ಇಪ್ಪತ್ತೊಂಬತ್ತು
“ಬಾ ಅಣ್ಣ ಒಳಗೆ” ಎಂದು ಹೇಳಿ ಅವನಿಗೆ ದಾರಿ ಬಿಟ್ಟೊಡನೆ ಅವನು ಒಳಗೆ ಬಂದು ಟಕ್ಕನೆ ಬಾಗಿಲು ಹಾಕಿದ್ದ. ಅವನ ಚರ್ಯೆಯಲ್ಲಿ ಗಾಬರಿ, ಅವಸರಗಳಿದ್ದವು.
“ಏನಾಯ್ತಣ್ಣಾ?” ಎಂದು ಕೇಳಿದಳು.
ಬಾಯಿ ಮಾತಾಡುತ್ತಿದ್ದರೂ ಅವಳ ಕಾಲ್ಗಳು ಅಡುಗೆ ಕೋಣೆಗೆ ನಡೆದು ಒಂದು ತಟ್ಟೆಯನ್ನು ನೆಲದ ಮೇಲಿಟ್ಟು, ಚಾಪೆ ಹಾಸಿ ಲೋಟದಲ್ಲಿ ನೀರಿಟ್ಟಳು. ಅಷ್ಟರಲ್ಲಿ ಶಂಭು ಬಚ್ಚಲುಮನೆಗೆ ನಡೆದು ಕೈಕಾಲು ಮುಖಗಳನ್ನು ತೊಳೆದು ಬಂದ.
ಅವನು ಕುಳಿತ ಮೇಲೆ ಅವನಿಗೆ ಅನ್ನ, ಸಾರು ಬಡಿಸಿದಳು.
“ಅಬ್ಬಾ! ಯಾವುದಕ್ಕಿಲ್ಲದಿದ್ದರೂ ನಿನ್ನ ಈ ಘಮಘಮ ಸಾರು ಕುಡಿಯಲಿಕ್ಕಾದರೂ ನಾನಿಲ್ಲಿಗೆ ಬಂದಂತಾಯಿತು” ಎಂದ. ಅವನ ಮಾತು ಕೇಳಿ ಮೆಲುನಕ್ಕ ಸುಹಾಸಿನಿ ಮತ್ತೊಂದು ಲೋಟದಲ್ಲಿ ಸಾರು ತುಂಬಿಸಿ ಅವನ ಪಕ್ಕದಲ್ಲಿ ಇಟ್ಟು, “ಹಾಗಾದರೆ ನೀನು ಬಂದಿದ್ದು ಇದಕ್ಕೆ ಅಲ್ವಾ?” ಎಂದಳು.
“ಇಲ್ಲ ಸುಹಾಸಿನೀ. ಬೊಂಬಾಯಿ ಇದ್ದಕ್ಕಿದ್ದಂತೆ ವಾಸಯೋಗ್ಯವಲ್ಲದಷ್ಟು ಬಿಸಿಯಾಯಿತು. ಅದಕ್ಕೇ ಸ್ವಲ್ಪ ತಂಪಾಗಿರಲೆಂದು ಇಲ್ಲಿಗೆ ಬಂದೆ” ಎಂದ.
ಒಗಟಿನಂತೆ ಕಂಡ ಅವನ ಮಾತುಗಳನ್ನು ಕೇಳಿ ಅವನನ್ನೇ ನೋಡಿದಳು. ಬೆಳಕು ಹೆಚ್ಚಾಗಿಲ್ಲದಿದ್ದುರಿಂದ ಅವಳ ಮುಖದ ಪ್ರಶ್ನೆ ಅವನಿಗೆ ಕಂಡಿತೋ ಇಲ್ಲವೋ ಅವಳಿಗೆ ತಿಳಿಯದಾಯಿತು.
ಹೊಟ್ಟೆ ಸ್ವಲ್ಪ ತುಂಬಿದ ಮೇಲೆ ಸಾರಿನ ಲೋಟವನ್ನು ಕೈಗೆತ್ತಿಕೊಂಡು ಅದನ್ನು ಹೀರುತ್ತಾ, “ನಾನಿಲ್ಲಿ ಸ್ವಲ್ಪ ಕಾಲ ಇರಬಹುದಾ ಸುಹಾಸಿನೀ?” ಎಂದು ಕೇಳಿದ.
“ಖಂಡಿತ ಶಂಭು ಅಣ್ಣಾ. ನೀನು ಸಮಯ ಮಾಡಿಕೊಂಡು ಬಂದಿರುವುದೇ ನನಗೆ ಸಂತೋಷ ತರುತ್ತಿರುವ ವಿಷಯ” ಎಂದಳು ಅವನಿಗೆ ಮಜ್ಜಿಗೆಗೆ ಅನ್ನ ಬಡಿಸುತ್ತಾ.
“ಸಮಯ ಮಾಡಿಕೊಂಡು ಬರಲಿಲ್ಲ ಸುಹಾಸಿನೀ. ಸಮಯವು ಕ್ರೂರವಾಗಿ ನನ್ನನ್ನು ಅಲ್ಲಿಂದ ಅಟ್ಟಿ ಇಲ್ಲಿಗೆ ಕಳಿಸಿದೆ” ಎಂದ ಮಾರ್ಮಿಕವಾಗಿ.
“ಏನು ವಿಷಯ ಶಂಭು ಅಣ್ಣಾ?” ಎಂದಳು ಆತಂಕದಿಂದ.
ಮಜ್ಜಿಗೆ ಅನ್ನವನ್ನು ಕಲೆಸಿ ಒಂದು ತುತ್ತು ಬಾಯಿಗೆ ಹಾಕಿಕೊಂಡು, “ನಿನ್ನೊಂದಿಗೆ ಸಮಯ ಕಳೆಯಲೆಂದೇ ನನ್ನ ಜೀವಕ್ಕೆ ಅಪಾಯ ತಂದರು ಮಿಲ್ ಮಾಲೀಕರು! ಅದಕ್ಕೇ ತರಾತುರಿಯಿಂದ ಜೀವ ಉಳಿಸಿಕೊಂಡು ಇಲ್ಲಿಗೆ ಬಂದೆ” ಎಂದ ನಗುತ್ತಾ.
ಸುಹಾಸಿನಿಯ ಮುಖ ಮ್ಲಾನವಾಯಿತು. ಮನದಲ್ಲಿ ಗಾಬರಿ ಉಂಟಾಯಿತು.
“ಸುಹಾಸಿನೀ! ನಿನ್ನ ಮಗ ನನ್ನನ್ನು ಚಂಬು ಮಾಡಿಬಿಟ್ಟಿದ್ದಾನೆ!” ಎಂದು ಶಂಭು ಮನೆಯ ಹೊರಗಡೆ ನಕ್ಕಿದ್ದು ಹಾಲು ಕಾಯಿಸುತ್ತಾ ಅಡುಗೆಕೋಣೆಯಲ್ಲಿದ್ದ ಸುಹಾಸಿನಿಗೆ ಕೇಳಿಸಿತ್ತು.
ಉಕ್ಕುತ್ತಿದ್ದ ಹಾಲಿನ ಪಾತ್ರೆಯನ್ನು ಒಲೆಯಿಂದಿಳಿಸಿ, ಪಾತ್ರೆಗೊಂದು ಮುಚ್ಚಳ ಮುಚ್ಚಿ ನಗುತ್ತಲೇ ಹೊರಗೆ ಬಂದಳು ಸುಹಾಸಿನಿ.
ಶಂಭು, ಭಾರತೀಪ್ರಿಯ ಚೆಂಡಿನಲ್ಲಿ ಆಟವಾಡುತ್ತಿದ್ದರು. ಇಬ್ಬರೂ ಒಬ್ಬರಿಗೊಬ್ಬರು ಚೆಂಡು ಎಸೆಯಬೇಕು, ಮತ್ತೊಬ್ಬರು ಅದನ್ನು ಹಿಡಿಯಬೇಕು.
“ಏನಂದೆ ಶಂಭು ಅಣ್ಣಾ?” ಎಂದಳು ಮುಗುಳುನಕ್ಕು.
“ಇವನು ನನ್ನನ್ನ ಚಂಬು ಅಂತಾನೆ” ಎಂದ ನಗುತ್ತಾ.
“ಮಹಾಪ್ರಾಣ ಬರಲು ಇನ್ನೂ ಒಂದೆರಡು ವರ್ಷ ಬೇಕು. ಆದರೆ ಶಕಾರವೂ ಬರುತ್ತಿಲ್ಲವಲ್ಲಾ?” ಎಂದಳು ಸುಹಾಸಿನಿ ಹೊಸ್ತಿಲ ಹೊರಗಿನ ಮೆಟ್ಟಿಲಿನ ಮೇಲೆ ಕುಳಿತು.
“ಅವನಿಗೆ ಶಕಾರ ಬರದಿರುವುದರ ಬಗ್ಗೆ ನಾವು ಚಕಾರ ಎತ್ತಬಾರದು!” ಎಂದ ತನ್ನ ತುಟಿಗಳ ಮೇಲೆ ತೋರುಬೆರಳಿಟ್ಟುಕೊಂಡು ಶಂಭು.
“ಮಾತಿನಲ್ಲಿ ಚಮತ್ಕಾರ ತೋರುವುದರಲ್ಲಿ ನೀನು ಎತ್ತಿದ ಕೈ. ಎಲ್ಲವೂ ನೀನು ಓದಿದ ಪುಸ್ತಕಗಳ ಪ್ರಭಾವವಿರಬೇಕು” ಎಂದಳು ಸುಹಾಸಿನಿ ಮೆಚ್ಚುಗೆಯ ನೋಟ ಬೀರಿ.
“ಪುಸ್ತಕ ಓದುವುದು ಮಾತ್ರವಲ್ಲ ಸುಹಾಸಿನೀ! ಅದನ್ನು ಸರಿಯಾದ ಸಮಯದಲ್ಲಿ ಮಾತಿನಲ್ಲಿ ಬಳಸುವುದು, ನಮಗೆ ಸೂಕ್ತವಾದದ್ದನ್ನು ನಮ್ಮ ಬದುಕಿಗೆ ಅಳವಡಿಸಿಕೊಳ್ಳುವುದು ಬಹಳವೇ ಮುಖ್ಯ!” ಎಂದ ಶಂಭು ಚೆಂಡನ್ನು ಭಾರತೀಪ್ರಿಯನತ್ತ ಎಸೆದು, ನಂತರ ನಡೆದು ಬಂದು ಸುಹಾಸಿನಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾ.
ಸುಹಾಸಿನಿ ಅವನ ಎಡಭುಜದ ಮೇಲೆ ತನ್ನ ಬಲತೋಳನ್ನು ಮೆಲ್ಲನೆ ಹಾಕಿ, “ಚಿಕ್ಕಂದಿನಲ್ಲಿ ನಿನ್ನ ಒಡನಾಟ ನನಗೆ ಸಿಗಲಿಲ್ಲ. ಈಗ ನೀನು ಬಂದಿರುವುದು ನನಗೆ ನಿಧಿ ಸಿಕ್ಕಿದ ಹಾಗಾಗಿದೆ. ನನಗೆ ನಿನ್ನಿಂದ ಸ್ವಲ್ಪ ಪಾಠಗಳನ್ನು ಕಲಿಯುವ, ಬದುಕನ್ನು ತಿಳಿಯುವ ಅಭಿಲಾಷೆ ಇದೆ” ಎಂದಳು ಮನಃಪೂರ್ವಕವಾಗಿ.
“ನನಗೆ ತಿಳಿದಿರುವ ಮಟ್ಟಿಗೆ ನೀನು ಬದುಕಿನಲ್ಲಿ ಬಹಳವೇ ಪಾಠಗಳನ್ನು ಕಲಿತಿದ್ದೀ. ಅದೂ ಬಹಳ ಚಿಕ್ಕ ವಯಸ್ಸಿನಲ್ಲಿಯೇ. ಈಗ ನಿನಗೇನು ಬೇಕು? ನನ್ನಿಂದ ಏನು ತಿಳಿಯಬೇಕು ಅಂತ ಹೇಳು ಸುಹಾಸಿನೀ” ಗಂಭೀರವಾಗಿ ಹೇಳಿದ ಅವಳತ್ತ ನೋಡಿ, ನಂತರ ತನ್ನ ಕನ್ನಡಕ ತೆಗೆದು ಅದನ್ನು ತನ್ನ ಪಂಚೆಯ ತುದಿಯಿಂದ ಒರೆಸಿ ಮತ್ತೆ ಕಣ್ಣಿಗೇರಿಸಿಕೊಂಡು.
“ಅಪ್ಪನನ್ನು ನೋಡಿಕೊಳ್ಳುತ್ತಿದ್ದಾಗ ನನಗೆ ಬೇರೆ ಯಾವುದರ ಬಗ್ಗೆಯೂ ಗಮನವಿರುತ್ತಿರಲಿಲ್ಲ. ಅವರು ಹೋದ ಮೇಲೆ….” ಎಂದು ಮುಂದಕ್ಕೆ ಹೇಳಲಾಗದೇ ನಿಟ್ಟುಸಿರಿಟ್ಟಳು. ಅವಳ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆದರೂ ತುಟಿಗಳು ನಗುವ ಯತ್ನ ಮಾಡುತ್ತಿದ್ದವು.
“ನಿನ್ನ ಶಾಲೆಯ ಮೇಷ್ಟರು, ಮೇಡಂ ಬಗ್ಗೆ ಹೇಳು” ಎಂದ ಶಂಭು ಅವಳ ಮಾತಿನ ಹಾದಿಯನ್ನು ಬದಲಿಸಲು ಯತ್ನಿಸುತ್ತಾ.
ಸುಹಾಸಿನಿಯ ಮುಖ ಅರಳಿತ್ತು. “ಹೌದಣ್ಣಾ. ರಾಘವಾಚಾರ್ ಮೇಷ್ಟರು, ಕಸ್ತೂರಿ ಮೇಡಂ ನನ್ನ ಬಾಳಿನಲ್ಲಿ ಬಂದ ವಿಶೇಷ ವ್ಯಕ್ತಿಗಳು. ಅವರಿಬ್ಬರೂ ನನಗೆ ಕಲಿಸಿರುವ ಪಾಠ, ಸಂಗೀತ ಎಂದಿಗೂ ಮರೆಯಲಾದದ್ದು” ಎಂದಳು ಭಾವುಕಳಾಗಿ.
“ಪಾಪ ಮೇಷ್ಟರು ಬ್ರಿಟಿಷರ ದಬ್ಬಾಳಿಕೆಗೆ ಬಲಿಯಾದರು. ಕಸ್ತೂರಿ ಮೇಡಂ….” ಎಂದು ಮೆಲ್ಲನೆ ಬಿಕ್ಕಿದಳು.
“ಅಮ್ಮಾ… ಅಳಬೇಡ” ಎಂದು ಓಡಿಬಂದಿದ್ದ ಭಾರತೀಪ್ರಿಯ ಅವಳ ಕೆನ್ನೆಗಳ ಮೇಲೆ ಜಾರಲಿದ್ದ ನೀರನ್ನು ಒರೆಸಿ.
“ಬನ್ನಿ ತಿಂಡಿ ತಿನ್ನೋಣ” ಎಂದು ಹೇಳಿ ಮೇಲೆದ್ದಳು ಸುಹಾಸಿನಿ.ಇಬ್ಬರೂ ಅವಳನ್ನು ಹಿಂಬಾಲಿಸಿದರು.
ಅವರೇಕಾಳು ಹಾಕಿದ್ದ ಅಕ್ಕಿತರಿಯ ಉಪ್ಪಿಟ್ಟು ಬಹಳವೇ ರುಚಿಯಾಗಿತ್ತು.
ಸುಹಾಸಿನಿಯ ಮಾತುಗಳನ್ನು ಮೆಲುಕು ಹಾಕಿದ ಶಂಭು ಅವಳಿಗೆ ಹೇಗೆ ಸಹಾಯ ಮಾಡಬಹುದೆಂದು ಆಲೋಚಿಸಿದ. ಗಜೂ ಮಾವನದು ನೆಚ್ಚಿಕೆ ಇಲ್ಲದ ಜೀವನ. ಅವರ ಸಿದ್ಧಾಂತ, ಮನಸ್ತತ್ವ ಬಹಳವೇ ಬೇರೆ ರೀತಿಯವು. ತನ್ನ ತಂಗಿ ಮುಂದೆ ಬಹಳವೇ ಉದ್ದದ ಬದುಕಿದೆ. ಅವಳು ಓದಿರುವುದು ಕೇವಲ ಹತ್ತನೇ ತರಗತಿ.
ಹೇಗೆ… ಹೇಗೆ… ಅವಳಿಗೆ ತಾನು ಸಹಾಯ ಮಾಡಬಹುದು? ತಾನು ಬೊಂಬಾಯಿಯಿಂದ ಓಡಿ ಬಂದಿದ್ದು ಒಂದು ವಿಧದಲ್ಲಿ ಒಳ್ಳೆಯದೇ ಆಯಿತು.
ಅಂದೇ ಆರಂಭವಾಯಿತು ಅವನಿಂದ ಅವಳಿಗೆ ಬೋಧನೆ. ಅವಳು ಅರ್ಜುನಳಾದಳು. ಇವನು ಕುರುಕ್ಷೇತ್ರ ಯುದ್ಧದ ಮೊದಲಿನ ಯೋಗೇಶ್ವರ ಶ್ರೀಕೃಷ್ಣನಾದ. ಆದರೆ ಅವಳಲ್ಲಿ ವಿಷಾದವಿರಲಿಲ್ಲ. ಎಲ್ಲವನ್ನೂ ಅರಿಯುವ ಅದಮ್ಯ ಆಸಕ್ತಿ, ಕುತೂಹಲಗಳಿದ್ದವು.
ಸುಹಾಸಿನಿ ತನ್ನಣ್ಣನ ಜ್ಞಾನಭಂಡಾರದ ಕೆಲವು ನಿಧಿಗಳನ್ನು ನೋಡಿ ನಿಬ್ಬೆರಗಾದಳು. ಅಬ್ಬಾ! ಇವನು ಊಟಕ್ಕಿಂತ ಹೆಚ್ಚಾಗಿ ಮೆದುಳಿಗೆ ವಿಷಯಗಳನ್ನು ತುಂಬಿಕೊಂಡಿದ್ದಾನೋ ಹೇಗೆ? ಎಂದುಕೊಂಡಳು.
ಆ ಮಾತು ಅವಳ ನಾಲಗೆಯ ಮೇಲೆ ಬಂದೇಬಿಟ್ಟಾಗ ಶಂಭು ಗಹಗಹಿಸಿ ನಕ್ಕ.
“ಸುಹಾಸಿನೀ! ಪ್ರಕೃತಿ ಅಥವಾ ದೇವರು ಎಲ್ಲರಿಗೂ ಕೊಟ್ಟಿರುವುದು ಒಂದೇ ತೂಕ, ಪ್ರಮಾಣಗಳ ಮೆದುಳನ್ನು. ಅದನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆಂಬುದು ನಂನಮ್ಮ ಬುದ್ಧಿಮಟ್ಟ, ಆಸಕ್ತಿ, ವಿಷಯವಾಸನೆ, ಮೆದುಳಿಗೆ ಅರಿವಾದುದನ್ನು ನಮ್ಮ ಮೆದುಳಿನಲ್ಲಿಯೇ ಉಳಿಸಿಕೊಳ್ಳುವ ಶಕ್ತಿ ಇವುಗಳ ಮೇಲೆ ಅವಲಂಬಿತವಾಗಿದೆ” ಎಂದ.
ಶಂಭುವಿನ ಮಾತುಗಳನ್ನು ಅರಗಿಸಿಕೊಳ್ಳಲು ಸುಹಾಸಿನಿಗೆ ಕೆಲವು ಸಮಯ ಬೇಕಾಯಿತು.
(ಸಶೇಷ)
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ..!
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ ನಡೆಯುತ್ತಿದ್ದು, ಟೌನ್ಹಾಲ್ ಬಳಿ ನೂರಾರು ಜನರು ಸೇರಿದ್ದಾರೆ. 144 ಸೆಕ್ಷನ್ ನಡುವೆಯೂ ಮಹಿಷ ದಸರಾಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಮಹಿಷ ಉತ್ಸವ...