ಒಂಬತ್ತು
ನಂತರ ಅಡುಗೆ ಮಾಡಿದಳು. ತಂದೆ ಬರುವ ಹೊತ್ತಾಯಿತೆಂದು ಅರಿತು ತಟ್ಟೆಯಿಟ್ಟು, ಚಾಪೆ ಹಾಸಿ, ಲೋಟದಲ್ಲಿ ನೀರಿಟ್ಟಳು. ಶಾಸ್ತ್ರಿಗಳು ಮನೆಯೊಳಗೆ ಬಂದರು. ಮನೆಯ ಶುಚಿತ್ವ ನೋಡಿ ಅವರ ಹುಬ್ಬೇರಿತು. ಇಂದು ಹಾಲು, ಹಣ್ಣು ಕಾಣಿಸಲಿಲ್ಲ. ಅದರ ಬದಲು ಊಟವಿತ್ತು. ಸುತ್ತಲೂ ನೋಡಿದರು. ಸುಹಾಸಿನಿ ನಿಂತಿದ್ದಳು ಅಲ್ಲಿಯೇ ಒಂದೆಡೆ ಗೋಡೆಗೊರಗಿ.
“ಬಡಿಸ್ತೀನಿ. ಊಟ ಮಾಡೀಪ್ಪಾ” ಎಂದಳು. ಅವಳಿಗೆ ಗಂಟಲು ಕಟ್ಟಿದಂತಾಗಿತ್ತು.
“ಬೇಕಾಗಿಲ್ಲ!” ಎಂದರು ಒರಟಾಗಿ. ಮಗಳ ಮೊಗದಲ್ಲಿ ಅವರ ಒಲವಿನ ಗಿರಿಜಾಳ ನಗೆ ಕಂಡಿತ್ತು. ಸಿಟ್ಟು, ದುಃಖಗಳು ಉಂಟಾಗಿದ್ದವು.
“ಹೇಗಾಗಿದ್ದೀರಿ ಗೊತ್ತಾ ನೀವು? ಓಂಕಾರೇಶ್ವರ ಪೂಜೆ ಮಾಡೋಕ್ಕೆ ಶಕ್ತಿ ಬೇಡವೇ? ಇಷ್ಟು ದಿನ ನಾನು ಚಿಕ್ಕವಳು. ಇನ್ನುಮೇಲೆ ನಾನೇ ಅಡುಗೆ ಮಾಡ್ತೀನಿ. ನೀವು ಊಟ ಮಾಡಬೇಕು” ಎಂದಳು ಖಚಿತವಾದ ಸ್ವರದಲ್ಲಿ.
“ಒಂದುವೇಳೆ ನಾನು ಊಟ ಮಾಡೋಲ್ಲ ಅಂದ್ರೆ?” ಎಂದರು ಹಲ್ಲುಕಚ್ಚಿ.
“ನಾನೂ ಉಪವಾಸ ಮಾಡ್ತೀನಿ. ಅಷ್ಟೇ!” ಎಂದಳು ಆರಾಮವಾಗಿ.
ಶಾಸ್ತ್ರಿಗಳು ಮಗಳನ್ನೇ ಎವೆಯಿಕ್ಕದೇ ದಿಟ್ಟಿಸಿದರು. ತಂದೆ ಏನು ಮಾಡುವರೋ ಎಂದು ಸುಹಾಸಿನಿಯೂ ಉಸಿರು ಬಿಗಿಹಿಡಿದು ನಿರೀಕ್ಷಿಸತೊಡಗಿದಳು.
“ಶಂಭೋ ಮಹಾದೇವ ಚಂದ್ರಚೂಡ |
ಶಂಕರಾ ಸಾಂಬಸದಾಶಿವ ||
ಗಂಗಾಧರ ಕೈಲಾಸವಾಸ |
ಪಾಹಿಮಾಂ ಪಾರ್ವತಿರಮಣ ||” ಸುಶ್ರಾವ್ಯವಾಗಿ ಕೇಳಿಸಿತ್ತು ಶ್ಲೋಕ.
ಹೊಳೆಯಲ್ಲಿ ಸ್ನಾನ ಮುಗಿಸಿ ಬಂದ ಶಂಕರಶಾಸ್ತ್ರಿಗಳು ಓಂಕಾರೇಶ್ವರನ ಗುಡಿಯ ಬಾಗಿಲಿಗೆ ಬಂದವರು ಬೆರಗಾದರು.
ದೇವಸ್ಥಾನ ಸ್ವಚ್ಛವಾಗಿತ್ತು. ಬೇರಾರಿಗೂ ಬಿಡದೇ ತಾವೇ ಶುದ್ಧಗೊಳಿಸುತ್ತಿದ್ದ ಶಂಕರಶಾಸ್ತ್ರಿಗಳಿಗೆ ಈಗೆಲ್ಲಾ ಪೂಜೆಯ ವಿನಃ ಬೇರೆ ಯಾವ ಕೆಲಸವನ್ನೂ ಮಾಡಲಾಗುತ್ತಿರಲಿಲ್ಲ. ಪತ್ನಿ ಗಿರಿಜಾಳ ಸಾವಿನ ಆಘಾತ ಅವರನ್ನು ಜರ್ಝರಿತಗೊಳಿಸಿಬಿಟ್ಟಿತ್ತು. ಜೊತೆಗೆ ಹಟದಿಂದ ಊಟವನ್ನೂ ಇಷ್ಟು ವರ್ಷ ಬಿಟ್ಟುಬಿಟ್ಟಿದ್ದರು.
“ನೀನು ಇಲ್ಲೂ ಬಂದೆಯಾ?” ಎಂದರು ಅಸಹಾಯಕತೆ ತುಂಬಿನ ಸಿಟ್ಟಿನಿಂದ.
“ಏಕೆ? ನಾನು ಬರಬಾರದೇ?” ಎಂದಿದ್ದಳು ಹತ್ತರ ಪೋರಿ ಸುಹಾಸಿನಿ ನಗುತ್ತಾ.
ಆ ನಗೆ ಕಂಡೊಡನೆ ಮೆತ್ತಗಾದರು ಶಾಸ್ತ್ರಿಗಳು. ಒಂದೆಡೆ ಮನ ಅವಳನ್ನು ಇಷ್ಟ ಪಡುತ್ತಿತ್ತು. ಮತ್ತೊಂದೆಡೆ ತನ್ನ ಒಲುಮೆಯ ಗಿರಿಜಾಳ ಸಾವಿಗೆ ಕಾರಣಳಾದವಳೆಂಬ ಕೋಪ ಏರುತ್ತಿತ್ತು. ಈ ದ್ವಂದ್ವದಲ್ಲಿ ತೊಳಲಾಡುತ್ತಿದ್ದರು.
ಅಂದು ಹಟವಾಗಿ ನಿಂತ ಮಗಳ ಮಾತಿಗೋ, ಅಥವಾ ಶಿವನಿಚ್ಛೆ ಎಂದೋ ಸುಹಾಸಿನಿ ಮಾಡಿದ ಅಡುಗೆ ಉಂಡಿದ್ದರು. ಸುಹಾಸಿನಿ ಇಮ್ಮಡಿ ಉತ್ಸಾಹದಿಂದ ದಿನವೂ ಏನು ಇದೆಯೋ ಅದರಿಂದಲೇ ರುಚಿಯಾಗಿ ಅಡುಗೆ ಮಾಡಹತ್ತಿದಳು. ವೈಕುಂಠಮೂರ್ತಿ ಅವಳಿಗೆ ಬೆಂಗಾವಲಾದ. ಈ ಒಂದು ವಿಷಯದಲ್ಲಿ ತಲೆ ಹಾಕಕೂಡದೆಂದು ಹೆಂಡತಿ ಚಂದ್ರಿಕಾಳಿಗೆ ನಯವಾಗಿಯೇ ಕಟ್ಟಪ್ಪಣೆ ಮಾಡಿದ್ದ. ಚಂದ್ರಿಕಾ ನಿಸ್ಸಹಾಯಕತೆಯಿಂದ ಸುಮ್ಮನಾದಳು.
ಸುಹಾಸಿನಿಗೆ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ತೋರಿಸಿಕೊಟ್ಟ. ದಿನಸಿ ಸಾಮಾನು ತಂದು ಕೊಡುತ್ತಿದ್ದ. “ಚಿಕ್ಕಪ್ಪಾ! ಇವೆಲ್ಲಾ..” ಎಂದು ಸುಹಾಸಿನಿ ಅಂದರೆ “ನೀನು ಬೇರೆ ಅಲ್ಲ ನನಗೆ, ಸುಫಲಾ ಬೇರೆ ಅಲ್ಲ. ಅವಳೂ ಇಲ್ಲಿಲ್ಲ. ನಿನ್ನಲ್ಲೇ ಅವಳನ್ನೂ ನೋಡ್ತಿದ್ದೀನಿ ಕಣಮ್ಮಾ” ಎಂದು ಕಂಬನಿ ಮಿಡಿಯುತ್ತಿದ್ದ.
ತಂದೆಗೆ ಪೂಜೆಗೆ ಅಣಿಮಾಡಿ ನಗರದ ಶಾಲೆಗೆ ನಡೆದುಹೋಗುತ್ತಿದ್ದಳು. ಈಗ ಅವಳು ಐದನೆಯ ಇಯತ್ತೆಯಲ್ಲಿದ್ದಳು. ಎಲ್ಲರಿಗೂ ತನ್ನ ಸ್ನೇಹಪೂರ್ವಕ ನಗೆ ಬೀರಿ ಗೆಳೆತನ ಬೆಳೆಸಿಕೊಂಡಿದ್ದಳು ಸುಹಾಸಿನಿ. ಸುಫಲಾ ಇಲ್ಲದಿದ್ದುದು ತಿಳಿಯುತ್ತಿತ್ತು ಅವಳ ವರ್ತನೆಯಿಂದ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೂ ಎಲ್ಲರೂ ಗೆಳತಿಯರೇ.
ಸುಫಲಾಳಿಂದ ಚಿಕ್ಕ ಪುಟ್ಟ ಪತ್ರ ಬರುತ್ತಿತ್ತು. ದ್ವಾರಕಾನಾಥ – ಮಿತ್ರವಿಂದಾ ದಂಪತಿಯರು ಅವಳನ್ನು ತಮ್ಮ ಕಣ್ರೆಪ್ಪೆಯಲ್ಲಿಟ್ಟು ಸಾಕುತ್ತಿದ್ದರು. ದ್ವಾರಕಾನಾಥ ತನ್ನ ಸಹೋದರನಿಗೆ ಬರೆದ ಪತ್ರದಲ್ಲಿ ತಾನೂ ಪುಟ್ಟಕಾಗದವಿಡುತ್ತಿದ್ದಳು ಸುಫಲಾ.
“ನೀನೂ ಬರೆದುಕೊಡು ಸುಹಾಸಿನೀ” ಎಂದು ವೈಕುಂಠಮೂರ್ತಿ ಹೇಳಿದರೆ “ಬೇಡ ಚಿಕ್ಕಪ್ಪಾ! ನೀವೇ ಎರಡು ಸಾಲು ಬರೀರಿ. ನಾನು ಚೆನ್ನಾಗಿದ್ದೀನಿ ಅಂತ” ಎಂದುಬಿಡುತ್ತಿದ್ದಳು.
“ಇವತ್ತು ಹೊಸಾ ಟೀಚರ್ ಬರ್ತಾರಂತೆ” ಎಂದು ಶಾಲೆಯಲ್ಲಿ ಹುಡುಗಿಯರು ಮಾತಾಡಿಕೊಳ್ಳುತ್ತಿದ್ದುದು ಸುಹಾಸಿನಿಯ ಕಿವಿಗಳಿಗೆ ಬಿದ್ದಿತು.
ಓಹೋ, ಕನ್ನಡ ಪಾಠ ಮಾಡಲು ಹೊಸಾ ಟೀಚರ್ ಎಂದುಕೊಂಡಳು. ಹೊಸ ಟೀಚರ್ ತರಗತಿಯ ಒಳಗೆ ಬಂದಿದ್ದರು.
“ಗೆಳತಿಯರೇ! ನಾನು ಕಸ್ತೂರಿ. ಈ ಊರಿಗೆ ಹೊಸದಾಗಿ ಬಂದಿದ್ದೇನೆ. ಮೊದಲು ಎಲ್ಲರ ಪರಿಚಯ ಆಗಲಿ. ಎಲ್ಲರೂ ಒಬ್ಬೊಬ್ಬರೇ ನಿಂತು ನಿಮ್ಮ ಹೆಸರುಗಳನ್ನು ಹೇಳಿ” ಎಂದರು.
ಸುಹಾಸಿನಿ ಅವರನ್ನೇ ಗಮನಿಸಿದಳು. ಎತ್ತರಕ್ಕೆ ಸಣ್ಣಗೆ ಇದ್ದರು. ಸ್ವಲ್ಪ ಕಪ್ಪು ಬಣ್ಣ. ಆದರೆ ಮುಖದಲ್ಲಿ ಗಾಂಭೀರ್ಯ. ನೋಡಿದರೆ ನಮಸ್ಕಾರ ಮಾಡಬೇಕೆನ್ನಿಸುವ ನಿಲುವು. ಧ್ವನಿ ಬಲು ಮೆದು. ಸಂಗೀತ ಕೇಳಿದಂತಿತ್ತು.
“ನಿನ್ನ ಹೆಸರೇನಮ್ಮಾ?” ಎಂದು ಕಸ್ತೂರಿ ಕೇಳಿದಾಗ ಥಟ್ಟನೆ ಎದ್ದು ನಿಂತು “ಸುಹಾಸಿನಿ” ಎಂದು ಮುಗುಳ್ನಗೆ ಬೀರಿದಳು.
“ನಿನಗೆ ಸರಿಯಾದ ಹೆಸರು” ಎಂದರು ಕಸ್ತೂರಿ ಅವಳತ್ತ ಮೆಚ್ಚುಗೆಯಿಂದ ನೋಡಿ. ಅದಕ್ಕೂ ಒಂದು ಮುಗುಳ್ನಗೆಯ ಉತ್ತರ ನೀಡಿದಳು ಸುಹಾಸಿನಿ.
“ನಿಮಗೆ ಇದು ಮೊದಲ ಕನ್ನಡ ತರಗತಿ. ನನಗೂ ಈ ಶಾಲೆಯಲ್ಲಿ ಮೊದಲನೆಯ ಪೀರಿಯೆಡ್ಡು. ಎಲ್ಲಿ… ಎಲ್ಲರೂ ನನ್ನ ಜೊತೆ ಹೇಳಿ. ಆದರೆ ಮೆಲುದನಿಯಲ್ಲಿ ಹಾಡಿ” ಎಂದು ಹೇಳಿ “ಲಂಬೋದರ ಲಕುಮಿಕರಾ, ಅಂಬಾಸುತ ಅಮರವಿನುತ” ಎಂದು ಸುಶ್ರಾವ್ಯವಾಗಿ ಹಾಡಿದರು. ಹುಡುಗಿಯರೂ ಉತ್ಸಾಹದಿಂದ ದನಿಗೂಡಿಸಿದರು.
ಸುಹಾಸಿನಿಗಂತೂ ಇದು ಅದ್ಭುತವೆನಿಸಿತು. ಇವರಿಂದ ಸಂಗೀತ ಕಲಿಯಬೇಕು ಎಂದುಕೊಂಡಳು. ಪಾಠಗಳನ್ನಂತೂ ಬಲು ಸುಲಭವಾಗಿ ಅರ್ಥವಾಗುವಂತೆ ವಿವರಿಸುತ್ತಿದ್ದರು ಕಸ್ತೂರಿ.
ಸ್ಟಾಫ್ರೂಮಿನಲ್ಲಿ ಕುಳಿತಿದ್ದ ಕಸ್ತೂರಿ, “ನಮಸ್ತೆ ಟೀಚರ್!” ಎಂಬ ದನಿ ಕೇಳಿ, ತಾವೋದುತ್ತಿದ್ದ ಪುಸ್ತಕವನ್ನು ಪಕ್ಕಕ್ಕಿಟ್ಟು ತಲೆ ಎತ್ತಿ ನೋಡಿದರು.
“ನೀವು ಈವತ್ತು ಕೊಟ್ಟ ಉದಾಹರಣೆ ತುಂಬಾ ಚೆನ್ನಾಗಿತ್ತು ಟೀಚರ್. ನಾನು ಆ ಪುಸ್ತಕ ಓದಬಹುದಾ?” ಎಂದು ನಮ್ರತೆಯಿಂದ ಕೇಳಿದಳು ಸುಹಾಸಿನಿ.
“ಖಂಡಿತ! ನಿನಗೆ ಮನೇಲಿ ಓದಲು ಸಮಯ ಸಿಗುತ್ತೇನು?” ಎಂದರು.
“ಮಾಡಿಕೊಳ್ತೀನಿ ಟೀಚರ್” ಎಂದಳು.
ಹೌದು! ಅವಳು ಸಮಯ ಮಾಡಿಕೊಳ್ಳಬೇಕಾಗುತ್ತಿತ್ತು. ಹತ್ತು ವರ್ಷ ದಾಟಿ ಹನ್ನೊಂದಾಗುವ ಸಮಯ. ಬೆಳಿಗ್ಗೆಯೇ ಎದ್ದು ತಂದೆಯ ಪೂಜೆಗೆ ಗುಡಿಯಲ್ಲಿ ಎಲ್ಲವನ್ನೂ ಅಣಿ ಮಾಡಿಕೊಟ್ಟು, ಮನೆಗೆ ಬಂದು ಪೂಜೆ, ಅಡುಗೆ ಮುಗಿಸಿ, ಶಾಲೆಗೆ ತರಾತುರಿಯಿಂದ ಹೊರಡುತ್ತಿದ್ದಳು. ವೈಕುಂಠಮೂರ್ತಿಗೆ ಸುಹಾಸಿನಿಯ ಈ ಪ್ರೌಢವರ್ತನೆ ಬೆರಗು ಮೂಡಿಸಿದರೂ, ಇದು ಅವಳ ಪೂರ್ವಜನ್ಮದ ಸಂಸ್ಕಾರ ಎಂದುಕೊಳ್ಳುತ್ತಿದ್ದ.
“ಈ ಪುಸ್ತಕ ಓದು ತಗೋ. ಆ ಪುಸ್ತಕ ಓದೋಕ್ಕೆ ಸ್ವಲ್ಪ ದೊಡ್ಡವಳಾಗಬೇಕು” ಎಂದು ಹೇಳಿ ತಮ್ಮ ಕಪಾಟಿನಿಂದ ಪುಸ್ತಕವೊಂದನ್ನು ತೆಗೆದಿತ್ತರು.
ಸುಹಾಸಿನಿ ಧನ್ಯವಾದಗಳನ್ನರ್ಪಿಸಿ “ಇವತ್ತು ಪಾಠಕ್ಕೆ ಮೊಡಲು ಹೇಳಿಕೊಟ್ಟಿರಲ್ಲಾ, ಆ ಹಾಡನ್ನು ಕಲಿಯಬೇಕೆನ್ನಿಸಿದೆ” ಎಂದಳು.
ಸುಹಾನಿನಿಯ ಮಾತಿನಲ್ಲಿ ನಿಯತ್ತು ಕಂಡಿತ್ತು ಕಸ್ತೂರಿಗೆ. ಆಕೆ ಸಾಮಾನ್ಯವಾಗಿ ಯಾರಿಗೂ ಸಂಗೀತ ಕಲಿಸುತ್ತಿರಲಿಲ್ಲ. ಮನಸ್ಪೂರ್ತಿಯಾಗಿ ಕಲಿಯುವ ಇಚ್ಛೆಯುಳ್ಳವರನ್ನು ಆಕೆ ಇದುವರೆಗೆ ಕಂಡಿರಲಿಲ್ಲ.
“ನಿನಗೆ ಸಂಗೀತ ಅಂದ್ರೆ ಇಷ್ಟಾನಾ?” ಎಂದು ಕೇಳಿದರು ಮುಗುಳುನಗುತ್ತಾ.
“ಗೊತ್ತಿಲ್ಲ. ಆದರೆ ನೀವು ಹಾಡುವಾಗ, ನಾವು ಅದನ್ನು ಮತ್ತೆ ಹೇಳುವಾಗ ತುಂಬಾ ಸಂತೋಷ ಅನ್ನಿಸುತ್ತೆ” ಎಂದಳು.
ಕಸ್ತೂರಿಗೆ ತಮ್ಮ ಪ್ರಶ್ನೆಗೆ ಉತ್ತರ ದೊರಕಿತ್ತು!
(ಸಶೇಷ)