ಎಂಟು
ಒಂದೇ ಎರಡೇ? ಸುಫಲಾ ಹೈರಾಣಾದಳು. ಪಾಪ! ಅವಳಾದರೂ ಎಂಟು ತುಂಬಿ ಒಂಬತ್ತು ನಡೆಯುತ್ತಿದ್ದ ಬಾಲೆ.
“ನಿನ್ನ ವಯಸ್ಸಿಗೆ ನಾನು ಎಷ್ಟು ಕೆಲಸ ಮಾಡುತ್ತಿದ್ದೆ! ನೀನೂ ಇದ್ದೀ. ನಿಮ್ಮಮ್ಮ ನಿನ್ನನ್ನು ತುಂಬಾ ಮುದ್ದಾಗಿ ಸಾಕಿಬಿಟ್ಟಿದ್ದಾಳೆ” ಇತ್ಯಾದಿ ಮುಕ್ತಾಫಲಗಳು ಚಂದ್ರಿಕಾಳ ಬಾಯಿಯಿಂದ ಉದುರುತ್ತಿದ್ದವು.
ವೈಕುಂಠಮೂರ್ತಿ ಇದ್ದಾಗ ಅವನೆದುರಿಗೆ ಸುಫಲಾಳನ್ನು ಮುದ್ದಿಸಿ, ಅವಳಿಗೆ ಅಚ್ಚರಿ ಉಂಟುಮಾಡುತ್ತಿದ್ದಳು. ಸುಹಾಸಿನಿ ಎಲ್ಲವನ್ನೂ ಗಮನಿಸುತ್ತಿದ್ದಳು. ಸುಫಲಾಳನ್ನು ಕೇಳಿದರೆ, “ಬೇಡ್ವೇ. ಏನೂ ಕೇಳಬೇಡಾ. ಚಿಕ್ಕಮ್ಮನಿಗೆ ತಿಳಿದರೆ ಹೊಡೀತಾರೆ” ಎಂದೆನ್ನುತ್ತಿದ್ದಳು ಗಾಬರಿಯಿಂದ.
ಸುಫಲಾ ದಿನೇದಿನೇ ಕೃಶಳಾಗತೊಡಗಿದಳು. ಅವಳು ದಷ್ಟಪುಷ್ಟವಾಗಿದ್ದಾಗ ಇಟ್ಟಿದ್ದ ಸುಫಲಾ ಎಂದು ಸಾರ್ಥಕವಾಗಿದ್ದ ಹೆಸರು ಈಗ ಅನ್ವರ್ಥನಾಮವಾದಂತಾಗಿತ್ತು.
ಸುಹಾಸಿನಿಗೆ ಇನ್ನು ತಡೆದುಕೊಳ್ಳಲಾಗಲಿಲ್ಲ. “ಏನಮ್ಮಾ ಸುಹಾಸಿನೀ! ಶಾಲೆಗೆ ಹೋಗಲಿಲ್ವಾ?” ಎಂದ ವೈಕುಂಠಮೂರ್ತಿ, ಶಾಲಾಸಮಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಅಡಿಕೆ ತೋಟಕ್ಕೆ ಬಂದು ನಿಂತ ಸುಹಾಸಿನಿಯನ್ನು ನೋಡಿ.
ಅಲ್ಲೆಲ್ಲಾ ಅವನ ಆಳುಗಳಿದ್ದುದರಿಂದ “ಚಿಕ್ಕಪ್ಪಾ! ನಿಮ್ಮ ಹತ್ತಿರ ಮಾತಾಡಬೇಕು” ಎಂದಳು ಗಂಭೀರವಾಗಿ.
“ಬಾಮ್ಮಾ. ಅಲ್ಲಿ ಕೂತುಕೊಳ್ಳೋಣ. ಏನು ವಿಷಯ? ಮನೇಲಿ ದಿನಾ ಒಟ್ಟಿಗೇ ಊಟ ಮಾಡ್ತೀವಲ್ಲ? ಆಗ ಹೇಳಬಹುದಿತ್ತಲ್ವಾ? ಶಾಲೆ ತಪ್ಪಿಸಿದ್ದೀ?” ಎಂದ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕುಳಿತು.
ಅವನೆದುರಿಗೆ ಕೈಕಟ್ಟಿ ನಿಂತ ಸುಹಾಸಿನಿ “ಮನೇಲಿ ಹೇಳೋಕ್ಕಾಗೊಲ್ಲ ಚಿಕ್ಕಪ್ಪಾ!” ಎಂದಳು.
“ನಿಮ್ಮ ತಂದೆಯವರ ವಿಷಯ ಏನಮ್ಮಾ?” ಎಂದು ಕೇಳಿದ.
“ಇಲ್ಲ, ನಿಮ್ಮ ಮಗಳ ವಿಷಯ” ಎಂದಳು.
ವೈಕುಂಠಮೂರ್ತಿ ಅಚ್ಚರಿಗೊಂಡ. “ಏನ್ಮಾಡಿದ್ಲು ಅವಳು?” ಎಂದ.
ಸುಹಾಸಿನಿ ಒಂದಿಷ್ಟೂ ಮುಚ್ಚಿಡದೇ ತಾನು ಕಂಡಿದ್ದು, ಸುಫಲಾಳ ಮೂಲಕ ಅರಿತಿದ್ದು ಎಲ್ಲವನ್ನೂ ವಿವರಿಸಿದಳು. ವೈಕುಂಠಮೂರ್ತಿಗೆ ತನ್ನೆದುರಿಗೇ ಸುಫಲಾಳನ್ನು ಮುದ್ದಿಸಿದ್ದ ಚಂದ್ರಿಕಾಳ ಚಿತ್ರ ನೆನಪಾಯಿತು. ಆದರೆ ಸುಹಾಸಿನಿಯ ಸ್ವಭಾವ ಅವನಿಗೆ ಗೊತ್ತಿತ್ತು. ಅವಳು ಸುಳ್ಳು ಹೇಳುವವಳಲ್ಲ!
“ಚಂದ್ರಿಕಾ ಚಿಕ್ಕಮ್ಮನಿಗೆ ಮಗು ಹುಟ್ಟುತ್ತಂತೆ. ಆ ಮಗು ಚಾಕರಿ ಎಲ್ಲಾ ಸುಫಲಾ ಕೈಲಿ ಮಾಡಿಸ್ತೀನಿ. ಅವಳನ್ನು ಶಾಲೆಯಿಂದ ಬಿಡಿಸ್ತೀನಿ ಅಂದ್ರಂತೆ” ಎಂದಳು.
ವೈಕುಂಠಮೂರ್ತಿಗೆ ಏನು ಹೇಳಬೇಕೋ ತೋಚಲಿಲ್ಲ. ಚಂದ್ರಿಕಾ ಅವನನ್ನು ಸೆಳೆದುಕೊಂಡಿದ್ದಳು. ತಲೆ ಎತ್ತಿದ. ಗತಿಸಿದ ತನ್ನ ಪತ್ನಿ ಆಗಸದಿಂದ ತನ್ನನ್ನು ತಪ್ಪಿತಸ್ಥನೆಂದು ಬೆರಳು ಮಾಡಿದಂತೆ ತೋರಿತ್ತು.
“ನಿಮಗೆ ಸುಫಲಾ ಬೇಡಾಂದ್ರೆ ದ್ವಾರಕಾನಾಥ ಚಿಕ್ಕಪ್ಪನ ಬಳಿ ಬಿಟ್ಟುಬಿಡಿ. ಮೈಥಿಲಿ ಚಿಕ್ಕಮ್ಮ ಸತ್ತಾಗ ಬಂದಿದ್ದರಲ್ಲಾ… ಆಗ ಹೇಳ್ತಿದ್ರು. ನಿನ್ನಪ್ಪನಿಗೆ ಹೇಳಿ ಕರೆದುಕೊಂಡು ಹೋಗ್ತೀನಿ ಅಂತ ಸುಫಲಾಗೆ” ಎಂದು ಹೇಳಿ ವೈಕುಂಠಮೂರ್ತಿಯ ಸಮಸ್ಯೆಯ ತಮಸ್ಸಿಗೆ ದೀಪಧಾರಿಣಿಯಾದಳು.
ಹೌದು! ದ್ವಾರಕಾನಾಥ .. ವೈಕುಂಠಮೂರ್ತಿಯ ತಮ್ಮ. ಅವನಿಗೆ ಸಂತಾನವಿರಲಿಲ್ಲ. ಸುಫಲಾಳೆಂದರೆ ತುಂಬಾ ಇಷ್ಟ ಪಡುತ್ತಿದ್ದ. ಅವನ ಹೆಂಡತಿ ಮಿತ್ರವಿಂದಾಳಿಗೂ, ಸುಫಲಾ ಎಂದರೆ ಅಕ್ಕರೆ ಇತ್ತು.
ವೈಕುಂಠಮೂರ್ತಿ ಸುಹಾಸಿನಿಗೆ ನಮಸ್ಕಾರ ಮಾಡಲಿಲ್ಲ – ಅವಳ ಆಯಸ್ಸು ಕಡಿಮೆಯಾಗುವುದೆಂಬ ಭಯದಿಂದ!
ದ್ವಾರಕಾನಾಥನಿಗೆ ಪತ್ರ ಬರೆದ. ಅವನು ಬಂದು ಸುಫಲಾಳನ್ನು ಕರೆದೊಯ್ಯುವನೆಂದು ಹೆಂಡತಿ ಚಂದ್ರಿಕಾಗೆ ಹೇಳಿದ. ಅವಳ ಕಣ್ಗಳಲ್ಲಿ ಸಂತಸದ ಮಿಂಚು ಕಂಡ. ನಿಟ್ಟುಸಿರಿಟ್ಟ.
“ನಂಗೆ ಸಂತೋಷ, ದುಃಖ ಎರಡೂ ಆಗ್ತಿದೆ ಸುಹಾಸಿನೀ!” ಎಂದಳು ಸುಫಲಾ.
ಅವರಿಬ್ಬರೂ ಕಾಳಿಂದೀ ತೀರದ ಅರಳೀಮರದ ಬುಡದ ಕಟ್ಟೆಯ ಮೇಲೆ ಕುಳಿತಿದ್ದರು. ತಂಗಾಳಿ ಬೀಸುತ್ತಿತ್ತು. ಅವರಿಬ್ಬರ ಕುರುಳುಗಳು ಹಾರಾಡುತ್ತಿದ್ದವು.
“ತಂದೆಯವರನ್ನು ಬಿಟ್ಟು ಹೋಗ್ತಿರೋ ದುಃಖಾನಾ?” ಎಂದಳು ಸುಹಾಸಿನಿ ನಗುತ್ತಾ.
“ಹೂಂ. ಅದಕ್ಕಿಂತ ಹೆಚ್ಚು ನಿನ್ನನ್ನು ಬಿಟ್ಟು ಹೋಗ್ತಿದ್ದೀನಲ್ಲಾ ಅಂತ” ಎಂದು ಗಳಗಳನೆ ಅತ್ತುಬಿಟ್ಟಳು ಸುಫಲಾ.
ಸುಹಾಸಿನಿ ಮಾತಾಡದೇ ಕುಳಿತಳು. ಗೆಳತಿ ಹೋಗುವಳೆಂಬ ಪರಿತಾಪವಿತ್ತವಳಿಗೆ. ಆದರೆ ಅವಳು ಇನ್ನು ಸಂತೋಷವಾಗಿರುವಳೆಂಬ ನೆಮ್ಮದಿ ಇತ್ತು.
“ನಿಂಗೆ ಬೇಜಾರಿಲ್ವಾ ಸುಹಾಸಿನೀ?” ಕೇಳಿದಳು ಅತ್ತು ಕಣ್ಣೊರೆಸಿಕೊಂಡ ಸುಫಲಾ.
“ಆಗುತ್ತೆ. ಆದರೆ ಏನ್ಮಾಡ್ಳಿ? ನಮ್ಮ ಅಮ್ಮ ಬದುಕಿರಬೇಕಿತ್ತು ಅನ್ನಿಸುತ್ತೆ. ಮೈಥಿಲಿ ಚಿಕ್ಕಮ್ಮ ಇರಬೇಕಿತ್ತು. ನಮ್ಮ ತಂದೆ ಸರಿಯಾಗಿ ಊಟಮಾಡಬೇಕು. ನಮ್ಮಣ್ಣ ಶಂಭು ನನ್ನ ಜೊತೆಗೆ ಇರಬೇಕು. ಗಜೂಮಾಮ ವರ್ಷಕ್ಕೆ ಒಮ್ಮೆಯಾದರೂ ಬರಬೇಕು. ಇವೆಲ್ಲಾ ಆಗ್ತಾ ಇಲ್ಲವಲ್ಲ? ಹಾಗೇ ಇದೂ ಕೂಡ” ಎಂದಳು ಸುಹಾಸಿನಿ.
ಒಂಬತ್ತು ವರ್ಷದ ಹುಡುಗಿಯ ಮಾತದು ಎಂದರೆ ಸ್ವಲ್ಪ ಅತಿಶಯವೇ. ಸುಹಾಸಿನಿ ಅಷ್ಟು ಪ್ರಬುದ್ಧಳಾಗಿದ್ದಳು.
“ನಾ ನಿನ್ನನ್ನ ಮರೆಯೋದಿಲ್ಲ. ವಿಳಾಸ ಕೊಡ್ತೀನಿ. ಪತ್ರ ಬರಿ” ಎಂದಳು ಸುಫಲಾ.
“ಉಹೂಂ. ನೀನಲ್ಲಿಗೆ ಹೋಗಿ ನನಗೆ ಮೊದಲು ಬರಿ. ನಾನು ಉತ್ತರ ಬರೀತೀನಿ” ಎಂದಳು ಸುಹಾಸಿನಿ.
ದ್ವಾರಕಾನಾಥ ಚಿಕ್ಕಪ್ಪ ಬಂದಾಗ ಚಿಗರೆಯಂತೆ ಕುಣಿಯುತ್ತಲೇ ಹೊರಟಳು ಸುಫಲಾ. ಚಂದ್ರಿಕಾಳ ನಿರಾಳ ಕಂಡು ವೈಕುಂಠಮೂರ್ತಿ ನಿಡುಸುಯ್ದ. ತುಂಬುಗರ್ಭಿಣಿಯನ್ನು ನೋಯಿಸಕೂಡದೆಂದು ಸುಮ್ಮನಾದ.
“ಬರ್ತೀನಿ ಸುಹಾಸಿನಿ. ಶ್ರೀರಂಗಪಟ್ಟಣ ಒಂದು ರಾತ್ರಿಯ ಪ್ರಯಾಣ ಅಂತೆ. ಯಾವಾಗ್ಲಾದ್ರೂ ಬಾ” ಎಂದು ಹೇಳಿ ಗಾಡಿ ಹತ್ತಿದಳು ಸುಫಲಾ. ನಗರದಿಂದ ಬಸ್ಸು ಹಿಡಿಯಲಿದ್ದರು ಶ್ರೀರಂಗಪಟ್ಟಣಕ್ಕೆ.
ಹಠಾತ್ತನೆ ಒಬ್ಬೊಂಟಿಯಾದಂತೆನಿಸಿತು ಸುಹಾಸಿನಿಗೆ.
“ಮಧ್ಯಾಹ್ನ ಊಟಕ್ಕೆ ಬಾ” ಎಂದ ವೈಕುಂಠಮೂರ್ತಿ.
“ಇಲ್ಲ ಚಿಕ್ಕಪ್ಪ. ನಾನೇ ಅಡುಗೆ ಮಾಡ್ತೀನಿ” ಎಂದಳು ಚೋಟುದ್ದದ ಸುಹಾಸಿನಿ. ವೈಕುಂಠಮೂರ್ತಿ ತಬ್ಬಿಬ್ಬಾಗಿ ನೋಡಿ ನಂತರ ಗಹಗಹಿಸಿ ನಕ್ಕ. “ನೀನು ಒಂಬತ್ತು ವರ್ಷದ ಪುಟಾಣಿ. ಅಡುಗೆ ಮಾಡ್ತೀಯಾ?” ಎಂದ ಬೆರಗಿನಿಂದ.
“ಏನು ಚಿಕ್ಕಪ್ಪಾ? ಅದೇನು ಮಹಾಕಷ್ಟ? ಒಲೆಮೇಲೆ ಪಾತ್ರೇಲಿ ನೀರಿಟ್ಟು ಅಕ್ಕಿ ಹಾಕಿ ಮುಚ್ಚಿಟ್ರೆ ಅನ್ನ ಆಗುತ್ತೆ. ನೀರು, ಕಾರದ ಪುಡಿ, ಬೇಳೆ, ಹುಣಿಸೇಹಣ್ಣು, ಉಪ್ಪು ಹಾಕಿ ಕುದಿಸಿದರೆ ಸಾರು. ನಿಮಗೆ ಗೊತ್ತಿಲ್ಲ. ನಾನು ಮೈಥಿಲಿ ಚಿಕ್ಕಮ್ಮನ ಹತ್ತಿರವೇ ಅಡುಗೆ ಕಲಿತುಕೊಂಡಿದ್ದೀನಿ” ಎಂದಳು ನಗುತ್ತಾ. ಈ ಹುಡುಗಿಯ ನಗೆ ಹೀಗೇ ಚಿರವಾಗಿರಲಿ ಎಂದು ಮನಃಪೂರ್ವಕವಾಗಿ ಹಾರೈಸಿದ ವೈಕುಂಠಮೂರ್ತಿ.
“ಯಾಕೆ ಅಡುಗೇ ಮಾಡೋ ಹಟ ಸುಹಾಸಿನೀ? ಈಗ ಸುಫಲಾನೂ ಇಲ್ಲ. ನನಗೆ ನೀನೂ ಬರದಿದ್ರೆ ಬೇಸರವಾಗುತ್ತೆ” ಎಂದ.
“ಚಂದ್ರಿಕಾ ಚಿಕ್ಕಮ್ಮ ಇದ್ದಾರೆ. ಇನ್ನೇನು ಒಂದು ಪಾಪ ಬರುತ್ತೆ. ಅದೂ ಅಲ್ಲದೇ…” ಸ್ವರ ತಗ್ಗಿಸಿ, “ನಮ್ಮ ಅಪ್ಪನನ್ನು ನೋಡಿದ್ದೀರಾ? ಸರಿಯಾದ ಊಟವಿಲ್ಲದೇ ಹೇಗಾಗಿದ್ದಾರೆ! ಅವರಿಗೂ ನಾನು ಅಡುಗೇ ಮಾಡಿ ಬಡಿಸಬೇಕೂಂತ ಇಷ್ಟ” ಎಂದಳು.
ವೈಕುಂಠಮೂರ್ತಿ ಕಂಗಳಿಂದ ಅಶ್ರುಧಾರೆ ಸುರಿಯಲಾರಂಭಿಸಿತು. ಅದೆಷ್ಟು ದೊಡ್ಡವಳಂತೆ ಆಲೋಚಿಸುತ್ತಾಳೆ ಈ ಹುಡುಗಿ! ನನ್ನ ಮಗಳು ಇವಳ ಮುಂದೆ ತುಂಬಾ ಸಣ್ಣವಳು!
“ಸರಿ ಕಣಮ್ಮಾ. ಆದರೆ ನಿಮ್ತಂದೆ ನಿನ್ನ ಅಡುಗೆ ಊಟ ಮಾಡಬೇಕಲ್ಲ?” ಎಂದ ವೈಕುಂಠಮೂರ್ತಿ.
“ಯಾಕೆ ಮಾಡಲ್ಲ ಚಿಕ್ಕಪ್ಪ? ನಾನೂ ಹಟ ಮಾಡ್ತೀನಿ. ಅವರು ಊಟ ಮಾಡೋವರ್ಗೂ ಉಪವಾಸ ಇರ್ತೀನೀಂತ” ಎಂದಳು ಬಲುನಂಬಿಕೆಯಿಂದ.
“ನಿನಗೆ ಆ ದೇವರು ಶಕ್ತಿ ಕೊಡಲಿ. ಆದರೆ ನಾನು ನಿನಗೆ ಅಕ್ಕಿಬೇಳೆ ಎಲ್ಲಾ ಕೊಡ್ತೀನಿ. ಬೇಡಾ ಅನ್ಬಾರ್ದು” ಎಂದ.
ಸುಹಾಸಿನಿ ಒಪ್ಪಿದಳು.
ಅಂದು ಬೆಳಿಗ್ಗೆ ಶಂಕರಶಾಸ್ತ್ರಿಗಳು ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋದೊಡನೆ ಸುಹಾಸಿನಿಯೂ ಹೊಳೆಯಲ್ಲಿ ಸ್ನಾನ ಮಾಡಿ ಅಡುಗೆಮನೆ ಶುಚಿಗೊಳಿಸಿ ಒಲೆ ಹೊತ್ತಿಸಿದಳು. ಮನೆಯನ್ನೆಲ್ಲಾ ಗುಡಿಸಿ, ಸಾರಿಸಿದಳು. ದೇವರಗೂಡಿನಲ್ಲಿದ್ದ ವಿಗ್ರಹಗಳನ್ನು ಶುದ್ಧಗೊಳಿಸಿದಳು. ಮಣ್ಣಿನ ಹಣತೆ ಹೊತ್ತಿಸಿದಳು.
(ಸಶೇಷ)
ಸನಾತನ ಎಂದರೆ ಶಾಶ್ವತ ಎಂದರ್ಥ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಿದರೆ ಒಳಿತು: ನಿರ್ಮಲಾನಂದ ಸ್ವಾಮೀಜಿ
ಸನಾತನ ಎಂದರೆ ಶಾಶ್ವತ ಎಂದರ್ಥ, ಅಂದರೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕೆಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ...