ಇಪ್ಪತ್ತೆರಡು
ದೇಹವು ಕೆಲವೊಮ್ಮೆ ಪ್ರಪಂಚದ ನಾನಾರೀತಿಯ ಕೋಟಲೆಗೆ ಒಳಗಾಗುವ ಸಾಧ್ಯತೆ ಇದೆ. ರಾಡಿಯಲ್ಲಿ ಬಿದ್ದಾಗ ಮೈ ಕೊಳೆಯಾಗುವುದು ಸಹಜ. ಬೇರಾರೋ ನಮ್ಮನ್ನು ಕೊಚ್ಚೆಗೆ ತಳ್ಳಿದರೆ ನಾವು ಹೇಗೆ ಅಪವಿತ್ರರಾಗುತ್ತೇವೆ? ಅದೊಂದು ಆಕಸ್ಮಿಕ – ನಮ್ಮ ದೃಷ್ಟಿಕೋನದಲ್ಲಿ. ಗಜೂಮಾಮನ ಆಕ್ರಮಣವೂ ಅಂತಹದ್ದೇ….
ಆ ರೀತಿಯ ತುಲನೆ ಅವಳಲ್ಲಿ ಶಾಂತಿ ತಂದಿತ್ತು. ಭಗವದ್ಗೀತೆಯಲ್ಲಿನ ಅನೇಕ ಶ್ಲೋಕಗಳು ಅವಳಿಗೆ ನೆಮ್ಮದಿ ಉಂಟುಮಾಡುತ್ತಿದ್ದವು.
‘ಪ್ರಾಣಿಗಳಲ್ಲಿ ನಾನಾ ಮನೋಭಾವಗಳಿಗೆ ಕಾರಣಗಳೊದಗುವುದು ನನ್ನ ದೆಸೆಯಿಂದಲೇ. ಸುಖ, ದುಃಖ, ಹುಟ್ಟು, ಸಾವು, ಆಗೋಣ, ಹೋಗೋಣ, ಸೇರೋಣ, ಬೇರ್ಪಡೋಣ, ಭಯ, ಅಭಯ – ಇವೆಲ್ಲ ನನ್ನ ಪ್ರಭಾವದಿಂದ’ ಗೀತಾಚಾರ್ಯ ಯೋಗೇಶ್ವರ ಶ್ರೀಕೃಷ್ಣನ ಮಾತುಗಳು ಅವಳಿಗೆ ಉಪಶಮನ ನೀಡಿದವು.
“ಅಕ್ಕಾ, ಅಕ್ಕಾ!” ಎಂಬ ಧ್ವನಿ ಕೇಳಿ ತಲೆಯೆತ್ತಿದಳು ಸುಹಾಸಿನಿ. ಜಾಜಿ ನಗುತ್ತಾ ನಿಂತಿದ್ದಳು.
“ಏನ್ಸಮಾಚಾರ ಅಕ್ಕಾ? ನಾನು ಸುಮಾರು ಸಲ ಕೂಗಿದೆ. ನೀವು ಎಲ್ಲೋ ಹೋಗಿಬಿಟ್ಟಿದ್ರಿ. ಏನ್ಕೆಲ್ಸ ನಿಮಗೆ ಈಗ?” ಎಂದಳು ಜಾಜಿ.
“ಏನಿಲ್ಲ ಜಾಜೀ, ಹೇಳು. ನಿನ್ನ ಕೆಲಸ ಏನಾದ್ರೂ ಆಗಬೇಕಾ?” ಕೇಳಿದಳು ಸುಹಾಸಿನಿ, ತನ್ನ ಲಹರಿಯಿಂದ ಸಂಪೂರ್ಣ ಹೊರಬಂದು.
“ಬನ್ನಿ ಹಾಗಾದ್ರೆ. ನಿಮ್ಮನ್ನು ಎಲ್ಲೋ ಕರಕೊಂಡು ಹೋಗ್ತೀನಿ” ಎಂದಳು ಜಾಜಿ ಉತ್ಸಾಹದಿಂದ ಸುಹಾಸಿನಿಯ ಕೈ ಹಿಡಿದೆಳೆದು.
ಸುಹಾಸಿನಿ ನಾಗಜ್ಜಿಗೆ ಹೇಳಿ ಹೊರಟಳು ಜಾಜಿಯೊಂದಿಗೆ. ಹೊರಗೆ ಬಷೀರುಲ್ಲಾಖಾನನ ಟಾಂಗಾ ನಿಂತಿತ್ತು.
“ಏನು ಬೇಟೀ? ಹೆಂಗಿದ್ದೀ?” ಕಳಕಳಿಯಿಂದ ವಿಚಾರಿಸಿದ ಖಾನ್.
“ಚೆನ್ನಾಗಿದ್ದೀನಿ. ನೀವು?” ಎಂದು ಹೇಳಿ ಟಾಂಗಾ ಹತ್ತಿದಳು.
ಕುದುರೆಗಾಡಿ ಅವರನ್ನು ಮೈಸೂರು ರೈಲು ನಿಲ್ದಾಣವನ್ನು ತಲುಪಿಸಿತು. “ಬರ್ತೀವಿ ಸಾಬಣ್ಣಾ. ಸಂಜೆ ಇಲ್ಲೇ ಇದ್ರೆ ನಮ್ಮನ್ನು ಕರಕೊಂಡು ಹೋಗು” ಎಂದು ಬಿರಬಿರನೆ ಟಿಕೆಟ್ ಕೌಂಟರ್ ಬಳಿಗೆ ಓಡಿದಳು ಜಾಜಿ. ಸುಹಾಸಿನಿ ಅವಳನ್ನು ಹಿಂಬಾಲಿಸಲಾಗದೇ ನಿಂತಲ್ಲೇ ನಿಂತುಬಿಟ್ಟಳು.
“ಬಾ ಅಕ್ಕ!” ಎಂದು ಅವಳ ಕೈಹಿಡಿದು ಪ್ಲಾಟ್ಫಾರಂ ತಲುಪಿ ಲೇಡೀಸ್ಕಂಪಾರ್ಟ್ಮೆಂಟ್ನಲ್ಲಿ ಕುಳ್ಳಿರಿಸಿ ತಾನೂ ಕೂತಳು ಜಾಜಿ.
ರೈಲುಗಾಡಿ ಒಮ್ಮೆ ಕೂಗಿ ಮುಂದಕ್ಕೆ ಚಲಿಸಿತು.
“ಎಲ್ಲಿಗೆ ಹೋಗ್ತಿದ್ದೀವಿ ಜಾಜೀ?” ಕೇಳಿದಳು ಸುಹಾಸಿನಿ. ಅವಳಿಗೆ ಜಾಜಿಯ ಈ ವರ್ತನೆ ಅರ್ಥವಾಗಲಿಲ್ಲ.
“ಸ್ವಲ್ಪ ಹೊತ್ತು ಸುಮ್ಮನಿರಕ್ಕಾ! ನಿಂಗೇ ತಿಳಿಯುತ್ತೆ”ಎಂದು ನಕ್ಕಳು ಜಾಜಿ.
ಸುಮಾರು ಅರ್ಧಗಂಟೆಯ ಪಯಣದ ನಂತರ ರೈಲುಗಾಡಿ ನಿಂತಾಗ, “ಇಳಿಯಕ್ಕಾ, ಆದರೆ ಹುಷಾರು!” ಎಂದು ಟ್ರೈನಿನಿಂದ ಇಳಿದಳು ಜಾಜಿ. ಗಲಿಬಿಲಿಯೊಂದಿಗೇ ಇಳಿದಳು ಸುಹಾಸಿನಿ.
“ಇದ್ಯಾವ ಸ್ಟೇಷನ್ನು ಜಾಜೀ?” ಎಂದು ಕೇಳಿದಳು ತಾನಿರುವ ಜಾಗದ ಪರಿಶೀಲನೆ ನಡೆಸಿದ ಸುಹಾಸಿನಿ.
“ಅಯ್ಯೋ ಅಕ್ಕಾ! ಏನಾಯ್ತು ಗೊತ್ತಾ? ಟಿಕೇಟು ತಗೊಳ್ಳೋಕ್ಕೆ ಹೋದಾಗ ನನ್ನ ಗೆಳತಿ ಒಬ್ಬಳು ಸಿಕ್ಕಿದ್ಲು. ಟಿಕೆಟ್ಗೆ ಯಾಕೆ ದುಡ್ಡು ದಂಡ ಮಾಡ್ತೀಯ? ರೈಲು ಔಟರ್ನಲ್ಲಿ ಗ್ಯಾರಂಟಿ ನಿಲ್ಲುತ್ತೆ. ಇಳಿದು ಹೋದ್ರೆ ಟಿಕೆಟ್ ಹಣ ಉಳಿಯುತ್ತೆ ಅಂತಂದ್ಳು. ಅದಕ್ಕೇ ಇಲ್ಲಿ ಇಳಿಸಿದೆ” ಎಂದಳು ಜಾಜಿ ಹೆಮ್ಮೆಯಿಂದ.
ಅವರು ಇಳಿದಿದ್ದು ಒಂದು ಸೇತುವೆಯ ಮೇಲೆ. ಎಚ್ಚರಿಕೆಯಿಂದ ನಡೆದು ಸಮತಟ್ಟಾದ ಪ್ರದೇಶಕ್ಕೆ ಬಂದರು.
ಸೇತುವೆಯಡಿಯಲ್ಲಿ ನದಿಯೊಂದು ಜುಳುಜುಳು ಹರಿಯುತ್ತಿತ್ತು. ಆ ಮಂಜುಳನಾದ ಸುಹಾಸಿನಿಗೆ ತನ್ನ ಓಂಕಾರಪುರದ ಕಾಳಿಂದಿ ನದಿಯನ್ನು ನೆನಪಿಸಿತ್ತು. ಅದರ ಜೊತೆಗೇ ಬಂದಿತ್ತು ಮತ್ತೊಂದು ನೆನಪು – ತನ್ನ ಬಾಲ್ಯಸಖಿ ಸುಫಲಾಳದ್ದು.
ಎಲ್ಲಿರುವಳೋ? ಹೇಗಿರುವಳೋ! ಮದುವೆ ಆಗಿರಬೇಕು. ಪತಿಯ ಹೆಸರು ಲಕ್ಷ್ಮೀಕಾಂತ. ಪಾಂಡವಪುರದ ಕಬ್ಬಿನಗದ್ದೆ ಸಾಹುಕಾರ.
ನಿಡುಸುಯ್ದು ಜಾಜಿಯ ಹಿಂದೆ ನಡೆದಳು. ಸುತ್ತಲೂ ಹರಡಿದ್ದ ಹರಿದ್ವರ್ಣ ಸುಹಾಸಿನಿಯ ಬೇಯುತ್ತಿದ್ದ ಮನಕ್ಕೆ ತಂಪೆರೆದಿತ್ತು.
ನದಿಯ ದಡ ಸೇರಿ ನೀರಿನಲ್ಲಿ ಕಾಲಾಡಿಸುತ್ತಾ ಕುಳಿತ ಜಾಜಿ “ಬಾ ಅಕ್ಕಾ!” ಎಂದು ಕರೆದು ನಕ್ಕಳು.
ಸುಫಲಾ ಎಲ್ಲಿರುವಳೋ ಎಂದುಕೊಳ್ಳುತ್ತಾ ತಾನೂ ದಡದಲ್ಲಿ ಕುಳಿತ ಸುಹಾಸಿನಿ ಕಾಲ್ಗಳನ್ನು ನೀರಲ್ಲಿಳಿಸಿ ಕಣ್ಮುಚ್ಚಿ ತನ್ನ ಬಾಲ್ಯವನ್ನು ನೆನೆದಳು.
ಅನೇಕ ಸಲ ತಾನು ಕಾಳಿಂದೀ ತೀರ ಸೇರಿ ನೀರಲ್ಲಿ ಕಾಲಾಡಿಸುತ್ತಾ ಕುಳಿತ ಮೇಲೆ ಸುಫಲಾ ಬಂದು ತನ್ನ ಕೈಗಳಿಂದ ಸುಹಾಸಿನಿಯ ಕಣ್ಣುಗಳನ್ನು ಮುಚ್ಚಿ ತನ್ನ ಆಗಮನವನ್ನು ಪ್ರಕಟಿಸುತ್ತಿದ್ದಳು. ಅದೇ ನೆನಪಿನಲ್ಲಿ ಮೀಯುತ್ತಿದ್ದಾಗ ಹಠಾತ್ತನೆ ಅವಳ ಕಣ್ಣುಗಳ ಮೇಲೆ ಜೋಡಿ ಕೈಗಳು ಕುಳಿತವು.
“ಜಾಜಿ! ಇದೇನು ಹೀಗೆ ಮಾಡ್ತಿದ್ದೀ?” ಎಂದಳು ಸುಹಾಸಿನಿ ನಗುತ್ತಾ.
“ನಾನಲ್ಲಕ್ಕಾ! ಬೇರೆ ಯಾರೋ” ಎಂದಳು ಜಾಜಿ.
ಯಾರಿರಬಹುದು?
“ಅಂತೂ ಬಯಕೆ ಪೂರೈಸಿತು!” ಎಂದು ನಕ್ಕ ಲಕ್ಷ್ಮೀಕಾಂತ.
ನಾಲ್ವರೂ ಈಗ ಮರವೊಂದರ ನೆರಳಿನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದರು. ಸುಫಲಾಳಂತೂ ಸುಹಾಸಿನಿಯ ಕೈಯನ್ನು ಹಿಡಿದೇ ಇದ್ದಳು. ಅವರಿಬ್ಬರ ನಡುವಣ ಸ್ನೇಹವನ್ನು ನೋಡಿ ಜಾಜಿ ಮೂಕವಿಸ್ಮಿತಳಾಗಿದ್ದಳು.
“ಯಾವಾಗ ಬರುತ್ತೆ ನಿನ್ನ ಪುಟ್ಟ ಪಾಪು?” ಕೇಳಿದಳು ಸುಹಾಸಿನಿ.
ತನ್ನ ಕೈಬೆರಳುಗಳನ್ನೆಣಿಸಿ ಆರು ಎಂದು ತೋರಿಸಿಳು ಸುಫಲಾ. ಲಕ್ಷ್ಮೀಕಾಂತ-ಸುಫಲಾರ ಜೋಡಿ ತುಂಬಾ ಚೆನ್ನಾಗಿದೆ ಎನ್ನಿಸಿತು ಸುಹಾಸಿನಿಗೆ.
“ಬಯಕೆ ಅಂದ್ರಲ್ಲಾ?” ಎಂದು ಕೇಳಿದಳು ಸುಹಾಸಿನಿ.
ಲಕ್ಷ್ಮೀಕಾಂತ ಗಟ್ಟಿಯಾಗಿ ನಕ್ಕು, “ತಾನು ಗರ್ಭಿಣಿ ಅಂತ ತಿಳಿದಾಗಿನಿಂದ ಸುಹಾಸಿನಿ ಜಪ ಶುರು ಮಾಡಿಬಿಟ್ಟಳು. ನಿಮ್ಮ ಗೀಳು ಹಿಡೀತು. ಊರಿಗೆ ಹೋಗಲ್ಲ ಅಂದ್ಳು… ನೀವು ಅಲ್ಲಿಲ್ಲ ಅಂತ ತಿಳಿದು ಬಂದಿದ್ರಿಂದ..” ಎಂದೆನ್ನುತ್ತಿದ್ದಂತೆ, ಅವನ ಮಾತನ್ನು ತಡೆದು, “ನಿನ್ನ ಜೊತೆ ಕಾಳಿಂದೀ ತೀರದಲ್ಲಿ ಕಳೆದ ದಿನಗಳ ನೆನಪಾಯಿತು. ದಿನಾ ಇಲ್ಲಿ ಬಂದು ಕುಳಿತು ನಿನ್ನ ಒಡನಾಟ ನೆನೆಯುತ್ತಿದ್ದೆ. ಆ ರಂಗನಾಥಸ್ವಾಮಿಗೆ ನನ್ನ ಮೇಲೆ ಕರುಣೆ ಮೂಡಿ ನಿನ್ನನ್ನು ನನ್ನ ಹತ್ತಿರ ಕಳಿಸಿಬಿಟ್ಟ!” ಎಂದಳು ಸಜಲನೇತ್ರಳಾಗಿ ಸುಫಲಾ.
“ಛೇ! ಇಷ್ಟಕ್ಕೇ ಅಳ್ತಾರಾ? ಸುಫೀ! ನಿನ್ನ ಆರೋಗ್ಯ ಹೇಗಿದೆ?” ಆದ್ರ್ರತೆಯಿಂದ ಕೇಳಿದಳು ಸುಹಾಸಿನಿ.
ನಕ್ಕಳು ಸುಫಲಾ. ಅವರಿಬ್ಬರ ಸ್ವೇಹ ಕಂಡು ಜಾಜಿಗೆ ಮುಚ್ಚಟೆಯಾಯಿತು. ಲಕ್ಷ್ಮೀಕಾಂತನಿಗೆ ಸುಹಾಸಿನಿಯ ಬಗ್ಗೆ ಅವನ ಪತ್ನಿಯಿಂದ ಅದೆಷ್ಟು ವಿವರ ಸಿಕ್ಕತ್ತೆಂದರೆ ಸುಹಾಸಿನಿಯನ್ನು ಭೇಟಿ ಮಾಡಿದಾಗ ಅವಳು ಹೊಸಬಳೆಂದೇ ಅನ್ನಿಸಿರಲಿಲ್ಲ ಅವನಿಗೆ!
“ನನ್ನ ಆರೋಗ್ಯಕ್ಕೇನು ಧಾಡಿ?” ಎಂದಳು ಸುಫಲಾ, ಸುಹಾಸಿನಿಯ ಬೆನ್ನು ನೇವರಿಸಿ.
“ಹೊರಡೋಣ್ವಾ?” ಎಂದಳು ಸುಹಾಸಿನಿ ಜಾಜಿಯೊಂದಿಗೆ.
ಎದ್ದು ನಿಂತ ಸುಹಾಸಿನಿಯನ್ನು ಕಂಡು ಜಾಜಿಯೂ ಎದ್ದು ನಿಂತಳು. ಸುಫಲಾಳ ಮುಖ ಮುದುಡಿತು.
“ಯಾಕೆ ಸುಫೀ?” ಎಂದ ಲಕ್ಷ್ಮೀಕಾಂತ ಆತಂಕದಿಂದ.
ಸುಹಾಸಿನಿ ಮುಗುಳ್ನಕ್ಕಳು. “ಲಕ್ಷ್ಮೀಕಾಂತ ಅವರೇ! ಅವಳಿಗೆ ನಾನು ಹೊರಟುಹೋಗುತ್ತಿರುವೆನೆಂಬ ದುಃಖ! ಅಲ್ಲವಾ ಸುಫಲಾ?” ಎಂದಳು ಸುಹಾಸಿನಿ, ಬಾಗಿ ಸುಫಲಾಳ ಗಲ್ಲವನ್ನು ಹಿಡಿದೆತ್ತಿ.
“ನನ್ನ ಮನೆಗೆ ಬಾ ಸುಹಾಸಿನೀ!” ಎಂದಳು ಬೇಡಿಕೆಯ ಸ್ವರದಲ್ಲಿ ಸುಫಲಾ.
ಸುಹಾಸಿನಿ ನಕ್ಕಳು. ಅಬ್ಬಾ! ಈ ಹುಡುಗಿಯ ನಗು ಅದೆಷ್ಟು ಚೆನ್ನ! ಎಂದುಕೊಂಡ ಲಕ್ಷ್ಮೀಕಾಂತ.
“ಬರ್ತೀನಮ್ಮ. ನನ್ನ ಕೆಲವು ಮುಖ್ಯ ನಿರ್ಧಾರಗಳು ಬಾಕಿ ಇವೆ. ಅವು ಒಂದು ಘಟ್ಟ ತಲುಪಿದೊಡನೆ ನಿನ್ನ ಮನೆಗೆ ಖಂಡಿತ ಬರುತ್ತೇನೆ” ಎಂದು ಹೇಳಿದಾಗ ಪುಟ್ಟ ನೆರಳೊಂದು ಅವಳ ಕಣ್ಗಳೊಳಗೆ ಹಾದು ಹೋಯಿತು.
ಗಜಾನನ ಮಾವನ ಪತ್ತೆಯೇ ಇರಲಿಲ್ಲ. ಹೇಗಿದ್ದಾರೋ? ಎಲ್ಲಿದ್ದಾರೋ? ತನ್ನ ಮೇಲಿನ ಆಕ್ರಮಣದ ಬಗ್ಗೆ ತಿಳಿಯಬೇಕು. ಒಂದು ಗಟ್ಟಿ ನಿರ್ಣಯ ತೆಗೆದುಕೊಳ್ಳಬೇಕು.
(ಸಶೇಷ)