ಏಳು
ಮೈಥಿಲಿಯ ಸಾವು ಘಟಿಸಿ ತಿಂಗಳ ಮೇಲಾಗಿತ್ತು. ನೆಂಟರೆಲ್ಲಾ ಹೊರಟುಹೋಗಿದ್ದರು ಸುಬ್ಬಮ್ಮನ ಹೊರತಾಗಿ. “ಏನ್ಹೇಳ್ತಿದ್ದೀರಿ ಸುಬ್ಬತ್ತೇ?” ಎಂದ ಮ್ಲಾನವದನನಾಗಿ.
“ನೋಡುನೋಡು, ಹಾಗ್ಯಾಕೆ ಮುಖ ಮಾಡ್ಕೊಂಡಿದ್ದೀ?” ಎಂದು ಹತ್ತಿರ ಬಂದು, ಅವನ ಭುಜ ಮುಟ್ಟಿ, “ಆ ಮುಂಡೇದು ಇನ್ನೂ ಚಿಕ್ಕದು. ಅದೇ ನಿನ್ನ ಮಗಳ ಬಗ್ಗೆ ನಾನು ಹೇಳಿದ್ದು. ಅದೂ ಅಲ್ಲದೇ ಅಷ್ಟೊಂದು ಆಸ್ತಿ ಇದೆ. ವಾರಸುದಾರ ಬೇಡ್ವೇ?” ಎಂದರು ರಾಗವಾಗಿ.
“ಸುಫಲಾನ ನನ್ನ ಗಂಡುಮಗ ಅಂದ್ಕೋತೀನಿ. ಮೈಥಿಲಿಯ ಹಾಗೇ ಕಾಣಿಸ್ತಿದ್ದಾಳೆ ಅವಳು ಈಗೆಲ್ಲಾ” ಎಂದ ವೈಕುಂಠಮೂರ್ತಿ.
ಸುಬ್ಬಮ್ಮ ನಕ್ಕರು. ಮುಕ್ಕಾಲಂಶ ಹಲ್ಲುಗಳು ಬಾಯಲ್ಲಿಲ್ಲದಿದ್ದುದರಿಂದ ಆ ನಗೆ ವಿಚಿತ್ರವಾಗಿ ಕಂಡಿತ್ತು, ಅಲ್ಲಿಗೆ ಸದ್ದಿಲ್ಲದೇ ಬಂದಿದ್ದ ಸುಫಲಾಗೆ.
ವೈಕುಂಠಮೂರ್ತಿ ಮಗಳ ಆಗಮನವನ್ನು ಗಮನಿಸಿರಲಿಲ್ಲ. ಆದರೆ ಸುಬ್ಬಮ್ಮನ ಹದ್ದಿನ ದೃಷ್ಟಿಗೆ ಸುಫಲಾ ಬಿದ್ದಿದ್ದಳು.
ಅದಕ್ಕೇ ದನಿ ತಗ್ಗಿಸಿ “ನನ್ನ ಮಗಳು ಚಂದ್ರಿಕಾಗೆ ನಿನ್ನನ್ನ ಮದುವೆ ಆಗೋ ಆಸೆ ತುಂಬಾ ದಿನಗಳಿಂದ ಇದೆ. ಆದ್ರೆ ನೀನು ಮೈಥಿಲೀನ ಮದ್ವೆ ಆಗ್ಬಿಟ್ಟೆ. ಈಗ ಚಂದ್ರಿಕಾಗೆ ಕಂಕಣಬಲ ಕೂಡಿಬಂದಿದೆ. ನನ್ನ ಕಷ್ಟ ನೋಡು ವೈಕುಂಠೂ. ಬೆಳೆದ ಮಗಳು ಮದುವೆ ಇಲ್ಲದೇ ಇದ್ದಾಳೆ. ನಿಂಗೆ ಹೆಂಡತಿ, ನಿನ್ನ ಮಗಳಿಗೆ ತಾಯಿ, ನಿನ್ನ ವಾರಸುದಾರನಿಗೂ ತಾಯಿ. ದಯವಿಟ್ಟು ಒಪ್ಪಿಕೋ” ಎಂದರು, ಸಜಲನಯನರಾಗಿ.
ಅವರ ಕಣ್ಣೀರು ವೈಕುಂಠಮೂರ್ತಿಯನ್ನು ಕರಗಿಸಿತು. ಮದುವೆಗೆ ಒಪ್ಪಿಕೊಂಡ. ಮುಂದಿನ ತಿಂಗಳು ಮುಹೂರ್ತವಿದ್ದಂತೆ ಚಂದ್ರಿಕಾ ಊರಿನಿಂದ ಬಂದಳು. ವೈಕುಂಠಮೂರ್ತಿಯ ಇಷ್ಟಗಳನ್ನು ಅರಿತು ಅವನಿಗಿಷ್ಟವಾಗುವಂತೆ ನಡೆದುಕೊಳ್ಳತೊಡಗಿದಳು
ಸುಬ್ಬಮ್ಮನಿಗೆ ಮಡಿ ಅವಾಂತರವಿತ್ತು. ಏಕಾದಶಿ, ದ್ವಾದಶಿಗಳಿದ್ದವು. ಅವರು ಏಕಾದಶಿಯಂದು ತಿನ್ನುತ್ತಿದ್ದ ‘ಫಲಾಹಾರ’ ನೋಡಿ, ಸುಹಾಸಿನಿಯೊಂದಿಗೆ ಸುಫಲಾ,
“ನಮ್ಮ ಅಜ್ಜಿ ಸುಬ್ಬಮ್ಮನಿಗೆ ಏಕಾದಶಿ ಉಪವಾಸ,
ಎಲ್ಲೋ ಸ್ವಲ್ಪ ತಿಂತಾರಷ್ಟೇ ಉಪ್ಪಿಟ್ಟು, ಅವಲಕ್ಕಿ, ಪಾಯಸ” ಎಂದು ಹಾಡಿದಳು.
ಆ ಹಾಡು ಸುಬ್ಬಮ್ಮನ ಕಿವಿಗಳನ್ನು ಸೋಕಲಿಲ್ಲ. ಆದರೆ ಚಂದ್ರಿಕಾ ಕೇಳಿಸಿಕೊಂಡಳು. ‘ಇರಲಿ, ಇವಳಿಗೆ ಬುದ್ಧಿ ಕಲಿಸ್ತೀನಿ’ ಎಂದುಕೊಂಡಳು.
“ಅಪ್ಪನಿಗೆ ಮದುವೆ ಅಂತೆ ಸುಹಾಸಿನೀ!” ಎಂದಳು ಸುಫಲಾ ತನಗೆ ವಿಷಯ ತಿಳಿದಾಗ.
“ನಾನು ಸುಬ್ಬಜ್ಜೀನ ಆವತ್ತೇ ಕೇಳ್ದೆ. ನಿಂಗೆ ಹೊಸಾ ಅಮ್ಮ ಚಂದ್ರಿಕಾ ಚಿಕ್ಕಮ್ಮ” ಎಂದಳು ಸುಹಾಸಿನಿ.
ಮದುವೆಯ ನಂತರ ಸುಬ್ಬಮ್ಮ ಹೊರಟುಹೋದರು. ಆದರೆ ಚಂದ್ರಿಕಾ ಸುಫಲಾಗೆ ಎಂದೂ ತಾಯಿಯಾಗಲಿಲ್ಲ. ಜೊತೆಯಲ್ಲಿ ಸುಹಾಸಿನಿಗೂ ಅವಳ ಅಸಡ್ಡೆಯ ಬಿಸಿ ತಾಕತೊಡಗಿತು. ಮದುವೆಯಾದ ಒಂದು ತಿಂಗಳೊಳಗೆ ಸುಹಾಸಿನಿಯನ್ನು ಕರೆದಿದ್ದಳು ಚಂದ್ರಿಕಾ.
“ಏನು ಚಂದ್ರಿಕಾ ಚಿಕ್ಕಮ್ಮ?” ನಗುತ್ತಾ ಕೇಳಿದಳು ಸುಹಾಸಿನಿ.
ಅಬ್ಬಾ! ಈ ಹುಡುಗಿ ಅದೆಷ್ಟು ಗಂಭೀರ! ನಕ್ಕರೂ ಗಾಂಭೀರ್ಯ ಇದೆ! ಅದೂ ಏಳೆಂಟು ವರ್ಷದ ಹುಡುಗಿಗೆ! ಎಂದುಕೊಂಡ ಚಂದ್ರಿಕಾ ನೇರವಾಗಿ ವಿಷಯಕ್ಕೆ ಬಂದಳು.
“ನೋಡು! ನನಗೆ ನಮ್ಮನೇಲಿ ನಾನು, ನನ್ನ ಗಂಡ ಇರಬೇಕು. ನಿನಗೆ ಮನೆ ಇದೆಯಲ್ಲಾ, ಅಲ್ಲಿಗೆ ಹೋಗು” ಎಂದಳು ತಿರಸ್ಕಾರದಿಂದ.
“ಆಯ್ತು ಚಿಕ್ಕಮ್ಮಾ. ಆದರೆ ನೀವು ಬರೀ ಚಿಕ್ಕಪ್ಪನ ಹೆಸರು ಹೇಳಿದ್ರಿ. ಸುಫಲಾ ಇರಬಹುದು ತಾನೇ?” ಎಂದಳು.
“ಏಯ್! ಚೋಟುದ್ದ ಇದ್ದೀ? ತಲೆಹರಟೆ ಮಾಡ್ತೀಯಲ್ಲ?” ಎಂದು ಗದರಿದಳು.
ಸುಹಾಸಿನಿ ನಗುತ್ತಾ “ಇದು ತಲೆಹರಟೇನಾ?” ಎಂದಳು.
ಚಂದ್ರಿಕಾಗೆ ಸಿಟ್ಟು ನೆತ್ತಿ ತಲೆಗೇರಿತ್ತು. “ಏಯ್ ಹುಡುಗಿ! ನಿನ್ನ ವಯಸ್ಸಿಗೆ ತಕ್ಕ ಹಾಗಿರು! ನಿಂಗೆ ಹೋಗೂಂತ ಹೇಳಿದೆ ತಾನೇ? ಹೋಗು!” ಎಂದಳು ಹೆಚ್ಚು ಕಡಿಮೆ ಕಿರುಚಿ.
“ನಾನು ಮೂರ್ತಿ ಚಿಕ್ಕಪ್ಪನಿಗೆ ಹೇಳಿ ಹೋಗ್ತೀನಿ” ಎಂದಳು ಸುಹಾಸಿನಿ.
ಚಂದ್ರಿಕಾ ಉರಿದುಹೋದಳು. “ನೋಡು! ಈ ವಿಷಯ ಏನಾದರೂ ಅವರಿಗೆ ಹೇಳಿದರೆ ನಿನ್ನ ಗೆಳತಿಗೆ ಬರೆ ಹಾಕ್ತೀನಿ” ಎಂದಳು ಕಣ್ಣುಗಳನ್ನು ಕೆಂಪಾಗಿಸಿ.
ಸುಹಾಸಿನಿ ಮೆತ್ತಗಾದಳು. “ನಾನು ಹೋಗ್ತೀನಿ. ಆದರೆ ಸುಫಲಾಗೆ ಏನೂ ಮಾಡ್ಬೇಡಿ ಚಿಕ್ಕಮ್ಮಾ” ಎಂದಳು ಬೇಡಿಕೆಯ ಸ್ವರದಲ್ಲಿ.
“ಇನ್ನೊಂದು ವಿಷ್ಯ. ನಿನಗೆ ನಾನ್ಯಾವೂರ ಚಿಕ್ಕಮ್ಮನೇ? ಹಾಗೆ ಕರೀಬೇಡ. ಚಿಕ್ಕಮ್ಮ ಅಂತೆ ಚಿಕ್ಕಮ್ಮ!” ಎಂದಳು ಸಿಟ್ಟಿನಿಂದ.
“ಹಾಗಾದರೆ ನಾನು ನಿಮ್ಮನ್ನು ಏನೂಂತ ಕರೆಯಲಿ ನೀವೇ ಹೇಳಿ” ಎಂದು ಹೇಳಿ ತನ್ನ ಬಟ್ಟೆಗಳನ್ನು ಜೋಡಿಸಿಕೊಂಡು ತನ್ನ ಮನೆಗೆ ಬಂದುಬಿಟ್ಟಳು.
ಶಾಸ್ತ್ರಿಗಳು ದೇವಸ್ಥಾನಕ್ಕೆ ಹೋಗಿದ್ದವರು ಮನೆಗೆ ಮರಳಿ ಬಂದಾಗ ಸುಹಾಸಿನಿ ಮನೆಯಲ್ಲಿದ್ದುದನ್ನು ಕಂಡರು. ಏನೂ ಹೇಳಲಿಲ್ಲ. ಅವರೀಗ ಲೌಕಿಕದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಹೊಂದಿದ್ದರು.
ಸುಫಲಾ ಬಹಳವೇ ದುಃಖಿಸಿದಳು.
“ನಿನ್ನನ್ನು ಕಳಿಸಿಬಿಟ್ರಾ ಸುಹಾಸಿನೀ! ಛೇ, ಅವರಿಗೇನು ಕಷ್ಟ ಆಗಿತ್ತು ನೀನಿದ್ದಿದ್ರೆ?” ಎಂದಳು ಸುಹಾಸಿನಿಯ ಮನೆಗೆ ಬಂದು.
“ನಾನೇನೂ ದೂರ ಹೋಗಿಲ್ವಲ್ಲಾ ಸುಫಲಾ? ಪಕ್ಕದಲ್ಲೇ ಇದ್ದೀನಲ್ಲಾ? ಯಾವಾಗ ಬೇಕಾದ್ರೂ ಒಬ್ಬರನ್ನೊಬ್ರು ನೋಡಬಹುದು” ಎಂದಳು ಅವಳನ್ನು ಸಾಂತ್ವನಗೈದು.
ಚಂದ್ರಿಕಾ ಪತಿ ಮನೆಯಲ್ಲಿದ್ದಾಗ ಸುಫಲಾಳನ್ನು ಚೆನ್ನಾಗಿ ಮಾತಾಡಿಸುತ್ತಾ, ಅವನು ಇಲ್ಲದಿದ್ದಾಗ ಅವಳು ಗೋಳು ಹುಯ್ದುಕೊಳ್ಳುತ್ತಾ, ಕಿರುಕುಳ ಕೊಡಲಾರಂಭಿಸಿದಳು.
ಸುಫಲಾ ಸುಹಾಸಿನಿಯನ್ನು ಮತ್ತಷ್ಟು ಅಂಟಿಕೊಳ್ಳತೊಡಗಿದಳು. ಸುಹಾಸಿನಿಯ ಮಾತುಗಳಿಂದ ಅವಳು ಸಮಾಧಾನ ಪಡೆಯುತ್ತಿದ್ದಳು. ಶಾಲೆಗೆ ಹೋಗುವುದರಿಂದ ಹಿಡಿದು ರಾತ್ರಿ ಮಲಗಲು ಮನೆಗೆ ಹೋಗುವವರೆಗೂ ಜೊತೆಯಾಗಿ ಇರತೊಡಗಿದರು.
ಚಂದ್ರಿಕಾಗೆ ಇವರಿಬ್ಬರ ಸ್ನೇಹ ಸಹ್ಯವಾಗಲಿಲ್ಲ. ಅದರಲ್ಲೂ ಆ ʼದುಷ್ಟʼ ಹುಡುಗಿ ಸುಹಾಸಿನಿಯೊಂದಿಗೆ ನಗುತ್ತಾ ಮಾತಾಡಿದರೆ ಹೊಟ್ಟೆಯಲ್ಲಿ ಸಂಕಟವಾಗುತ್ತಿತ್ತು.
ಜೊತೆಗೆ ಚಂದ್ರಿಕಾ ಗರ್ಭಿಣಿ ಆಗಿದ್ದರಿಂದ ದೈಹಿಕವಾಗಿಯೂ ಬಸವಳಿದಿದ್ದಳು.
“ಏ ಸುಫಲಾ? ಯಾಕೆ ಶಾಲೆಗೆ ಬರೋಲ್ವ?” ಎಂದಿದ್ದಳು ಸುಹಾಸಿನಿ ಒಮ್ಮೆ ಸುಫಲಾ ಶಾಲೆಗೆ ಹೊರಡಲು ಸಿದ್ಧಳಾಗಿಲ್ಲದಿದ್ದಾಗ.
“ಉಹೂಂ. ಚಿಕ್ಕಮ್ಮನಿಗೆ ಸುಸ್ತಂತೆ. ನಾನು ಅಡುಗೆ ಮಾಡಬೇಕು” ಎಂದಳು ಮುಖ ಪೆಚ್ಚು ಮಾಡಿಕೊಂಡು.
ಸುಹಾಸಿನಿ ನಕ್ಕಳು. “ನಿಂಗೆ ಬಟ್ಟೆ ತುಂಡುಗಳಲ್ಲಿ ಪಾತ್ರೆ ಹಿಡಿಯೋಕ್ಕೇ ಬರೋಲ್ವಲ್ಲಾ? .. ಬಿಸಿ ಪಾತ್ರೇನ ಮೈಮೇಲೆ ಹಾಕಿಕೊಂಡುಬಿಡ್ತೀಯೇನೋ!” ಎಂದಳು ಸುಹಾಸಿನಿ ನಂತರ ಆತಂಕದಿಂದ.
“ಷ್! ಹಾಗೆಲ್ಲಾ ಜೋರಾಗಿ ಹೇಳ್ಬೇಡಾ. ಕಲಿತುಕೊಳ್ತೀನಿ. ಚಿಕ್ಕಮ್ಮನಿಗೆ ಕೇಳಿಸಿದರೆ, ನಿನ್ನನ್ನ ಹೇಗೂ ಓಡಿಸಿ ಆಗಿದೆ. ಅಪ್ಪ ನಿನ್ನನ್ನೂ ಊಟಕ್ಕೆ ಕರೆಯೋದ್ರಿಂದ ಈಗ ಎರಡು ಹೊತ್ತೂ ನಮ್ಮ ಜೊತೆ ಊಟ ಮಾಡ್ತಿದ್ದೀ. ಅದೂ ತಪ್ಪಿ ಹೋದರೆ ಕಷ್ಟ!”
ಆ ಮಾತು ಸತ್ಯವಾಗಿತ್ತು. ವೈಕುಂಠಮೂರ್ತಿ ತನ್ನ ಮಗಳು ಮತ್ತು ಸುಹಾಸಿನಿಯೊಂದಿಗೇ ಊಟಕ್ಕೆ ಕೂತುಕೊಳ್ಳುತ್ತಿದ್ದ. ಚಂದ್ರಿಕಾಗಿದು ನುಂಗಲಾರದ ತುತ್ತಾಗಿತ್ತು. ಹೇಗೆ ಸುಹಾಸಿನಿಯನ್ನು ಬರದಂತೆ ತಡೆಯುವುದು? ಎಂದು ಚಿಂತಿಸಿದಳು. ಅವಳಿಂದಲೇ ಸುಫಲಾ ತನ್ನ ಬಗ್ಗೆ ಹೆದರಿಕೆಯಿಲ್ಲದೇ ಧೈರ್ಯದಿಂದಿದ್ದಾಳೆ. ಸುಫಲಾ ಬೆದರಿದ ಹರಿಣಿಯ ನೋಟ ಬೀರಿದರೆ ಚಂದ್ರಿಕಾಗೆ ಮೃಷ್ಟಾನ್ನ ತಿಂದಂತಾಗುತ್ತಿತ್ತು. ಆ ಕೆಟ್ಟ ಹುಡುಗಿ ಸುಹಾಸಿನಿ ತನ್ನ ಪತಿಯ ಮಗಳನ್ನು ಹಾಳು ಮಾಡುತ್ತಿದ್ದಾಳೆ!
ಈಗ ಚಂದ್ರಕಾ ಪ್ರತಿಯೊಂದರಲ್ಲೂ ಸುಫಲಾ ಬಗ್ಗೆ ತಪ್ಪು ಕಂಡುಹಿಡಿದು ಕಟಕಿಯಾಡತೊಡಗಿದಳು.
“ಲೇ ಮೂದೇವೀ! ಸಾರಿಗೆ ಎಷ್ಟು ಉಪ್ಪು ಹಾಕಬೇಕೂಂತ ನಿಂಗೆ ಹೇಳಿಲ್ವಾ? ಇದೇನು ದರಿದ್ರವಾಗಿ ಮಾಡಿದ್ದೀ?” ಎಂದು ಮೂತಿ ತಿವಿಯುವುದು.
ಅವಳು ಬಿಸಿಯಾದ ಪಾತ್ರೆ ಒಲೆಯಿಂದ ಇಳಿಸುವಾಗ ಹಿಂದಿನಿಂದ ಬಂದು ಬೆಚ್ಚಿಸಿ, ಅವಳು ಪಾತ್ರೆ ಎತ್ತಿ ಹಾಕಿದಾಗ, “ಅಯ್ಯೋ ದರಿದ್ರವೇ! ನಿಂಗೇನು ಬಂದಿದೆಯೇ ರೋಗ?” ಎಂದು ಬೆನ್ನಿನ ಮೇಲೆ ಬಾರಿಸುವುದು.
(ಸಶೇಷ)
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ..!
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ ನಡೆಯುತ್ತಿದ್ದು, ಟೌನ್ಹಾಲ್ ಬಳಿ ನೂರಾರು ಜನರು ಸೇರಿದ್ದಾರೆ. 144 ಸೆಕ್ಷನ್ ನಡುವೆಯೂ ಮಹಿಷ ದಸರಾಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಮಹಿಷ ಉತ್ಸವ...