ
“ನೀನಿನ್ನೂ ಪುಟ್ಟವನು. ಸಮಯ ಬಂದಾಗ ಓದ್ತೀಯಂತೆ” ಎಂದು ಅವನ ಕೆನ್ನೆಗೆ ಮುತ್ತಿಟ್ಟು ಮೈಥಿಲಿಯ ಮಗುವಿನತ್ತ ತಿರುಗಿ “ಇವಳು ದಷ್ಟಪುಷ್ಟವಾಗಿದ್ದಾಳೆ. ಅದಕ್ಕೇ ಇವಳು ಸುಫಲಾ!” ಎಂದ.
“ಸುಫಲಾ! ಅರೆ, ತುಂಬಾ ಚೆನ್ನಾಗಿದೆ!” ಎಂದಳು ಮೈಥಿಲಿ ಹಿಗ್ಗಿನಿಂದ.
“ಮತ್ತೆ ನನ್ನ ತಂಗೀಪಾಪನ ಹೆಸರು?” ಎಂದ ಶಂಭು.
“ಶಂಭೂ, ನಿನ್ನ ತಂಗೆ ಹೇಗೆ ನಗ್ತಾ ಇದ್ದಾಳಲ್ವಾ? ಇವಳು ಸುಹಾಸಿನಿ! ಅಂದರೆ ಒಳ್ಳೆಯ ನಗೆಯುಳ್ಳವಳು” ಎಂದ.
“ಹಾಗೇ ನೋಡ್ತಾ ಇದ್ದರೆ ಗಿರಿಜಾಕ್ಕನ ನಗು ನೋಡಿದ ಹಾಗಾಗುತ್ತೆ” ಎಂದ ವೈಕುಂಠಮೂರ್ತಿ.
ಮೂವರೂ ಮಂಕಾದರು. ಪಾಪ! ಸುಹಾಸಿನಿ ಹುಟ್ಟಿದೊಡನೆ ತಾಯಿಯನ್ನು ಕಳೆದುಕೊಂಡಳು. ಗಿರಿಜಾ ಬದುಕಿರಬೇಕಿತ್ತು.
“ಓ, ಸುಫಲಾ, ಸುಹಾಸಿನಿ! ಎರಡೂ ಸು-ಸು” ಎಂದ ಚಪ್ಪಾಳೆ ತಟ್ಟಿ ಶಂಭು.
ಗಜಾನನ ಮೆಲ್ಲನೆ “ಶಂಭೂ, ಸುಸು ಅಂದರೆ ಮರಾಠಿ ಭಾಷೆಯಲ್ಲಿ ಎನರ್ಥ ಗೊತ್ತಾ?” ಎಂದ.
ಶಂಭುವಿನೊಂದಿಗೆ ಉಳಿದವರೂ ತಲೆಯೆತ್ತಿದಾಗ ಗಜಾನನ ಬಲಗೈ ಕಿರುಬೆರಳೆತ್ತಿದ್ದ.
“ಅಯ್ಯೋ, ಛೀ!” ಎಂದ ಶಂಭು.
ವಾತಾವರಣ ಹಗುರವಾಗಿತ್ತು.
(ಸಶೇಷ)